ಗ್ಯಾಸ್ಟ್ರೈಟಿಸ್ (ಜಠರದುರಿತ)

ಗ್ಯಾಸ್ಟ್ರೈಟಿಸ್ (ಜಠರದುರಿತ)

ಮೊದಲನೆಯದಾಗಿ ಈ ಲೇಖನದ ಶೀರ್ಷಿಕೆಯನ್ನು ಆರಂಭಕ್ಕೆ ಇಂಗ್ಲಿಷಿನಲ್ಲಿ ಬರೆದು, ನಂತರ ಆವರಣದೊಳಗೆ ಕನ್ನಡ ಪದವನ್ನು ಬರೆದ ಕಾರಣ ಏನೆಂದರೆ, ಇದೀಗ ವಾಸ್ತವದಲ್ಲಿ ಅನೇಕ ಇಂಗ್ಲಿಷ್ ಪದಗಳು ಕನ್ನಡ ಭಾಷಿಕರಲ್ಲಿ, ನಮ್ಮ ನಾಲಿಗೆಗೆ ತಕ್ಕ ಹಾಗೆ ಉಚ್ಛಾರದಲ್ಲಿ ಬದಲಾವಣೆಗೊಂಡು ಉಪಯೋಗಿಸಲ್ಪಡುತ್ತ, ಅವೂ ಸಹ ಕನ್ನಡ ಪದಗಳೇ ಏನೋ ಅನ್ನುವ ಹಾಗಾಗಿ, ಅವುಗಳ ಕನ್ನಡ ಅವತಾರದ ಪದಗಳು ಹೆಚ್ಚುಕಮ್ಮಿ ಮೂಲೆಗುಂಪಾಗಿವೆ. ಎರಡನೆಯದಾಗಿ, ಜನಸಾಮಾನ್ಯರ ಬಾಯಲ್ಲಿ ಅನೇಕ ಕನ್ನಡ ಪದಗಳನ್ನು ಇಂಗ್ಲಿಷ್ ಪದಗಳಷ್ಟು ಸುಲಭವಾಗಿ ಉಚ್ಛರಿಸುವುದೂ ಕಷ್ಟಕರ.

ಉದಾಹರಣೆಗೆ ಮೇಲಿನ ಶೀರ್ಷಿಕೆಯ ಗ್ಯಾಸ್ಟ್ರೈಟಿಸ್ ಅಥವ ಸರಳವಾಗಿ ‘ಗ್ಯಾಸ್ಟ್ರಿಕ್’ ಎಂಬುದು ಹೊರಬಿದ್ದಷ್ಟು ಸಲೀಸಾಗಿ ‘ಜಠರದುರಿತ’ ಪದ ಬಾಯಿಂದ ಹೊರಕ್ಕೆ ಬರುವುದು ಸಂಕಷ್ಟಕರವಾದ ಸತ್ಯ! ಇದಕ್ಕೆ ಇನ್ನೊಂದು ಕಾರಣ, ಇಂಥ ಪದಗಳ ಬಳಕೆ ನಮ್ಮ ದಿನನಿತ್ಯದ ಸಂಭಾಷಣೆಯಲ್ಲಿ ಇಲ್ಲದಿರುವುದೂ ಬಹುಶಃ ಇರಬಹುದು. ಬಸ್ಸು, ಕಂಡಕ್ಟರ್, ಡ್ರೈವರ್, ಸ್ಕೂಲ್ ಅಥವ ಇಸ್ಕೂಲ್ ಇವೆಲ್ಲ ಹುಟ್ಟಿಕೊಂಡಿದ್ದೂ ಸಹ ಜನಸಾಮಾನ್ಯರ ಮಾತಿನಲ್ಲಿ ದೈನಂದಿನ ಬಳಕೆಯಲ್ಲಿ ಸದಾ ಇರುವುದೂ ಅಲ್ಲದೆ, ಅಂಥ ಉಚ್ಛಾರದ ಸಂಕಷ್ಟದಿಂದಲೆ ಎಂಬುದೂ ಸಾಧ್ಯ! ಹಾಗಾದರೆ ಇಷ್ಟೊಂದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವುದರ ಬಗ್ಗೆ, ಅಂದರೆ ಗ್ಯಾಸ್ಟ್ರೈಟಿಸ್ ಬಗ್ಗೆ ಬರೆಯುವ ಅವಶ್ಯಕತೆ ಇತ್ತೆ? ಹೌದು, ಇತ್ತು ಮತ್ತು ಇದೆ!

