ಚಮಚ ಕೊಕ್ಕಿನ ಮರಳು ಪೀಪಿ

ಚಮಚ ಕೊಕ್ಕಿನ ಮರಳು ಪೀಪಿ – Spoonbilled Sand Piper

ನಿರಂತರವಾಗಿ ಬರುತಿದ್ದ ಮನೆಯ ನೆಂಟರು ಕ್ರಮೇಣವಾಗಿ ಕಡಿಮೆಯಾಗುತ್ತಾ ಬಂದರೆ! ನಂತರ ಬರುವುದನ್ನೇ ನಿಲ್ಲಿಸಿದರೆ ಬರುತ್ತಿದ್ದ ನೆಂಟರಿಗೆ ಏನಾಯಿತೋ ಏನೋ ಎಂದು ಕಳವಳವಾಗುವುದು ಸಹಜ.

ರಷ್ಯಾ ದೇಶದಿಂದ ಚಳಿಗಾಲದ ಅತಿಥಿಯಾಗಿ ಭಾರತಕ್ಕೆ ಆಗಮಿಸುತಿದ್ದ “ಸ್ಪೂನ್ ಬಿಲ್ಡ್ ಸ್ಯಾಂಡ್ ಪೈಪರ್” ಎಂಬ ಪುಟ್ಟ ಅಲೆಮಾರಿ ವಲಸೆ ಹಕ್ಕಿಯ ಸಂತತಿ ಬಗ್ಗೆ ನಿಜಕ್ಕೂ ಈಗ ಆಗುತ್ತಿರುವುದು ಅದೇ ಕಳವಳ. ರಷ್ಯಾದ ಚುಕೋಟ್ಸ್ಕ್ ಹಾಗು ಕಮ್ಚಟ್ಕಾ ಎಂಬ ಪರ್ಯಾಯ ದ್ವೀಪದಲ್ಲಿ ಸಂತಾನವೃದ್ಧಿ ಮಾಡಿಕೊಂಡು ಹಳದಿ ಸಮುದ್ರದ ಮಾರ್ಗವಾಗಿ ಜಪಾನ್, ಕೊರಿಯಾ, ಚೀನಾ ದೇಶಗಳ ದಾಟಿಕೊಂಡು ದಕ್ಷಿಣ ಏಷ್ಯಾ ದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಪುಟ್ಟ ಹಕ್ಕಿಯ ಸಂತತಿ ಈಗ ಇಡೀ ಪ್ರಪಂಚದಲ್ಲೇ 350 ರಿಂದ 500 ಎಂದರೆ ಆತಂಕಕಾರಿ ಸುದ್ದಿಯೇ.

“ಕ್ಯಾಲಿಡ್ರಿಸ್ ಪಿಗ್ಮಿಯಾ” (Calidris pygmaea) ಎಂದು ವೈಜ್ಞಾನಿಕ ಹೆಸರಿನಿಂದ ಗುರುತಿಸುವ “ಸ್ಪೂನ್ ಬಿಲ್ಡ್ ಸ್ಯಾಂಡ್ ಪೈಪರ್” ಎಂಬ ವಲಸೆ ಹಕ್ಕಿಯ ಗಾತ್ರ ಕೇವಲ 14 ರಿಂದ 16 ಸೆಂಟಿಮೀಟರ್. ಆದರೂ ದೂರದ ರಷ್ಯಾದಿಂದ ಭಾರತಕ್ಕೆ ಆಗಮಿಸುತಿದ್ದ ಇದರ ಪ್ರಯಾಣ ಒಂದು ಮಹಾಯಾನವೇ ಸರಿ ಆದ್ದರಿಂದ ವಲಸೆ ಹಕ್ಕಿಗಳಲ್ಲೇ ಇದಕ್ಕೆ ವಿಶಿಷ್ಟವಾದ ಸ್ಥಾನವಿದೆ. ಈ ಹಕ್ಕಿಯನ್ನು ವಿಶೇಷವಾಗಿ ಎರಡು ಬಣ್ಣಗಳಲ್ಲಿ ಗುರುತಿಸಲಾಗಿದೆ, ಸಂತಾನವೃದ್ಧಿ ಅವಧಿಯಲ್ಲಿ ಇದು ಕೆಂಪು ಮಿಶ್ರಿತ ಕಂದು ಬಣ್ಣದಿಂದ ಕಾಣಿಸಿದರೆ ಇತರೆ ಅವಧಿಯಲ್ಲಿ ಬೂದು ಹಾಗು ಬಿಳಿ ಬಣ್ಣ ಮಿಶ್ರಿತದಿಂದ ಗುರುತಿಸಲಾಗಿದೆ. ಇದರ ಕಪ್ಪು ಕೊಕ್ಕು ಚಮಚದ ಆಕಾರದಿಂದ ಕೂಡಿದೆಯಾದ್ದರಿಂದ ಇದನ್ನು ಸ್ಪೂನ್ ಬಿಲ್ಡ್ ಎಂದು ಕರೆಯಲಾಗಿದೆ.

