ದೇಶದಲ್ಲಿ ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ, ಮಹಿಳೆಯರು ಅಸಹಾಯಕರಾಗಿದ್ದಾರೆ ಆದರೆ ನಿರಂತರ ಪುರುಷರ ದೌರ್ಜನ್ಯದಿಂದ ಬೇಸತ್ತ ಕೆಲವು ನೊಂದ ಮಹಿಳೆಯರು ಸಿಡಿದೆದ್ದಿದ್ದಾರೆ ತಿರುಗಿಬಿದ್ದಿದ್ದಾರೆ. ಇಂತಹ ಸಿಡಿದೆದ್ದ ಮಹಿಳೆಯರಲ್ಲಿ ನಮಗೆ ಮೊದಲು ನೆನಪಾಗುವುದು ಉತ್ತರಪ್ರದೇಶದ ಚಂಬಲ್ ಕಣಿವೆಯ ಡಕಾಯಿತ ರಾಣಿ ಪೂಲನ್ ದೇವಿ, ತನ್ನ ಮೇಲೆ ಪದೆ ಪದೆ ಅತ್ಯಾಚಾರ ನಡೆಸುತ್ತಿದ್ದವರ ಮೇಲೆ ತಿರುಗಿ ಬಿದ್ದು ಹಲವರನ್ನು ಕೊಂದು ಹಾಕಿ ಡಕಾಯಿತ ರಾಣಿಯಾಗಿದ್ದು ಈಗ ಇತಿಹಾಸ.
ಈಗ ಅದೆ ಉತ್ತರ ಪ್ರದೇಶದ ಬುಂದೇಲ್ ಖಂಡದ ಮಹಿಳೆಯೊಬ್ಬಳು ಪ್ರಪಂಚದಾದ್ಯಂತ ಸುದ್ದಿ ಮಾಡಿದ್ದಾಳೆ ನೊಂದ ಮಹಿಳೆಯರ ಕಣ್ಣೀರೊರೆಸುವ ಅವರನ್ನು ಆರ್ಥಿಕವಾಗಿ ಸಧೃಡರನ್ನಾಗ್ಗಿಸುತ್ತ ನ್ಯಾಯಕ್ಕಾಗಿ ಹೋರಾಡುತ್ತಿರುವ “ಗುಲಾಬಿ ಗ್ಯಾಂಗ್” ಎಂಬ ದಂಡು ಕಟ್ಟಿಕೊಂಡು ದೌರ್ಜನ್ಯ ಎಸಗುವ ಪುರುಷರಿಗೆ ಸಿಂಹಸ್ವಪ್ನವಾಗಿ ಕಾಡುತ್ತಿದ್ದಾಳೆ ಗುಲಾಬಿ ಗ್ಯಾಂಗಿನ ವಿಂಗ್ ಕಮಾಂಡರ್, ಹೆಸರು “ಸಂಪತ್ ಪಾಲ್ ದೇವಿ” ಈಕೆಯ ಹೆಸರು ಕೇಳಿದರೆ ಸಾಕು ಬುಂದೇಲ್ ಖಂಡದ ಸುತ್ತಮುತ್ತಲಿನ ಪುರುಷರೇಕೆ ಸರ್ಕಾರಿ ಅಧಿಕಾರಿಗಳು ಥರಥರ ನಡುಗುತ್ತಾರೆ.
