ಗುದದ ರೋಗಗಳು Anal Diseases – 3

ಗುದದ ರೋಗಗಳು Anal Diseases – 3

ಗುದದ ಬಾವು ಮತ್ತು ಭಗಂದರ

ಗುದದ ಅಥವ ಗುದದ್ವಾರದ ಆಸುಪಾಸಿನಲ್ಲಿ ಸೋಂಕಿನ ಕುಳಿಯೊಳಗೆ ಕೀವು ತುಂಬಿದ್ದರೆ ಅದನ್ನು ಗುದದ ಬಾವು ಅಥವ ಗುದದ್ವಾರದ ಬಾವು ಎನ್ನುವರು. ವೈದ್ಯಕೀಯ ಭಾಷೆಯಲ್ಲಿ Anal or perianal abscess or anorectal abscess or rectal or perirectal abscess ಮುಂತಾಗಿ ಹೇಳುವರು. ಇದಕ್ಕೆ ಶೇಕಡ ತೊಂಭತ್ತರಷ್ಟು ಕಾರಣ ಆಂತರಿಕ ಗುದಗ್ರಂಥಿಯ ತೀವ್ರತರ ಸೋಂಕು. ಕೆಲವೊಮ್ಮೆ ಬ್ಯಾಕ್ಟೀರಿಯಗಳು (ಸೂಕ್ಷ್ಮಾಣುಜೀವಿಗಳು) ಅಥವ ಮಲದ ಚೂರು ಅಥವ ಹೊರಗಿನ ಪದಾರ್ಥದ ತುಣುಕು (foreign body) ಮುಂತಾಗಿ ಗುದಗ್ರಂಥಿಯೊಳಗೆ ಸೇರಿಕೊಂಡು, ಅದರ ದ್ರವದ ಹರಿವಿಗೆ ತಡೆಯೊಡ್ಡಿದಾಗ, ಸುರಂಗದ ಹಾಗೆ ಗುದದ ಅಥವ ಗುದದ್ವಾರದ ಸುತ್ತಲಿನ ಅಂಗಾಂಶದೊಳಕ್ಕೆ ಕೊರೆದು ಕುಳಿಯಾಗಿಸಿದಾಗ, ಅಲ್ಲಿ ಸಹ ಕೀವು ತುಂಬಿ ಗುದಬಾವು (anal abscess) ಬರಬಹುದು.

