ಚಾಕೋಲೇಟ್ ರಾಜಧಾನಿ ವಜ್ರಭೂಮಿ – ಬೆಲ್ಜಿಯಂ

ಬೆಲ್ಜಿಯಂ ಯುರೋಪಿನಲ್ಲಿರುವ ಸಣ್ಣ ದೇಶ. ಕೇವಲ ಒಂದು ಕೋಟಿ ಜನಸಂಖ್ಯೆಯನ್ನು ಹೊಂದಿರುವ ಈ ದೇಶ ಕೇವಲ 20520 ಚದರ ಕಿಮೀ ಇದೆ. ಬಲಿಷ್ಟ ಯುರೋಪಿನ ರಾಷ್ಟ್ರಗಳ ದಾಳಿಗೆ ಆಗಾಗ ತುತ್ತಾಗುತ್ತಲೇ ಸ್ವತಂತ್ರ್ಯವಾದ ಈ ದೇಶದಲ್ಲಿ ಈಗಲೂ ರಾಜನೇ ಸಾರ್ವಭೌಮ. ಕೃಷಿ ಮತ್ತು ವಾಣಿಜ್ಯೋದ್ಯಮ ಎರಡರಲ್ಲೂ ಅಪಾರ ಬೆಳವಣಿಗೆ ಸಾಧಿಸಿರುವ ದೇಶ ಬೆಲ್ಜಿಯಂ . ‘ಬ್ರಸೆಲ್ಸ’ ಇದರ ರಾಜಧಾನಿಯಾಗಿದ್ದು ವಜ್ರದ ಅತಿದೊಡ್ಡ ವ್ಯಾಪರ ಕೇಂದ್ರವಾಗಿದೆ. ಯುರೋಪಿನ ಚಿಕ್ಕ ರಾಷ್ಟ್ರವಾಗಿರುವ ಬೆಲ್ಜಿಯಂನಲ್ಲಿ ಸಹ ಅನೇಕ ಪ್ರೇಕ್ಷಣೀಯ ಸ್ಥಳಗಳು ಹಾಗೂ ಅನೇಕ ಪುರಾತನ ಸ್ಮಾರಕಗಳಿದೆ. ನೀವು ಬ್ರಸೆಲ್ಸ್ ನಗರವನ್ನು ಪ್ರವೇಶಿಸುತ್ತಿದ್ದಂತೆ ನಿಮ್ಮನ್ನು “ಅಟೋಮಿಯಂ” ಎಂಬ ಸ್ಮಾರಕ ಸ್ವಾಗತಿಸುತ್ತದೆ, ಇಲ್ಲಿ ನೆಡದ ಜಾಗತಿಕ ವಾಣಿಜ್ಯಮೇಳದ ನೆನಪಿನಲ್ಲಿ “ಅಣುವಿನ” (ಅಟೊಮ್) ಬೃಹತ ಮಾದರಿ ಈಗ ಜನಾಕರ್ಷಣೆಯ ಕೇಂದ್ರಬಿಂದುವಾಗಿದೆ.