ಈಕೆ ಹುಟ್ಟಿದ್ದು 1958 ರಲ್ಲಿ ಕುರಿ ಕಾಯುವವನ ಮಗಳಾಗಿ ಹುಟ್ಟಿದ್ದ ಈಕೆ ಶಾಲೆಗೆ ಹೋಗಲಿಲ್ಲ ಶಾಲೆಗೆ ಹೋಗಿ ಬರುತ್ತಿದ್ದ ತನ್ನ ಅಣ್ಣಂದಿರ ಸಹಾಯದಿಂದ ಓದು ಬರಹವನ್ನು ಕಲಿತ್ತಿದ್ದಳು. ಇವಳ ಆಸಕ್ತಿಯನ್ನು ನೋಡಿ ಸಂಬಂಧಿಕರು ಶಾಲೆಗೆ ಸೇರಿಸಿದ್ದರಾದರು 4 ನೆ ತರಗತಿ ಆದ ತಕ್ಷಣ ಶಾಲೆ ಬಿಡಿಸಿ 12ನೆ ವಯಸ್ಸಿನಲ್ಲಿ ಮದುವೆ ಮಾಡಿದ್ದರು 15ನೆ ವರ್ಷಕ್ಕೆ ಒಂದು ಮಗು ನಂತರ ಸಾಲಾಗಿ 4 ಮಕ್ಕಳು ಜನಿಸಿದರು. ಸರ್ಕಾರಿ ಸೂಲಗಿತ್ತಿಯಾಗಿ ಕೆಲಸ ಮಾಡುತ್ತಿದ್ದ ಈಕೆ ಗುಲಾಬಿ ಗ್ಯಾಂಗ್ ಕಟ್ಟಿದ ಮೇಲೆ ಕೆಲಸಕ್ಕೆ ಗುಡ್ ಬೈ ಹೇಳಿದಳು.
ಮಹಿಳೆ ಅಬಲೆಯಲ್ಲ ಸಬಲೆ ಎಂದು ತೋರಿಸಿಕೊಟ್ಟ ಬುಂದೇಲ್ ಖಂಡದ ಸಂಪತ್ ಪಾಲ್ ದೇವಿಯ ಹೆಸರು ಈಗ ಸಾಗರದಾಚೆಗೂ ಪ್ರಸಿದ್ಧಿಯಾಗಿದೆ ಈ ಗುಲಾಬಿ ಗ್ಯಾಂಗ್ ಕಟ್ಟಿದ ಹಿಂದೆ ಒಂದು ರೋಚಕ ಕಥೆ ಇದೆ.
ಸಂಪತ್ ಪಾಲ್ ದೇವಿ ವಾಸ ಮಾಡುತ್ತಿದ್ದ ಮನೆಯ ಪಕ್ಕದಲ್ಲಿದ್ದ ಮನೆಯವನೊಬ್ಬ ತನ್ನ ಹೆಂಡತಿಗೆ ಒಂದು ದಿನ ಹಿಗ್ಗಮಗ್ಗ ಥಳಿಸುತ್ತಿದ್ದ,ಇದನ್ನು ಬಿಡಿಸಲು ಹೋದ ಸಂಪತ್ ದೇವಿಗೂ ಎರಡೇಟು ಕೊಟ್ಟು ಕಳಿಸಿದ್ದ, ಅಸಹಯಾಕಳಾಗಿದ್ದ ಸಂಪತ್ ದೇವಿ ಕಮಕ್ ಕಿಮಕ್ ಎನ್ನದೆ ತನ್ನ ಮನೆಗೆ ವಾಪಸ್ಸಾದಳು. ಆದರೆ ಹೆಂಡತಿಗೆ ಹೊಡೆಯುತ್ತಿದ್ದ ಪಕ್ಕದಮನೆಯಾತನ ದೌರ್ಜನ್ಯವನ್ನು ಒಪ್ಪಿಕೊಳ್ಳಲಾಗಲಿಲ್ಲ, ಅದೇನೆನ್ನಿಸಿತೊ ಇನ್ನೂ ನಾಲ್ಕಾರು ಮಹಿಳೆಯರನ್ನು ಒಟ್ಟುಗೂಡಿಸಿ ಕೈಗೆ ಸಿಕ್ಕ ದಂಡ ತೆಗೆದುಕೊಂಡು ಹೋಗಿ ಹೆಂಡತಿ ಹೊಡೆಯುತ್ತಿದ್ದಾತನನ್ನು ಹಿಗ್ಗಮಗ್ಗ ಥಳಿಸಿದರು. ಆತ ಇನ್ನು ಮುಂದೆ ಹೆಂಡತಿಯನ್ನು