ಆದರೆ, ಗುದದ ಭಗಂದರ ಅಥವ ಆಸನಕುರು (Anal fistula or fistula-in-ano) ಎಂಬುದು ಒಳಗಿನ ಗುದನಾಳದಿಂದ ಆರಂಭಗೊಂಡು, ಹೊರಗಿನ ಗುದದ ಸುತ್ತಲಿನ ಚರ್ಮದ ತನಕ ಇರುವಂಥ ಒಂದು ರೀತಿಯ ಅಸಹಜ ಸಂಪರ್ಕ. ಒಳಗೆ ಗುದನಾಳದಲ್ಲಿ ಒಂದು ರಂಧ್ರ ಮತ್ತು ಹೊರಗೆ ಗುದದ ಚರ್ಮದಲ್ಲಿ ಮತ್ತೊಂದು ರಂಧ್ರ ಇದ್ದು, ಆ ಎರಡೂ ರಂಧ್ರಗಳ ನಡುವಿನ ಕಿರಿದಾದ ಸುರಂಗವೇ ಆಸನಕುರು ಅಥವ ಭಗಂದರ. ಇದು ಸಾಮಾನ್ಯವಾಗಿ ಹಿಂದೊಮ್ಮೆ ಆಗಿದ್ದಂತಹ ಅಥವ ಇತ್ತೀಚೆಗೆ ಆರಂಭವಾಗಿರುವ ಗುದದ ಬಾವುವಿನ ಕಾರಣದಿಂದ ಉಂಟಾಗುವ ರೋಗ. ಅಂಥ ಗುದಬಾವುಗಳು ಸಂಪೂರ್ಣ ಗುಣವಾಗದೆ ಇದ್ದಾಗ ಭಗಂದರದ ಆರಂಭವಾಗಬಹುದು. ಸರಿಸುಮಾರು ಶೇಕಡ ನಲವತ್ತು ಗುದಬಾವು ರೋಗಿಗಳು ಹೀಗೆ ಭಗಂದರ ಅಥವ ಆಸನಕುರುವಿನಿಂದ ಬಳಲುವರು. ಗುದ ಭಗಂದರಗಳ ಆರಂಭಕ್ಕೆ ಕಾರಣ ಗುದಗ್ರಂಥಿಗಳು. ಈ ಗುದಗ್ರಂಥಿಗಳು ಸ್ರವಿಸುವ ದ್ರವ ಗುದನಾಳದೊಳಕ್ಕೆ ಹರಿಯುವುದು ಸಾಮಾನ್ಯ. ಆದರೆ, ಅಂತಹ ಗ್ರಂಥಿಗಳ ಹರಿವಿಗೆ ತಡೆ ಉಂಟಾದಾಗ ಅಲ್ಲಿ ಗುದಬಾವು ನಿರ್ಮಾಣವಾಗಿ, ಮುಂದೆ ಅದೇ ಗುದಬಾವು ಭಗಂದರವಾಗಿ ಪರಿವರ್ತಿತವಾಗುವುದು ಸಾಧ್ಯ. ಆಕಸ್ಮಿಕವಾಗಿ ಭಗಂದರ ಕೂಡ ಮುಚ್ಚಿ ಹೋದಾಗ, ಕೀವು ಅತ್ತಿತ್ತ ಹರಿದು ಮತ್ತೆಮತ್ತೆ ಗುದಬಾವು ಹಾಗು ಭಗಂದರಗಳು ಹೆಚ್ಚು ಹೆಚ್ಚಾಗಿ ಉಂಟಾಗಬಹುದು.

ರೋಗಲಕ್ಷ್ಮಣಗಳು:
ಗುದ ಹಾಗು ಗುದನಾಳದ ನೋವು ಮತ್ತು ಊತ, ಗುದದ್ವಾರದ ಸುತ್ತಲಿನ ಊತಕೋದ್ರೇಕ (cellulitis) ಮತ್ತು ಜ್ವರ ಅತ್ಯಂತ ಸಾಮಾನ್ಯವಾದ ಗುದಬಾವುವಿನ ರೋಗಲಕ್ಷಣಗಳು. ಒಮ್ಮೊಮ್ಮೆ ಗುದನಾಳದ ರಕ್ತಸ್ರಾವ ಮತ್ತು ಮೂತ್ರ ವಿಸರ್ಜಿಸುವಾಗ ನೋವು ಸಹ ಆಗಬಹುದು.

ಭಗಂದರ ರೋಗದಿಂದ ಬಳಲುವ ರೋಗಿಗಳು, ತಾವು ಮೊದಲು ಗುದಬಾವು ರೋಗಕ್ಕೆ ಚಿಕಿತ್ಸೆ ಪಡೆದು, ಕೀವು ತೆಗೆಸಿದ್ದ ಗತ ಇತಿಹಾಸದ ಬಗ್ಗೆ ಸಾಮಾನ್ಯವಾಗಿ ವೈದ್ಯರೊಡನೆ ಹೇಳುತ್ತಾರೆ. ಅದಲ್ಲದೆ, ಗುದ ಮತ್ತು ಗುದನಾಳದ ನೋವು, ಗುದದ ಅಕ್ಕಪಕ್ಕ ಕೀವು ಸೋರುವಿಕೆ, ಸುತ್ತಲಿನ ಚರ್ಮದಲ್ಲಿ ಕಿರಿಕಿರಿ (irritation) ಮತ್ತು ಕೆಲವೊಮ್ಮೆ ಗುದದ್ವಾರದ ರಕ್ತಸ್ರಾವ ಮುಂತಾಗಿ ಭಗಂದರ ರೋಗದ ಲಕ್ಷಣಗಳು.

