ಗುರು ಬ್ರಹ್ಮ ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮಯ್ಯೇ ಶ್ರೀ ಗುರುಭ್ಯೋ ನಮಃ.
ವಿದ್ಯೆಯನ್ನು ಕಲಿಸುವಾತ ಗುರು. ಅದಕ್ಕೆ ವಿದ್ಯೆ ಕಲಿಸಿದಾತಂ ಗುರು ಎಂದು ಪ್ರತೀತಿ. ನಮ್ಮ ಪ್ರತಿಯೊಂದು ಹಂತದಲ್ಲೂ ಗುರುವಿನ ಸ್ಥಾನ ತುಂಬಾ ಮಹತ್ವಪೂರ್ಣವಾದದ್ದು. “ಕಲಿಯಲು ಉತ್ಸಾಹ ಉಳ್ಳವರೇ ಕಲಿಸಲು ಯೋಗ್ಯರು” ಎಂದು ಗುರುಗಳ ಬಗ್ಗೆ ರಾಮಕೃಷ್ಣ ಆಶ್ರಮದ “ಸ್ವಾಮಿ ಪುರುಷೋತ್ತಮಾನಂದರು” ವಿದ್ಯೆಯ ವೈಭವವನ್ನು, ಮಹತ್ವನ್ನು ಕುರಿತು ಬರೆದ ಹೊತ್ತಿಗೆಯ ಸಾಲುಗಳಿವು.
ತಾಯಿಯ ಗರ್ಭದಲ್ಲಿರುವಾಗ ಒಂದು ಮಗು ಮಣ್ಣಿನ ಬೊಂಬೆಯಷ್ಟೆ! ಅದಕ್ಕೆ ತಾಯಿಯ ಮುಖಾಂತರ ದೇವರು ಜೀವ ತುಂಬುತ್ತಾನೆ. ಹುಟ್ಟಿದ ಮೇಲೆ ತಂದೆ ತಾಯಿಗಳು ಅದರ ಪಾಲನೆ ಪೋಷಣೆ ಮಾಡುತ್ತಾರೆ. ಆದರೆ ಮುಂದೆ ಸಮಾಜಕ್ಕೆ ಅವರನ್ನು ಉತ್ತಮ ಪ್ರಜೆಯಾಗಿಸುವುದು ಗುರಿವಿನ ಕರ್ತವ್ಯವಾಗಿರುತ್ತದೆ.
ಹಾಗಾದರೆ ಒಬ್ಬ ವಿದ್ಯಾರ್ಥಿ ಜೀವನದಲ್ಲಿ ಗುರುವಿನ ಸ್ಥಾನ ಏನು?. ಮಕ್ಕಳು ಖಾಲಿ ಮಡಿಕೆ ಇದ್ದಂತೆ, ಗುರುವಾದವನು ಅದರಲ್ಲಿ ಯಾವ ಬೀಜ ಬಿತ್ತನೆ ಮಾಡುತ್ತಾರೋ ಆ ಫಲ ಸಿಗುತ್ತದೆ. ಹಿಂದಿನ ಕಾಲದಲ್ಲಿ ಗುರುಕುಲ ಪದ್ದತಿಗಳಿದ್ದವು. ಉಪನಯನ ಆದ ಕೂಡಲೆ ಗುರುಕುಲಕ್ಕೆ ಸೇರಿಸಿ ಅವನ ಶಿಕ್ಷಣ ಪೂರ್ಣವಾದ ಮೇಲೆ ಅವನು ಮರಳಿ ಮನೆಗೆ ಬರಬೇಕಾಗಿತ್ತು. ಗುರುದಕ್ಷಿಣೆ ಎನ್ನುವುದು ವಸ್ತುವಿನ ರೂಪದಲ್ಲಿ ಗುರುವಿಗೆ ಸಂದಾಯವಾಗುತ್ತಿತ್ತು. ಗುರುಕುಲ ಪದ್ದತಿಯಲ್ಲಿ ವಿದ್ಯೆ ಮುಗಿಯುವವರೆಗೆ ವಿದ್ಯಾರ್ಥಿಯ ಸಂಪೂರ್ಣ ಪಾಲನೆ ಪೋಷಣೆ ಗುರುವಿನದ್ದಾಗಿತ್ತು. ಅವನು ಅವನ ವಿದ್ಯಾಭ್ಯಾಸ ಮುಗಿಸಿ ಅವನ ತಂದೆ ತಾಯಿಗಳನ್ನು ನೋಡಬಹುದಾಗಿತ್ತು.