ಇದರ ಸಂತಾನವೃದ್ಧಿಯ ಸಂಗತಿಯೆ ಬಹಳ ವಿಚಿತ್ರ ಹಾಗು ಆಶ್ಚರ್ಯಕರ. ಮೇ ಹಾಗು ಜೂನ್ ತಿಂಗಳಲ್ಲಿ ಗಂಡು ಹಕ್ಕಿಯು ಒಂದು ನಿರ್ದಿಷ್ಟ ಜಾಗಗಳಲ್ಲಿ ನಿರಂತರವಾಗಿ ಸುತ್ತುತ್ತಾ ತನ್ನ ಪ್ರದೇಶವನ್ನು ಸೂಚಿಸಿ ಪ್ರಣಯದ ಹಾರಾಟವನ್ನು ನೆಡೆಸಿ ಹೆಣ್ಣು ಹಕ್ಕಿಯನ್ನು ಆಕರ್ಷಸುತ್ತದೆ ನಂತರ ಜೊತೆ ಸೇರಿದ ಹೆಣ್ಣು ಹಕ್ಕಿಯೊಡನೆ ಗೂಡು ಕಟ್ಟಿ ಕೆಲವೇ ದಿನಗಳ ಸಂಸಾರ ನೆಡೆಸುತ್ತದೆ. ಹೆಣ್ಣು ಹಕ್ಕಿಯು ಪ್ರಣಯದ ಫಲವಾಗಿ 3 ರಿಂದ 4 ಮೊಟ್ಟೆಯವರೆಗೂ ಇಟ್ಟು ಮುಂದಿನ ಸಂತಾನಾವೃದ್ಧಿಗೆ ಸಾಕ್ಷಿಯಾಗುತ್ತದೆ.

ಮೊಟ್ಟೆಗಳಿಗೆ ಗಂಡು ಹಾಗು ಹೆಣ್ಣು ಹಕ್ಕಿಗಳೆರಡು ಪಾಳಿಯ ಪ್ರಕಾರ ಕಾವು ಕೊಟ್ಟು 19 ರಿಂದ 23 ದಿನಗಳ ಒಳಗೆ ಮರಿಗಳನ್ನಾಗಿಸುತ್ತವೆ. ಆಶ್ಚರ್ಯವೆಂದರೆ ಈ ಹಕ್ಕಿಯು ಇತರೆ ಹಕ್ಕಿಗಳ ಹಾಗೆ ಮರಿಗಳಿಗೆ ಆಹಾರ ತಂದು ಉಣ್ಣಿಸುವುದಿಲ್ಲ ಬದಲಿಗೆ ಮರಿಗಳು ಮೊಟ್ಟೆ ಹೊಡೆದು ಹೊರ ಬಂದ ಮರುದಿನದಿಂದಲೇ ಗೂಡಿನಿಂದ ಹೊರಬಂದು ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಟ್ಟುಕೊಂಡು ಮರಳಿನಲ್ಲಿ ಸಿಗುವ ಹುಳು ಹುಪ್ಪಟ್ಟೆಗಳನ್ನು ಹೆಕ್ಕಿ ಹೆಕ್ಕಿ ತಿನ್ನಲಿಕ್ಕೆ ಶುರುಮಾಡುತ್ತವೆ. ತಾಯಿ ಹಕ್ಕಿಯು ಮರಿಗಳು ಗೂಡಿನಿಂದ ಹೊರಬಿದ್ದಕೂಡಲೇ ಸಂಗಾತಿ ಹಾಗು ಮರಿಗಳನ್ನು ತೊರೆದು ವಲಸೆ ಹೋಗಿಬಿಡುತ್ತವೆ ಆಗ ಮರಿಗಳನ್ನು ಸುರಕ್ಷತೆಯ ದೃಷ್ಟಿಯಿಂದ ಹಿಂಬಾಲಿಸಿ ಕಾಪಾಡುವುದು ತಂದೆ ಹಕ್ಕಿ ಮಾತ್ರವೇ. ತಂದೆ ಹಕ್ಕಿಯು ಕನಿಷ್ಠ ಇಪ್ಪತ್ತು ದಿನಗಳವರೆಗೂ ಹಿಂಬಾಲಿಸಿ ಮರಿ ಹಕ್ಕಿಗಳು ಹಾರಡಲಿಕ್ಕೆ ಸಿದ್ದವಾದದ್ದನ್ನು ಖಚಿತಪಡಿಸಿಕೊಂಡೆ ಅವುಗಳನ್ನು ಸ್ವತಂತ್ರವಾಗಿ ಬಿಟ್ಟು ತನ್ನ ಮುಂದಿನ ಸಂಗಾತಿ ಹುಡುಕಿಕೊಂಡು ವಲಸೆ ಮುಂದುವರೆಸುತ್ತವೆ. ಮರಿಗಳು ಕೂಡ ತಮ್ಮ ದಾರಿಯನ್ನು ಹುಡುಕಿಕೊಂಡು ಮಹಾಯಾನಕ್ಕೆ ಸಿದ್ದವಾಗುತ್ತವೆ.

