ಗುದದ ರೋಗಗಳು (Anal diseases)

ಗುದದ ರೋಗಗಳು (Anal diseases)

ದಶಕಗಳಷ್ಟು ಹಿಂದಿನ ವಿಷಯ. ನಾನು ಆಗ, ಮೂಲವ್ಯಾಧಿ ಚಿಕಿತ್ಸೆಗೆ ಮಾತ್ರ ಮೀಸಲಾಗಿದ್ದ ನನ್ನ ಸ್ನೇಹಿತರೊಬ್ಬರ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. ಬೆಳಗಿನ ಒಂಭತ್ತರಿಂದ ಆರಂಭವಾಗಿ, ಸಂಜೆಯ ರಂಗು ಪಶ್ಚಿಮದಲ್ಲಿ ಮಾಯವಾಗುವವರೆಗೂ, ಕೇವಲ ಮೂಲವ್ಯಾಧಿ ರೋಗಿಗಳನ್ನೆ ಪರೀಕ್ಷಿಸಿ, ಶಸ್ತ್ರಚಿಕಿತ್ಸೆಗೆ ತಯಾರು ಮಾಡುವ ಕೆಲಸ ನನ್ನದಾಗಿತ್ತು.

ಮನುಷ್ಯನಿಗೆ ಆತನ ಬದುಕಿನಲ್ಲಿ ಎಂಥೆಂಥ ಸಂಕಷ್ಟದ ಪರಿಸ್ಥಿತಿಗಳು ಬಂದೆರಗಬಹುದು ಎಂಬುದನ್ನು ಮನದಟ್ಟಾಗಿಸಲೋ ಎಂಬ ಹಾಗೆ ನಡೆದ ಆ ಘಟನೆ ನನಗೆ ಇನ್ನೂ ಕೂಡ ಮರೆಯಲಾಗದ್ದು; ಮತ್ತು ಅಷ್ಟಾದರು ಮನುಷ್ಯನ ಅಹಂಕಾರ, ದುರ್ನಡತೆಗಳ ಕೋಡು ಎಂದಾದರು ಮಾಯವಾಗುವುದೋ ಅಥವ ಇಲ್ಲವೋ ಎಂಬ ಜಿಜ್ಞಾಸೆಗೆ ದಾರಿಮಾಡಿಕೊಟ್ಟಿದ್ದ ಘಟನೆ.

