ಗೋಧೂಳಿ ಗಂಧ ಸೂಸುವ ಸಂಜೆಯ ಹಾಡುಗಳು…

ಗೋಧೂಳಿ ಗಂಧ ಸೂಸುವ ಸಂಜೆಯ ಹಾಡುಗಳು…

ಪುಸ್ತಕ : ಗೋಧೂಳಿ ಗಂಧ
ಕವಿ : ಪ್ರೊ. ಸಿದ್ದು ಸಾವಳಸಂಗ ತಾಜ್ಪುರ
ಪ್ರಕಾಶಕರು : ಕಾವ್ಯ ಭಾರತೀ ಪ್ರಕಾಶನ

ಕವಿತೆಯ ಎದೆಯ ಕದವ ತೆರೆಯೆ

ಎಷ್ಟೊಂದು ಕವಿತೆಗಳು
ಮನದ ತುಮುಲವ ಹಾಡಲು
ಒಂದಾದರೂ ಕವಿತೆಗೆ
ಸಾಧ್ಯವಾಗಿದೆಯೇ ಬೆಳಕ ಹಚ್ಚಲು

ಹೀಗೆ ಕವಿ ಕೇಳುವ ಪ್ರಶ್ನೆಗೆ ಎಷ್ಟೋ ಸಾವಿರ ವರ್ಷಗಳ ಇತಿಹಾಸವಿದೆ. ಉತ್ತರ ಬಹುಶಃ ಯಾವ ಕವಿಗೂ ಸಿಕ್ಕಿಲ್ಲ ಆದರೆ ಕವಿ ಹೇಳುವುದನ್ನು ಮಾತ್ರ ಬಿಟ್ಟಿಲ್ಲ. ಯಾರು ಕೇಳಲಿ, ಬಿಡಲಿ ನನ್ನ ಕಾರ್ಯವನ್ನು ನಾನು ಮಾಡುತ್ತೇನೆ ಎಂದು ಕವಿ ಕವಿತೆಯನ್ನು ಬರೆಯುತ್ತಲೇ ಇದ್ದಾನೆ. ನಾವು ಸಾಧ್ಯವಾದಷ್ಟು ಓದುತ್ತಲೇ ಇದ್ದೇವೆ. ಕವಿತೆಗೆ ಕೊನೆ ಎಂಬುದೇ ಇಲ್ಲ ಹೀಗೆ ಪ್ರೊ. ಸಿದ್ದು ಸಾವಳಸಂಗ ತಾಜ್ಪುರ ಇವರ ಮೂರನೇ ಕವನ ಸಂಕಲನ “ಗೋಧೂಳಿ ಗಂಧ” ಕುರಿತು ಡಾ. ವೈ. ಎಂ. ಯಾಕೋಳ್ಳಿ ಸರ್ ಮುನ್ನುಡಿಯನ್ನು ಬರೆದಿದ್ದಾರೆ. ಕಾವ್ಯ ಭಾರತೀ ಪ್ರಕಾಶನ ತಾಜ್ಪುರ ತಿಕೋಟಾ ಇವರಿಂದ ಪ್ರಕಾಶನಗೊಂಡ ಸಂಕಲನವಿದು. ರಕ್ಷಾಪುಟ ಕೆ.ಕೆ ಮಕಾಳಿಯವರಿಂದ ಅತ್ಯಂತ ಸುಂದರವಾಗಿ ಮೂಡಿ ಬಂದಿದೆ. ಪುಟ ವಿನ್ಯಾಸ ಜಮುನಾ ಇವರಿಂದ ಹೊರಹೊಮ್ಮಿದೆ.

ಈ ಕವನ ಸಂಕಲನದ ಎಲ್ಲಾ ಕವನಗಳು ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟಗೊಂಡ ಕವಿತೆಗಳಾಗಿವೆ. ಪ್ರತಿಯೊಂದು ಕವನವು ತನ್ನದೇ ಆದ ವಿಶಿಷ್ಟತೆಯಿಂದ ತೆರೆದುಕೊಳ್ಳುತ್ತದೆ.