ರೋಗನಿರ್ಣಯ:
ರೋಗಿಯು ಒಂದೊಮ್ಮೆ ತಾನು ಅನುಭವಿಸಿರಬಹುದಾಗಿದ್ದ, ಗುದ ಮತ್ತು ಗುದನಾಳದ ರೋಗ ಲಕ್ಷಣಗಳ ಹಳೆಯ ಚರಿತ್ರೆಯ ಬಗ್ಗೆ ವಿಷದವಾಗಿ ವೈದ್ಯರು ಕೇಳುವರು. ನಂತರ ಅವರು ರೋಗಿಯ ದೈಹಿಕ ಪರೀಕ್ಷೆ ನಡೆಸುವರು.
ಗುದಬಾವುವಿನ ರೋಗಿಯಲ್ಲಿ ಜ್ವರ ಸಾಮಾನ್ಯ. ಅಲ್ಲದೆ ಬಾವು ಇರುವ ಸ್ಥಳ ಕೆಂಪಾಗಿ ಊದಿದ್ದು, ಸ್ಪರ್ಶ ಪರೀಕ್ಷೆಯ ಸಮಯದಲ್ಲಿ ಮೃದುವಾಗಿದ್ದು ರೋಗಿಗೆ ಅತೀವ ನೋವಾಗಬಹುದು. ಹೆಚ್ಚಿನ ವೇಳೆ ಬಾವು ಇರುವ ಸ್ಥಳ ಗುದದ ಸುತ್ತಮುತ್ತಲಿನ ಚರ್ಮದ ಮೂಲಕ ಕಣ್ಣಿಗೆ ಕಾಣುತ್ತದೆ. ಆದರೂ ಕೆಲವೊಮ್ಮೆ ಬಾವು ಇರುವ ಲಕ್ಷಣಗಳು ಹೊರಗೆ ಕಾಣುವಂತೆಯೆ ಇರದೆ, ರೋಗಿಯು ಗುದನಾಳದ ನೋವಿನ ಬಗ್ಗೆ ಮಾತ್ರ ಹೇಳಬಹುದು. ಅಂತಹ ಸಂದರ್ಭಗಳಲ್ಲಿ ವೈದ್ಯರ ಬೆರಳಿನ ಪರೀಕ್ಷೆಯಿಂದ ರೋಗಿಗೆ ಅಗಾಧ ನೋವಾಗಬಹುದು.

ಭಗಂದರ ರೋಗಿಯ ಪರೀಕ್ಷೆ ಸಮಯ, ಗುದದ ಅಕ್ಕಪಕ್ಕದ ರಂಧ್ರದ ಮೂಲಕ ಕೀವು, ರಕ್ತ ಅಥವ ಮಲದ ತುಣುಕು ಕೂಡ ಹೊರಸೂಸುವುದು ಕಾಣುತ್ತದೆ. ರಂಧ್ರದ ಹೊರಗಿನ ಮೂಲಕ ಅಂಗಾಂಶದ ಗೆಡ್ಡೆ ಕಂಡುಬಂದರೆ, ಅದು ಈಗಾಗಲೆ ಚೆನ್ನಾಗಿ ಸ್ಥಾಪಿತವಾಗಿರುವ ಭಗಂದರ ಎಂಬುದು ಸಾಬೀತಾಗುತ್ತದೆ. ಬೆರಳಿನಿಂದ ಗುದದ್ವಾರ ಪರೀಕ್ಷಿಸಿದಾಗ, ಹೊರಗಿನ ರಂಧ್ರದ ಮೂಲಕ ಕೀವು ಹೊರಬರಬಹುದು. ಕೆಲವು ಭಗಂದರಗಳು ಇದ್ದಕ್ಕಿದ್ದ ಹಾಗೆ ಮುಚ್ಚಿಹೋಗಿ, ಮುಂದೆ ಮತ್ತೆಮತ್ತೆ ಕೀವನ್ನು ಹೊರಹಾಕಬಹುದು. ಹಾಗು, ಹೊರರಂಧ್ರ ಪರೀಕ್ಷಿಸುವಾಗ ಒಂದು ಗಟ್ಟಿ ತುಂಡಿನ ರೀತಿಯಲ್ಲಿ ಒಳಗಿನ ರಂಧ್ರದವರೆಗೆ ಸ್ಪರ್ಶಿಸಲೂಬಹುದು.