ದೊಡ್ಡಬಳ್ಳಾಪುರದಿಂದ ಒಬ್ಬ ರೋಗಿ ಆತನಿದ್ದ ಸ್ಥಿತಿಯಲ್ಲಿಯೆ ಮೈಸೂರಿನ ನಮ್ಮ ಮೂಲವ್ಯಾಧಿ ಆಸ್ಪತ್ರೆವರೆಗು ತಲಪಿದ್ದೇ ಅಚ್ಚರಿಯ ವಿಶೇಷ. ತನ್ನ ಹಳ್ಳಿಯಿಂದ, ಮೊದಲು ದೊಡ್ಡಬಳ್ಳಾಪುರ, ಅಲ್ಲಿಂದ ನೇರ ಮೈಸೂರಿಗೆ ಬಸ್ಸು ಸಿಗದೆ ಬೆಂಗಳೂರಿನಲ್ಲಿ ಇಳಿದು ಮತ್ತೆ ಬೆಂಗಳೂರಿನಿಂದ ಮೈಸೂರಿಗೆ ಮತ್ತೊಂದು ಬಸ್ಸು ಹೀಗೆ ಬದಲಾಯಿಸುತ್ತ ನಮ್ಮ ಆಸ್ಪತ್ರೆಯ ಬಾಗಿಲು ತಲಪಿದಾಗ ಹೈರಾಣಾಗಿದ್ದ. ನನಗೆ ಅಂತಹ ಸ್ಥಿತಿಯಲ್ಲೂ ಆತ ಅಷ್ಟು ದೂರದಿಂದ ಬಂದಿದ್ದ ರೀತಿ ಕಂಡು ಆಶ್ಚರ್ಯದ ಜೊತೆಗೆ ಅಯ್ಯೋ ಪಾಪ ಅನ್ನಿಸಿ, ‘ಅಲ್ಲೆ ಬೆಂಗಳೂರಿನಲ್ಲೆ ಬೇರೆ ಆಸ್ಪತ್ರೆಯಲ್ಲಿ ತೋರಿಸಬಹುದಿತ್ತಲ್ಲ’ ಎಂದು ಮನಸ್ಸಿನಲ್ಲೆ ಅಂದುಕೊಂಡೆ; ಆದರೆ ಹೇಳಲಿಲ್ಲ – ಏಕೆಂದರೆ ಇಂದಿನ ಅನೇಕ ಆಸ್ಪತ್ರೆಗಳಲ್ಲಿ, ರೋಗ ಇರಲಿ ಬಿಡಲಿ ಒಬ್ಬ ವ್ಯಕ್ತಿ ಆಸ್ಪತ್ರೆಯ ಹೊಸ್ತಿಲು ತುಳಿದರಷ್ಟೆ ಸಾಕು ಎಂದು ರಣಹದ್ದುಗಳ ರೀತಿ ಕಾಯುವುದು ಸಾಮಾನ್ಯ ಮತ್ತು ಇಲ್ಲದ ರೋಗ ಉಂಟುಮಾಡುವ ‘ಕಲಿ’ಗಳು ತುಂಬಿರುವಾಗ, ನನ್ನಂಥವನ ಸತ್ಯದ ಮಾತು ವಿಷದ ಬಟ್ಟಲಿನಂತೆ, ಅನಿಸಿದ್ದು ಸಹಜ. ಆತನ ಅಂತಹ ಸ್ಥಿತಿಗೆ ಕಾರಣವಾಗಿದ್ದ, ಒಂದು ಹಿಡಿಯಷ್ಟು ದಪ್ಪವಾಗಿದ್ದ ಗೆಡ್ಡೆಯಾಕಾರದ ಮೂಲವ್ಯಾಧಿಯ ಮುದ್ದೆ ಇಡಿಯಾಗಿ ಗುದದ್ವಾರದ ಮೂಲಕ ಹೊರಬಂದಿತ್ತು; ಎಷ್ಟೇ ಪ್ರಯತ್ನಿಸಿದರೂ ಗುದದ ಒಳಸೇರದೆ, ಆ ನೋವನ್ನು ಸಹಿಸಿಕೊಂಡು, ನನ್ನ ಸ್ನೇಹಿತನಿಂದಲೆ ಆಪರೇಶನ್ ಮಾಡಿಸಿಕೊಳ್ಳಬೇಕೆಂದು ಬಂದಿದ್ದ. ಅದೂ ಹೇಗೆ! ಆತನ ಹಳ್ಳಿಯಿಂದ ಮೈಸೂರಿಗೆ ಸೀಟಿನಮೇಲೆ ಕೂರಲಾಗದೆ, ನೆಟ್ಟ ನಿಲ್ಲಲೂ ಆಗದೆ ಸಂಪೂರ್ಣ ಬಗ್ಗಿ ನಿಂತಂಥ ಭಂಗಿಯಲ್ಲೆ ಬಂದಿದ್ದ ಆ ಕಲಿಯುಗದ ‘ಹಠಯೋಗಿ’!

ಇಷ್ಟುದ್ದ ಪೀಠಿಕೆಗೆ ಕಾರಣ ಇಲ್ಲದಿಲ್ಲ. ಮೊದಲನೆಯದಾಗಿ, ಗುದದ್ವಾರದ ಕಾಯಿಲೆ ಎಂದಾಗ ಎಲ್ಲಿಲ್ಲದ ಮುಜುಗರ ಮತ್ತು ಬಿಚ್ಚಿ ತೋರಿಸಬೇಕಲ್ಲ ಎಂಬ ಸಂಕಟ. ಹಾಗಾಗಿ ನಿರ್ಲಕ್ಷ್ಯ ಸಾಮಾನ್ಯ. ಕಷ್ಟ ಎನಿಸಿದ ಕೂಡಲೆ ಆಸ್ಪತ್ರೆಯತ್ತ ಧಾವಿಸಲು ಅದೇನು ಹೃದಯಾಘಾತದ ರೀತಿಯ ತುರ್ತುಸ್ಥಿತಿ ಅಲ್ಲವಲ್ಲ. ಇಂದಲ್ಲ ನಾಳೆ ಎಂಬ ಅಸಡ್ಡೆ ಬೇರೆ. ಆದರೆ ಯಾವುದೆ ರೋಗವಾದರೂ ಉಲ್ಬಣವಾದಾಗ ಮೇಲಿನ ನಿದರ್ಶನದ ಸೃಷ್ಟಿ ಖಂಡಿತ ಆಗಬಹುದು ಅಲ್ಲವೆ?

