ಚಂದಕಿಂತ ಚಂದ ನಮ್ಮಶಾಯರಿ ಈರಣ್ಣ

ಉಸಿರು ನಿಲ್ಲುವ ಮುನ್ನ ಹೆಸರು ನಿಲ್ಲುವ ಕೆಲಸ ಮಾಡಬೇಕು ಎಂದು ಬರೆದ ಕನ್ನಡ ಶಾಯರಿಗಳ ಜನಕ ಎಂದೇ ಖ್ಯಾತರಾಗಿದ್ದ ಖ್ಯಾತ ಕವಿ ಇಟಗಿ ಈರಣ್ಣ.

ಚಂದಕ್ಕಿಂತ ಚಂದ ನೀನೇ ಸುಂದರ
ನಿನ್ನ ನೋಡ ಬಂದ ಬಾನ ಚಂದಿರ

ಹೊಸಪೇಟೆ, ಬಳ್ಳಾರಿ, ಹೂವಿನಹಡಗಲಿ ಇನ್ನಿತರ ಕಡೆ ಉಪನ್ಯಾಸಕರಾಗಿದ್ದ ಈರಣ್ಣ ನಿವೃತ್ತಿಯ ನಂತರ ಶಿವಮೊಗ್ಗದಲ್ಲಿ ನೆಲೆಸಿದ್ದರು. ಕನ್ನಡದ ಶಾಯರಿಗಳು ಅವರ ಜನಪ್ರಿಯ ಪುಸ್ತಕ. ಹದಿನೈದಕ್ಕೂ ಹೆಚ್ಚು ಮುದ್ರಣ ಕಂಡಿರುವುದು ಅವರ ಜನಪ್ರಿಯತೆಗೆ ಸಾಕ್ಷಿ. ತಾಯಿ ಕೊಟ್ಟ ತಾಳಿ ಅವರ ಸಾಹಿತ್ಯ ಬಳಕೆ ಆದ ಮೊದಲ ಚಿತ್ರ. ಸ್ಪರ್ಶ ಸಿನಿಮಾಕ್ಕಾಗಿ ಅವರು ಬರೆದ ಶಾಯರಿ `ಚಂದಕಿಂತ ಚಂದ ನೀನೇ ಸುಂದರ’ ಎಲ್ಲರ ಮನಗೆದ್ದ ಗೀತೆ. ಕಬೀರ್ ದಾಸರ ದೋಹೆಗಳು, ಹರಿವಂಶರಾಯ್ ಬಚ್ಚನ್ ಅವರ ಮಧುಶಾಲಾ ಕೃತಿ ಸೇರಿ ಹಲವು ಕಾವ್ಯ, ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಕನ್ನಡದ ಮೊದಲ ಶಾಯಿರಿ ಕವಿ ಎಂದೇ ಪ್ರಖ್ಯಾತರಾದ ಇಟಗಿಯವರ ವಿಭಿನ್ನ ಶೈಲಿಯ ಶಾಯಿರಿಗಳು ಎಲ್ಲರನ್ನೂ ಓದಿಸಿಕೊಂಡು ಹೋಗುವಂತೆ ಮಾಡುತ್ತಿತ್ತು. ತಮ್ಮ ಶಾಯಿರಗಳನ್ನು ಪಾಠದ ಮದ್ಯೆ ಅಥವಾ ಕೊನೆಗೆ ವಾಚಿಸುತ್ತಿದ್ದರು. ಅವರ ಮೆಚ್ಚಿನ ವಿದ್ಯಾರ್ಥಿಗಳು ಈಗಲೂ ಪ್ರೀತಿಯಿಂದ ಜ್ಞಾಪಿಸಿಕೊಳ್ಳುತ್ತಾರೆ.

ನಗುವ ಹೂ ನಗೆ
ನಗುವ ಆ ಬಗೆ
ನಗುವೇ ನಾಚಿತು
ನಾಚಿ ನಕ್ಕಿತು

ಆಹಾ ಎಂತಾ ಸಾಲು

ಹಂಸಲೇಖ ರವರು ಬಳಸಿಕೊಳ್ಳದೆ ಇರುತ್ತಾರೆಯೇ?

