ಗೋವಿಂದಯ್ಯ (ಭಾಗ – ೨)

ಹಿಂದಿನ ಪ್ರಕಟಣೆಯಲ್ಲಿ
ಗೋವಿಂದಯ್ಯ ಚಿಕ್ಕದರಲ್ಲಿ ಪಟ್ಟ ಬವಣೆ, ಚಿಕ್ಕ ಹೋಟೆಲ್ ಕಟ್ಟಿದ್ದು, ಹೆಂಡತಿ ಲಕ್ಷ್ಮಿಯ ಕಾಲ್ಗುಣ ಹಾಗು ಸಹಕಾರದಿಂದ ಅದು ದೊಡ್ಡ ಹೋಟೆಲ್ ಆದದ್ದು ಕಾಲಾನಂತರ ಅನಾರೋಗ್ಯದಿಂದ ಲಕ್ಷ್ಮಿಯ ಸಾವು. ಮುಂದೆ ಓದಿ…

-ಎರಡು-

“ಏನ್ ಮಾಡ್ಕಂಡ್ ಇದೀಯಪ್ಪ ನಿನ್ ವಟ್ಗೆ…” ಅಜ್ಜಿ ಕೇಳಿದ್ದರು. “ಒಂದ್ ಸಣ್ಣ ಓಟ್ಲ್ ಇಟ್ಗಂಡಿದೀನಿ ಅಜ್ಜಿ” ಗೋವಿಂದನ ಉತ್ತರ. “ಬೇಕಾದೋಟು ಬುಡು; ಅವ್ವ-ಅಪ್ಪ ಎಲ್ಲವ್ರೆ?” ಅಜ್ಜಿ. “ಇಬ್ರಾಳೂ ಇಲ್ಲ ಕಣಜ್ಜಿ, ಸತ್ತೋಗ್ ಬೋ ವರ್ಸಾತು” ಅಂದಿದ್ದ. ಇದು, ಮೊದಲ ಸಲ ಗೋವಿಂದ, ಲಕ್ಷ್ಮಿ ನೋಡಿ ಮದುವೆ ಮಾಡ್ಕೊಡಿ ಅಂತ ಕೇಳಲು ಹೋಗಿದ್ದಾಗ, ಲಕ್ಷ್ಮಿಯ ಅಜ್ಜಿಗೂ ಅವನಿಗೂ ನಡೆದಿದ್ದ ಮಾತುಕತೆ. ಆ ಹೊತ್ತಿಗೆ ಸರಿಯಾಗಿ, ಒಬ್ಬಳು ಬಟ್ಟಲು ಕಣ್ಣಿನಂಥ ಹುಡುಗಿ, ಒಳಗಿನ ಬಾಗಿಲು ಸಂದೀಲಿ ಇಣುಕಿ ಇಣುಕಿ ನೋಡ್ತಾ ಇದ್ದಳು. ಆಗ ಅದು ಯಾರೋ ಗೊತ್ತಾಗದೆ, ಅಜ್ಜಿ ಕೇಳೇ ಬಿಟ್ಟಿದ್ದ. “ಅವಳೇಯ ಕಣಪ್ಪ ನಿನ್ ಎಣ್ಣು” ಅಂತ ಅಜ್ಜೀನೇ ಹೇಳಿದ್ದರು. ಹೆಣ್ಣೇನೋ ಪರವಾಗಿಲ್ಲ ಅನ್ನಿಸಿತ್ತು. ‘ನಾಕ್ಮನೆ ಹಳ್ಳಿ ಪುಟ್ಟ ಗುಡಿಸ್ಲಂತ ಮನೆ’, ಅಲ್ಲಿ ಲಕ್ಷ್ಮಿ ಅಲ್ಲದೆ, ಅವಳವ್ವ,ಅಪ್ಪ, ಮತ್ತೆರಡು ಮಕ್ಕಳು; ಒಂದು ಗಂಡು, ಒಂದು ಹೆಣ್ಣು, ಇಷ್ಟು ಜನ. ಗೋವಿಂದನ್ನ ಕರೆದುಕೊಂಡು ಹೆಣ್ಣು ನೋಡಲು ಜೊತೆಗೆ ಹೋಗಿದ್ದವರು, ಇಬ್ಬರಿಗೂ ನಂಟರೇ; ಹಾಗಾಗಿ, ದೂಸರಾ ಮಾತಿಲ್ಲದ ಹಾಗೆ ಮದುವೆ ಮಾಡಿ ಕೊಟ್ಟಿದ್ದರು.

ಲಕ್ಷ್ಮಿ ಎಲ್ಲಿ ಬೆಂಗಳೂರಲ್ಲಿ ಕಳೆದು ಹೋಗಿಬಿಡುತ್ತಾಳೋ ಅನ್ನೋ ಭಯ ಆರಂಭದಲ್ಲಿ ಇತ್ತು. ಕ್ರಮೇಣ ಲಕ್ಷ್ಮಿ ಸಹ “ಬೆಂಗಳೂರ ನೀರಿಗೂ ಬಂದ ಹಾಗೆ” ಒಗ್ಗಿ ಹೋಗಿದ್ದಳು. ಇವರ ಮದುವೆ ಆದ ವರ್ಷಕ್ಕೆ, ಲಕ್ಷ್ಮಿಯ ಅಜ್ಜಿ, ಇದೇ ರೀತಿ ಮೆದುಳ ರಕ್ತ ಸ್ರಾವ ಆಗಿ ಸತ್ತಿದ್ದರು. ಆದರೆ, ಆಗ ಇದೆಲ್ಲ ಯಾರಿಗೆ ಗೊತ್ತಾಗಬೇಕು…? ಭವಿಷ್ಯ ಅನ್ನುವುದು ಆಗಂತುಕನ ದಿಢೀರ್ ಆಗಮನ ಇದ್ದಂತೆ!