ಗೋಧೂಳಿ ಗಂಧ ಕವನ ಸಂಕಲನ ಒಟ್ಟು 50 ಕವಿತೆಗಳನ್ನು ಒಳಗೊಂಡಿದೆ. ಕಾವ್ಯ ಎಂಬುದು ಕವಿಯ ಭಾಷಿಕ ರಚನೆಯಾದರೂ ಅದು ಭಾವನೆಲೆಯಲ್ಲಿ ರೂಪುಗೊಂಡಿರುತ್ತದೆ. ವರ್ತಮಾನದ ಕನ್ನಡಿಯಾಗಿ ವಿದ್ಯಮಾನಗಳನ್ನು ಹರಳುಗಟ್ಟಿಸಿಕೊಂಡು ಸೃಷ್ಟಿಯಾಗುವ ಸೃಜನಾತ್ಮಕ ಕಲೆಯದು, ಎಂದು ವಿಜಯಪುರದ ಹಿರಿಯ ಸಾಹಿತಿಗಳಾದ ಡಾ. ಮಲ್ಲಿಕಾರ್ಜುನ್ ಮೇತ್ರಿಯವರು ತಮ್ಮ ಬೆನ್ನುಡಿಯಲ್ಲಿ ಬರೆದು ಹರಿಸಿದ್ದಾರೆ.

ಕವಿ ಸಿದ್ದು ಸಾವಳಸಂಗ ಈ ಸಂಕಲನವನ್ನು ತಮ್ಮ ಚಿಕ್ಕಮ್ಮ ದಿ. ಶ್ರೀಮತಿ ಕಸ್ತೂರಿಬಾಯಿ ತೊರವಿ ಇವರಿಗೆ ಅರ್ಪಣೆ ಮಾಡಿದ್ದಾರೆ.

ಈ ಸಂಕಲನದ ಮೊದಲ ಕವನ “ಗೆಳತಿ ನೀನಿಲ್ಲದ ಸಮಯ” ಓದುಗರನ್ನು ಒಂದು ಕ್ಷಣ ಮೈಮರೆಸುತ್ತದೆ.

ನಾವು ಮಹಿಳೆಯರು ಪತಿವ್ರತೆಯ ನೆಪದಲ್ಲಿ ನಾಲ್ಕು ಗೋಡೆಗಳ ಮಧ್ಯ ಜೀವಂತ ಶವವಾದವರು ಈ ವಾಸ್ತವತೆಯ ಕವನವು ಹೆಣ್ಣಿನ ಗೋಳಿನ ಅರ್ಥವನ್ನು ಹೇಳುತ್ತದೆ.

ನೋವು ನಲಿವು ಏನೇ ಇರಲಿ ಬಾಳ ಬಂಡಿ ಸಾಗುತಿರಲಿ ತುಂಬಾ ಮಾರ್ಮಿಕವಾಗಿ “ಜೀವನದ ರಹಸ್ಯ”  ಕವನದಲ್ಲಿ ತೆರೆದುಕೊಳ್ಳುತ್ತದೆ.

ನಾನು ನೀನು ಜೋಡಿ ಜೀವನ ಎತ್ತಿನಗಾಡಿ ಎಂಬಂತೆ ಇವರ “ಸಖೀ ಪದ್ಯಗಳು” ಎಂಬ ಕವನದಲ್ಲಿ ಕವಿ ಹೇಳುತ್ತಾರೆ, ನೆರೆಹೊರೆಯವರು ನಮ್ಮ ನೋಡಿ ಪಟ್ಟರು ಮತ್ಸರ, ಅದು ಒಳ ಒಳಗೆ ನಮ್ಮಿಬ್ಬರಿಗೂ ತುಂಬಿತು ಹುರುಪು ಸರಸರ. ಅಂದರೆ ಹೊರಗಿನವರ ಮತ್ಸರ ಕೂಡ ನಮಗೆ ಸಂತೋಷವೇ ತರುತ್ತದೆ ಎಂದು ಹೇಳಿಕೊಳ್ಳುತ್ತಾರೆ. ಕವಿ ಯಾವಾಗಲೂ ದೂರ ದೃಷ್ಟಿಯುಳ್ಳವನು. ಹಾಗೂ ಸಮಾಜದ ಓರೆ ಕೋರೆಗಳನ್ನು ನಯವಾಗಿ ತಿದ್ದುತ್ತಾ ತನ್ನನ್ನು ತಾನು ಸಮಾಧಾನಿಸಿ ಕೊಳ್ಳುತ್ತಾನೆ . ಹಾಗೆಯೇ ಇನ್ನೊಂದು ಕವನ “ಹೇಳುವುದೆಲ್ಲವನ್ನು ಹೇಳಿದ್ದೇನೆ ಗೆಳತಿ”ಎಂಬ ಕವಿತೆಯಲ್ಲಿ

ಯಾವ ದಂಪತಿಗಳಲ್ಲಿ ಕಲಹ ವಿಲ್ಲ ಗೆಳತಿ,
ಅದಕ್ಕೂ ಒಂದು ಮಿತಿ ಇದೆ ಒಡತಿ.