ಗುದದ್ವಾರ ಮತ್ತು ಗುದನಾಳದ ರೋಗಗಳು ಅನೇಕ ರೀತಿ ಇದ್ದರೂ, ನಾನಿಲ್ಲಿ ಪ್ರಮುಖವಾಗಿ ಮೂಲವ್ಯಾಧಿ ಅಥವ ಮೊಳೆರೋಗ ( Piles or Hemorrhoids), ಗುದದ್ವಾರದ ಸೀಳು ಅಥವ ಬಿರುಕು (Fissure in ano), ಭಗಂದರ ಅಥವ ಆಸನಕುರು (Fistula) ಮತ್ತು ಗುದದ ಬಾವು (Perianal abscess). ಗುದನಾಳದ ಕ್ಯಾನ್ಸರ್ ಕೂಡ ಸಾಧ್ಯ ಇದೆಯಾದರು ಅದರ ಬಗ್ಗೆ ಬಹುಶಃ ಇಲ್ಲಿ ಅಪ್ರಸ್ತುತ.

ಮೂಲವ್ಯಾಧಿ

ಮೂಲತಃ ಮೂಲವ್ಯಾಧಿ ಎಂದರೆ ಗುದದ್ವಾರದ ಮತ್ತು ಗುದನಾಳದ (Anus and lower rectum) ಅಭಿಧಮನಿಗಳು (ಮಲಿನ ರಕ್ತ ನಾಳಗಳು) ಊದಿಕೊಳ್ಳುವುದು. ಊದುವುದರ ಜೊತೆಗೆ ಉರಿಯೂತ ಸಹ (inflammation) ಆಗಿರಬಹುದು. ಕೆಲವರ ಕಾಲುಗಳಲ್ಲಿ ಅಂಕುಡೊಂಕಾಗಿ ಉಬ್ಬಿರುವ ಅಭಿಧಮನಿಗಳನ್ನು (Varicose veins) ನೋಡಿದ್ದವರಿಗೆ, ಮೂಲವ್ಯಾಧಿಯಲ್ಲೂ ಅದೇ ರೀತಿಯಲ್ಲಿ ಉಬ್ಬಿರುವ ಮಲಿನರಕ್ತನಾಳಗಳನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳುವುದು ಕಷ್ಟ ಆಗಲಿಕ್ಕಿಲ್ಲ. ಗುದನಾಳದ ಒಳಗೆ ಉಬ್ಬಿದ್ದಾದರೆ ಅದನ್ನು ಆಂತರಿಕ ಮೂಲವ್ವಾಧಿ ಮತ್ತು ಗುದನಾಳದ ಸುತ್ತಲಿನ ಚರ್ಮದ ಕೆಳಗೆ ಉಬ್ಬಿದ್ದಾದರೆ ಬಾಹ್ಯ ಮೂಲವ್ಯಾಧಿ ಎನ್ನಲಾಗುತ್ತದೆ. ಸಾಮಾನ್ಯವಾಗಿ ಮಲವಿಸರ್ಜನೆಯ ಸಮಯದಲ್ಲಿ ಅತಿಯಾಗಿ ಮುಕ್ಕುವುದು ಅತಿ ಮುಖ್ಯ ಕಾರಣವಾದರೆ, ಇನ್ನಿತರ ಕಾರಣಗಳು ಗರ್ಭಾವಸ್ಥೆಯ ಸಮಯದಲ್ಲಿ, ಅಧಿಕ ಬೊಜ್ಜು ಇರುವವರಲ್ಲಿ ಮತ್ತು ವಯೋವೃದ್ಧರಲ್ಲಿ ಸಹ ಮೂಲವ್ಯಾಧಿ ಉಂಟಾಗಬಹುದು. ಕೆಲವು ಸಮಯ ನೋವಿಗೆ ಕಾರಣ ಆದರೂ ಸಹ, ಮೂಲವ್ಯಾಧಿ ತನ್ನ ತಾನೆ ಉತ್ತಮ ಕೂಡ ಆಗಬಹುದು. ಜೀವನಶೈಲಿಯಲ್ಲಿ ಬದಲಾವಣೆ, ವ್ಯಾಯಾಮ ಮತ್ತು ಹೆಚ್ಚು ನಾರುಯುಕ್ತ ಆಹಾರ ಸೇವನೆ ಮುಂತಾದುವುಗಳಿಂದ ರೋಗ ಲಕ್ಷಣಗಳನ್ನು ಕಡಿಮೆ ಮಾಡಬಹುದು ಮತ್ತು ಮುಂದೆ ರೋಗ ಬರುವುದನ್ನು ತಡೆಗಟ್ಟಬಹುದು.