ತಿಥಿ ಆದ ಐದನೇ ದಿನ…ಹೀಗೇ ನೂಕಿದ ಹಾಗೆ, ಪ್ರತಿ ದಿನದ, ಘಂಟೆ, ನಿಮಿಷಗಳನ್ನೂ ತಾವೇ ಗಡಿಯಾರದ ಒಳಗೇ ಕೂತು ನೂಕಿ ನೂಕಿ ತಳ್ಳುತ್ತಿದ್ದ ಹಾಗೆ, ಅನ್ನಿಸುವ ಗೋವಿಂದಯ್ಯ!…ಮಕ್ಕಳು ಹೇಗಿದ್ದರೂ ಕೈಗೆ ಬಂದಿದ್ದು, ಇನ್ನೇನು ಅವರ ಮದುವೆ ಯೋಚನೆ ಮಾಡಬೇಕು, “ಅಂತ ವರಾತ ಮಾಡ್ತಿದ್ಲು, ಪಾಪ!” ಯೋಚನೆ ಮಾಡ್ತಾ ಮಾಡ್ತಾನೇ ಜಾಗ ಖಾಲಿ ಮಾಡಿದ್ದಳು. “ನಾನ್ಯಾಕ್ ಕಿವೀಗ್ ಆಕ್ಕೊಳ್ನಿಲ್ವೋ ಕಾಣೆ” ಅಂತ ತಲೆ ಚಚ್ಚಿಕೊಳ್ಳೋರು! ಉದ್ಯಮದಲ್ಲಿ ಬೆಳೆದ ನಂತರ, ಎಲ್ಲಾದರೂ ದೂರ ಅಂತ, ಹಾಕಿಕೊಂಡಿದ್ದ ಯೋಜನೆ ಪ್ರಕಾರ ಗೋವಿಂದಯ್ಯ ದಂಪತಿಗಳಿಬ್ಬರೂ, ಒಂದು ವಾರ ಉತ್ತರ ಭಾರತದ ಟೂರ್ ಹೋಗಿದ್ದು ಒಂದೇ ಕೈಗೂಡಿದ್ದು. ಮುಂದೆ ಎರಡು ವರ್ಷಕ್ಕೆ ಒಂದು ಸಲ ಆದರೂ, ಹೊರ ದೇಶ ಸುತ್ತುವ ಆಲೋಚನೆಯೂ ಇತ್ತು…ಹೌದು, ಇತ್ತು! ಎಷ್ಟೆಷ್ಟು ಅತ್ತಿತ್ತ ಹೊರಳಿದರೂ, ಊಹ್ಞೂ, ನಿದ್ದೆ ಹತ್ತೋದೇ ಇಲ್ಲ…

ಲಕ್ಷ್ಮೀಗೆ ಟೈಫಾಯ್ಡ್ ಆಗಿದ್ದಾಗ, ಮಕ್ಕಳು ಇನ್ನೂ ಇರಲಿಲ್ಲ. ಮೇಲಾಗಿ, ಕೆಲಸಕ್ಕೆ ಅಂತ ಇಡೋವಷ್ಟು ದುಡ್ಡೂ ಇರಲಿಲ್ಲ; ಮೂರ್ಮೂರು ದಿನಕ್ಕೂ ಡಾಕ್ಟರ್ ಹತ್ರ ಹೋಗಿ ತೋರಿಸಿ, ಅವಳೊಬ್ಬಳನ್ನೇ ಮನೇಲಿ ಬಿಟ್ಟು, ಹೋಟೆಲ್ ಕಡೆ ಓಡೋದು. ಪಾಪ, ಆಗಲೂ ಎಲ್ಲ ಒಬ್ಬಳೇ ಮಾಡ್ಕೊಳೋಳು. ಸದ್ಯ ಆರಾಮ ಆದಳು, ಆಂಜನೇಯನ ದಯೆ! ಕಷ್ಟ ಸುಖ ಅಂತಲೇ ಅಲ್ಲಾ, ಒಂದೊಂದು ಗಳಿಗೇನೂ ಜೊತೆ ಬಿಟ್ಟು ಅಲ್ಲಾಡದ ಹಾಗೇ ಅಂಟಿದ್ದಂತೆ ಇದ್ದರು.
“ಅವಳೂ ನನ್ ಅಂಗೇಯ, ಎಡದೆ ಎಬ್ಬೆಟ್ಟು! ಎಬ್ಬೆಟ್ಟೇ ಇರ್ಬೋದು”, ಆದರೂ ಅದೆಂಥ ಪ್ರೀತಿ, ಅಳೆಯಲಾರದಂಥ ನಿಷ್ಠೆ!

ಎರಡು ವಾರ ಆದರೂ, ಹೋಟೆಲ್ ಕಡೆ ಹೋಗೋ ಮನಸ್ಸೇ ಬರುತ್ತಿಲ್ಲ. ಸದ್ಯ ಮಕ್ಕಳು ಚೆನ್ನಾಗೇ ನೋಡ್ಕೊತಾ ಇದಾರೆ. ಆ ಕಡೆ ವ್ಯಾಕುಲ ಅಂತೂ ಇರಲೇ ಇಲ್ಲ. ಏನೇ ಇದ್ದರೂ ಮನಸ್ಸು ಸ್ತಿಮಿತ ಇಲ್ಲ. “ನಾನೂ ಎಲ್ಲಿ ಲಕ್ಸ್ಮೀನೇ ಸೇರ್ಕೊತೀನೋ ಅನ್ನೋ ಅಂಗೆ…ಅಂಗಾದ್ರೆ ಒಳ್ಳೇದೇ ಅಲ್ವ?ಛೆಛೆ, ಮಕ್ಕಳ ಮದುವೆ, ಅದೂ ಅಪ್ಪಾನೇ ಇಲ್ಲದೇ ಎಂಗೆ. ಅವಳೂ ಇಲ್ಲ; ಬ್ಯಾಡಪ್ಪಾ ದೇವರೇ, ಬ್ಯಾಡ…” ಏನೋ ಯೋಚನೆ ಬಂದ ಹಾಗೆ, ಗೋವಿಂದಯ್ಯ, ಮಗನಿಗೆ ಕಾಲ್ ಮಾಡಿ, ” ಹಲೋ, ನಾನ್ ಕಣಪ್ಪ…ಮಗಾ, ಇವತ್ಯಾಕೋ ಹೊರಕ್ಕ್ ಬರ್ಬೇಕು ಅನಿಸ್ತ ಐತೆ, ವಸಿ ಬತ್ತೀಯಾ…” ಆ ಕಡೆ ಕಾರ್ತಿಕೇಯ, “ಈಗ್ಲೇನ, ಅಥವ ನಾನು ಊಟಕ್ಕೆ ಬಂದಾಗಲ? ” ಅಂದ. ಏನೋ ಹೊಳೆದ ಹಾಗೆ, ” ಬುಡು, ಸಾಯಂಕಾಲ್ಕೆ ನಾನೇ ತಿರ್ಗಾಡ್ದಂಗೆ, ನಡ್ಕೊಂಡೇ ಬತ್ತೀನಿ”, ಅಂದು, ಬೆಡ್ ರೂಮ್ ನಲ್ಲೇ, ಪೋಟೋ ಆಲ್ಬಮ್ ತೆರೆದರು. “ಅವ್ಕೇನೀಗ ಒಂದ, ಎರಡ, ಬ್ಯಾಕಾದಂಗವೆ ನೋಡ್ತಾ ಕೂತ್ರೆ…”