ಹೊರಗೆ ದುಡಿದು ಬರುವ ನಾನು ಮನೆಗೆ ಬಂದಾಗ ಹೇ..ಸತಿಯೇ ನನಗಾಗಿ ಸ್ವಲ್ಪ ನೆಮ್ಮದಿ ನೀಡುವೆಯಾ ..ಎಂದು ಕೇಳುವಲ್ಲಿ ಹೆಂಡತಿಯ ಸಹಕಾರವನ್ನು ಈ ಕವಿತೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಸರಸ ಜನನ, ವಿರಸ ಮರಣ ಎಂಬುದನ್ನು ಖಾತ್ರಿಪಡಿಸಿದ್ದಾರೆ

ಓದುಗರನ್ನ ಆಪ್ತವಾಗಿ ಸೆಳೆಯುವ ಕವನ “ನಾನು ಶಾಂತವಾಗಿದ್ದೇನೆಂದರೆ” ಒಬ್ಬ ಮನುಷ್ಯನ ಶಾಂತತೆ, ಮೌನ, ಸೋಲು, ಸರಳತೆ ಹೀಗೆ ಇವೆಲ್ಲವನ್ನೂ ಈ ಕವನದಲ್ಲಿ ಅತ್ಯಂತ ಮಾರ್ಮಿಕವಾಗಿ ಹೇಳುತ್ತಾರೆ. ಕ್ರೂರನಾಗುವುದು ಬೇಡ ಮಾನವನಾಗಿ ಮನುಷ್ಯತ್ವದಿಂದ ಬದುಕಬೇಕೆಂಬ ಸಾಕ್ಷಿಪ್ರಜ್ಞೆಯನ್ನು ಎತ್ತಿ ಹೇಳುತ್ತಾರೆ.. ಅವರ ಇನ್ನೊಂದು ಆತ್ಮೀಯತೆಯ ಕವನ “ಅಪ್ಪ ಆಲದ ಮರ” ಇಲ್ಲಿಯೂ ಕೂಡ

ಅಪ್ಪ ಅವ್ವ ಜಗಳಾಡಿದ್ದನ್ನು ನಾವು ನೋಡಿಲ್ಲ
ಹಾಗೂ ಅಪ್ಪನಿಗೆ ವಿಶ್ರಾಂತಿ ಬೇಕಿಲ್ಲ
ಅವ್ವನಿಗೆ ಪ್ರೀತಿಸುವದ ಬಿಟ್ಟರೆ ಗೊತ್ತಿಲ್ಲ
ಮಕ್ಕಳಿಗಾಗಿ ತೇಯ್ದರು ಜೀವನವನ್ನು ಗಂಧದಂತೆ

ಎಂದು ಅಪ್ಪ ಅಮ್ಮನ ವಾತ್ಸಲ್ಯಕ್ಕೆ ಸರಿಸಾಟಿ ಇಲ್ಲ ಎಂಬುದನ್ನು ಸಾಬೀತುಪಡಿಸುತ್ತಾರೆ

ಓದುಗರ ಮನದಲ್ಲಿ ತಂದೆ ತಾಯಿಗಳ ಪರಿಶ್ರಮದ ಭಾವ ಬಿತ್ತುವಲ್ಲಿ ಸಫಲರಾಗಿದ್ದಾರೆ..

ಸಾವಳಸಂಗವರ ಮತ್ತೊಂದು ಕವನ “ರೈತನ ಜೀವನ”ದ ಚಿತ್ರಣ ನೀಡುತ್ತದೆ. ಇಲ್ಲಿ ಮೋಡ ಮಳೆ ತರಲಿಲ್ಲ, ಸಾಲ ಸೋಲ ಮಾಡಿ ತಂದ ಬೀಜ ಗೊಬ್ಬರ ನುಸಿಗಟ್ಟಿ ಹೋಯಿತಲ್ಲ. ಬರಡಾದ ಭೂತಾಯಿ ಹಸಿರುಟ್ಟು ನಲಿಯಲಿಲ್ಲ ಹೀಗೆ ರೈತನ ಜೀವನದ ದುಃಖ ದುಮ್ಮಾನವನ್ನು ಆಪ್ತವಾಗಿ ಓದಿಸಿದ್ದಾರೆ.