ನಮ್ಮ ಜೀವನದಲ್ಲಿ ಹಲವಾರು ಜನರು ಹಲವಾರು ರೀತಿಯಲ್ಲಿ ಗುರುವಿನ ಸ್ಥಾನದಲ್ಲಿರಬಹುದು. ಪ್ರತೀ ಹಂತದಲ್ಲೂ ನಾವು ಹೊಸದಾಗಿ ಕಲಿಯುವುದು ಬಹಳಷ್ಟಿದೆ. ಹಾಗಾಗಿ ಅವರೆಲ್ಲರೂ ನಮ್ಮ ಪಾಲಿನ ಗುರುಗಳೇ. ನಮ್ಮ ಗುರಿಯೆಡೆಗೆ ನಮ್ಮ ಪಯಣ ಸಾಗಬೇಕಾದರೆ ಮುಂದೆ ಗುರಿ ಹಿಂದೆ ಗುರು ಇರಬೇಲೇಬೇಕು.
ಶಿಕ್ಷಣ ಪದ್ದತಿಯಲ್ಲಿ ಹಲವಾರು ಮಾರ್ಪಾಡುಗಳಾಯಿತು (ಇವಾಗಲೂ ಆಗುತ್ತಿದೆ). ಮುಂದೆ ಬ್ರಿಟಿಷರ ಆಳ್ವಿಕೆ ಬಂದ ನಂತರ ಗುರುಕುಲಗಳು ಕಣ್ಮರೆಯಾಗುತ್ತಾ ಶಿಕ್ಷಣ ಪದ್ದತಿ ಬದಲಾಯಿತು. ಒಬ್ಬ ಗುರುವು ತನ್ನ ವಿದ್ಯಾರ್ಥಿಯ ಏಳಿಗೆಗಾಗಿ ತನ್ನನ್ನು ತಾನು ಮುಡಿಪಾಗಿರಿಸುತ್ತಾನೆ. ಆದರೆ ಶಿಕ್ಷಣ ಪದ್ದತಿಯ ಬದಲಾವಣೆಗಳಿಂದಾಗಿ ಕೆಲವೊಂದು ಕಡೆ ಗುರು ಹಾಗೂ ವಿದ್ಯಾರ್ಥಿ ನಡುವಿನ ಬಾಂಧವ್ಯ ಎಲ್ಲೋ ಕಳೆದುಕೊಂಡಿದೆ ಎಂದೆನಿಸಲಾರದು. ಗುರುವಿನ ಕೆಲಸ ಸಾಮಾನ್ಯವಾದುದಲ್ಲ. ಇಂದಿನ ಶಿಕ್ಷಣ ಪದ್ದತಿಯಲ್ಲಿ ನಿಜಕ್ಕೂ ಗುರುಗಳ ಪಾತ್ರ ಶ್ಲಾಘನೀಯ. ಇವೆರಡಕ್ಕೂ ಉತ್ತಮ ಉದಾಹರಣೆಯನ್ನು ಕೊರೋನಾ ಸಮಯದಲ್ಲಿ ಶುರುವಾದಂದಿನಿಂದ ಒನ್ಲೈನ್ ಕ್ಲಾಸುಗಳಿಂದನೇ ಗೊತ್ತಾಗುತ್ತದೆ.