ವೈದ್ಯರು ಮೂಲವ್ಯಾಧಿ ರೋಗವನ್ನು ನಾಲ್ಕು ಶ್ರೇಣಿಗಳಾಗಿ ವಿವರಿಸುವರು:
ಮೊದಲ ಹಂತ — ಒಳಗಿನ ಮೊಳೆಗಳ ಬೆಳವಣಿಗೆ ಗುದದ ಹೊರಗೆ ಕಾಣುವುದಿಲ್ಲ ಮತ್ತು ಯಾವುದೆ ರೋಗ ಲಕ್ಷಣಗಳೂ ಕಾಣುವುದಿಲ್ಲ.
ಎರಡನೆ ಹಂತ — ಬೆಳೆದ ಮೊಳೆಗಳು ಗುದದ ಹೊರಕ್ಕೆ ಜಾರಿ (prolapse) ಬಂದರು, ಮತ್ತೆ ಗುದದ ಒಳಗಡೆಗೆ ಅವುಗಳೆ ಹಿಂತಿರುಗುತ್ತವೆ.
ಮೂರನೆ ಹಂತ — ಮೊಳೆಗಳ ಗೆಡ್ಡೆ ಹೊರಜಾರಿ ಬಂದಾಗ ರೋಗಿಯು ತನ್ನ ಬೆರಳಿಂದ ತಳ್ಳಿದಾಗ ಮಾತ್ರ ಗುದದ ಒಳಗೆ ಹೋಗುತ್ತವೆ.
… ಹೊರಜಾರಿದ ಮೊಳೆಗಳನ್ನು ರೋಗಿಯು ತಾನೆ ತಳ್ಳಿದರೂ ಒಳ ಸೇರುವುದಿಲ್ಲ.

ಇನ್ನು ಬಾಹ್ಯ ಮೂಲವ್ಯಾಧಿಯೆಂದರೆ ಗುದದ ಹೊರಗೆ ಸಣ್ಣ ಸಣ್ಣ ಗೆಡ್ಡೆಗಳ ಬೆಳವಣಿಗೆ. ಅಂತಹ ಗೆಡ್ಡೆಯೊಳಗೆ ರಕ್ತ ಹೆಪ್ಪುಗಟ್ಟಿದಾಗ ನೋವು ಮತ್ತು ತುರಿಕೆ ಸಾಮಾನ್ಯ; ಕಾರಣ ಹೆಪ್ಪುಗಟ್ಟುವಿಕೆಯಿಂದ ರಕ್ತದ ಹರಿವಿಗೆ ತಡೆಯಾಗುವುದರಿಂದ. ಹೀಗೆ ರಕ್ತ ಹೆಪ್ಪಗಟ್ಟಿದ ಬಾಹ್ಯ ಮೊಳೆಗಳಿಗೆ ತಕ್ಷಣದ ಔಷಧೋಪಚಾರದ ಅವಶ್ಯಕತೆ ಬೇಕಾದೀತು.

ರೋಗದ ಸಾಮಾನ್ಯ ಲಕ್ಷಣಗಳು:

… ರಕ್ತಸ್ರಾವ
… ಗುದದ್ವಾರದ ಸುತ್ತಮುತ್ತ ಕೆರೆತ ಹಾಗು ಕೆರಳುವಿಕೆ (irritation)
… ಗುದದ್ವಾರದಲ್ಲಿ ಊತ ಮತ್ತು ಗೆಡ್ಡೆ
… ಅಭಿಧಮನಿಯ ಊದಿಕೊಳ್ಳುವಿಕೆ ಮತ್ತು ಗುದದ್ವಾರದಿಂದ ಹೊರಗೆ ಬರುವುದು. ನೋವು ಸಹ ಇರಬಹುದು.