ಮೂಲಕ ಕೀವು ಹೊರಬರಬಹುದು. ಕೆಲವು ಭಗಂದರಗಳು ಇದ್ದಕ್ಕಿದ್ದ ಹಾಗೆ ಮುಚ್ಚಿಹೋಗಿ, ಮುಂದೆ ಮತ್ತೆಮತ್ತೆ ಕೀವನ್ನು ಹೊರಹಾಕಬಹುದು. ಹಾಗು, ಹೊರರಂಧ್ರ ಪರೀಕ್ಷಿಸುವಾಗ ಒಂದು ಗಟ್ಟಿ ತುಂಡಿನ ರೀತಿಯಲ್ಲಿ ಒಳಗಿನ ರಂಧ್ರದವರೆಗೆ ಸ್ಪರ್ಶಿಸಲೂಬಹುದು.ಬಹುತೇಕ ಗುದಬಾವುಗಳು ಮತ್ತು ಆಸನಕುರುಗಳನ್ನು ಕ್ಲಿನಿಕಲ್ ಲಕ್ಷಣಗಳಿಂದಲೆ ರೋಗನಿರ್ಣಯ ಮಾಡಿ ಚಿಕಿತ್ಸೆಯನ್ನು ಸಹ ಮಾಡಬಹುದು. ಆದರೆ ಒಮ್ಮೊಮ್ಮೆ ಕೆಲವು ಉಪಕರಣಗಳ ಸಹಾಯದಿಂದ ಪರೀಕ್ಷಿಸಬೇಕಾಗಬಹುದು. ಗುದನಾಳದ ಒಳಗೆ ತೂರಿಸಬಹುದಾದ ಶ್ರವಣಾತೀತ ಧ್ವನಿ ಕೊಳವೆ (Endoanal ultrasound) ಮೂಲಕ ಪರೀಕ್ಷಿಸಿ, ಛಾಯಾಚಿತ್ರಗಳನ್ನು ಸಹ ತೆಗೆದು ಪರಿಶೀಲಿಸಬಹುದು. ಈ ಪರೀಕ್ಷೆಯಿಂದ ಗುದನಾಳದ ಆಳದಲ್ಲಿರುವಂತಹ ಬಾವುಗಳನ್ನು ಕೂಡ ಕಂಡುಹಿಡಿಯಲು ಸಾಧ್ಯ. ಭಗಂದರದ ಸುರಂಗ ಮಾರ್ಗವನ್ನೂ ಪತ್ತೆಮಾಡಬಹುದು. ಇನ್ನು ಸಿಟಿ ಸ್ಕ್ಯಾನ್ ಮೂಲಕ ಕಠಿಣ ಸೋಂಕುಗಳನ್ನು, ಒಂದಕ್ಕಿಂತ ಹೆಚ್ಚಿರುವಂಥ ಭಗಂದರ ಸುರಂಗಗಳನ್ನು ಮತ್ತು ಇತರೆ ಕರುಳಿನ ಕಾಯಿಲೆಗಳನ್ನು ಕಂಡುಹಿಡಿಯಲು ಸಾಧ್ಯ. ಎಂ.ಆರ್.ಐ. ಸ್ಕ್ಯಾನ್ ಸಹಾಯದಿಂದ ಭಗಂದರ ಸುರಂಗಗಳು ಮತ್ತು ಒಳಗಿನ ರಂಧ್ರಗಳು ಮುಂತಾಗಿ ಎಲ್ಲವುಗಳ ಶೇಕಡ ತೊಂಭತ್ತು ಭಾಗ ಸರಿಯಾದ ನಕ್ಷೆ ರಚನೆಯು ಸಾಧ್ಯ.

