ಚಂದಿರನ ಸೋಜಿಗ
ಬುವಿಯಲಿ ಪಸರಿಸಿಹ ಬೆಳದಿಂಗಳಲಿ
ತಾ ನಕ್ಕು ಆಗಮಿಸಿಹನು ಚಂದಿರ!
ತಾರೆಗಳ ತೋಟದ ಹಾಲ್ಬೆಳಕಲಿ..
ಕಾಣುವ ಲೋಕವದುವೇ ಸುಂದರ!!
ಮುಸ್ಸಂಜೆಗೆ ಅರಳಿ ಮುದುಡುವ
ಮಲ್ಲೆ,ಪಾರಿಜಾತ ಹೂಗಳದೇ ಕಂಪು!
ಕುದಿವ ಕೆಂಡದ ತಾಪದ ಮರೆಯಲಿ..
ಅವ ನೀಡಿಹನು ಇಳೆಗೆ ತಂಪು!!
ನೇಸರನ ಬೆಳಕಲಿ ಜಗ ಮಿಂಚಿದೆ
ಕಣ್ಕೋರೈಸುವ ಹೊಂಗಿರಣದಿ!
ಧರೆಯು ನವವಧುವಿನಂತೆ ಹೊಳೆದಿದೆ…
ರವಿಯಿಂದ ಕಡ ತಂದ ಶಶಿಕಿರಣದಿ!!
ಅಂಬರದಿ ಚದುರಿದ ನಕ್ಷತ್ರಗಳ
ಒಂದಾಗಿಸಿ ಮಿನುಗಿಸಿಹನು ತಂಗದಿರ!
ಬಿರುಬಿಸಿಲ ತಾಪಕೆ ಬಳಲಿದ ಧರಣಿಯ…
ತಂಪಾಗಿಸುವ ಬೆಳದಿಂಗಳೇ ಮಧುರ!!
ಸುಮನಾ ರಮಾನಂದ