ಈಗಾಗಲೆ ನಾನು ತಿಳಿಸಿರುವ ಹಾಗೆ ಗ್ಯಾಸ್ಟ್ರಿಕ್ ಎಂದು ಎಲ್ಲರ ಬಾಯಲ್ಲಿ — ಅವಿದ್ಯಾವಂತ, ಮುಗ್ಧ ಗ್ರಾಮವಾಸಿಯ ಹಾಗು ನಗರವಾಸಿಯ, ಅದರ ಬಗ್ಗೆ ತಿಳಿದಿರುವವರ, ತಿಳಿಯದಿರುವವರ — ಹೀಗೆ ಎಲ್ಲರ ಬಾಯಿಂದ ಅತ್ಯಂತ ಸರಳವಾಗಿ, ದಿನಂಪ್ರತಿ ಎಗ್ಗಿಲ್ಲದೆ ಹರಿದಾಡುವ ಅಥವ ‘ಎಳೆದಾಡುವ’ (ಅಂದರೆ ಸರಿ) ಪದ ಈ ‘ಗ್ಯಾಸ್ಟ್ರೈಟಿಸ್’ ಎಂಬುದು. ಹಾಗಾದರೆ ಅವರ ಉಪಯೋಗ ತಪ್ಪೆ? ಬಹುತೇಕ ಹೌದು! ಹಾಗಂತ ಕೆಲವರಾದರು ಅದರ ಬಗ್ಗೆ ಅರ್ಥ ಮಾಡಿಕೊಂಡಿರುವವರು ಸರಿಯಾಗಿ ಬಳಸುವುದೂ ಇದೆ. ಆದರೆ, ಮೆಜಾರಿಟಿ ಜನರು ಆ ಪದವನ್ನು ಎಲ್ಲ ಥರ ವ್ಯಾಧಿಗಳಿಗೂ ಸರ್ವವ್ಯಾಪಿಯಾಗಿ ಬಳಸಿ, ಅದು ಮಕ್ಕುಹಿಡಿದಂತಾಗಿದೆ! ಒಬ್ಬ ರೋಗಿ, ‘ಸಾರ್, ತಲೆ ಹಿಂಬಾಗ ಬಲವಾಗಿ ಎಳೀತಾ ಐತೆ, ಗ್ಯಾಸ್ಟ್ರಿಕ್ಕೇನಾರ ಆಗೈತ ಒಸಿ ಪರೀಕ್ಷೆ ಮಾಡಿ’ ಅಂದರೆ, ಮತ್ತೊಬ್ಬ ‘ಸಾರ್, ಸೊಂಟ ಪಣಪಣ ಅಂತಾ ಅದೆ, ಗ್ಯಾಸ್ಟ್ರಿಕ್ಕಾಗಿರ್ಬೇಕು, ನೋಡಿ’ ಅಂತ ಹೇಳುವನು. ಹೀಗೆ ಹಲವಾರು ಬೇರೆ ಬೇರೆ ಕಾರಣಗಳ ಕಾಯಿಲೆಗಳೆಲ್ಲ ಗ್ಯಾಸ್ಟ್ರೈಟಿಸ್ ಅವತಾರ ದಿಢೀರ್ ತಾಳಿಬಿಡುವುದು ಸಾಮಾನ್ಯ. ಇನ್ನೊಬ್ಬ ರೋಗಿ, ‘ಸರ್, ಮೊನ್ನೆ ನನ್ನ ಮಗನ ಹುಟ್ಟಿದ ಹಬ್ಬ ಅಂತ ಹೋಟೆಲ್ ಊಟ ಮಾಡಿದೆ. ಅದರಿಂದ ಗ್ಯಾಸ್ಟ್ರಿಕ್ಕಾಗಿ ನನಗೆ ಬೆಳಿಗ್ಗೆಯಿಂದ ಐದಾರು ಸಲ ನೀರ್ ಥರ ಲೂಸ್ ಮೋಶನ್ನು, ಸ್ವಲ್ಪ ನೋಡಿ’ ಎಂದು ತಾನೆ ರೋಗ ಡೈಯಾಗ್ನೋಸ್ ಮಾಡಿ ಕೂರುವನು. ಹಾಗೆ ಉದರದಲ್ಲಿ ಊಟದ ನಂತರ ಗಾಳಿ ತುಂಬಿದ ಹಾಗೆ ಉಬ್ಬರ ಆದರೆ ಅದೂ ‘ಗ್ಯಾಸ್ಟ್ರಿಕ್ಕೆ’! ಎಲ್ಲಿಯ ತಲೆಶೂಲೆ, ಸೊಂಟದ ಬೇನೆ, ಭೇದಿ ಅಥವ ಮತ್ತೊಂದು ಮತ್ತು ಎಲ್ಲಿಯ ಜಠರದುರಿತ? ಈ ಕಾರಣಕ್ಕೆ ನಾನು ವಾಸ್ತವದಲ್ಲಿ ಗ್ಯಾಸ್ಟ್ರೈಟಿಸ್ ಬಗ್ಗೆ ಜನರಲ್ಲಿ ಇರುವ ತಪ್ಪು ಭಾವವನ್ನು ಸರಿಪಡಿಸಲು ಈ ಲೇಖನ ಒಂದು ಸಣ್ಣ ಪ್ರಯತ್ನ.