“ಕಾರ್ತೀಕೇಯ ದೋಸೆ ಹೋಟೆಲ್” ಸುಮಾರು ಮೂರು ಕಿಲೋ ಮೀಟರ್ ದೂರ ಇದೆ. “ಲಕ್ಷ್ಮಿ ಲಾಡ್ಜ್” ಆದರೆ, ಹತ್ತಿರ; ಒಂದೊಂದೂವರೆ ಕಿಲೋಮೀಟರ್ ಇದೆ. ಅಲ್ಲಿಗಾದರೂ, ಈಗಲೇ ಹೋಗಬಹುದಲ್ಲ, ಅನ್ನಿಸಿತು. ಆಲ್ಬಮ್ ಎತ್ತಿಟ್ಟು, ಮುಖ ತೊಳೆದು, ಕುಂಕುಮ ಹಣೇಗಿಟ್ಟು (ಕುಂಕುಮ ಇಲ್ಲದೆ ಎಲ್ಲೂ ಕದಲುತ್ತಿರಲಿಲ್ಲ), ಟವೆಲ್ ಹೆಗಲ ಮೇಲೇರಿಸಿ, “ಸಾಕವ್ವ” ಅಂತ ಕೂಗಿ, “ನಾನಂಗೇ ಓಗಿ ಅಡ್ಡಾಡ್ಕೊಂಡ್ ಬತ್ತೀನವ್ವ…ಬಾಕ್ಲ ಆಕ್ಕೋ, ವಸಿ ಜ್ವಾಪಾನ…” ಅಂತ ಹೊರಟವರು, ಮತ್ತೆ, ” ಬೆಲ್-ಗಿಲ್ಲಾದಾಗ, ಕಳ್ಳ್ ಕಿಟಕೀಲ್ ನೋಡ್ಬುಟ್ಟೇ ತಗೀ…ತಿಳೀತವ್ವ…” ಅಂತ ಹೇಳ್ತಾನೆ, ಆಚೆ ಕಾಲ್ಕಿತ್ತರು. ಈ ಲಾಡ್ಜಿನಲ್ಲಿ ಗ್ರೌಂಡ್ ಫ್ಲೋರಲ್ಲೇ ಆಫೀಸಿದೆ. ಆ “ಮಾರ್ಕಂಡೇಯ ಲಾಡ್ಜ್” ನಲ್ಲಾದರೆ, ಒಂದು ಮಹಡಿ ಹತ್ತಬೇಕು.
“ಅಪ್ಪ, ಯಾಕ್ ಬರೋಕ್ ಹೋದ್ರಿ, ಮನೇಲೇ ರೆಸ್ಟ್ ತಗೋಳೋದಲ್ವ…” ಅಂತ, ಕೇಳ್ತಾನೇ, ಮಾರ್ಕಂಡ, ಕುರ್ಚಿ ಬಿಟ್ಟು ಎದ್ದ. “ಯಾರ್ ಜೊತೆ ಬಂದ್ರಿ? ಮಗ ಕೇಳಿದ. ಗೋವಿಂದಯ್ಯ, ಹೆಗಲ ಟವೆಲ್ ನಲ್ಲಿ ಮುಖ ಒರೆಸುತ್ತ, ಕೂತರು. “ಯಾಕೋ ಮನೇಲಿದ್ದೂ ಇದ್ದೂ ಬ್ಯಾಸರಾಯ್ತು, ಅಂಗೇ ಅಡ್ಡಾಡ್ತಾ ನಾನೇ ಬಂದೆ” ಅಂದು, ಉಸ್ಸ್ ಅಂತ ಉಸಿರು ಬಿಟ್ಟರು. ಸುಧಾರಿಸಿದ ಮೇಲೆ, ಎಷ್ಟೋ ಹೊತ್ತಾದ ನಂತರ, “ಎಂಗೈತೆ ಯಾಪಾರ, ಓಟ್ಲು ತುಂಬೈತೋ ಎಂಗೆ…ಆ ದ್ವಾಸೆ ಓಟ್ಲಾಗೆಂಗೈತೆ…” ಅಂತ ವಿಚಾರ ಮಾಡೋಕೆ ಶುರು ಮಾಡಿದರು. ಓದಿಲ್ಲದೆ ಇದ್ದರೂ, ಅನುಭವ ಯಾರ ಮನೆ ಆಸ್ತಿ! ವ್ಯವಹಾರದಲ್ಲಿ ಮುಳುಗಿದವರಿಗೆ, ಹಗಲು ಇರುಳು ಅನ್ನದೆ, ಅದೇ ಮಹಾಸಾಗರದ ಅಲೆಗಳೊಡನೆ ಪೈಪೋಟಿಯ ಈಜಾಟ!