ಜನ್ಮತಃ ಇವುಗಳು ತೀರದ ಹಕ್ಕಿಗಳಾದರಿಂದ ಇವುಗಳ ಸಂಚಾರ ಕರಾವಳಿಯ ಉದ್ದಕ್ಕೂ ಇದ್ದು ಸುಲಭಕ್ಕೆ ಮನುಷ್ಯನ ಬೇಟೆಗೆ ಸಿಕ್ಕುತ್ತಿವೆ ಹಾಗೆಯೇ ತಂದೆ ಹಕ್ಕಿಯ ಕಣ್ಗಾವಲು ಸ್ವಲ್ಪ ಆಚೆ ಈಚೆ ಯಾದರು ಸಹ ಪುಟ್ಟ ಮರಿಗಳು ಇತರೆ ಪರಭಕ್ಷಕಗಳಿಗೆ ಸಿಕ್ಕಿ ಆಹಾರವಾಗುವುದೇ ಹೆಚ್ಚು. ಅಂತಾರಾಷ್ಟ್ರೀಯ ಪರಿಸರ ಸಂರಕ್ಷಣೆ ಒಕ್ಕೂಟವು (ಐ ಯು ಸಿ ಎನ್) ಇವುಗಳನ್ನು ತೀವ್ರವಾಗಿ ಅಳಿವಿನಂಚಿನಲ್ಲಿರುವ ಹಕ್ಕಿಎಂದು ತನ್ನ ಕೆಂಪು ಪಟ್ಟಿಯಲ್ಲಿ ಸೇರಿಸಿದೆ.

ಕಳೆದ ವರ್ಷ 2022 ರಲ್ಲಿ ದಕ್ಷಿಣ ಭಾರತದ ತಮಿಳುನಾಡಿನ ತಿರುಪ್ಪುರ್ ನಲ್ಲಿರುವ ನಂಜರಾಯನ ಕೆರೆ ಪಕ್ಷಿಧಾಮದಲ್ಲಿ ಈ ಹಕ್ಕಿಯು ಕಾಣಿಸಿಕೊಂಡಿದ್ದು ಪ್ರಕೃತಿ ಪ್ರಿಯರ ಹಾಗು ಅನ್ವೇಷಕರ ಖುಷಿಗೆ ಕಾರಣವಾಗಿದೆ. ಇವು ಸಂಚಾರಿಸುವ ಎಷ್ಟೋ ದೇಶಗಳಲ್ಲಿ ಇವುಗಳ ಸಂರಕ್ಷಣೆ ಯೋಜನೆಗಳು ನಿರಂತರವಾಗಿ ನೆಡೆಯುತ್ತಲೇ ಇವೆ. ಇವುಗಳ ಸಂತತಿಯು ಹೆಚ್ಚಿ ನಮ್ಮ ನಾಡಿಗೆ ಅಥಿತಿಯಾಗಿ ಇನ್ನಷ್ಟು ಸಂಖ್ಯೆಯಲ್ಲಿ ಈ ಹಕ್ಕಿಗಳು ಬರಲಿ ಎಂದು ಹಾರೈಸೋಣ.

ಚಂದ್ರಶೇಖರ್ ಕುಲಗಾಣ

Related post

Leave a Reply

Your email address will not be published. Required fields are marked *