ಪ್ರತೀ ಮನುಷ್ಯನಿಗೂ ಪ್ರತೀ ಹಂತದಲ್ಲೂ ಗುರುವಿನ ಅವಶ್ಯಕತೆಯಿರುತ್ತದೆ. ಸಮಾಜಕ್ಕೆ ಒಂದು ಉತ್ತಮ ಪ್ರಜೆಯನ್ನು ನೀಡುವುದು ಸಾಮಾನ್ಯವಾದ ವಿಷಯವಲ್ಲ. ನಮ್ಮಲ್ಲಿ ಎಷ್ಟೊಂದು ಸಾಧನೆ ಮಾಡಿರುವಂತಹ ಸಾಧಕರು ಇದ್ದಾರೆ ಅವರ ಆ ಸಾಧನೆಯ ಹಿಂದೆಯೂ ಗುರುವಿನ ಪಾಲು ದೊಡ್ಡ ಮಟ್ಟದ್ದಾಗಿರುತ್ತದೆ. ಬ್ರಿಟಿಷರ ಆಳ್ವಿಕೆಯಲ್ಲಿ ಬಂದಂತಹ ಶಿಕ್ಷಣ ಪದ್ದತಿಯು ಹಂತ ಹಂತವಾಗಿ ಬದಲಾಗುತ್ತಾ ಎಲ್ಲೋ ಹಾದಿ ತಪ್ಪಿದೆ ಎಂದು ಅನಿಸದೆ ಇರಲಾರದು. ಆದರೆ ಎಲ್ಲಿ ಎಂದು ಚಿಂತಿಸದೆಯೂ ಇರಲಾರದು. ಶಿಕ್ಷಕರು ತಂದೆತಾಯಿಗಳ ಮೇಲೆ ದೂರುತ್ತಾ, ತಂದೆತಾಯಿಗಳು ಶಿಕ್ಷಕರನ್ನು ದೂರುತ್ತಾ ವಿದ್ಯಾರ್ಥಿ ಜೀವನ ಅಸ್ತವ್ಯಸ್ತವಾಗುತ್ತಿದೆ. ಹಾಗಾದರೆ ಇದಕ್ಕೆ ಕಾರಣ ಯಾರು ಅಸ್ತವ್ಯಸ್ತ ಶಿಕ್ಷಣ ಪದ್ದತಿಯೋ ಅಥವಾ ತಂದೆತಾಯಿಗಳೋ, ಅಥವಾ ಶಿಕ್ಷಕರೋ. ಒಟ್ಟಿನಲ್ಲಿ ಹೇಳುವುದಾದರೆ ಪ್ರತಿಯೊಬ್ಬರು ಕಾರಣರೆ. ಇವಾಗಿನ ಪ್ರತಿಯೊಂದು ಕೆಲಸಗಳು ವ್ಯವಹಾರಿಕವಾಗಿದೆ.
ನನಗೆ ಗುರುಕುಲ ಪದ್ದತಿಯ ಬಗ್ಗೆ ಅಷ್ಟೊಂದು ತಿಳಿದಿಲ್ಲ ಆದರೆ ನಮ್ಮ ಶಾಲಾದಿನಗಳ ಬಗ್ಗೆ ನಾನು ಹೇಳಬಹುದು. ನಾವು ಕಲಿಯುತ್ತಿರುವಾಗ ನಮ್ಮ ಗುರುಗಳು ನಮಗೆ ಪಾಠದ ನಡುವೆ ನೀತಿಪಾಠ, ದೈಹಿಕ ಶಿಕ್ಷಣ,ಆಟ ಪಾಠಗಳೊಂದಿಗೆ ನಮಗೆ ಶಿಕ್ಷಣ ಕೊಡುತ್ತಿದ್ದರು. ಹಾಗೂ ಅವರ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ಪ್ರತೀ ವಿದ್ಯಾರ್ಥಿ ಬಗ್ಗೆ ಗಮನ ಕೊಡುತ್ತಿದ್ದರು. ತಪ್ಪು