ಮೂರು ತಿಂಗಳ ಹೊತ್ತಿಗೆ, ಮಕ್ಕಳು ಸಂಪೂರ್ಣ ಗೆಲುವಾಗಿದ್ದರು. ಗೋವಿಂದಯ್ಯ ಸಹ, ಎಷ್ಟೋ ಉತ್ತಮ ಆಗಿದ್ದ ಹಾಗಿದ್ದರು . ಒಂದು ರಾತ್ರಿ, ಮಲಗುವ ಮುಂಚೆ, ದೊಡ್ಡ ಮಗನಿಗೆ, “ನೋಡಪ, ಕಾರ್ತೀಕ, ಎಸ್ಟ್ ದಿವಸ ಈವಮ್ಮನ ಕೈ ಅಡಿಗೆ ತಿನ್ನೋದು ಅಂತ, ನಿಂಗ್ ಏಳ್ದೆ ಕೇಳ್ದಲೆ, ಬ್ರೋಕರ್ ತಮ್ಮಣ್ಣಂಗೆ ಏಳಿದ್ದೆ, ನಿಂಗೊಂದೆಣ್ ನೋಡಾಕೆ. ನೀನು ಊ ಅಂದ್ರೆ…” ಈ ವಿಷಯ ಪ್ರಾರಂಭಕ್ಕಾಗೆ ಕಾಯುತ್ತಿದ್ದಂತೆ, ಕಾರ್ತೀಕೇಯ ತಾನೂ ಸಹ ಅದರ ಯೋಚನೆ ಮಾಡಿದ್ದ ಹಾಗೆ, “ನಿಮಗೂ ಈ ವಯಸ್ನಲ್ಲಿ ನೋಡ್ಕೊಳ್ಳೋರು ಒಬ್ಬರಿದ್ರೆ ಒಳ್ಳೇದೇ ಅಂತ’ ನಾನೂ ಯೋಚ್ನೆ ಮಾಡಿದೀನಿ ಅಪ್ಪ, ಆದರೆ…”ಎಂದಷ್ಟಕ್ಕೇ ನಿಲ್ಲಿಸಿದ, “ಅದೇನಪ್ಪ ಆದ್ರೆ ಗೀದ್ರೆ ಅಂತೀಯ…”ಎಂದು ಆಶ್ಚರ್ಯ ಪಟ್ಟರು. ” ಮೊದಲು ಒಂದ್ಸಲ ಅಮ್ಮಂಗೆ ಹೇಳಿದ್ದೆ, ಅವರು ಬದ್ಕಿದ್ದಾಗ. ನಿಮ್ ಹತ್ರ ಮಾತಾಡ್ತೀನಿ ಅಂದಿದ್ರು…” ಅಂತ ಮತ್ತೆ ನಿಲ್ಲಿಸಿದ. ಗೋವಿಂದಯ್ಯ ಏನೋ, ಹಳೆಯಬುತ್ತಿ ಬಿಚ್ಛುತ್ತಾ, ಒಮ್ಮೆಲೆ ಹೊಳೆದವರ ಹಾಗೆ, “ಹೂ ಕಣಪ ಅದೇನೋ ಯೋಳಿದ್ಲು…ಅದೇನು…” ಅಂತ ಕ್ಷಣ ಹೊತ್ತು ಕಳೆಯುವಲ್ಲಿ ಜ್ಞಾಪಕ ಮಾಡಿಕೊಂಡರು.

ಮಕ್ಕಳು ಮದುವೆ ವಯಸ್ಸಿಗೆ ಬಂದದ್ದರ ಬಗ್ಗೆ ಲಕ್ಷ್ಮಿ ಜೊತೆ ಒಮ್ಮೆ ಮಾತನಾಡುವಾಗ, ಯಾವತ್ತೂ ಹೆಚ್ಚು ಮಾತನಾಡದ ಹೆಂಡತಿ, ಆ ದಿನ, “ರೀ, ನೀವ್ ಬ್ಯಾಸ್ರ ಮಾಡ್ದಿದ್ರೆ…”ಗೋವಿಂದಯ್ಯ ಆಶ್ಚರ್ಯದಿಂದ, “ನೀನೇನ್ ಏಳುದ್ರೂ ನಂಗೇನ್ ಬ್ಯಾಸ್ರಾಗಾಕಿಲ್ಲ. ನೀ ಏನಾರ ಇಂಗೇಳ್ಲಿ ಅಂತ್ಲೇ ಕಾಯ್ತಾ ಇರ್ತೀನಿ ಯಾವಾಗ್ಲೂ, ಅದೇನೇಳು…ಏಳು” ಎಂದು ಮುಂತಾಗಿ ಬಹಳ ಪುಸಲಾಯಿಸಿದ ನಂತರ, ಕಾರ್ತಿಕೇಯ ಬೇರೆ ಹುಡುಗಿಯನ್ನ ಕಾಲೇಜಿನ ದಿನದಿಂದಲೇ ಪ್ರೀತಿಸುತ್ತಿರುವ, ಮತ್ತು ಅವಳ ಜಾತಿ ಬೇರೆ ಮತ್ತು ತಮಗಿಂತಲೂ ಕಮ್ಮಿ ಜಾತಿ ಎಂಬ ಬಗ್ಗೆ ತಿಳಿಸಿದ್ದಳು. ಅವಳೇ ಮುಂದುವರಿದು, ಜಾತಿ ನೋಡದೆ ಸಮಯ ಬಂದಾಗ ಸುಮ್ಮನೆ ಒಪ್ಪೋದೇ ಉತ್ತಮ ಅಂತಲೂ ಹೇಳಿ, ಯಾವ ಜಾತಿ ಆದರೆ ಏನಂತೆ, ಅದರಿಂದ ನಾವೇನೂ ಊಟ ಮಾಡ್ತಾ ಇಲ್ಲವಲ್ಲ. ನಮ್ಮ ಬೆವರು ನಮ್ಮ ದುಡುಮೆ ತಾನೆ, ಅಂತಲೂ ಸೇರಿಸಿ, ಗಂಡನಿಗೆ ಆಶ್ಚರ್ಯ ಉಂಟುಮಾಡಿದ್ದಳು. ಆ ಮಾತು ಹೆಂಡತಿ ಮೇಲಿನ ಹೆಮ್ಮೆ ಕೂಡ ಹೆಚ್ಚಿಸಿತ್ತು. ಹೆಬ್ಬೆಟ್ಟೇ ಆದರೂ ಎಂಥ ಯೋಚನೆ ಅಂತಲೂ ಖುಷಿಯಾಗಿತ್ತು. ಮತ್ತು ತಾನೂ ಊರು ಬಿಟ್ಟು ಬಂದಾಗ, ಯಾವ ಜಾತಿ ಅಂತ ತನಗೇನಾದರೂ ಗೊತ್ತಿತ್ತ? ಅಥವ ಇಲ್ಲಿ ಯಾರಾದರೂ ನಿನ್ನ ಜಾತಿ ಯಾವುದು ಅಂತ ಏನಾದರೂ ಕೇಳಿದಾರ; ಇಲ್ಲವಲ್ಲ! “ಅವ್ಳೇಳೋದೂ ನಿಜ್ವೇ ಅಲ್ವ”, ನಮ್ಮ ಇಡೀ ಬಾಳಿನಲ್ಲಿ ಯಾವಾಗಲೂ ತಲೆ ಹಾಕದೆ, ಅಥವ ಎಂದೂ ತಲೆ ಎತ್ತದೆ ಇರೋ ಈ ಜಾತಿ ಅನ್ನೋದು, ಮದುವೆ ಮುಂಜೀಲೆ ಯಾಕೆ ವಕ್ಕರಿಸಬೇಕು, ಅಂತ, ಅನ್ನಿಸಿತು. “ಅದೆಂಗೆ ಈ ಇಸ್ಯ ನನ್ ತಲಿಂದ ಮಾಯ ಆಗ್ಬುಟ್ಟಿತ್ತು…”, ಈಗ, ತಮ್ಮ ಅರ್ಧಾಂಗಿ ಪಕ್ಕ ಕೂತು ಕೇಳಿದ್ದೆಲ್ಲ ನೆನಪಾಗಿ, “ಅವ್ಳ್ ಸಾವು ನನ್ ಮನಸ್ನೇ ಮಬ್ಬಾಗುಸ್ಬುಟ್ಟೈತೆ…ಛೆ!”

ಅಂತೂ, ಗೋವಿಂದಯ್ಯ ಹೆಂಡತಿಯ ಆಣತಿಯಂತೆ ಒಪ್ಪಿ, ಹುಡುಗಿ ಮನೆಯವರಿಗೂ ಒಪ್ಪಿಗೆ ಇದೆ ಎಂದು ಮಗನಿಂದ ಖಾತರಿ ಮಾಡಿಕೊಂಡು, ಹುಡುಗಿ ಊರು ಹಾಸನ ಆದ್ದರಿಂದ ಅಲ್ಲಿಗೇ ಹೋಗಿ ನೋಡುವ ಶಾಸ್ತ್ರ ಸಹ ಮಾಡಿದ್ದೂ ಆಯಿತು, ಹಾಸನದಲ್ಲೇ ಅದ್ಧೂರಿ ಮದುವೆನೂ ಆಯಿತು. ಮದುವೆ ನಂತರ, ಕಾರ್ತಿಕೇಯನಿಗೆ, “ನಿನ್ನ್ ಎಡ್ತೀನ, ಯಾವ್ದಾರ ‘ಪಾರಿನ್’ ಕಡೀಕಾದ್ರೂ ಕರ್ಕೊಂಡ್ ಓಗಿದ್ಬಾ, ಇಲ್ಲಿ ಕೆಲಸ ನಿನ್ ತಮ್ಮ ನೋಡ್ಕೊತನೆ” ಅಂದಾಗ, ತನ್ನ ಹೆಂಡತಿ, ವಸುಧಾಳ, ಆಯ್ಕೆಯಂತೆ, ಥಾಯ್ಲೆಂಡ್ ನತ್ತ ದಂಪತಿ ಹೋದರು.

“ಅಪ್ಪ, ನೀವು ದೋಸೆ ಹೋಟೆಲ್ ನೋಡ್ಕೋತೀರ, ನಾನು ಲಾಡ್ಜ್ ಎರಡೂಕಡೆ ನೋಡ್ತೀನಿ” ಅಂತ ಮಾರ್ಕಂಡ ಹೇಳಿದಾಗ, ಗೋವಿಂದಯ್ಯ ” ಆಯ್ತು ಕಣ್ ತಗ” ಅಂದರು. ಆದರೂ, ಅವರ ಮುಖದಲ್ಲಿ ಲವಲವಿಕೆ ಮಾತ್ರ ಕಿಂಚಿತ್ತೂ ಇದ್ದಂತೆ ಕಾಣಲಿಲ್ಲ. ಮ್ಯಾನೇಜರ್ಗೆ ಗಲ್ಲ ಬಿಟ್ಟು, ತಾವು ಪಕ್ಕ ಕೂರೋರು. ತಾವೊಬ್ಬರೇ ನಡೆಸುವ ವಿಶ್ವಾಸ ಖಂಡಿತ ಇರಲಿಲ್ಲ, ಅನ್ನಿಸುವಂತೆ. ಮಗನ ಸಂಗಡಾನೆ ಊಟಕ್ಕೆ ಬರೋದು, ಮಧ್ಯಾಹ್ನ ರೆಸ್ಟ್ ಮಾಡಿ, ಫೋನ್ ಮಾಡಿದರೆ, ಕಾರ್ ಬರೋದು; ಹೀಗೆ. ಹೇಗೇ ಇದ್ದರೂ, ಮನಸ್ಸಿನ ಆಳದಲ್ಲಿ ಕುದಿವ ವ್ಯಥೆಯ ಹಂಡೆ!