ಜಠರದುರಿತ ಅಥವ ಗ್ಯಾಸ್ಟ್ರೈಟಿಸ್ ಎಂದರೆ, ನಮ್ಮ ಜಠರದ ಒಳಗಿನ ರಕ್ಷಾಪೊರೆ (Lining of the stomach) ಕೆಂಪಾಗಿರುವುದು ಮತ್ತು ಊದಿಕೊಂಡಿರುವುದು (inflamed). ವಾಸ್ತವವಾಗಿ ನಮ್ಮ ಜಠರದೊಳ ಪೊರೆ ಗಟ್ಟಿಯಾಗಿರುತ್ತದೆ. ಸಾಮಾನ್ಯ ಪರಿಸ್ಥಿತಿಗಳಲ್ಲಿ ಆಮ್ಲ (acid) ಅದನ್ನು ಘಾಸಿಮಾಡುವುದಿಲ್ಲ. ಆದರೆ ಅತಿಯಾದ ಮದ್ಯ ಸೇವನೆಯಿಂದ, ಧೂಮಪಾನದಿಂದ ಅಥವ ನೋವು ನಿವಾರಕ ಮಾತ್ರೆಗಳ ಹೆಚ್ಚು ಹೆಚ್ಚು ಬಳಕೆಯಿಂದ ಮುಂತಾದ ಪರಿಸ್ಥಿತಿಗಳಲ್ಲಿ ಜಠರದ ಒಳ ರಕ್ಷಾಪೊರೆ ಕೆರಳಿದಂತಾಗಿ (irritate) ಉರಿಯೂತಕ್ಕೆ ತುತ್ತಾಗಬಹುದು. ಜಗತ್ತಿನ ಶೇಕಡ 50 ಕ್ಕಿಂತಲೂ ಮಿಕ್ಕಿದಷ್ಟು ಜನರು ವಿವಿಧ ಹಂತದಲ್ಲಿ ಈ ರೋಗದ ಬಾಧೆಯಿಂದ ನರಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ ಇದೊಂದು ಬಹು ಮುಖ್ಯ ಸಾರ್ವಜನಿಕ ಕಾಳಜಿಯಾಗಿದೆ ಏಕೆಂದರೆ, ಈ ಬಾಧೆಯು ಜಠರದ ಹುಣ್ಣು ಮತ್ತು ಕ್ಯಾನ್ಸರ್ ರೋಗಕಾರಕ ಸಹ ಆಗಿದ್ದು ಬಹಳ ಜಟಿಲ ಸಮಸ್ಯೆಯಾಗಿದೆ.