ಹೊಡೆಯುವುದಿಲ್ಲವೆಂದು ಸಂಪತ್ ದೇವಿ ಕಾಲಿಗೆ ಬಿದ್ದನು! ಅಷ್ಟೆ ಅಲ್ಲ ಈ ಸುದ್ದಿ ಕಾಡ್ಗಿಚ್ಚಿನಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹರಡಿತು ದಿನ ಕಳೆದಂತೆ ನೊಂದ ಮಹಿಳೆಯರು ದೌರ್ಜನ್ಯಕ್ಕೊಳಗಾದವರು ಈಕೆಯನ್ನು ಸಂಪರ್ಕಿಸಲಾರಂಭಿಸಿದರು. ಹೀಗೆ ನೊಂದ ಹಲವಾರು ಸಹೋದರಿಯರು ಈಕೆಯನ್ನು ಸಂಪರ್ಕಿಸಲಾರಂಭಿಸಿದಾಗ ಈಕೆಯ ಮನಸ್ಸಿನಲ್ಲಿ ಯಾಕೆ ನೊಂದ ಮಹಿಳೆಯರ ಕಣ್ಣೀರೊರೆಸಲು ಒಂದು ಸಂಘವನ್ನು ಸ್ಥಾಪಿಸಬಾರದೆಂದು ಯೋಚನೆ ಬಂದಿದ್ದೆ ತಡ ಹುಟ್ಟಿದ್ದು ಈ “ಗುಲಾಬಿ ದಂಡು”. ಈಕೆ ಹೆಚ್ಚಾಗಿ ಗುಲಾಬಿ ಬಣ್ಣದ ಸೀರೆ ಉಡುತ್ತಿದ್ದ ಕಾರಣ ತನ್ನ ದಂಡಿಗೆ ಗುಲಾಬಿ ಗ್ಯಾಂಗ್ ಎಂದು ಹೆಸರಿಸಿದಳು. ಅಷ್ಟೆ ಅಲ್ಲ ಈ ಸಂಘಕ್ಕೆ ಸದಸ್ಯೆಯರಾದ ಸಹೋದರಿಯರಿಗೆಲ್ಲಾ ಸಮವಸ್ತ್ರ ಬೇಕೆಂಬ ಯೋಚನೆ ಬಂದಾಗ ಈ ಗುಲಾಬಿ ಬಣ್ಣದ ಸೀರೆ ಸಮವಸ್ತ್ರವಾಯಿತು.
ಗುಲಾಬಿ ಸೀರೆ ಉಟ್ಟು ಕೈಯಲ್ಲಿ ದಂಡವನ್ನು ಹಿಡಿದು ಈ ಗುಲಾಬಿ ಗ್ಯಾಂಗ್ ನಾಲ್ಕೈದು ಸದಸ್ಯೆಯರು ಹೊರಟಿದ್ದಾರೆ ಎಂದರೆ ಎಲ್ಲೋ ಯಾರಿಗೊ ಗ್ರಹಚಾರ ಕಾದಿದೆ ಎಂದರ್ಥ! ಆರಂಭದಲ್ಲಿ ಕೇವಲ 10-12 ಇದ್ದ ಸದಸ್ಯೆಯರು ಸಂಖ್ಯೆ ಕೆಲವು ದಿನದಲ್ಲೇ ನೂರಾಯಿತು, ಇನ್ನೂರಾಯಿತು, ಸಾವಿರ ಹೀಗೆ ಸೇರುತ್ತಾ ಈಗ ಬರೋಬ್ಬರಿ 30 ಸಾವಿರ ಸದಸ್ಯೆಯರು ಈ ಗುಂಪಿನಲ್ಲಿ ಇದ್ದಾರೆ ಈ ದಂಡು ಇದೂವರೆಗೆ ಬರಿ ಕೌಟುಂಬಿಕ ಕಲಹವನ್ನಷ್ಟೆ ಅಲ್ಲ ಹಲವಾರು ಭ್ರಷ್ಟ ಸರ್ಕಾರಿ ಅಧಿಕಾರಿಗಳ ನಿದ್ದೆಗೆಡಿಸಿದ್ದಾರೆ ಲಂಚಬಾಕ ಅಧಿಕಾರಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಧಿಕಾರ ಶಾಹಿಗಳು ರಾಜಕಾರಣಿಗಳು ಮಾಡದ ಕೆಲಸವನ್ನು ಈ ಗ್ಯಾಂಗ್ ಮಾಡಿದೆ. ಮೊದಮೊದಲು ಕೌಟುಂಬಿಕ ಕಲಹಗಳನ್ನು ಮಾತ್ರ ಪರಿಹರಿಸುತ್ತಿದ್ದ ಈ ಗ್ಯಾಂಗ್ ಭ್ರಷ್ಟ ವ್ಯವಸ್ಥೆಯ ವಿರುದ್ಧವೂ ಸಿಡಿದೆದ್ದು ನಿಂತಿದೆ “ಅಬಲೆಯರ ಸಬಲೀಕರಣ ಹಾಗು ಬಾಲ್ಯ ವಿವಾಹವನ್ನು ತಡೆಯುವುದು ಈ ಸಂಘದ ಮುಖ್ಯ ಧ್ಯೇಯೋದ್ದೇಶವಾಗಿದೆ ಬಡತನ ರೇಖೆಗಿಂತ ಕೆಳಗಿರುವವರಿಗೆ ಸರ್ಕಾರ ವಿತರಿಸುವ ರೇಷನ್ ಸರಿಯಾಗಿ ವಿತರಣೆಯಾಗುತ್ತಿಲ್ಲವೇ ಅಲ್ಲಿ ಗುಲಾಬಿ ಗ್ಯಾಂಗ್ ಹಾಜರ್! ಜನರ ಜನನ ಮರಣ ಪ್ರಮಾಣ ಪತ್ರ ಕೊಡಲು ಲಂಚ ಕೇಳುತ್ತಾರೆ ಎಂದು ಗುಲಾಬಿ ಗ್ಯಾಂಗ್‍ಗೆ ಸುದ್ದಿ ಮುಟ್ಟಿಸಿರಿ ಸಾಕು ವಿಧವಾವೇತನ, ವೃದ್ಧಾಪ್ಯವೇತನ ಸರಿಯಾಗಿ ಬರುತ್ತಿಲ್ಲವೆ ? ವಿಳಂಬವಾಗುತ್ತಿದೆಯೇ ? ಅಂಥವರು ಸೀದಾ ಬರುವುದು ಗುಲಾಬಿ ಗ್ಯಾಂಗ್ ಹತ್ತಿರ, ಎಂಥಹ ಸರ್ಕಾರಿ ಅಧಿಕಾರಿಯೂ ಗುಲಾಬಿ ಗ್ಯಾಂಗ್ ಹೆಸರು ಕೇಳಿದರೆ ಮರು ಮಾತನಾಡದೆ ಕೆಲಸ ಮಾಡಿಕೊಡುತ್ತಾರೆ ಬುಂದೇಲ್ ಖಂಡದ ಸುತ್ತಮುತ್ತಲ ಹಳ್ಳಿಗಳಲ್ಲಿ ಸರ್ಕಾರಿ ಕಛೇರಿಗಳಲ್ಲಿ ಲಂಚಕ್ಕೆ ಕೈಯೊಡ್ಡದೆ ಸರ್ಕಾರಿ ಅಧಿಕಾರಿಗಳು ಕೆಲಸ ಮಾಡಿಕೊಡುತ್ತಾರೆ ಈ ಗ್ಯಾಂಗ್ ಹುಟ್ಟಿಕೊಂಡ ಮೇಲೆ ಬುಂದೇಲ್ ಖಂಡದ ಸುತ್ತಮುತ್ತಲ ಹಳ್ಳಿಗಳಲ್ಲಿ ಒಂದೇ ಒಂದು ಬಾಲ್ಯವಿವಾಹ ವರದಿಯಾಗಿಲ್ಲ ಇನ್ನು ಅತ್ಯಾಚಾರದಂತಹ ಪ್ರಕರಣಗಳಂತೂ ಇಲ್ಲವೇ ಇಲ್ಲ!! ಮಹಿಳೆ ಇಲ್ಲಿ ನಿರ್ಭಯಳು ಮಹಿಳೆಯರನ್ನು ಅಕ್ಷರಸ್ತರನ್ನಾಗಿಸುವ ಕಾಯಕದಲ್ಲಿ ಸಂಪತ್ ಪಾಲ್ ದೇವಿ ಹಾಗೂ ಆಕೆಯ ಗ್ಯಾಂಗ್ ಶ್ರಮಿಸುತ್ತಿದೆ.