ಮಗ, ಸೊಸೆ, ತಮ್ಮ ಮಧುಚಂದ್ರ ಮುಗಿಸಿ ಥಾಯ್ಲೆಂಡ್ ನಿಂದ ಬಂದ ಮೇಲೆ, ಗೋವಿಂದಯ್ಯ ಮತ್ತೆ “ದ್ವಾಸೆ ಓಟ್ಲ ನಾನೇ ನೋಡ್ಕೊಳ್ಳೋ ಎಂಗೆ” ಅಂತ ಮಕ್ಕಳನ್ನ ಕೇಳಿದಾಗ, “ನಿಮಗೆ ಆಗೋದಾದರೆ ಬನ್ನಿ, ನಿಮಗೂ ಬೇಜಾರು ಕಳೆದು, ಸ್ವಲ್ಪ ಗೆಲುವೂ ಆಗಬಹುದು; ಇಲ್ಲ ಅಂದರೆ ಇನ್ನೂ ಸ್ವಲ್ಪ ದಿನ ರೆಸ್ಟ್ ಮಾಡಿ” ಅಂದ ಕಾರ್ತೀಕೇಯ. ಆದರೂ ಹೋಗಿ, ಮೊದಲ ರೀತಿ ಮ್ಯಾನೇಜರ್ ಪಕ್ಕ ಕೂರೋದೇ ಮರುಕಳಿಸಿತು.

“ಆ ದ್ಯಾವ್ರ್ಯಾಕಿಂಗೆ ನನ್ನ್ ಕೈ ಬುಟ್ಬುಟ್ಟ. ನನ್ ಗುಂಡಿಗೇನೇ ತುಂಡ್ ತುಂಡ್ಮಾಡ್ಬುಟ್ನಲ್ಲ…”ಅಂತ ಹಲುಬುತ್ತಿದ್ದರು. ಶಾಲೆಯನ್ನೇ ಕಾಣದ ಗೋವಿಂದಯ್ಯನವರಿಗೆ, ಜಾತಕ ಅಂತ ನೋಡಿಸಿ, ವ್ಯವಹರಿಸಿದ್ದೇ ಅವರ ಮಕ್ಕಳ ಮದುವೆ ಹಂತದಲ್ಲಿ. ಅಂದಮೇಲೆ ಅವರ ವಯಸ್ಸಿನ ನಿಖರತೆಯೂ ಇರಲಿಲ್ಲ. ಎಲ್ಲ ‘ಇರಬಹುದು’ಗಳೇ! ಅವರಂಥ ಮತ್ತು ಲಕ್ಷ್ಮಿಯರಂಥ ಕಡುಬಡವರನ್ನು ಹಡೆದು ಕೊಟ್ಟ, ಕೊಂಪೆ ಕುಗ್ರಾಮಗಳ ಮೂರುಮನೆ ಹಳ್ಳಿಗಳಲ್ಲಿ, ಜಾತಕ ಬರೆಯೋ ಜೋಯಿಸರು ಇನ್ನೆಲ್ಲಿ! ಹೀಗೆ, ಇಬ್ಬರಿಗೂ ಮದುವೆಯಲ್ಲಿ ಎಷ್ಟೆಷ್ಟು ವಯಸ್ಸು ಅಂತಲೂ ಅರಿವಿರಲಿಲ್ಲ. ಸದ್ಯ ಗೋವಿಂದಯ್ಯ ಅರವತ್ತರ ಆಸುಪಾಸು ಅಂದುಕೊಂಡರೆ, ಲಕ್ಷ್ಮೀಗೆ ಸಾವು ಆದಾಗ ಸುಮಾರು ಐವತ್ತು, ಅಥವ ಇನ್ನೂ ಸ್ವಲ್ಪ ಕಮ್ಮಿ, ಅಂದುಕೋಬಹುದು. ನಿಖರವಾಗಿ ಮೂವತ್ತು ವರ್ಷ ಮೂರು ತಿಂಗಳು ಇಬ್ಬರೂ ಮದುವೆಯಾಗಿ. “ಅಯ್ಯೋ ದೇವಾ, ನಿಂಗೂ ಹೊಟ್ಟುರಿ ಬಂತಪ್ಪ ನಾವು ಜೊತೇಲಿ ಬದಕೋದ್ ನೋಡಿ…” ಅಂತ ಹಣೆ ಚಚ್ಕೊಳ್ಳೋರು, ಗೋವಿಂದಯ್ಯ.

