ಘನ್ನ ದೃಶ್ಯ
(ಜಲ ಷಟ್ಪದಿಯಲ್ಲಿದೆ)
ತನ್ನಲಿಲ್ಲದ
ಹೊನ್ನ ಬೆಳಕನು
ಮುನ್ನ ಬೇಡುತ ರವಿಯಲಿ
ಚಿನ್ನದಂತಹ
ರನ್ನ ಚಂದಿರ
ಹೊನ್ನ ಹರಿಸಿದನಿಳೆಯಲಿ
ಹರಿವ ನೀರಿನ
ತೊರೆಯ ಮೇಗಡೆ
ಮೆರೆದು ಹೊಳೆದಿದೆ ಬೆಳಕದು
ಗಿರಿಯನೇರುತ
ಬೆರೆತು ಮುಗಿಲಲಿ
ಸುರಿದ ಕರುಣೆಯ ಸೊಗಸದು
ತನಗೆ ಸಿಕ್ಕಿದ
ಘನದ ಬೆಳಕನು
ವಿನಯದಿಂದಲಿ ಹಂಚಿದ
ತನಯನಂತೆಯೆ
ಮನವನರಳಿಸಿ
ಜನರ ಕತ್ತಲೆ ನೀಗಿದ
ಸಾಕುತಿರುವನು
ಲೋಕವೆಲ್ಲವ
ನೂಕಿ ಕತ್ತಲೆಯಾಚೆಗೆ
ನಾಕ ಸೃಷ್ಟಿಸಿ
ಚಾಕಚಕ್ಯದಿ
ಶೋಕ ತಪ್ಪಿಸಿ ಜನತೆಗೆ
ಹೊನ್ನ ಕಿತ್ತಳೆ
ಬಣ್ಣವಾಗಿಹ
ಚೆನ್ನ ಚಂದಿರ ಬಾನಲಿ
ಇನ್ನು ಮರೆಯೆನು
ಘನ್ನ ದೃಶ್ಯವ
ನನ್ನ ಮನದೊಳಗುಳಿಯಲಿ
ಶೀಲಾ ಅರಕಲಗೂಡು
(ಈ ಕವನವನ್ನು ಜೀವನ ಮೌಲ್ಯ
ತಿಳಿಸುವ ವಿಜ್ಞಾನ ಗೀತೆಯೆಂದು ಭಾವಿಸಬಹುದು)
1 Comment
ತುಂಬಾ ಚೆನ್ನಾಗಿ ಬರೆದಿದ್ದೀರಿ ಅದ್ಭುತ ಸಂಯೋಜನೆ ಮಾಡಬಹುದಾದ ಪದ ಪ್ರಯೋಗ
ಪವನ ಕುಮಾರ ಕೆ ವಿ ಬಳ್ಳಾರಿ
9663346949