ಈ ಸಂಪತ್ ಪಾಲ್ ದೇವಿ ಬಂದಳೆಂದರೆ ಸುತ್ತಮುತ್ತಲ ಸರ್ಕಾರಿ ಕಛೇರಿಗಳ ಅಧಿಕಾರಿಗಳು ಎದ್ದು ನಿಂತು ಗೌರವಿಸುತ್ತಾರೆ. ಒಮ್ಮೆ ಈಕೆ ದೂರನ್ನು ಕೊಡಲು ಪೊಲೀಸ್ ಠಾಣೆಗೆ ಹೋದಾಗ ಅಲ್ಲಿನ ಸಬ್-ಇನ್ಸ್ಪೆಕ್ಟರ್ ದೂರನ್ನು ಸ್ವೀಕರಿಸದೆ ಈಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ, ತಕ್ಷಣವೆ ಹಿಂದು ಮುಂದು ನೊಡದೆ ಕೈಯಲ್ಲಿದ್ದ ದಂಡದಿಂದ ಆತನನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದಾಳೆ ಆಮೇಲೆ ಆ ಇನ್ಸ್ ಪೆಕ್ಟರ್ ಸಸ್ಪೆಂಡ್ ಆದದ್ದು ಬೇರೆ ಕಥೆ. ಎಷ್ಟು ಮನವಿ ಸಲ್ಲಿಸಿದರು ಸರ್ಕಾರದ ಅನುದಾನ ಬಂದಿದ್ದರು ರಸ್ತೆ ರಿಪೇರಿ ಮಾಡದ ಪಿ ಡಬ್ಲ್ಯು ಡಿ ಅಧಿಕಾರಿಯ ಕಾರನ್ನು ಅಡ್ಡಗಟ್ಟಿ ಆತನನ್ನು ಕಾರಿನಿಂದ ಹೊರಗೆಳೆದು ಅದೇ ರಸ್ತೆಯಲ್ಲಿ ನಡೆಸಿದ್ದಾಳೆ ಇಂತಹ ಉದಾಹರಣೆಗಳು ಬಹಳ ಸಿಗುತ್ತವೆ. ಜನರಿಗೆ ಸಿಗಬೇಕಾದ ಮೂಲಭೂತ ಸೌಲಭ್ಯಗಳು ಸಿಗದೆ ಹೋದರೆ ಈ ಗ್ಯಾಂಗ್ ಸಿಡಿದೇಳುತ್ತವೆ ಲಂಚಬಾಕ ಅಧಿಕಾರಿಗಳಿಗೆ ಈ ಗ್ಯಾಂಗ್ ಸಿಂಹಸ್ವಪ್ನ ಈ ಗ್ಯಾಂಗ್ ಹುಟ್ಟಿಕೊಂಡ ಮೇಲೆ ಬುಂದೇಲ್ ಖಂಡದ ಸುತ್ತಮುತ್ತಲ ನೂರಾರು ಹಳ್ಳಿಗಳಲ್ಲಿ ವರದಕ್ಷಿಣೆ ಹಾವಳಿಯಿಲ್ಲ! ಎಲ್ಲಿ ಅನ್ಯಾಯವಾಗುತ್ತಿರುತ್ತದೋ ಅಲ್ಲಿ ಗುಲಾಬಿ ಗ್ಯಾಂಗ್ ಹಾಜರ್!