ಮಾಡಿದಾಗ ಅವರೇ ತಿದ್ದಿ ಬುದ್ದಿ ಹೇಳುತ್ತಿದ್ದರು. ಅದರೊಂದಿಗೆ ನಿಸರ್ಗದೊಡನೆ ಬೆರೆಯಲು ಮರದ ಕೆಳಗೆ ಕುಳಿತು ಪಾಠ ಮಾಡುತ್ತಿದ್ದರು. ತಪ್ಪುಮಾಡಿದರೆ, ಓದಿಲ್ಲವಾದರೆ ಬೆತ್ತದ ರುಚಿಯೂ ತೋರಿಸುತ್ತಿದ್ದರು. ತಂದೆ ತಾಯಿಯನ್ನು ಶಾಲೆಗೆ ಕರೆಸುವುದು ದೂರು ಹೇಳುವುದು ಯಾವುದು ಇರಲಿಲ್ಲ. ಹೆತ್ತವರು ಒಮ್ಮೆ ಶಾಲೆಗೆ ಸೇರಿಸಲು ಬಂದರೆ ಮತ್ತೆ ಬರುವುದು ಎಂದೋ. ಅದರೊಂದಿಗೆ ಪ್ರಸ್ತುತ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಾ ಇತ್ತು. ಒಟ್ಟಾರೆಯಾಗಿ ಹೇಳುವುದಾದರೆ ಸರಕಾರಿ ಶಾಲೆಗಳು ಕಣ್ಮರೆಯಾಗುತ್ತಾ ಇಂಗ್ಲೀಷ್ ಮಾದ್ಯಮಗಳು ಜಾಸ್ತಿಯಾಗುತ್ತಾ ಹೋಗಿ ಶೈಕ್ಷಣಿಕ ಪದ್ದತಿಯಲ್ಲಿ ತುಂಬಾ ದೊಡ್ಡ ಮಟ್ಟದಲ್ಲಿಯೇ ಮಾರ್ಪಾಡುಗಳಾದವು.
ಗುರು ಹಾಗೂ ವಿದ್ಯಾರ್ಥಿ ಮಧ್ಯೆ ಇರಬೇಕಾದ್ದು ಪ್ರೀತಿ ಬಾಂಧವ್ಯವೇ ಹೊರತು ವ್ಯವಹಾರವಲ್ಲ. ಈಗಿನ ವಿದ್ಯಾರ್ಥಿಗಳಿಗೆ ಹೊಡಿಯುವ ಹಾಗಿಲ್ಲ, ಗದರುವ ಹಾಗಿಲ್ಲ, ಲಕ್ಷ ಲಕ್ಷ ಕೊಟ್ಟು ಶಾಲೆಗೆ ಕಳುಹಿಸುತ್ತಾರೆ. ಹೆತ್ತವರಿಗೆ ದುಡ್ಡು ಅಷ್ಟೊಂದು ಕೊಟ್ಟಿದ್ದೇವೆ ದುಡ್ಡು ಹಾಳಾಗಬಾರದು ಅದಕ್ಕಾಗಿ ಓದಬೇಕು ಎಂಬ ಚಿಂತೆ. ಶಾಲೆಯವರಿಗೆ ಶಾಲೆಯ ಮಾರ್ಯಾದೆ ಹಾಗೂ ಘನತೆಯ ಚಿಂತೆ. ಇದರ ಮದ್ಯೆ ಗುರು ಹಾಗೂ ವಿದ್ಯಾರ್ಥಿಯಲ್ಲಿ ಯಾವ ಪ್ರೀತಿ ಬಾಂಧವ್ಯ ಮೂಡಲು ಸಾದ್ಯ. ಇದರ ಮಧ್ಯೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಗೋಳು ಕೇಳುವವರು ಯಾರೂ ಇಲ್ಲ.
