ಗೊರಕೆಗಳು
ಪ್ರಯಾಣಿಕರಲ್ಲಿ ವಿನಂತಿ,
ಹೊಸಪೇಟೆಯಿಂದ ಬೆಂಗಳೂರು ಮಾರ್ಗವಾಗಿ
ಮೈಸೂರು ತಲುಪುವ
ಹಂಪಿ ಎಕ್ಸ್ ಪ್ರೆಸ್ ರೈಲುಗಾಡಿಯು
ಇನ್ನೇನು ಕೆಲವೇ ನಿಮಿಷಗಳಲ್ಲಿ
ಪ್ಲಾಟ್ ಫಾರಂ ಸಂಖ್ಯೆ ಒಂದರಲ್ಲಿ ಬಂದು ನಿಲ್ಲಲಿದೆ!
ಚಿಕುಬುಕು ಬೋಗಿಗಳು
ಸಾಲಾಗಿ ಬಂದು ನಿಂತವು
ಜನರ ನೂಕಾಟಗಳ ನಡುವೆ
ನಮ್ಮಯ ಸೀಟುಗಳು ಭರ್ತಿಯಾದವು
ಕಾಲು ಕೆಳಗೆ
ಕಾಲಿಡುವ ಜಾಗಗಳಲ್ಲಿ
ದೇಹ-ದೇಹಗಳ ಕೆಳಗೆ
ಎಲ್ಲಿಯೂ ಜಾಗವಿರಲಿಲ್ಲ!
ಊಟದ ಪೊಟ್ಟಣಗಳು
ಮತ್ತು ನೀರು ಬಾಟಲಿಗಳ ಜೊತೆ
ನಮ್ಮಯ ಒಣ ಮಾತುಗಳು
ಎಲ್ಲವೂ ಖಾಯಿಯಾದವು
ಪರ್ಸು, ಬ್ಯಾಗಳು ತಲೆದಿಂಬುಗಳಾದವು
ಕ್ಷಣಾರ್ಧದಲ್ಲಿಯೇ ಲೈಟುಗಳು ಆರಿದವು
ನಿದ್ದೆಯೂ ಬರುವುದರಲ್ಲಿತ್ತು
ಅಷ್ಟರಲ್ಲಿ,
ಒಂದಾದಮೇಲೊಂದು ಮೈಗೆರಗಿದಂತೆ
ಗೊರಕೆಗಳು ಶುರುವಾದವು
ರಾಗಿ ಮಷಿನ್ ಕೂಗಾಟದಂತೆ
ಎಚ್ಚರಿಸಿದರೂ ಎಚ್ಚರವಾಗದೆ
ಕಪಟ ನಾಟಕವಾಡುತ
ಇಡೀ ಬೋಗಿಯನ್ನು ಆವರಿಸಿದ್ದವು
ಬಹುಶಃ ಜಿದ್ದಿಗೆ ಬಿದ್ದಂತೆ!
ವಯಸ್ಸಾದವರು ಸೇರಿದಂತೆ
ಮದುವೆಯಾಗದವರೂ ಭಾಗಿಯಾಗಿದ್ದರು
ನಮಗೆ ನಿದ್ದೆಯೂ ಕನಸಾಗಿತ್ತು
ಎಷ್ಟು ಬೇಡಿಕೊಂಡರೂ
ಬೆಂಗಳೂರು ಬರಲಿಲ್ಲ
ಬಂದಿತೆಂದು ನೋಡುವುದರಲ್ಲೇ ರಾತ್ರಿ ಕಳೆದಿತ್ತು
ಸ್ಟೇಷನ್ ಹತ್ತಿರ ಬಂದಾಗ
ನಮ್ಮ ಕಣ್ಣುಕಿವಿಗಳು ಸಂಪೂರ್ಣ ಸೋತಿದ್ದವು
ನಾವೂ ಸೇರಿದ್ದವೇನೋ ಪಂಕ್ತಿಯಲ್ಲಿ?!
ಕಣ್ಬಿಟ್ಟಾಗ ಮೈಸೂರು ಬಂದಿತ್ತು
ಗೊರಕೆ ಶುರುಮಾಡಿದವರು
ಅದರ ಬಾಧ್ಯತೆಗೆ ಸಿಲುಕಿದ ನಾವೂ..
ಇಬ್ಬರ ಕಣ್ಣೋಟಗಳು ಕ್ರೂರಿಯಾಗಿದ್ದವು
ನಮ್ಮ ಮನಸ್ಸಿನಲ್ಲಿ ನೂರೆಂಟು ಥರಹದ ಶಾಪಗಳು
ಅದರ ಹೊರತು, ನಿಸ್ಸಹಾಯಕರಾಗಿ
ಮತ್ತೆ ಬೆಂಗಳೂರಿನ ಟ್ರೈನು ಹಿಡಿದೆವು
ಈ ಬಾರಿ ನಿದ್ಧೆ ಹತ್ತಲಿಲ್ಲ
ಅನಂತ್ ಕುಣಿಗಲ್