ಸಂಪತ್ ಪಾಲ್ ದೇವಿಯ ಮಹಿಳಾ ಸಬಲೀಕರಣದ ಕೆಲಸ ಇಷ್ಟಕ್ಕೆ ಸೀಮಿತವಾಗಿಲ್ಲ ಈ ಸಂಸ್ಥೆ ಗೃಹ ಕೈಗಾರಿಕೆಯನ್ನು ನಡೆಸುತ್ತಿದ್ದು ಅಲ್ಲಿ ಊಟದೆಲೆಗಳನ್ನು ತಯಾರಿಸಿ ಮದುವೆ ಮುಂತಾದ ಸಮಾರಂಭಗಳಿಗೆ ಸರಬರಾಜು ಮಾಡುತ್ತಾರೆ ಈ ಊಟದೆಲೆ ತಯಾರಿಸುವ ಕಾಯಕದಲ್ಲಿ ಸುಮಾರು 500 ಜನ ತೊಡಗಿಕೊಂಡಿದ್ದು ಪ್ರತಿದಿನ ಇವರಿಗೆ 150 ರೂ ಭತ್ಯೆಯನ್ನು ಕೊಡುತ್ತಾ ಮಹಿಳೆಯರನ್ನು ಸ್ವಾವಲಂಬಿಗಳಾಗಿಸಿದೆ. ಕರಕುಶಲ ವಸ್ತುಗಳನ್ನು ತಯಾರಿಸಿ ಮಾರುತ್ತಾರೆ ಅಷ್ಟೇ ಅಲ್ಲ ಭಾರತದಲ್ಲಿ ಮದುವೆ ಮಾಡುವುದೆಂದರೆ ಸಾಮಾನ್ಯವರ್ಗದವರಿಗೆ ಒಂದು ಸವಾಲೆ ಸರಿ ತುಂಬಾ ಖರ್ಚು ವೆಚ್ಚ ಬರುತ್ತದೆ ಅಶಕ್ತರ ಮದುವೆಗೆ ಈ ತಂಡ ಸಹಾಯ ಮಾಡುತ್ತದೆ ಮದುವೆ ಆಗುತ್ತಿರುವ ವಧುವಿಗೆ ಬಟ್ಟೆ ಹೊಲಿದು ಕೊಡುವುದು ಹೂವಿನ ಅಲಂಕಾರ, ಅತಿಥಿ ಸತ್ಕಾರ, ಊಟದ ವ್ಯವಸ್ಥೆ ಹಾಗೂ ಮದುವೆ ವಧುವಿಗೆ ಮೆಹೆಂದಿ ಹಾಕುವ ಕೆಲಸವನ್ನು ಅಚ್ಚುಕಟ್ಟಾಗಿ ತಂಡದ ಸದಸ್ಯೆಯರು ಮಾಡುತ್ತಾರೆ. ತಂಡಕ್ಕೆ ಹೊಸದಾಗಿ ಸೇರ್ಪಡೆ ಆಗುವ ಸದಸ್ಯೆಯರಿಗೆ ದಂಡ ಉಪಯೋಗಿಸವ ಬಗ್ಗೆ ಹಾಗೂ ಆತ್ಮ ರಕ್ಷಣೆಯನ್ನು ಹೇಗೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸ್ವತಃ ಸಂಪತ್ ಪಾಲ್ ದೇವಿ ತಂಡಕ್ಕೆ ತರಬೇತಿ ಕೊಡುತ್ತಾರೆ.
‘ಅನ್ನಿ ಬೆರ್ಥೋಡ್’ ಸಂಪತ್ ಪಾಲ್ ದೇವಿಯ ಬಗ್ಗೆ “ಮೆ ಸಂಪತ್ ಪಾಲ್ ಚೀಫ್ ಆಫ್ ದಿ ಗ್ಯಾಂಗ್ ಆಫ್ ಸ್ಯಾರಿ ರೋಸ್” ಎಂಬ ಆಂಗ್ಲ ಪುಸ್ತಾಕವನ್ನು ಬರೆದಿದ್ದಾರೆ. ಅಕ್ಟೋಬರ್ 2008 ರಲ್ಲಿ ಫ್ರಾನ್ಸ್ ನಲ್ಲಿ ಬಿಡುಗಡೆಯಾದ ಈ ಪುಸ್ತಕ ಈಗ ಸ್ಪಾನಿಷ, ಇಟಾಲಿಯನ್ ಹಾಗೂ ಪೋರ್ಚುಗಲ್ ಭಾಷೆಯಲ್ಲಿ ಪ್ರಕಟವಾಗಿದೆ. ಈಕೆಯನ್ನು ಆದರಿಸಿದ “ಪಿಂಕ್ ಸ್ಯಾರಿ” ಚಲನಚಿತ್ರ ಹಲವಾರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ.ಮಾಧುರಿ ದೀಕ್ಷಿತ್ ನಟಿಸಿರುವ ಇನ್ನೊಂದು ಹಿಂದಿ ಚಲನಚಿತ್ರ “ಗುಲಾಬ್ ಗ್ಯಾಂಗ್” 2013 ರ ಮಾರ್ಚ್ 8 ರಂದು ವಿಶ್ವ ಮಹಿಳಾ ದಿನಾಚರಣೆಯ ದಿನ ತೆರೆ ಕಂಡಿದೆ.