ಅಟೋಮಿಯಂ ಸ್ಮಾರಕ

1958 ರಲ್ಲಿ ನಿರ್ಮಾಣವಾದ ಇದು ಇಂದು ಬ್ರಸೆಲ್ಸನ ಪ್ರವಾಸಿಗರ ಅತ್ಯಂತ ಆಕರ್ಷಣೆಯ ಕೇಂದ್ರವಲ್ಲದೇ ಬ್ರಸೆಲ್ಸನ ಹೆಮ್ಮೆಯ ಗುರುತಾಗಿದೆ. ಒಂಭತ್ತು ಗೋಲಾಕಾರದ ರಚನೆಯ ಮೂಲಕ ಅಣುವಿನ ರಚನೆಯ ಮಾದರಿ ಇದಾಗಿದ್ದು ನೀಲಾಕಾಶದ ಹಿನ್ನಲೆಯಲ್ಲಿ ಇದನ್ನು ನೋಡುವುದೇ ಒಂದು ಆನಂದ. ಒಂಭತ್ತು ಗೋಲಗಳಲ್ಲಿ ಎಂಟು ಗೋಲಗಳನ್ನು ಒಂದೊಂದು ಅಂತಸ್ತಿಗೆ ಬರುವಂತೆ ಕಟ್ಟಲಾಗಿದೆ. 1958ರಲ್ಲಿ ಈ ಗೋಲಗಳಲ್ಲಿ ಅಂತಾರಾಷ್ಟ್ರೀಯ ವಸ್ತುಪ್ರದರ್ಶನವೂ ನೆಡೆದಿದೆ ಎಂದರೆ ಅದರ ಗಾತ್ರ ಎಷ್ಟಿರಬಹುದೆಂದು ನೀವೇ ಊಹಿಸಿಕೊಳ್ಳಿ. ಅತ್ಯಂತ ಮೇಲಿನ ಎಂಟನೇ ಅಂತಸ್ತಿನ ಗೋಲದಿಂದ ಬ್ರಸೆಲ್ಸ್ ನಗರದ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು. ಪ್ರತಿಯೊಂದು ಗೋಲಗಳು 92ಮೀಟರ್ ವ್ಯಾಸವಿದೆ. ಎಂಟನೆ ಅಂತಸ್ತಿನಲ್ಲಿರುವ ಗೋಲದಲ್ಲಿ ಹೋಟೆಲ್ ಕೂಡಾ ಇದ್ದು ರಾತ್ರಿ ಹನ್ನೊಂದು ಘಂಟೆಯವರೆಗೂ ತೆಗೆದಿರುತ್ತದೆ. ದಿನದ ವೇಳೆಯಲ್ಲಿ ಸೂರ್ಯನ ಕಿರಣಗಳಿಂದ ಪ್ರತಿಪಲನಗೊಳ್ಳುವ ಗೋಲಗಳು ರಾತ್ರಿಯಾಗುತ್ತಲೇ 2970 ಎಲ್‍ಇ.ಡಿ ದೀಪಗಳಿಂದ ಬೆಳಗುವುದನ್ನು ನೋಡುವುದಕ್ಕೆ ಎರಡು ಕಣ್ಣು ಸಾಲದು. ವಾತಾವರಣ ಸ್ವಚ್ಚವಾಗಿದ್ದರೆ ಮೇಲಿನ ಗೋಲದಿಂದ “ಅನ್ಟ್‍ವಾರ್ಪ್ ಕೆತೆಡ್ರಲ್” ಹಾಗೂ ಅಲ್ಲಿರುವ ಬಂದರನ್ನು ಕೂಡ ಇಲ್ಲಿಂದಲೇ ನೋಡಬಹುದು. ಈ ರಚನೆಯ ಮುಂದಿರುವ ಹಸಿರು ಹುಲ್ಲಿನ ರಾಶಿ, ಟ್ಯೂಲಿಪ್ ಮತ್ತಿತ್ತರ ಹೂವಿನ ಗಿಡಗಳು ಹಾಗೂ ಕಾರಂಜಿ ಇದರ ಸೌಂದರ್ಯವನ್ನು ಇನ್ನಷ್ಟು ಇಮ್ಮಡಿಗೊಳಿಸಿದೆ. ಮೇಲಿನ ಗೋಲಕ್ಕೆ ಹೋಗಬೇಕಿದ್ದರೆ ಸಂಜೆ 6:30 ರೊಳಗೆ ಹೋಗಬೇಕು. ಬ್ರಸೆಲ್ಸ ನ ಸೆಂಟ್ರಲ್ ಬಸ್ ನಿಲ್ದಾಣದಿಂದ ಇಲ್ಲಿಗೆ ಬಸ್ , ಮೆಟ್ರೋ ಹಾಗೂ ಟ್ರಾಮ್ಸ್‍ ನ ಸೌಲಭ್ಯವಿದೆ.