ಹಾಗೆಯೇ ಓದುತ್ತಾ ಮುಂದುವರೆದಂತೆ ಇನ್ನೊಂದು ಕವನ ಕಣ್ಣ ಮುಂದೆ ಬಂದು ನಿಲ್ಲುತ್ತದೆ ಅದು “ಧನಮದ ತುಂಬಿದ ಸಿರಿವಂತರು” ಎಂಬ ಈ ಕವಿತೆಯಲ್ಲಿ

ಸಿರಿವಂತರ ಅಟ್ಟಹಾಸ ಅವರ ವರ್ತನೆ
ಹಾಗೂ ಅವರ ಶುಭ್ರ ವಸ್ತ್ರಗಳನ್ನು ನೋಡಿ
ಮರುಳಾಗದಿರಿ ಅವರ ಬಟ್ಟೆಗಳು ಮಾತ್ರ ಶುಭ್ರ 
ಮನಸ್ಸು ಮಾತ್ರ ದರಿದ್ರ

ಇವನ್ನೆಲ್ಲವನ್ನ  ಓದುಗರಿಗೆ ಹೇಳುತ್ತಾ ಎಚ್ಚರಿಸುತ್ತಾರೆ.

ಗಂಡ ಹೆಂಡತಿ ಜೀವನದ ರಥದ ಎರಡು ಗಾಲಿಗಳಿದ್ದಂತೆ ಒಂದು ಗಾಲಿ ಸರಿ ಇರದಿದ್ದರೂ ರಥ ಓಡಲಾರದು ಹಾಗೆ ಇಲ್ಲಿ ಬರುವ ಕವನ “ನೀನೊಂದು ಕಲ್ಲಾಗಿದ್ದರೆ ಎಷ್ಟೋ ಚೆನ್ನಾಗಿತ್ತು” ಎಂಬ ಈ ಕವಿತೆಯಲ್ಲಿ

ವಿಲಾಸಿ ಗಂಡನಿಗೆ ಹೆಂಡತಿ ಮಕ್ಕಳು ಏಕೆ ಬೇಕು?,
ಎಲ್ಲವೂ ಮಹಿಳೆಯ ದುಡಿತದಿಂದಲೇ
ಜೀವನ ನಡೆಯಬೇಕಾದರೆ
ನಿನ್ನನ್ನು ಮದುವೆಯಾಗಿ ಏನು ಪ್ರಯೋಜನ?
ಸಮಾಜ ಜರಿದರೂ ಚಿಂತೆ ಇಲ್ಲ
ನೀನು ನನಗೆ ಬೇಡವೇ ಬೇಡ

ಎಂಬ ಸತಿಯ ಬೇಸರದ ನುಡಿಗಳು ಕೂಡ ಇಂದಿನ ಕೆಲವು ವಿಲಾಸಿ ಜೀವನದ ಪುರುಷರಿಗೆ ಧೈರ್ಯವಾಗಿ ಹೇಳಿಸಿದಂತಿದೆ ಈ ಕವನ. ಅದಕ್ಕೆ ನೀನು ಮನುಷ್ಯನಾಗುವ ಬದಲಿ ಕಲ್ಲಾಗಿದ್ರೆ ಚೆನ್ನಾಗಿತ್ತು ಅಂತ ಸತಿ ಹೇಳುತ್ತಾಳೆ ಈ ಭೂಮಿಗೆ ಭಾರವಾಗುವುದಾದರೂ ತಪ್ಪುತ್ತಿತ್ತು. 