ವಿಶಿಷ್ಟವಾಗಿ ಈ ರೋಗದಿಂದ ಬಳಲುವ ಜನರು, ಉದರದ ಮೇಲ್ಭಾಗದ ಮಧ್ಯೆ ಅಥವ ಮೇಲಿನ ಎಡಭಾಗದಲ್ಲಿ ಹರಿತವಾಗಿ ಚುಚ್ಚುವ ಅಥವ ಉರಿಯುವ ನೋವಿನಿಂದ ನರಳುವರು. ಆ ನೋವು ಬೆನ್ನಿನ ತನಕ ಪ್ರಸರಿಸಬಹುದು. ಗ್ಯಾಸ್ಟ್ರೈಟಿಸ್ನಿಂದ ವಾಂತಿಯಾದರೆ ಅದು ಬಣ್ಣರಹಿತ ಅಥವ ಹಳದಿ ಅಥವ ಹಸಿರು ಬಣ್ಣವಾಗಿರಬಹುದು.

ಕಾರಣಗಳು: ಗ್ಯಾಸ್ಟ್ರೈಟಿಸ್ ನಮ್ಮ ಆಹಾರ ವಿಧಾನ ಮತ್ತು ಜೀವನ ಕ್ರಮದ ಅಭ್ಯಾಸಗಳಿಂದ ಹಾಗು ಅನೇಕ ಇತರ ಕಾರಣಗಳಿಂದ ಬಾಧಿಸಬಹುದು.
… ಧೂಮಪಾನ
… ಅತಿಯಾದ ಮದ್ಯ ಸೇವನೆ
… ಆಸ್ಪಿರಿನ್ ಹಾಗು ಇನ್ನಿತರ ನೋವು
ಮತ್ತು ಜ್ವರದ ಗುಳಿಗೆಗಳ ದೀರ್ಘಕಾಲದ ಉಪಯೋಗ.
… ಗಂಭೀರ ಹಾಗು ಜೀವಹಾನಿಕಾರಕ ರೋಗಗಳಿಂದ ಅಥವ ಬೇರೆ ಕಾರಣಗಳ ಮಾನಸಿಕ ಒತ್ತಡದಿಂದ
… ಪ್ರಮುಖ ಶಸ್ತ್ರಚಿಕಿತ್ಸೆ, ಪೆಟ್ಟುಗಳಿಂದ ಆದ ಹಾನಿ, ಸೋಂಕುಗಳು ಹಾಗು ಸುಟ್ಟ ಗಾಯಗಳಿಂದ ಸಹ ಗ್ಯಾಸ್ಟ್ರೈಟಿಸ್ ಬರಬಹುದು. ಪರ್ನೀಶಸ್ ಅನೀಮಿಯ ಎಂಬ ರಕ್ತಹೀನತೆಯ ರೋಗದಿಂದ, ಬಿ-12 ಎಂಬ ವಿಟಮಿನ್ನನ್ನು ನಮ್ಮ ಜಠರದ ಒಳ ರಕ್ಷಾಪೊರೆ ಹೀರಿಕೊಳ್ಳಲು ಅಸಮರ್ಥವಾಗಿ, ಅಂತಹ ಸಂದರ್ಭದಲ್ಲಿ ಸಹ ಗ್ಯಾಸ್ಟ್ರೈಟಿಸ್ ಬರಬಹುದು. ಅಂತೆಯೇ ಪಿತ್ತರಸವು ಜಠರದಿಂದ ಅನ್ನನಾಳದತ್ತ ಹಿನ್ಸುರಿತ (reflux) –ಹಿಂದಕ್ಕೆ ಸುರಿತ — ಆದಾಗ; ನಮ್ಮ ರಕ್ಷಣಾವ್ಯವಸ್ಥೆ ಆಕಸ್ಮಿಕವಾಗಿ ನಮ್ಮದೆ ಶರೀರದ ಕೋಶಗಳನ್ನು ಆಘಾತಗೊಳಿಸಿದಾಗ (Autoimmune disorders); ಮುಂತಾದ ಸಂದರ್ಭಗಳಲ್ಲೂ ನಮ್ಮನ್ನು ಗ್ಯಾಸ್ಟ್ರೈಟಿಸ್ ರೋಗ ಬಾಧಿಸಬಹುದು.