ಸಂತ ಮೈಕಲ್ ಹಾಗು ಸಂತ ಗುಡುಲಾ ರೋಮನ್ ಕ್ಯಾಥೋಲಿಕ್ ಚರ್ಚ್

ಅಟೋಮಿಯಂನಿಂದ ಮೆಟ್ರೋ ಹತ್ತಿ ಗೇರೆ ಸೆಂಟ್ರಲ್‍ಗೆ ಬಂದರೆ ನಿಮಗೆ ಭವ್ಯವಾದ ಪುರಾತನ ಸಂತ ಮೈಕಲ್ ಹಾಗು ಸಂತ ಗುಡುಲಾ ರೋಮನ್ ಕ್ಯಾಥೋಲಿಕ್ ಚರ್ಚ್‍ಗಳ ದರ್ಶನವಾಗುತ್ತದೆ. ಬ್ರಸೆಲ್ಸನ ಸಂತರಾಗಿದ್ದ ಮೈಕಲ್‍ ರ ಗೌರವಾರ್ಥವಾಗಿ ಈ ಚರ್ಚ್‍ಗೆ ಅವರ ಹೆಸರನ್ನೇ ಇಡಲಾಗಿದೆ. ಇದು ಬೆಲ್ಜಿಯಂನ ಅತ್ಯಂತ ಪ್ರಮುಖ ಚರ್ಚ್ ಆಗಿದ್ದು, ರಾಜಮನೆತನದ ಮದುವೆ, ನಾಮಕರಣ ಕೊನೆಗೆ ಸಂಸ್ಕಾರಗಳು ಕೂಡ ಇಲ್ಲಿ ನೆಡೆಯುತ್ತದೆ. 1047ರಲ್ಲಿ ನಿರ್ಮಾಣ ಮುಕ್ತಾಯವಾದ ಈ ಸುಂದರ ಚರ್ಚ್ 13ನೇ ಶತಮಾನದಲ್ಲಿ ಗೋಥಿಕ್ ಶೈಲಿಯಲ್ಲಿ ನವಿಕರಣಗೊಂಡಿತಲ್ಲದೆ ಎರಡು ಗೋಪುರ ಹಾಗೂ ಚರ್ಚನ ಒಳಬಾಗದಲ್ಲಿ ಗಾಯಕರು ಕುಳಿತುಕೊಳ್ಳಲು ಸುಂದರ ಬೀಟೆ ಮರದಲ್ಲಿ ಕಲಾತ್ಮಕ ಕೆತ್ತನೆಯ ಆಸನಗಳನ್ನು ನಿರ್ಮಿಸಲಾಗಿದೆ.

ಚರ್ಚ್ ನ ಒಳಾಂಗಣ

15 ನೆ ಶತಮಾನದಲ್ಲಿ ಚರ್ಚಿನ ಮುಂಭಾಗವನ್ನು ನವೀಕರಣಗೊಳಿಸಲಾಯಿತು. ಈ ಚರ್ಚಿನ ಪ್ರಮುಖ ಆಕರ್ಷಣೆ ಇಲ್ಲಿರುವ ಕಲಾತ್ಮಕ ರಂಗುರಂಗಿನ ಗಾಜಿನ ಕಿಟಕಿಗಳು. ಹಲವಾರು ಕಲಾಕಾರರು ಇದರ ನಿರ್ಮಾಣಕಾರ್ಯದಲ್ಲಿ ಪಾಲ್ಗೊಂಡಿದ್ದು ಅದರಲ್ಲಿ ಮುಖ್ಯವಾಗಿ 16ನೇ ಶತಮಾನದಲ್ಲಿದ್ದ ಕಲಾಕರ ಬರ್ನಾಡ್ ಒರ್ಲಿಯ ಕಲೆಯನ್ನು ಇಲ್ಲಿ ನೋಡಬಹುದು. ಇಲ್ಲಿರುವ ಗಾಜಿನ ನೆಲದ ಮೂಲಕ 11ನೇ ಶತಮಾನದಲ್ಲಿದ್ದ ಹಳೆಯ ಚರ್ಚಿನ ಅವಶೇಷಗಳನ್ನು ನೋಡಬಹುದು.ಓಕ್ ಮರದಿಂದ ತಯಾರಾದ ತಪ್ಪೋಪಿಗೆ ಅಥವಾ ಕ್ಷಮಾಯಾಚನೆಯ ಪೆಟ್ಟಿಗೆಗಳು ತನ್ನ ಕಲಾತ್ಮಕತೆಯಿಂದ ಮನಸೂರೆಗೊಳ್ಳುತ್ತದೆ. ಈ ಚರ್ಚಿನ ಸಂಪೂರ್ಣ ಕಟ್ಟಡದ ಕೆಲಸ ಮುಗಿಯಲು ಸುಮಾರು ಮುನ್ನೂರು ವರ್ಷಗಳೇ ಹಿಡಿದಿದೆ. ಈ ಚರ್ಚಿನ ಇನ್ನೊಂದು ಪ್ರಮುಖ ಆಕರ್ಷಣೆ ಧರ್ಮ ಗುರುಗಳು ಕುಳಿತು ಪ್ರವಚನ ನೀಡಲು ನಿರ್ಮಿಸಿರುವ ಬೀಟೆ ಮರದಿಂದ ತಯಾರಾಗಿರುವ ಕಲಾತ್ಮಕವಾದ ಅಟ್ಟಣಿಗೆ. ಇಷ್ಟೇ ಅಲ್ಲದೇ ಈ ಚರ್ಚಿನ ಗೋಪುರಗಳು ಗಿಡುಗಗಳಿಗೆ ಆಶ್ರಯತಾಣವಾಗಿದ್ದು ಅವುಗಳ ಸಂತತಿಯನ್ನು ಬೆಳೆಸಲು ಇಲ್ಲಿ ಚರ್ಚಿನ ಗೋಪುರಗಳಲ್ಲಿ ಗೂಡುಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆಯಲ್ಲದೆ ಅವುಗಳನ್ನು ಮೇಲೆ ಅಳವಡಿಸಿರುವ ಕ್ಯಾಮೆರಾದ ಮೂಲಕ ಪರದೆಯ ಮೇಲೆ ನೋಡಬಹುದು.