ಚಿಕಿತ್ಸೆ:
ಬಹುತೇಕ ಸಂದರ್ಭಗಳಲ್ಲಿ ಗುದಬಾವುವಿನ ಕೀವನ್ನು ಹೊರತೆಗೆಯುವುದರಿಂದಲೆ ಗುಣಪಡಿಸುವ ಸಾಧ್ಯತೆ ಇದೆ. ಗುದದ ಚರ್ಮದಲ್ಲಿ ಸ್ಥಳೀಯ ಅರಿವಳಿಕೆಯ ಸಹಾಯದಿಂದ ಸಣ್ಣದಾಗಿ ಛೇದನ (ಕೊಯ್ದು) ಮಾಡಿ ಕೀವನ್ನು ತೆಗೆಯಬಹುದು – ಇದನ್ನು ವೈದ್ಯರ ಹೊರರೋಗಿ ಕೊಠಡಿಯಲ್ಲೆ ಮಾಡಲು ಸಾಧ್ಯ. ಅಥವ ಶಸ್ತ್ರಚಿಕಿತ್ಸೆಯ ಕೊಠಡಿಯಲ್ಲಿ ಆಳವಾದ ಅರಿವಳಿಕೆ ಮೂಲಕ ಸಹ ಚಿಕಿತ್ಸೆ ನೀಡಬಹುದು. ನಂತರ ಸೂಕ್ತ ಔಷಧೋಪಚಾರ ಬೇಕು. ಕೆಲವೊಮ್ಮೆ ಆಸ್ಪತ್ರೆಯ ಒಳರೋಗಿಯಾಗಿ ಸಹ ಚಿಕಿತ್ಸೆಗೆ ಒಳಪಡಿಸಬೇಕಾಗಬಹುದು. ನೂರರಲ್ಲಿ ಐವತ್ತು ವೇಳೆ ಹೀಗೆ ಗುದಬಾವುವಿನ ಕೀವು ಹೊರತೆಗೆದ ನಂತರ, ಆ ರೋಗಿಯ ಸೋಂಕಿನ ಗುದಗ್ರಂಥಿಯಿಂದ ಹೊರಗಿನ ಚರ್ಮದ ತನಕ ಒಂದು ಸುರಂಗ ಏರ್ಪಟ್ಟು, ಅದು ಭಗಂದರವಾಗಲು ಕಾರಣವಾಗಬಹುದು.

ಇನ್ನು ಭಗಂದರ ಅಥವ ಆಸನಕುರು ರೋಗಕ್ಕೆ ಸದ್ಯ ಯಾವುದೆ ಥರದ ಔಷಧೋಪಚಾರ ಸಹ ಇಲ್ಲ. ಶಸ್ತ್ರಚಿಕಿತ್ಸೆಯ ಮೂಲಕ ಮಾತ್ರ ಸರಿಸುಮಾರು ಎಲ್ಲ ಮಾದರಿಯ ಭಗಂದರಗಳ ಚಿಕಿತ್ಸೆ ಸಾಧ್ಯವಿರುವುದು. ಶಸ್ತ್ರಚಿಕಿತ್ಸೆಯಲ್ಲಿ ಸಾಮಾನ್ಯವಾಗಿ ಭಗಂದರ ಏರ್ಪಡಿಸಿರುವ ಸುರಂಗದ ಛಾವಣಿಯನ್ನು ಕತ್ತರಿಸಿದಾಗ ಉಳಿಯುವ ಕಾಲುವೆಯಂತಹ ಹಳ್ಳ ತಾನೆ ಗುಣವಾಗುವುದು. ಕೆಲವು ಸಲ ಗುದಬಾವುವಿನ ಕೀವು ಹೊರಹಾಕುವ ಸಮಯದಲ್ಲೆ ಭಗಂದರದ ಶಸ್ತ್ರಚಿಕಿತ್ಸೆ ಕೂಡ ಮಾಡಲು ಸಾಧ್ಯ.

ಡಾ. ಅರಕಲಗೂಡು ನೀಲಕಂಠ ಮೂರ್ತಿ
ಮೊಬೈಲ್: 9844645459

Related post

Leave a Reply

Your email address will not be published. Required fields are marked *