ಈಗಿನ ಮಕ್ಕಳಲ್ಲಿ ಪುಸ್ತಕದ ರಾಶಿ ಕಾಣುತ್ತೆವೇಯೇ ಹೊರತು ಜ್ಞಾನದ ಕೊರತೆ ತುಂಬಾ ಇದೆ. ಮಕ್ಕಳಲ್ಲೂ ಕೂಡಾ ಗುರುವಿನ ಬಗ್ಗೆ ಗೌರವ ಕಡಿಮೆಯಾಗಿದೆ. ಇದರಿಂದಾಗಿ ಸಮಾಜದ ಸ್ಯಾಸ್ಥ್ಯತೆ ಹಾಳಾಗುತ್ತಿದೆ. ಹೆತ್ತವರು ಹಾಗೂ ನಮ್ಮ ಶಿಕ್ಷಣ ಪದ್ದತಿಯೆ ಇದಕ್ಕೆ ಕಾರಣವಾಗಿದೆ. ಹೆತ್ತವರು ಪ್ರಶ್ನಿಸಬೇಕಾದಂತಹ ಹಲವಾರು ಶಿಕ್ಷಣ ನೀತಿಗಳಿವೆ. ಆದರೆ ಮಕ್ಕಳ ವ್ಯಾಮೋಹಕ್ಕೆ ಬಲಿಯಾಗಿ ಅದನ್ನೆಲ್ಲಾ ಸ್ವೀಕಾರ ಮಾಡಿದ್ದಾರೆ. ಸಮಾಜದಲ್ಲಿನ ವ್ಯವಸ್ಥೆಗಳನ್ನು ಸರಿಪಡಿಸಲು ಸಾಧ್ಯವಿಲ್ಲ. ಆದರೆ ನಮ್ಮ ಸುತ್ತ ನಾವು ಬದಲಾವಣೆಯ ಪ್ರಯತ್ನ ಮಾಡಬಹುದೆನೋ.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಬ್ಬ ವಿದ್ಯಾರ್ಥಿ ಧೈರ್ಯವಾಗಿ ಜೀವನ ಮಾಡಬೇಕೆಂದರೆ ಅವನಿಗೆ ಮೊದಲಿಗೆ ಆತ್ಮಸ್ಥೈರ್ಯ ನೀಡಬೇಕು.ಅದರಲ್ಲಿ ಶಿಕ್ಷಕರ ಪಾಲು ಎಷ್ಟಿದೆಯೋ ಹೆತ್ತವರ ಪಾಲು ಅಷ್ಟೇ ಇದೆ. ಹೆತ್ತವರು ದುಡ್ಡು ಕಟ್ಟಿದ್ದೇವೆ ಎನ್ನುವ ಕಾರಣಕ್ಕೆ ಎಲ್ಲವನ್ನೂ ಶಿಕ್ಷಕರ ಮೇಲೆ ಹಾಕುವುದು ತಪ್ಪು ಹೆತ್ತವರ ಕರ್ತವ್ಯವೂ ಇದೆ. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ, ಸರ್ ಎಂ ವಿಶ್ವೇಶ್ವರಯ್ಯ, ಡಾ. ಸಿ ವಿ ಆರ್ ರಾಮನ್, ಡಾ.ಬಿ.ಆರ್ ಅಂಬೇಡ್ಕರ್ ಹೀಗೆ ಹಲವಾರು ಗಣ್ಯಾತಿಗಣ್ಯರನ್ನು ನಮಗೆ ಕೊಡುಗೆಯಾಗಿ ನೀಡಿದ್ದು ಹೆತ್ತವರು ನೀಡಿದ ಸಂಸ್ಕಾರ ಹಾಗೂ ಶಿಕ್ಷಕರ ನೀಡಿದ ಆತ್ಮಸ್ಥೈರ್ಯ ಹಾಗೂ ಶಿಕ್ಷಕರು ನೀಡಿದ ಸಂಸ್ಕಾರ. ಗುರುಗಳೇ ಇಲ್ಲದಿದ್ದರೆ ಇಂದು ಅವರ ಚಿತ್ರ ನಮ್ಮ ಕಣ್ಣುಮುಂದೆ ಕಾಣುತ್ತಲೇ ಇರುತ್ತಿರಲಿಲ್ಲ. ಇಂದಿಗೂ ನಮಲ್ಲಿ ಇಂತಹ ಉತ್ತಮ ಬೆರಳೆಣಿಕೆಯ ಶಿಕ್ಷಕರು ಇದ್ದಾರೆ. ಹಾಗಿರುವುದರಿಂದಲೇ ಇನ್ನೂ ಶಿಕ್ಷಣವು ಮೌಲ್ಯಗಳನ್ನು ಕಳೆದುಕೊಳ್ಳದೆ ಮೌಲ್ಯವನ್ನು ಉಳಿಸಿಕೊಂಡಿದೆ. ಪ್ರತೀಯೊಬ್ಬ ವಿದ್ಯಾರ್ಥಿಯೂ ತನ್ನ ಗುರುವಿಗೆ ಗೌರವವನ್ನು ನೀಡಲೇಬೇಕು. ಶಿಕ್ಷಕರ ಕೆಲಸ ತುಂಬಾ ಜವಬ್ದಾರಿಯುತ ಕೆಲಸ. ಇಂದಿನ ಸಮಾಜದಲ್ಲಿ ಎಲ್ಲೋ ಅವರನ್ನು ತುಂಬಾ ಕಡೆಗಣಿಸಲಾಗುತ್ತಿದೆ ಎಂದೆನಿಸುತ್ತದೆ.