ಟೌನ್ ಹಾಲ್‍

ಸಂತ ಮೈಕಲ್ ಚರ್ಚ್ ನಿಂದ 0.7 ಕಿಲೋಮೀಟರ್ ನೆಡೆದರೆ ನೀವು ಟೌನ್ ಹಾಲ್‍ನ್ನು ತಲುಪುತ್ತೀರಿ. ಬ್ರಸೆಲ್ಸನಲ್ಲಿರುವ ಪುರಾತನ ಕಟ್ಟಡಗಳಿಗೆ ಇದು ರಾಜ ಎಂದರೆ ತಪ್ಪಾಗಲಾರದು. ಗೋಥಿಕ್ ಶೈಲಿಯಲ್ಲಿ ಕಟ್ಟಿರುವ ಇದು ತನ್ನ ಶೈಲಿಯಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. 1402 ರಲ್ಲಿ ನಿರ್ಮಾಣ ಕಾರ್ಯ ಆರಂಭವಾಗಿ ಮೊದಲ ಹಂತವನ್ನು ಜಾಕೋಬ್ ವ್ಯಾನ್ ಎಂಬ ವ್ಯಕ್ತಿ ನಿರ್ಮಾಣ ಮಾಡಿದನು. 1405 ರಲ್ಲಿ ಇದರ ನಿರ್ಮಾಣ ಕಾರ್ಯ ಮುಗಿಯಿತು. ಈ ಕಟ್ಟಡದ ಬಲಗಡೆ ಇನ್ನೊಂದು ಕಟ್ಟಡವನ್ನು ಕಟ್ಟಲಾಯಿತು ನೆಲಮಟ್ಟದಿಂದ 96 ಮೀಟರು ಎತ್ತರವಿರುವ ಇದರ ಮೇಲೆ 5ಮೀಟರ ಎತ್ತರದ ಚಿನ್ನದ ಲೇಪವಿರುವ ಸಂತ ಮೈಕಲ್ ಮೂರ್ತಿಯನ್ನು ನಿಲ್ಲಿಸಲಾಯಿತು.ಕಟ್ಟಡದ ಎದುರು ನಿಂತು ನೋಡಿದರೆ ಮಧ್ಯದಲ್ಲಿರುವ ಗೋಪುರ ಸರಿಯಾಗಿ ಮಧ್ಯದಲ್ಲಿರದೆ ಬಲಭಾಗವನ್ನು ಹೆಚ್ಚು ಅವರಿಸಿಕೊಂಡಿದೆ. ಇದು ಗೊತ್ತಾದ ನಂತರ ಈ ಕಟ್ಟಡ ನಿರ್ಮಾಣದ ಜವಾಬ್ಧಾರಿ ಹೊತ್ತಿದ್ದ ಶಿಲ್ಪಿ ಶಾಸ್ತ್ರಜ್ಞ ಈ ಕಟ್ಟಡದಿಂದಲೇ ಹಾರಿ ಅತ್ಮಹತ್ಯೆ ಮಾಡಿಕೊಂಡನಂತೆ!. 1965ರಲ್ಲಿ ಫ್ರೆಂಚ್ ಸೈನಿಕರು ಇದನ್ನು ಆಕ್ರಮಿಸಿದಾಗ ಇದರ ಒಳಭಾಗ ಸಂಪೂರ್ಣ ಸುಟ್ಟಿತ್ತಲ್ಲದೇ ಒಳಗಿದ್ದ ಶಿಲ್ಪಗಳು ಹಾಳಾಗಿದ್ದವು. ಈಗ ಆ ಶಿಲ್ಪಗಳನ್ನೆಲ್ಲಾ ರಾಯಲ್ ಪ್ಯಾಲೆಸಿನ ಮ್ಯೂಸಿಯಂನಲ್ಲಿ ಇಡಲಾಗಿದೆ. ಈ ಕಟ್ಟಡ ಇತಿಹಾಸದಲ್ಲಿ ಅನೇಕ ಆಗುಹೋಗುಗಳಿಗೆ ಸಾಕ್ಷಿಯಾಗಿ ನಿಂತಿದೆ. ಹಿಂದೆ ಕಟ್ಟಡಗಳಲ್ಲಿ ಪುರಸಭೆ ಕಾರ್ಯ ನಿರ್ವಹಿಸುತ್ತಿತ್ತು. 1830 ರಲ್ಲಿ ನೆಡೆದ ಫ್ರೆಂಚ್ ಕ್ರಾಂತಿಯಾದಾಗ ಇಲ್ಲಿ ಸಭೆ ಸೇರಿದ ಅಂದಿನ ಸರ್ಕಾರ ಉತ್ತರ ಹಾಗೂ ದಕ್ಷಿಣ ನೆದರ್ಲ್ಯಾಂಡ್ ಇಬ್ಭಾಗವಾಯಿತಲ್ಲದೇ ಇಂದಿನ ಬೆಲ್ಜಿಯಂ ಉದಯವಾಯಿತು.