ಈರಣ್ಣನವರ ಶಾಯರಿಗೆ ಮಾರು ಹೋದ ಹಂಸಲೇಖ ಸರ್ ಕರೆಸಿದ್ದು ಪ್ರಸಿದ್ಧ ಗಝಲ್ ಗಾಯಕ “ಪಂಕಜ್ ಉದಾಸ್” ರವರನ್ನು

ಮುಚ್ಚಿದ ತುಟಿ ನೀ ಬಿಚ್ಚಿ ನಕ್ಕೆಂದ್ರ ಹುಣವಿ ಬೆಳದಿಂಗಳು ಹರಿತೈತಿ |
ಕಟ್ಟಿದ ಮುಡಿ ನೀ ಬಿಚ್ಚಿ ಸವರಿದೆಂದ್ರ ಅಮಾಸಿ ಕತ್ತಲು ಕವೀತೈತಿ ||

ಇದು ಇಟಗಿಯವರು ಶಾಹಿರಿಯ ಒಂದು ಸ್ಯಾಂಪಲ್ ಅಷ್ಟೇ. ಮನುಷ್ಯ ಸ್ವಭಾವಗಳಿಗೆ ಕಚಗುಳಿ ಇಡುವಂಥ ಇಂಥ ನೂರಾರು ಶಾಯಿರಿಗಳನ್ನು ರಚಿಸಿ, ಕನ್ನಡ ಸಾಹಿತ್ಯದ ಹಿರಿಮೆ ಹೆಚ್ಚಿಸಿದ್ದರು ಪ್ರೊ.ಇಟಗಿಯವರು.

ಬದುಕಿನ ವಿವಿಧ ಮಜಲುಗಳನ್ನು ನೇವರಿಸುತ್ತಾ, ಮನುಷ್ಯ ಸ್ವಭಾವಗಳಿಗೆ ಕಚಗುಳಿಯನ್ನು ಕೊಡುವ ಆಯ್ದ ಕೆಲವು ಶಾಯಿರಿಗಳು ನಿಮ್ಮ ಸ್ಯಾಂಪಲ್ ಓದಿಗೆ.

ಈ ಕತ್ತಲ ರಾತ್ರಿ ನಿನ್ನ ದಾರಿ ಕಾದೂ ಕಾದೂ
ನನ್ನೆದಿ ಒಂದs ಅಳತಿ ಸುಡಾಕ ಹತ್ತೇತಿ|
ಕತ್ತಲಾಗೇತೆಂತ ಹೆದರಿ ಕುಂದರಬ್ಯಾಡ
ನನ್ನ ಸುಡೂ ಎದಿ ನಿನ್ನ ದಾರ್ಯಾಗ ಬೆಳಕು ಚೆಲ್ಲೇತಿ|

 • ನನಗನಸತೈತಿ ಈ ಹರಿಯೂ ಬೆಳದಿಂಗಳಾ
  ಹೆಪ್ಪಾಗಿ ನಿನ್ ಮೈ ಆಗಿರಬೇಕು |
  ಇಲ್ಲಾಂದ್ರ ನನ್ನ ಬಿಸಿ ನಿನ್ನ ಮೈಗೆ ತಾಗಿ
  ಅದು ಕರಗಿ ಈ ಬೆಳದಿಂಗಳಾಗಿ ಹರಡಿರಬೇಕು ||
 • ಮುಚ್ಚಿದ ತುಟಿ ನೀ ಬಿಚ್ಚಿ ನಕ್ಕೆಂದ್ರ
  ಹುಣವಿ ಬೆಳದಿಂಗಳು ಹರಿತೈತಿ |
  ಕಟ್ಟಿದ ಮುಡಿ ನೀ ಬಿಚ್ಚಿ ಸವರಿದೆಂದ್ರ
  ಅಮಾಸಿ ಕತ್ತಲು ಕವೀತೈತಿ ||
 • ಮಾತಾಡುವಾಗ ಮುತ್ತು ಕೊಡೋಕೆ ಬರಾಂಗಿಲ್ಲ
  ಮುತ್ತು ಕೊಡುವಾಗ ಮಾತಾಡಾಕ ಬರಾಂಗಿಲ್ಲ |
  ಮುತ್ತಿನಂತಾ ಪ್ರೀತಿ ಮಾತಿನ್ಯಾಕಿ ಆಕಿ
  ಬೇರೆ ಮಾತಿನ್ಯಾಗ ಮುತ್ತು ಕೊಡತಾಳಲ್ಲ ||

ಕಳೆದ ಮಾರ್ಚ್ ತಿಂಗಳಲ್ಲಿ ತಮ್ಮ ಶಾಯರಿ ಗಳ ಜೊತೆ ಬಾರದ ಲೋಕಕ್ಕೆ ಈರಣ್ಣನವರು ಪಯಣಿಸಿದರು

ಮತ್ತೆ ಹುಟ್ಟಿ ಬರಲಿ ಈರಣ್ಣವರು
ತಮ್ಮ ಪ್ರೀತಿಯ ಶಾಯರಿಗಳ ಜೊತೆ!

ಕುಮಾರ್ ಕೆ ಪಿ

ಚಿತ್ರಗಳು : ಗೂಗಲ್

Related post

Leave a Reply

Your email address will not be published. Required fields are marked *