ಮೂಲವ್ಯಾಧಿಯು ಕೆಲವರಲ್ಲಿ ತೀವ್ರ ಸ್ಥಿತಿ ತಲುಪಲೂಬಹುದು:
… ಅತಿಯಾದ ರಕ್ತಸ್ರಾವವಾಗಿ ರಕ್ತಹೀನತೆಯ ಸ್ಥಿತಿ
… ಸೋಂಕಿಗೆ ತುತ್ತಾಗುವುದು
… ವ್ಯಕ್ತಿಯ ಅರಿವಿಲ್ಲದೆ ಮಲದ ಜಿನುಗುವಿಕೆ
… ಮೊಳೆಗಳಿಗೆ ಇದ್ದಕ್ಕಿದ್ದ ಹಾಗೆ ರಕ್ತದ ಹರಿವು ನಿಂತು ‘ಕತ್ತು ಹಿಸುಕಿದಂಥ’ (strangulation) ಸ್ಥಿತಿ.
ಆದಾಗ್ಯು ಅನೇಕರಲ್ಲಿ ಯಾವ ಥರದ ರೋಗ ಲಕ್ಷಣಗಳು ಇಲ್ಲದಿರಲೂಬಹುದು.

ರೋಗ ಬರುವ ಕಾರಣಗಳು: ಯಾವ ಕಾರಣದಿಂದ ಮೂಲವ್ಯಾಧಿ ಉಂಟಾಗುವುದು ಎಂಬುದರ ಸ್ಪಷ್ಟ ಮಾಹಿತಿ ಇನ್ನೂ ಸಂಪೂರ್ಣ ತಿಳಿದಿಲ್ಲವಾದರೂ, ಸಾಮಾನ್ಯವಾದ ರೋಗಕಾರಕಗಳೆಂದರೆ —
… ಗರ್ಭಾವಸ್ಥೆಯಲ್ಲಿ ಬೆಳೆಯುವ ಭ್ರೂಣ ಹಾಗು ಗರ್ಭಕೋಶದ ತೂಕ ಮತ್ತು ಒತ್ತಡದಿಂದ. ನೂರರಲ್ಲಿ ಸುಮಾರು ಮುವತ್ತೈದು ಭಾಗಶಃ ಗರ್ಭಿಣಿಯರಲ್ಲಿ ಈ ಕಾಯಿಲೆ ಕಂಡುಬರಬಹುದು.
… ಮಧ್ಯಮ ಮತ್ತು ವಯಸ್ಸಾದವರಲ್ಲಿ, ನಲವತ್ತೈದರಿಂದ ಎಪ್ಪತ್ತು ವಯಸ್ಸಿನ ಜನರಲ್ಲಿ ಈ ಕಾಯಿಲೆ ಸಾಮಾನ್ಯ. ಹಾಗಂತ ಕಿರಿಯರಲ್ಲಿ ಮತ್ತು ಮಕ್ಕಳಲ್ಲಿ ಈ ರೋಗ ಇಲ್ಲವೆ ಇಲ್ಲ ಎಂದಲ್ಲ.
… ದೀರ್ಘಕಾಲದ ಅತಿಸಾರ ರೋಗ, ಆಗಿಂದಾಗ ಆಗುವ ಭೇದಿಯ ಒತ್ತಡದಿಂದ
… ಮಲವಿಸರ್ಜನೆಯ ಸಮಯದಲ್ಲಿ, ಅದರಲ್ಲೂ ದೀರ್ಘಕಾಲದ ಮಲಬದ್ಧತೆಯಿಂದ ಬಳಲುವವರಲ್ಲಿ, ಮುಕ್ಕುವುದರಿಂದ ರಕ್ತನಾಳಗಳ ಭಿತ್ತಿಯ ಮೇಲೆ ಬೀಳುವ ಒತ್ತಡದಿಂದ
… ಅತಿ ಹೆಚ್ಚು ಹೊತ್ತು ಕುಳಿತಿರುವ, ಅದರಲ್ಲೂ ಮಲವಿಸರ್ಜನೆಯ ಸಮಯದಲ್ಲಿ ಸಹ ಮೂಲವ್ಯಾಧಿಗೆ ಕಾರಣ
… ನಾರಿನ ಅಂಶವಿರುವ ಆಹಾರದ ಕಡಿಮೆ ಉಪಯೋಗ ಕೂಡ ಕಾರಣ
… ಅಧಿಕ ಭಾರವನ್ನು ಆಗಾಗ ಎತ್ತುವುದೂ ಸಹ ಕಾರಣ
… ಗುದದ್ವಾರದ ಮೂಲಕ ಸಂಭೋಗ ಸಹ ಮೂಲವ್ಯಾಧಿಗೆ ಕಾರಣ ಹಾಗು ಮೊದಲೇ ಇರುವ ರೋಗಕ್ಕೆ ಅದು ಉಲ್ಬಣಕಾರಕ.
… ಸ್ಥೂಲ ಕಾಯ ಇರುವವರಲ್ಲಿ ಉದರದ ಒಳಗಿನ ಒತ್ತಡ ಹೆಚ್ಚಾಗಿ ಸಹ ಮೊಳೆಕಾಯಿಲೆ ಸಾಧ್ಯ.