ಬೆಲ್ಜಿಯಂ ನಲ್ಲಿ ಲೇಖಕರು

ಒಂದನೇ ಮಹಾಯುದ್ದದಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಈ ಕಟ್ಟಡ ಆಸ್ಪತ್ರೆಯ ರೂಪವನ್ನು ಸಹ ಪಡೆದಿತ್ತು. ಬ್ರಸೆಲ್ಸ್‍ ಗೆ ಬರುವ ಪ್ರವಾಸಿಗರು ಸಂಜೆಯಾಗುತ್ತಲೇ ಈ ಟೌನ್ ಹಾಲ್ ಇರುವ ಜಾಗಕ್ಕೆ ಬಂದು ಸೇರುತ್ತಾರೆ. ಇಂಗ್ಲೀಷಿನ “ಎಲ್” ಆಕಾರದಲ್ಲಿರುವ ಈ ಕಟ್ಟಡ ರಾತ್ರಿಹೊತ್ತು ದೀಪಾಲಂಕಾರದಿಂದ ಜಗಮಗಿಸುವುದನ್ನು ನೋಡುವುದಕ್ಕೆ ಎರಡು ಕಣ್ಣು ಸಾಲದು. ಸದಾ ಪ್ರವಾಸಿಗರಿಂದ ತುಂಬಿ ತುಳುಕುವ ಈ ಟೌನ್‍ಹಾಲ್ ಚೌಕ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಹಾಗಾಗಿಯೇ ಇಲ್ಲಿರುವ ಗಲ್ಲಿಗಲ್ಲಿಗಳಲ್ಲಿ ಹೋಟೆಲ್‍ಗಳು ಸಂಜೆಯಾಗುತ್ತಲೆ ಚುರುಕಾಗುತ್ತದೆ. ಇಲ್ಲಿ ಅನೇಕ ಭಾರತೀಯ ಹೋಟೆಲ್‍ಗಳು ಸಹ ಇದೆ.