ನಮ್ಮ ಗುರಿಯನ್ನು ಸಾಧಿಸಬೇಕಾದರೆ ಗುರುವಿನ ಆಶೀರ್ವಾದ ಬೇಕು ಮುಂದೆ ಗುರಿ ಇದ್ದು ಹಿಂದೆ ಗುರುಯಿದ್ದಾಗ ಎಂತಹ ಕಠಿಣ ಕೆಲಸಗಳನ್ನು ಮಾಡಲು ನಮಗೆ ಆತ್ಮಬಲ, ದೊರೆಯುತ್ತದೆ. ಗುರುಗಳು ನಮ್ಮ ಎರಡನೇ ತಂದೆತಾಯಿಗಳು. ಅವರನ್ನು ಕಡೆಗಣಿಸದೇ ಅವರಿಗೆ ಗೌರವ ಸಲ್ಲಿಸೋಣ. ಸಾಮಾಜದಲ್ಲಿ ನಾವು ಗೌರವವಾಗಿ ಬದುಕಬೇಕೆಂದರೆ ಅವರ ಶ್ರೀರಕ್ಷೆ ನಮಗೆ ಅವಶ್ಯಕ. ಶಿಕ್ಷಕರೇ ಇಲ್ಲಾವಾದರೆ ಮುಂದೊಂದು ದಿನ ಸಮಾಜ ಏನಾಗಬಹುದೆಂಬ ಕಲ್ಪನೆಯನ್ನು ಊಹಿಸಲು ಆಸಾಧ್ಯ. ದುಡ್ಡಿನಿಂದ ಎಲ್ಲವನ್ನೂ ಪಡೆಯಬಲ್ಲೆ ಎಂಬ ಪರಿಕಲ್ಪನೆ ಬದಲಾಗಬೇಕು. ದುಡ್ಡಿನಿಂದ ಶಾಲೆಯನ್ನು ಪಡೆಯಬಹುದು ಶಿಕ್ಷರ ಜ್ಞಾನವನ್ನಲ್ಲ.
ಗುರುವಿನ ಗುಲಾಮನಾಗುವ ತನಕ ದೊರೆಯದನ್ನ ಮುಕುತಿ. ಗುರು ಇಲ್ಲದೆ ಗುರಿ ಇಲ್ಲ. ಗುರು ಇಲ್ಲದೆ ಜೀವನವೇ ಶೂನ್ಯ. ಇದುವೇ ನಮ್ಮ ಗುರಿಯ ಪಯಣದೆಡೆಗೆ ಗುರುವಿನ ಶ್ರೀರಕ್ಷೆ. ಗುರುವಿನೊಂದಿಗೆ ಹೆಜ್ಜೆ ಹಾಕೋಣವೇ…..
ನನ್ನೊಂದಿಗೆ ಕಲಿತಿರುವ ನನ್ನ ಹಾಗೂ ನನ್ನ ಎಲ್ಲಾ ಸ್ನೇಹಿತರ ಪರವಾಗಿ ನಮ್ಮೆಲ್ಲಾ ಶಿಕ್ಷಕವೃಂದಕ್ಕೆ ಈ ಮೂಲಕ ಹೃತ್ಪೂರ್ವಕ ವಂದನೆಗಳು. ನಾವೆಂದಿಗೂ ಅವರಿಗೆ ಚಿರಋಣಿಗಳು.
ಸೌಮ್ಯ ನಾರಾಯಣ್
ಚಿತ್ರಗಳು : ಗೂಗಲ್
2 Comments
ತುಂಬಾ ಚೆನ್ನಾಗಿ ಇದೆ. ಮೊದಲೆಲ್ಲ ಗುರುಗಳೇ ನಮ್ಮ ಜೀವನ ಆಗಿತ್ತು.
Good Article on education system