ರೋಗಲಕ್ಷಣಗಳು:
ಒಬ್ಬೊಬ್ಬ ವ್ಯಕ್ತಿಯಲ್ಲೂ ಗ್ಯಾಸ್ಟ್ರೈಟಿಸ್ ರೋಗದ ಲಕ್ಷಣಗಳು ಬೇರೆಬೇರೆ ರೀತಿ ತೋರಿದರೂ ಸಹ, ಅತಿ ಸಾಮಾನ್ಯವಾದ ತೊಂದರೆಗಳೆಂದರೆ —
… ಉದರದಲ್ಲಿ ನೋವು ಮತ್ತು ಹಿಂಸೆ
… ತೇಗು ಹಾಗು ಬಿಕ್ಕಳಿಕೆ
… ಉದರದೊಳಗೆ (ಜಠರ) ರಕ್ತಸ್ರಾವ
… ಓಕರಿಕೆ ಮತ್ತು ವಾಂತಿ
… ಹೊಟ್ಟೆಯುರಿ ಮತ್ತು ಎದೆಯುರಿ
… ಹಸಿವಾಗದಿರುವುದು
… ವಾಂತಿ ಹಾಗು ಮಲದಲ್ಲಿ ರಕ್ತ; ಇದು ಜಠರದ ಒಳ ರಕ್ಷಾಕವಚದಲ್ಲಿ (stomach lining) ರಕ್ತಸ್ರಾವವಾಗುವ ಕಾರಣ.
… ಉಸಿರಾಟದ ತೊಂದರೆ.
… ಕೆಟ್ಟ ವಾಸನೆಯುಕ್ತ ಮಲವಿಸರ್ಜನೆ.

ಇದೆ ಥರದ ಲಕ್ಷಣಗಳನ್ನು ಇನ್ನಿತರ ಕೆಲವು ರೋಗಗಳಲ್ಲೂ ಕಾಣಬಹುದು. ಅವುಗಳಲ್ಲಿ ಹೃದಯಾಘಾತ, ಮೇದೋಜ್ಜೀರಕ ಗ್ರಂಥಿಯ ಉರಿಯೂತ, ಜಠರ ಅಥವ ಸಣ್ಣ ಕರುಳಿನ ಹುಣ್ಣು(ಪೆಪ್ಟಿಕ್ ಅಲ್ಸರ್) ಮತ್ತು ಪಿತ್ತಕೋಶದ ತೊಂದರೆಗಳು ಪ್ರಮುಖವಾದವು. ಒಬ್ಬ ವ್ಯಕ್ತಿಯಲ್ಲಿ ಬಹು ಹೆಚ್ಚಾದ ಹೃದಯ ಬಡಿತ, ಅಧಿಕ ಬೆವರುವಿಕೆ, ಆತನ ವಾಂತಿಯಲ್ಲಿ ರಕ್ತ, ಉಸಿರಾಟದ ತೊಂದರೆ, ಉದರಬೇನೆಯಿಂದ ಕೂಡಿದ ಜ್ವರ, ಅಧಿಕ ಪ್ರಮಾಣದ ಹಸಿರು ಅಥವ ಹಳದಿ ಬಣ್ಣದ ವಾಂತಿ, ಕಪ್ಪುಬಣ್ಣದ ಅಥವ ರಕ್ತ ಮಿಶ್ರಿತ ಮಲವಿಸರ್ಜನೆ, ಅಥವ ತಲೆಸುತ್ತು ಮತ್ತು ಅದರಿಂದ ಮೂರ್ಛೆ ಬೀಳುವುದು ಮುಂತಾದ ಲಕ್ಷಣಗಳು ಕಂಡುಬಂದರೆ, ಅಂತಹ ರೋಗಿಗೆ ತುರ್ತಾಗಿ ಆಸ್ಪತ್ರೆಯ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ.