ರೋಗ ಪರೀಕ್ಷೆ ವಿಧಾನ: ವೈದ್ಯರು ರೋಗಿಯ ಪರೀಕ್ಷೆಗೆ ಮುಂಚೆ ಕೆಲವು ಪ್ರಶ್ನೆಗಳನ್ನು ಕೇಳಿ ತಿಳಿಯಬಹುದು:… ರೋಗಿಯ ಸಂಬಂಧಿಕರಲ್ಲಿ ಮೊಳೆ ರೋಗ ಇದ್ದಿರಬಹುದಾದ ಮಾಹಿತಿ… ರೋಗಿಯ ಮಲದಲ್ಲಿ ರಕ್ತ ಅಥವ ಲೋಳೆ ಇರುವ ಬಗೆಗೆ… ಇತ್ತೀಚೆಗೆ ತೂಕ ಕಡಿಮೆಯಾಗಿದ್ದರೆ ಅದರ ವಿವರ … ಮಲವಿಸರ್ಜನೆಯ ರೀತಿಯಲ್ಲಿ ಇತ್ತೀಚಿನ ಬದಲಾವಣೆಯಿದ್ದರೆ ಅದರ ವಿವರ … ಮಲದ ಬಣ್ಣದ ವಿವರ ಮುಂತಾಗಿ.ನಂತರ ವೈದ್ಯರು ತಮ್ಮ ಬೆರಳಿಂದ ಗುದದ ಒಳಗೆ ಪರೀಕ್ಷಿಸುವರು (digital rectal examination or DRE). ಪ್ರಾಕ್ಟಾಸ್ಕೋಪ್ (ಒಳಗೆ ಬೆಳಕಿನ ಮೂಲ ಇರುವಂತಹ ಒಂದು ಕೊಳವೆ) ಮೂಲಕ ಗುದದ್ವಾರದ ಒಳಗೆ ಮತ್ತು ಗುದನಾಳದ ಒಳಗೆ ಪರೀಕ್ಷಿಸಿ, ಒಂದು ಸಣ್ಣ ಅಂಗಾಂಶವನ್ನು (tissue) ಸೂಕ್ಷ್ಮದರ್ಶಕದ ಪರೀಕ್ಷೆಗಾಗಿ ಹೊರಗೆ ತೆಗೆಯಬಹುದು.ಇನ್ನೂ ಮುಂದುವರಿದು, ವೈದ್ಯರು ಕೊಲೊನೊಸ್ಕೋಪಿ (ಪ್ರಾಕ್ಟಾಸ್ಕೋಪ್ ಥರದ ಇನ್ನೊಂದು ಕೊಳವೆ ರೀತಿಯ ಉಪಕರಣ) ಮೂಲಕ ದೊಡ್ಡ ಕರುಳಿನ ಪರೀಕ್ಷೆಗಾಗಿ ಸಹ ಸೂಚಿಸಬಹುದು. ಇದರಿಂದ ಗುದನಾಳಕ್ಕೂ ಮೇಲಿರುವ ದೊಡ್ಡ ಕರುಳಿನ ಕೋಲನ್ ಭಾಗದ ರೋಗಗಳನ್ನು ಮತ್ತು ಕ್ಯಾನ್ಸರ್ ಕೂಡ ಪತ್ತೆ ಮಾಡಬಹುದು.