ಹಳ್ಳಿ ಬಿಟ್ಟು ಓಡಿ ಬಂದ ನಂತರ, ಆ ಕಡೆ ತಲೆ ಕೂಡ ಹಾಕದೆ ಇದ್ದ ಗೋವಿಂದಯ್ಯ, ಮೊದಲ ಬಾರಿಗೆ, ಕಾರ್ತಿಕೇಯ ಹೋಟೆಲ್ ಆರಂಭಕ್ಕೆ, ಹೆಂಡತಿ ಜೊತೆ, ಹೋಗಿದ್ದರು. ಹಳ್ಳಿ ಅಷ್ಟರಲ್ಲಿ ಊರು ಅಂತ ಆಗಿತ್ತು. ಅವರಿವರನ್ನು ಕೇಳಿ, ಮನೆ ಪತ್ತೆ ಮಾಡಿ, ಒಳಗೆ ಹೋದರೆ, ಯಾರಿಗೂ ಇವರು ಯಾರೆಂದು ಗೊತ್ತೇ ಆಗಲಿಲ್ಲ. ಪರಸ್ಪರ ಪರಿಚಯ ಆದಮೇಲೆ, ಕುರ್ಚಿಗಳ ಧೂಳು ಹೊಡೆದು, ಇಬ್ಬರನ್ನೂ ಕೂರಿಸಿದರು. ಎದುರಲ್ಲಿ, ಗೋಡೆ ಒರಗಿ, ಎಲೆ-ಅಡಿಕೆ ಕುಟ್ಟಣಿಯಲ್ಲಿ ಕುಟ್ಟುತ್ತಿದ್ದ ಮುದುಕಿ ಹತ್ತಿರ ಹೋಗಿ, “ಚೆಂದಾಗಿದೀಯ ಚಿಗವ್ವ” ಅಂತ ಮಾತಾಡ್ತಾ, ಗೋವಿಂದಯ್ಯ ಸೀದಾ ಅವರ ಕಾಲಿಗೆ ನಮಸ್ಕಾರ ಮಾಡ್ಕೊಂಡಾಗ, ಆ ಮುದುಕೀಗೆ, ನಾಚಿಕೆ ಮತ್ತು ಆಶ್ಚರ್ಯ! ಹಾಗೇ, ಗೋವಿಂದಯ್ಯ, ಒಂದು ಆಹ್ವಾನ ಪತ್ರಿಕೆಯನ್ನು ಸಹ, ಅವರ ಕೈಲಿಟ್ಟು, ಮತ್ತೊಮ್ಮೆ ಕಾಲು ಮುಟ್ಟಿದರು.
“ಅಯ್ಯೋ…ಬುಡು; ನನ್ದೇನ್ ಚಂದ್ವೋ ಏನೋ…ಊರ್ ಓಗು ಅಂತದೇ, ಕಾಡ್ ಬಾ ಅಂತದೇ…ನೀ ಚಂದಾಗಿದೀಯ ಮಗಾ…ಇವಳೇನ್ ನಿನ್ ಎಡ್ತೀನೋ…” ಅಂದ ಮುದುಕಿ, ಎರಡೂ ಅಂಗೈ ಎತ್ತಿ, ಆಶೀರ್ವದಿಸೋ ರೀತಿ, ಗೋವಿಂದಯ್ಯನ ತಲೆಮೇಲೆ ಇಟ್ಟಳು. ತಮ್ಮ ಹೆತ್ತ ತಾಯೀನೆ ಹರಸಿದ ಹಾಗೆ ಖುಷಿಯಾದಾಗ, ಗೋವಿಂದಯ್ಯನ ಕಣ್ಣಲ್ಲಿ ಎರಡು ಬಿಸಿ ಹನಿ ಕೂಡ ಇಣುಕಿದವು.
ಮಲತಮ್ಮ, ಹಿತ್ತಲಲ್ಲಿ ಕೋಳಿ ಕುಯ್ತಾ ಇದ್ದದ್ದು, ಅದು ಕಿರುಚುವ ಸದ್ದಿನಿಂದ ಗೊತ್ತಾಗಿ, ಗೋವಿಂದಯ್ಯನೇ ಒಳಹೋಗಿ, ಬೇಡ ಟೈಮಿಲ್ಲ ಅಂದರೂ ತಮ್ಮ ಒಪ್ಪಲಿಲ್ಲ. ಗೋವಿಂದಯ್ಯನಿಗೆ, ಸದ್ಯ ಮಲತಮ್ಮ ಆದರೂ, ಈತನ ನಡೆ ನುಡಿ ಉತ್ತಮ ಅನ್ನಿಸಿತ್ತು.
ಹೊರಡುವಾಗ, ಮಲತಾಯಿಗೆ “ಚಿಗವ್ವ ನೀವೂ ಬನ್ನಿ, ಮೊಮ್ಮಗಂದು ವಸ ಓಟ್ಲು ಎಂಗೈತೆ ಅಂತ್ನೋಡಿ” ಅಂತ ಆಹ್ವಾನಿಸಿದ್ದರು. ಆಗ, ಮಲತಾಯಿ ಕೇಳಿದ್ದಕ್ಕೆ, ತನ್ನ ಮಗನ ವಯಸ್ಸು ಇನ್ನೂ ಐದು ಅಂತ ಹೇಳಿದಾಗ, ಮುದುಕಿ, ‘ಈ ವಯಸ್ಸಿಗೇ ಅವನದೇ ಹೋಟೆಲಾ’ ಅನ್ನೋ ಥರ ನೋಡಿದ್ದಳು! ಇಂತಹ ಒಂದೊಂದು ನೆನಪೂ ಅಲೆ- ಅಲೆಗಳಾಗಿ, ಮರಳ ರಾಶಿಯ ಮೇಲೆ ತದೇಕ ಹರಿದಾಡುತ್ತಿದ್ದವು…

ಮ್ಯಾನೇಜರ್ ಪ್ರತಿದಿನ, ಗೋವಿಂದಯ್ಯ ಹೋಟೆಲ್ ನಲ್ಲಿ ಹೇಗಿದ್ದರು, ಏನೇನು ಮಾಡ್ತಾ ಇದ್ದರು, ಅನ್ನುವ ಎಲ್ಲವನ್ನೂ, ಕಾರ್ತಿಕೇಯನಿಗೆ ವರದಿ ಒಪ್ಪಿಸುತ್ತಿದ್ದರು. “ಅಪ್ಪ ಇನ್ನೂ ಸ್ವಲ್ಪ ದಿನ ಮನೇಲೇ ರೆಸ್ಟ್ ತಗೋತಾ, ಟಿವಿ-ಗೀವಿ ನೋಡ್ತಾ, ಯಾಕೆ ಕಾಲ ಹಾಕಬಾರದು” ಅಂತ ಮಗ ಕೇಳಿದ್ದಕ್ಕೆ, ಗೋವಿಂದಯ್ಯ, “ಅಂಗೇ ಆಗ್ಲಿ… ಆಮ್ಯಾಲೆ, ನಾನೂ ಬಾರಿ ದಿನ್ದಿಂದ ಯೋಚ್ನೆ ಮಾಡ್ತ ಇದೀನಿ, ಎಂಗಿದ್ರೂ ಮದುವೆ ಆದ್ಮೇಲೆ ನಿನ್ ಎಡ್ತೀನೂ ಕರ್ಕೊಂಡ್ ಓಗ್ಬೇಕು…ಆ ಅನುಮಂತ್ ಸ್ವಾಮಿ ಯಾತ್ರೆ ಮಾಡ್ಕೊಂಡ್ ಬರ್ಬೇಕು…ನೀ ಏನಂತೀ” ಅಂದದ್ದಕ್ಕೆ, “ಆಯ್ತಪ್ಪ, ನನ್ ಹೆಂಡ್ತಿ ತಿಂಗಳ ಬಗ್ಗೆ ತಿಳ್ಕೊಂಡು ಆಮೇಲೆ, ಒಂದಿನ ನಿರ್ಧಾರ ಮಾಡ್ತೀನಿ” ಅಂತ ಹೇಳಿ, ಕಾರ್ತಿಕೇಯ ಹೋಟೆಲ್ ಕಡೆ ಹೊರಟ.