ರೋಗನಿರ್ಣಯ: ವೈದ್ಯರು ರೋಗಿಯ ಹಿಂದಿನ ಅಸ್ವಸ್ಥತೆಗಳ ಇತಿಹಾಸ ಮತ್ತು ಕುಟುಂಬದಲ್ಲಿ ಇತರರಿಗೆ ಇದ್ದ ಅಥವ ಇರುವಂತಹ ವ್ಯಾಧಿಗಳ ಬಗ್ಗೆ ಹಾಗು ಇನ್ನೂ ಕೆಲವು ಪ್ರಶ್ನೆಗಳನ್ನು ಕೇಳಿ ತಿಳಿದುಕೊಂಡ ನಂತರ, ದೈಹಿಕ ಪರೀಕ್ಷೆ ಮಾಡುವರು. ಅಲ್ಲದೆ ಬೇಕಾದ ಇತರ ಪರೀಕ್ಷೆಗಳನ್ನು ಮಾಡಿಸಬಹುದು:-
…ಬೇರಿಯಂ ಎಂಬ ಲೋಹೀಯ ದ್ರವವನ್ನು ನುಂಗಿಸಿದ ನಂತರ, ಅನ್ನನಾಳ, ಜಠರ ಮತ್ತು ಸಣ್ಣ ಕರುಳಿನ ಡುಯೊಡಿನಮ್ ಭಾಗಗಳ ಎಕ್ಸ್-ರೆಗಳ ಮೂಲಕ ಪರೀಕ್ಷೆ.
… ಎಂಡೊಸ್ಕೊಪಿ ಎಂಬ ಬಳುಕು ಕೊಳವೆಯನ್ನು ಬಾಯಿ ಮತ್ತು ಗಂಟಲಿನ ಮೂಲಕ ಅನ್ನನಾಳ, ಜಠರ ಹಾಗು ಸಣ್ಣ ಕರುಳಿನತನಕ ನೂಕಿ, ಅದರಲ್ಲಿರುವ ಅತಿಚಿಕ್ಕ ಕ್ಯಾಮೆರಾದ ಸಹಾಯದಿಂದ ವೀಕ್ಷಿಸಿ ಪರೀಕ್ಷಿಸುತ್ತಾರೆ ಮತ್ತು ಬೇಕೆಂದರೆ ಚಿಕ್ಕ ಗಾತ್ರದ ಊತಕದ (tissue) ಬೈಯಾಪ್ಸಿಯ (ಮಾಂಸ ಖಂಡ ಮುಂತಾದ ಚಿಕ್ಕ ಚೂರನ್ನು ಪರೀಕ್ಷೆಗಾಗಿ ಛೇದಿಸಿ ಹೊರತೆಗೆಯುವುದು) ಸೂಕ್ಷ್ಮದರ್ಶಕದ ಪರೀಕ್ಷೆ. ಅಲ್ಲದೆ, ಎಚ್ ಪೈಲೊರಿ ಎಂಬ ಬ್ಯಾಕ್ಟೀರಿಯ ಪರೀಕ್ಷೆ ಸಹ ಇದರಿಂದ ಸಾಧ್ಯ — ಈ ಬ್ಯಾಕ್ಟೀರಿಯ ನಮ್ಮ ಜಠರದ ರೋಗಗಳಿಗೆ ಬಹುತೇಕ ಕಾರಣ ಎಂದು ತಿಳಿದುಬಂದಿದೆ.
… ರಕ್ತ ಪರೀಕ್ಷೆ: ಕೆಂಪುರಕ್ತ ಕಣಗಳು ಕಡಿಮೆಯಾದಾಗ ರಕ್ತಹೀನತೆಯಾಗಿ, ಅದರಿಂದ ಕೆಲವು ವಿಟಮಿನ್ನುಗಳ ಕೊರತೆ ಸಹ ಆಗಬಹುದು. ಉದಾಹರಣೆಗೆ ಬಿ-12 ವಿಟಮಿನ್.
… ಮಲಪರೀಕ್ಷೆ: ವ್ಯಕ್ತಿಯ ಮಲದಲ್ಲಿ ಬ್ಯಾಕ್ಟೀರಿಯ ಇರಬಹುದೆ ಎಂಬ ಪರೀಕ್ಷೆ. ಇನ್ನೊಂದು ಆತನ ಮಲದಲ್ಲಿ ರಕ್ತದ ಇರುವಿಕೆಯ ಬಗ್ಗೆ ಸಹ – ಇದು ವ್ಯಕ್ತಿಯ ಜಠರದಲ್ಲಿ ರಕ್ತಸ್ರಾವ ಆಗಿದ್ದರೆ ತೋರಿಸುತ್ತದೆ.
… ವ್ಯಕ್ತಿಯ ಉಸಿರನ್ನೂ ಪರೀಕ್ಷೆಗೆ ಒಳಪಡಿಸಿ ಅದರಲ್ಲಿ ಸಹ ಜಠರದ ಬ್ಯಾಕ್ಟೀರಿಯ ಇರುವ ಬಗ್ಗೆ ಖಚಿತಕ್ಕೆ.