ಚಿಕಿತ್ಸೆಯಾ ವಿಧಾನ :
ಅನೇಕ ರೋಗಿಗಳು ಅತ್ಯಂತ ಸರಳ ಕ್ರಮಗಳನ್ನು ಅನುಸರಿಸುವುದರಿಂದ ರೋಗದ ಲಕ್ಷಣಗಳು ಉತ್ತಮ ಎನಿಸಿ, ಮೊಳೆಗಳು ವಾಸಿಯಾಗುವುದು ಸಾಧ್ಯ.

ಕೆಲವು ಮನೆಮದ್ದುಗಳು:

… ಹೆಚ್ಚು ನೀರು ಕುಡಿಯುವುದರಿಂದ ಮಲ ಮೃದುವಾಗಿ, ವಿಸರ್ಜನೆ ಸಮಯ ಮುಕ್ಕುವ ಒತ್ತಡ ಈಡಾಗದೆ, ಮೊಳೆ ರೋಗ ಬರದಂತೆ ಮತ್ತು ಈಗಾಗಲೆ ರೋಗ ಇದ್ದರೆ ಉಲ್ಬಣವಾಗದ ಹಾಗೆ ತಡೆಯಬಹುದು.
… ಫೈಬರ್ ಯುಕ್ತ ಆಹಾರ (ನಾರು) ಮತ್ತು ಪೂರಕಗಳ (supplements) ಸೇವನೆ ಸಹಾಯಕ.
… ತೊಂದರೆ ಇರುವ ಜಾಗಕ್ಕೆ ಥಣ್ಣನೆಯ ಒತ್ತುವಿಕೆಯಿಂದ (cold compresses) ಸಾಧ್ಯ.
… ಒಂದು ತಾಂಬಾಳೆಯಂತಹ ಪಾತ್ರೆಯ ಬಿಸಿನೀರಿನಲ್ಲಿ ಆಗಾಗ ಕುಳಿತುಕೊಳ್ಳುವುದು (sitz bath) ಕೂಡ ಸಹಾಯಕ.
… ಔಷಧಿ ಅಂಗಡಿಯ ಕೆಲವು ಮುಲಾಮು ಹಚ್ಚಿದರೂ ಆದೀತು.
ಇಷ್ಟಲ್ಲದೆ, ನೋವು ನಿವಾರಕ ಮಾತ್ರೆ, ಅರಿವಳಿಕೆಯುಕ್ತ ಮುಲಾಮುಗಳ ಉಪಯೋಗದಿಂದ ನೋವನ್ನು ಶಮನಮಾಡಲು ಸಾಧ್ಯ. ಎಲ್ಲವೂ ಅನುಪಯುಕ್ತ ಎಂದಾದಾಗ, ಅಂತಿಮವಾಗಿ ಶಸ್ತ್ರಚಿಕಿತ್ಸೆಯ ಸಾಧ್ಯತೆ ಬಗ್ಗೆ ಚಿಂತಿಸಬಹುದು.

ಮುಂದಿನ ಲೇಖನ: “ಗುದದ ಬಿರುಕು (ಅನಲ್ Fissure)”

ಡಾ. ಅರಕಲಗೂಡು ನೀಲಕಂಠ ಮೂರ್ತಿ
ಮೊಬೈಲ್: 98446 45459

Related post

2 Comments

  • ಮೊಳೆ ರೋಗ ಬಹಳೇ ಸಾಮಾನ್ಯ ಹಾಗೂ ಬಹಳ ಸಲ ಹೇಳಿ ಕೊಳ್ಳಲಾಗದಂಥ ರೋಗ.
    ಇದರ ಬಗ್ಗೆ ಚೆನ್ನಾಗಿ ವಿವರಣೆ ನೀಡಿದ್ದೀರ.
    ಉಪಯುಕ್ತ ಲೇಖನ,ಮೂರ್ತಿ!
    Congrats!

  • ಧನ್ಯವಾದ ಪ್ರಿಯ ವೆಂಕಟೇಶ್ ನಿಮಗೆ

Leave a Reply

Your email address will not be published. Required fields are marked *