ಗೋಧೂಳಿ ಗಂಧ ಸಂಕಲನದ ಕೊನೆಯಲ್ಲಿ “ನಾನೊಂದು ಮರವಾಗಿದ್ದರೆ ಈ ಕವನವು ಕೂಡ ಮರ ಮನುಷ್ಯನಿಗೆ ಏನೆಲ್ಲಾ ನೀಡಿದರೂ  ಮನುಷ್ಯ ಮರಳಿ ಆ ಮರಕ್ಕೆ ಕೊಡಲಿ ಹಾಕುವುದನ್ನು ಮಾತ್ರ ಬಿಡಲಾರ ತನ್ನ ಸ್ವಾರ್ಥ ಬುದ್ಧಿಯನ್ನು ತೋರಿಸುತ್ತಾನೆ. ಮರ ಇದ್ದರೂ ಲಕ್ಷ, ಕಡಿದರೂ ಲಕ್ಷ.. ಹೇಳುವುದನ್ನು ಮರೆಯುವುದಿಲ್ಲ  ಹಾಗೆಯೇ “ಮಾನವ ಕುಲಂ ತಾನೊಂದೇ ವಲಂ” ಇಲ್ಲಿ ಕವಿ ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ ದೇಶ. ಭಾಷೆ, ಜಾತಿ, ವೇಷ ಎಲ್ಲವೂ ಬೇರೆ ಬೇರೆಯಾದರೂ ನಾವೆಲ್ಲರೂ ಭಾರತಮಾತೆಯ ಮಕ್ಕಳು ಎಂಬುದನ್ನ  ಅತ್ಯಂತ ಸೊಗಸಾಗಿ ಸಾಕ್ಷಿಕರಿಸುತ್ತಾರೆ.

ಗೋಧೂಳಿ ಗಂಧ ಕರ್ತೃ ಸಾವಳಸಂಗ ಇವರಿಗೆ ಸಾಕಷ್ಟು ಪ್ರಶಸ್ತಿಗಳು ಒಲಿದು ಬಂದಿವೆ. ಹಾಗೂ ಇವರು “ಸಾದಾ ಜೀವನ ಉಚ್ಚ ವಿಚಾರ”ವನ್ನು ಮೈಗೂಡಿಸಿಕೊಂಡವರು. ಇವರ ಈ ಕವನ ಸಂಕಲನವನ್ನು ಓದಲು ಕೈಗೆತ್ತಿಕೊಂಡಾಗ ಅವರು ತಮ್ಮ ಜೀವನದಲ್ಲಿ ಕಂಡುಂಡ ಅನುಭವಗಳನ್ನ ಇಲ್ಲಿ ಒಂದೊಂದು ಕವನವಾಗಿಸಿದ್ದಾರೆ ಎಂಬುದರಲ್ಲಿ ಬೇರೆ ಮಾತಿಲ್ಲ. “ರವಿ ಕಾಣದ್ದನ್ನು ಕವಿ ಕಂಡ” ಎಂಬುದನ್ನ ನಾವು ಇಲ್ಲಿ ಅರಿಯಬಹುದು. ಒಟ್ಟಾರೆ ಈ 50 ಕವನಗಳನ್ನ ಅವಲೋಕಿಸಿದಾಗ ಒಂದೊಂದು ಕವಿತೆ ತನ್ನ ಮೇರು ಮಟ್ಟದ ವಾಸ್ತವ ಚಿತ್ರಣವನ್ನು ಬಿಚ್ಚಿಡುತ್ತದೆ. ಜೊತೆಗೆ ಅವರ ಆತ್ಮೀಯ ಮಿತ್ರರು ಕೂಡ ತಮ್ಮ ಓಲೆಗಳ ಮುಖಾಂತರ ಕವನಗಳನ್ನ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಹೀಗೆ ಈ ಕವಿ ಇನ್ನೂ ಹತ್ತಾರು ಕೃತಿಗಳನ್ನ ಕವನ ಸಂಕಲನಗಳನ್ನ ಬರೆಯುತ್ತಾ ಇರಲಿ ಎಂದು ಹಾರೈಸುತ್ತಾ ಒಂದು ಒಳ್ಳೆಯ ಕವನ ಸಂಕಲನವನ್ನು ಕನ್ನಡದ ಸಾರಸ್ವತ ಲೋಕಕ್ಕೆ ನೀಡಿದ ಪ್ರೊ. ಸಿದ್ದು ಸಾವಳಸಂಗ ಹಿರಿಯ ಉಪನ್ಯಾಸಕರು ವಿಜಯಪುರ, ಇವರಿಗೆ ಹೃತ್ಪೂರ್ವಕ ಧನ್ಯವಾದಗಳು.

ಜಯಶ್ರೀ ಭ. ಭಂಡಾರಿ
ಬಾದಾಮಿ

Related post