ನೀನು ಆಡಬಹುದಾದ
ಒಳ್ಳೆಯದೊಂದು ಮಾತಿಗಾಗಿ
ಅದರಿಂದ ಮೂಡುವ
ಮನದ ಬೆಳಕಿಗಾಗಿ
ಕತ್ತಲಲಿ ನಿಂತಿರುವ ನಾನು
ಕಿವಿಯಗಲಿಸಿ ಆಲಿಸಲು
ಹಾತೊರೆಯುತಿರುವೆ
ನೀನಾದರೋ
ಮೌನದ ಹುತ್ತದೊಳಗೆ
ನಿನ್ನ ನೀನು ಬಂಧಿಸಿಕೊಂಡಿರುವೆ
ನಿನ್ನ ಮೆಚ್ಚುಗೆಯ
ಒಂದು ಕುಡಿನೋಟಕ್ಕಾಗಿ
ನಾನು ಕಣ್ಕಣ್ಣು ಬಿಟ್ಟುಕೊಂಡು
ನಿದ್ದೆ ಕಳೆದುಕೊಂಡು
ಕನಸುಗಳನ್ನು ಬದಿಗಿಟ್ಟು
ಕಾಯುತಿರುವೆ
ನೀನಾದರೋ
ಕನಸೆಂಬ ಕುದುರೆಯನೇರಿ
ಮುಗಿಲಿನೆಡೆಗೆ ದೃಷ್ಟಿ ನೆಟ್ಟು
ನನ್ನನ್ನು ಇಲ್ಲಿ ಕಡೆಗಣಿಸಿರುವೆ
ನಿನ್ನ ಒಂದು
ಆಪ್ಯಾಯ ಅಪ್ಪುಗೆಗಾಗಿ
ಬೆಚ್ಚಗಿನ ಭಾವಕ್ಕಾಗಿ
ಬೀಸುವ ಗಾಳಿಗೂ
ಬೆದರದೇ ಬೆಂಡಾಗದೆ
ಕಾಯುತ್ತಾ ನಿಂತಿರುವೆ ನಾನಿಲ್ಲಿ
ನೀನಾದರೋ
ಕೈಗಳ ಹಿಂದಕ್ಕೆ ಕಟ್ಟಿ
ಹೃದಯದ ಬಾಗಿಲು ಮುಚ್ಚಿ
ಅರಿಯದ ಯಾವುದೋ
ಶೂನ್ಯದೊಳಗೆ ನಡೆಯುತ್ತಿರುವೆ
ಸೌಜನ್ಯ ದತ್ತರಾಜ