ಚಿಕಿತ್ಸೆ: ಗ್ಯಾಸ್ಟ್ರೈಟಿಸ್ ಚಿಕಿತ್ಸೆಯು, ಒಬ್ಬ ವ್ಯಕ್ತಿಗೆ ಯಾವ ಕಾರಣದಿಂದ ಆ ಕಾಯಿಲೆ ಬಂದದ್ದು, ಆತನ ಸಾಮಾನ್ಯ ಆರೋಗ್ಯ ಸ್ಥಿತಿಗತಿ, ಆತನ ವಯಸ್ಸು ಮತ್ತು ರೋಗದ ಪ್ರಬಲತೆಗಳ ಮೇಲೆ ಅವಲಂಬಿಸಿರುವುದು.ಪ್ರಪ್ರಥಮವಾಗಿ ಎಲ್ಲರಿಗೂ ತಿಳಿದಿರುವಂತಹ ಜಲ್ಯುಸಿಲ್ ಮುಂತಾದ ಆಂಟಾಸಿಡ್ ಮತ್ತು ಜಠರದ ಆಮ್ಲ ಕಡಿಮೆ ಮಾಡುವ ಔಷಧಗಳನ್ನು ಕೊಡುವರು. ಬೇರೆ ಕಾಯಿಲೆ ಅಥವ ಸೋಂಕಿಂದ ಅದು ಉಂಟಾಗಿದ್ದರೆ, ಮೊದಲು ಅಂತಹ ಕಾಯಿಲೆಗೆ ಚಿಕಿತ್ಸೆ ನೀಡುವುದರ ಮೂಲಕ ಗ್ಯಾಸ್ಟ್ರೈಟಿಸ್ ಕೂಡ ಸರಿಪಡಿಸುತ್ತಾರೆ. ಎಚ್.ಪೈಲೊರಿ ಎಂಬ ಬ್ಯಾಕ್ಟೀರಿಯ ಕಾರಣವಾದರೆ ಪ್ರಥಮವಾಗಿ ಅವುಗಳ ನಿವಾರಣೆಗೆ ಬೇಕಾದ ಆಂಟಿಬಯೋಟಿಕ್ಸ್ ಮತ್ತು ಪಿ.ಪಿ.ಐ (pantaprazole, rabepazole etc.,) ಔಷಧಗಳನ್ನು ಕೊಡುವರು.ಇದೆಲ್ಲ ಅಲ್ಲದೆ, ವ್ಯಕ್ತಿಯ ಜಠರವನ್ನು ಕಿರಿಕಿರಿ ಮಾಡುವ ಆಹಾರ ಹಾಗು ಪಾನೀಯಗಳ ಸೇವನೆ ಮತ್ತು ನೋವು ಶಮನಕ್ಕೆ ನೀಡುವ ಮತ್ತು ಜಠರದ ಒಳ ರಕ್ಷಾಕವಚಕ್ಕೆ ತೊಂದರೆ ನೀಡುವಂಥ ಇತರೆ ಔಷಧ ಸೇವನೆಯನ್ನು ನಿಲ್ಲಿಸಲು ಹೇಳುತ್ತಾರೆ. ಅಲ್ಲದೆ, ಮುಖ್ಯವಾಗಿ ಧೂಮಪಾನ ಮತ್ತು ಮದ್ಯಪಾನಕ್ಕೆ ಸಹ ಕಡಿವಾಣ ಹಾಕಬೇಕಾಗುತ್ತದೆ.