ಆಂಜನೇಯ ಮನೆ ದೇವರು. ಹಾಗಾಗಿ, ವರ್ಷಕ್ಕೆ ಒಮ್ಮೆ, ಅಥವಾ ಮದುವೆ-ಮುಂಜಿ ಅಂತೇನಾದರೂ ಆದರೆ ಆಗ, ಹೋಗಿ ಬರುವ ಪದ್ಧತಿ. ಕೊನೆಗೂ, ಒಂದು ದಿನ ನಿಗದಿಮಾಡಿ, ತಮ್ಮನ ಜವಾಬ್ದಾರಿಗೆ ಹೋಟೆಲ್-ಲಾಡ್ಜ್ ಎಲ್ಲ ವಹಿಸಿ, ಅಪ್ಪ ಮತ್ತು ಹೆಂಡತಿ ಜೊತೆ, ಕಾರ್ತಿಕೇಯ ಹೊರಟ. ದೇವಸ್ಥಾನದಲ್ಲಿ ಇವರ ಅದೃಷ್ಟಕ್ಕೆ ಅಂಥ ರಷ್ ಇರಲಿಲ್ಲ. ವರ್ಷಂಪ್ರತಿ ಹೋಗುವುದರಿಂದ, ಅರ್ಚಕರು ಚೆನ್ನಾಗೇ ಪರಿಚಯ ಆಗಿದ್ದರು. ಅಭಿಷೇಕ, ಪೂಜೆ ಎಲ್ಲ, ಸಾಂಗವಾಗಿ, ಸುದೀರ್ಘವಾಗೇ ಆಯಿತು. ನವಗ್ರಹಗಳ ಒಂಭತ್ತೂ ಸುತ್ತು ಬಂದು, ಗೋವಿಂದಯ್ಯ, “ನೀವೋಗಿ ಗುಡಿ ಸುತ್ತ ಸುತ್ತಾಕ್ಕೊಂಬನ್ನಿ, ನಾನಿಲ್ಲೇ ದ್ಯಾನಾ ಮಾಡ್ತಾ ವಸಿ ಒತ್ತು ಕೂತ್ಗತೀನಿ” ಅಂದ ಅಪ್ಪನಿಗೆ, “ಆಗಲಪ್ಪ” ಅಂತ ಹೇಳಿ, ಕಾರ್ತಿಕೇಯ ಹೆಂಡತಿ ಸಂಗಡ ಪ್ರದಕ್ಷಿಣೆ ಹೊರಟ. ಆದ ನಂತರ ದೇವಸ್ಥಾನದ ಹೊರಗೆ, ಹೆಂಡತಿ, ವಸುಧಾಳ, ಪಕ್ಕ ಒತ್ತಿಕೊಂಡಂತೆ ಕೂತು, ಇಬ್ಬರೂ ಗಹನವಾಗಿದ್ದರು. ಹೊಸ ಮದುವೆ ಯುಗ್ಮ ಅಲ್ಲವೇ ಎಷ್ಟೇ ಆದರೂ…

“ಗೋವಿಂದಯ್ಯನವರ ಕಡೆ ಯಾರು ಬೇಗ ಬನ್ನಿ, ಬೇಗ ಬನ್ನಿ” ಅಂತ ಕೂಗಿದ್ದು ಕೇಳಿ, ಎದ್ದು ಗುಡಿಯತ್ತ ಓಡಿದರು. ಗೋವಿಂದಯ್ಯ ಪ್ರಾರ್ಥನೆ ಮಾಡೋಕೆ ಅಂತ ಕೂತವರು ಅಲ್ಲೇ ಉರುಳಿ ಬಿದ್ದಿದ್ದರು…
ಪುರೋಹಿತರೇ ಅಷ್ಟರಲ್ಲಿ, ನಾಡಿ ನೋಡಿ, ತಲೆ ಅಲ್ಲಾಡಿಸಿದರು…

ಡಾ. ಅರಕಲಗೂಡು ನೀಲಕಂಠ ಮೂರ್ತಿ

Related post

1 Comment

  • ನಮಸ್ಕಾರ!!
    ನಿಮ್ಮಲ್ಲಿ ಪ್ರಕಟವಾದ ಕಥೆ ಕವನಗಳನ್ನು ಓದಿ ದೆ.
    ಹೊಸ ಪ್ರತಿಭೆ ಗಳಿಗೆ ನೀವು ಕೊಡುವ ಪ್ರೋತ್ಸಾಹ ಅತ್ಯಂತ ಮಹತ್ವದ್ದು.
    ನೀವು ನಿಮ್ಮ ವೇದಿಕೆಯಲ್ಲಿ ಏನನ್ನಾದರೂ ಪ್ರಕಟಿಸಬೇಕು ಎಂದಾದಲ್ಲಿ ನಾವು ಅದನ್ನು ಹೇಗೆ ನಿಮ್ಮ ಗಮನಕ್ಕೆ ತರ ಬೇಕು ದಯವಿಟ್ಟು ತಿಳಿಸಿ.

Leave a Reply

Your email address will not be published. Required fields are marked *