ಚಂದಿರನ ಚಮತ್ಕಾರ
ಕಾಣದ ಆ ದೇವನು ಸೃಷ್ಟಿಸಿದ
ಬುವಿಯಲಿ ಸಕಲವೂ ಸುಂದರ!
ಶಶಿ ಮೂಡಿಸಿಹ ಬೆಳದಿಂಗಳಲಿ..
ಹೊಳೆವ ತಾರೆಗಳದೇ ಚಿತ್ತಾರ!!
ಪ್ರಕೃತಿಯ ಚೆಂದದ ಮಡಿಲಲಿ
ಅಡಗಿದೆ ಸಾವಿರಾರು ವಿಚಿತ್ರ!
ಧರೆಯಂಗಳದಿ ಮೂಡಿದ ತಂಪಲಿ..
ತಂಗದಿರ ನೀಡಿಹನು ಹಾಲ್ಬೆಳಕ ಸೂತ್ರ!!
ರವಿ ವಸುಂಧರೆಗೆ ತರುವಂತೆ
ಕಣ್ಕೋರೈಸುವ ಹೊಂಗಿರಣವನು!
ಚಂದಿರ ಅವನಿಂದ ಕಡ ತಂದ..
ಬೆಳಕಿಂದ ಹಾಸಿಹನು ಬೆಳದಿಂಗಳನು!!
ಆಗಸದಿ ಹರಡಿದ ತಾರೆಗಳ
ಒಟ್ಟುಗೂಡಿಸಿ ನಲಿವನು ಚಂದಿರ!
ಕಡುಬಿಸಿಲ ತಾಪಕೆ ಬಳಲಿದ ಇಳೆಯ..
ತಾ ತಂಪಾಗಿಸಿ ಬೆಳಗಿಹನು ಅಂಬರ!!
ಸುಮನಾ ರಮಾನಂದ