ಇನ್ನು ಗ್ಯಾಸ್ಟ್ರೈಟಿಸ್ನಿಂದ ಆಗಬಹುದಾದ ಇತರೆ ಸಮಸ್ಯೆಗಳ ಬಗೆಗೆ ಒಂದಿಷ್ಟು: …ಜಠರ ಮತ್ತು ಸಣ್ಣ ಕರುಳೊಳಗೆ ಹುಣ್ಣು (peptic ulcer)…. ಜಠರದೊಳಗೆ ಪಾಲಿಪ್ ಎಂಬ ಕೋಶಗಳ ಗೆಡ್ಡೆ ಬೆಳವಣಿಗೆ…. ಕ್ಯಾನ್ಸರ್ ಮತ್ತು ಇನ್ನಿತರ ಕ್ಯಾನ್ಸರ್ ಅಲ್ಲದ ಗೆಡ್ಡೆಗಳು…. ಎಚ್.ಪೈಲೊರಿ ಬ್ಯಾಕ್ಟೀರಿಯ ಕಾರಣ ಜಠರದ ಒಳ ರಕ್ಷಾಕವಚ ಹಾಳಾಗಿ ಅಟ್ರೊಫಿಕ್ ಗ್ಯಾಸ್ಟ್ರೈಟಿಸ್ ಉಂಟುಮಾಡಬಹುದು.

ಗ್ಯಾಸ್ಟ್ರೈಟಿಸ್ ತಡೆಗಟ್ಟುವುದರ ಬಗ್ಗೆ:ಪ್ರತಿ ಬಾರಿ ಆಹಾರಕ್ಕೆ ಮುನ್ನ ಚೆನ್ನಾಗಿ ಕೈ ತೊಳೆಯುವ ಅಭ್ಯಾಸದಿಂದ, ಜಠರಕ್ಕೆ ಬ್ಯಾಕ್ಟೀರಿಯ ಸೇರುವುದು ತಪ್ಪುತ್ತದೆ.ಮೊದಲೆ ತಿಳಿಸಿರುವ ಹಾಗೆ, ಜಠರದ ಒಳ ರಕ್ಷಾಪೊರೆ ಕೆರಳಿಸುವಂತಹ ಆಹಾರ ಸೇವನೆ, ಕ್ಯಾಫೀನ್ ಮುಂತಾದ ಪಾನೀಯ ಸೇವನೆ ಮತ್ತು ಧೂಮಪಾನ ಹಾಗು ಮದ್ಯಪಾನ ತ್ಯಜಿಸುವುದು. ಆಸ್ಪಿರಿನ್ ಹಾಗು ನೋವುನಿವಾರಕ ಮಾತ್ರೆ ಮತ್ತು ಸ್ಟೀರಾಯ್ಡ್ ಮಾತ್ರೆ ಇತ್ಯಾದಿ ಔಷಧ ಸೇವನೆ ತ್ಯಜಿಸುವುದು ಮುಂತಾಗಿ.

ಡಾ. ಅರಕಲಗೂಡು ನೀಲಕಂಠ ಮೂರ್ತಿ

Related post

Leave a Reply

Your email address will not be published. Required fields are marked *