ಇಂದು ಮಧ್ಯಮ ಮೇಲ್ವರ್ಗದ ಮಹಿಳೆಯರು ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡು ತಮ್ಮ ಆರ್ಥಿಕ ಹಾಗು ಸಾಮಾಜಿಕ ಸ್ಥಾನಮಾನಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಆದರೆ ಕೆಳವರ್ಗದ ಮಹಿಳೆಯರನ್ನು ಸಂಘಟಿಸುವ ಹಾಗೂ ಅವರಿಗಾಗಿ ಹೋರಾಡುವ ಸಂಸ್ಥೆಗಳು ನಮ್ಮ ದೇಶದಲ್ಲಿ ಬೆರಳೆಣಿಕೆಯಷ್ಟಿದೆ.ಗುಲಾಬಿ ಗ್ಯಾಂಗ್ ಇಂತಹವರಿಗಾಗಿ ಇರುವ ಸಂಸ್ಥೆಯಾಗಿದ್ದು ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ನ್ಯಾಯ ದೊರಕಿಸುವಲ್ಲಿ ಮಾಡುತ್ತಿರುವ ಕೆಲಸ ಶ್ಲಾಘನೀಯ!!. ನಾರಿ ಮುನಿದರೆ ಏನಾಗುತ್ತದೆ ಎಂದು ಗುಲಾಬಿ ಗ್ಯಾಂಗ್ ಮಾಡಿ ತೋರಿಸಿದೆ. ರಾಷ್ಟ್ರದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇದ್ದು ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಕಾನೂನಿಗೆ ಒತ್ತಡ ಹೆಚ್ಚುತ್ತಿದ್ದರು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇದು ಕೈಗೂಡುತ್ತಿಲ್ಲ ! ಇಂತಹ ಗುಲಾಬಿ ಗ್ಯಾಂಗ್‍ಗಳು ಹಳ್ಳಿ ನಗರ ರಾಜ್ಯ ಮಟ್ಟದಲ್ಲಿ ಹುಟ್ಟಿಕೊಂಡರೆ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ, ಅತ್ಯಾಚಾರದಂತಹ ಪ್ರಕರಣಗಳಿಗೆ ಕಡಿವಾಣ ಬೀಳ ಬಹುದೇನೋ ? ಪೆÇೀಲೀಸರು ನಿಷ್ಕ್ರಿಯರಾಇರುವ ಇಂದಿನ ದಿನಗಳಲ್ಲಿ ಇಂತಹ ಗುಲಾಬಿ ಗ್ಯಾಂಗ್ ಗಳ ಅವಶ್ಯಕತೆ ಇದೆ ಎಂದು ಅನ್ನಿಸದೆ ಇರದು!!. ಆದರೆ ಇಂತಹ ಗುಲಾಬಿ ಗ್ಯಾಂಗ್ ಕಟ್ಟುವ ಮಹಿಳೆಯರಿಗೆ ಸಂಪತ್ ಪಾಲ್ ದೇವಿಯ ಹಾಗೆ ಕೆಚ್ಚೆದೆ ಇರಬೇಕು ಈ ನಿಟ್ಟಿನಲ್ಲಿ ಮಹಿಳೆಯರು ಜಾಗೃತರಾಗಿ ಈ ರೀತಿಯ ಗ್ಯಾಂಗ್ ಗಳನ್ನು ಕಟ್ಟಿಕೊಂಡರೆ ಪೆÇೀಲೀಸರ ಅವಶ್ಯಕತೆ ಇರದು! ಹ್ಯಾಟ್ಸ್ ಆಫ್ ಟು ಸಂಪತ್ ಪಾಲ್ ದೇವಿ!!!
ಪ್ರಕಾಶ್.ಕೆ.ನಾಡಿಗ್
ಶಿವಮೊಗ್ಗ