ಟೌನ್ ಹಾಲ್‍ನಿಂದ 0.2ಕಿಮೀ ನೆಡೆದರೆ ಒಂದು ಸಣ್ಣವೃತ್ತವನ್ನು ತಲುಪುತ್ತೀರಿ. ಇಲ್ಲೇ ಇದೇ ಬೆಲ್ಜಿಯಂನ ಪ್ರಮುಖ ಆಕರ್ಷಣೆ, “ಮ್ಯಾನಿಕನ್ ಪಿಸ್” ಅಂದರೆ ಡಚ್ ಭಾಷೆಯಲ್ಲಿ ಮೂತ್ರ ವಿಸರ್ಜಿಸುತ್ತಿರುವ ಹುಡುಗ ಎಂದರ್ಥ. ಒಂದು ಚಿಕ್ಕ ಹುಡುಗ ಮೂತ್ರ ವಿಸರ್ಜನೆ ಮಾಡುತ್ತಿರುವ ಮೂರ್ತಿ.

ಮ್ಯಾನಿಕನ್ ಪಿಸ್

ಬೆಲ್ಜಿಯಂನ ಪ್ರವಾಸಿ ಸ್ಥಳಗಳ ಬಗ್ಗೆ ವಿವರ ಕಲೆಹಾಕುವಾಗ ಇದರ ಬಗ್ಗೆ ಒದಿದ್ದೆ. ಚಿತ್ರನೋಡಿ ಅಳೆತ್ತರದ ಮೂರ್ತಿ ಇರಬೇಕೆಂದುಕೊಂಡಿದ್ದೆ, ಅದರೆ ಆ ಜಾಗ ತಲುಪಿದ ಮೇಲೆ ನಿಜಕ್ಕೂ ನನಗೆ ಅಶ್ಚರ್ಯವಾಗಿತ್ತು! ಏಕೆಂದರೆ ಈ ಮೂರ್ತಿ ಇರುವುದೇ ಎರಡು ಅಡಿ. ವೃತ್ತದ ಒಂದು ಭಾಗದಲ್ಲಿ ಸದಾ ಮೂತ್ರ ಮಾಡುತ್ತ ನಿಂತಿರುವ ಎರಡು ಅಡಿ ಎತ್ತರದ ಕಂಚಿನ ಮೂರ್ತಿ ಇದು. ಕಾರಂಜಿಯ ಹಾಗೆ ಮುಂದಿನ ಕೊಳಕ್ಕೆ ನೀರು ಬೀಳುವಂತೆ ರಚಿಸಲಾಗಿದೆ. ಈ ಮೂರ್ತಿಯ ಹಿಂದೆ ಅನೇಕ ರೋಚಕ ಕಥೆಗಳಿದೆ. ಬ್ರಸೆಲ್ಸಗೆ ಪ್ರವಾಸಕ್ಕಾಗಿ ಬಂದ ದಂಪತಿ ತಮ್ಮ ಚಿಕ್ಕಮಗುವನ್ನು ಕಳೆದುಕೊಂಡಿದ್ದರಂತೆ. ಅವನನ್ನು ಹುಡುಕುತ್ತಾ ಬಂದಾಗ ಈ ಮೂರ್ತಿ ಇರುವ ಜಾಗದಲ್ಲಿ ಆ ಹುಡುಗ ಮೂತ್ರ ಮಾಡುತ್ತಾ ನಿಂತಿದ್ದನಂತೆ ಹಾಗಾಗಿ ಅವನ ಪ್ರತಿಮೆಯನ್ನು ಮಾಡಿಸಿ ನಗರಕ್ಕೆ ಕಾಣಿಕೆಯಾಗಿ ಕೊಟ್ಟರು ಎಂದು ಒಂದು ಕಥೆ ಹೇಳಿದರೆ, ‘ಜುಲಿಯನ್‍ಸ್ಕಿ’ ಎಂಬ ಹುಡುಗ ಯುದ್ದ ಸಮಯದಲ್ಲಿ ಜೀವಂತ ಸ್ಪೋಟಕವನ್ನು ಅರಿಸಲು ಅದರ ಮೇಲೆ ಮೂತ್ರಮಾಡಿ ಅನೇಕರ ಜೀವ ಉಳಿಸಿದ್ದನೆಂದು ಪ್ರತೀತಿ. 17 ನೇ ಶತಮಾನದಲ್ಲಿ ನಿರ್ಮಾಣವಾದ ಈ ಮೂರ್ತಿಯನ್ನು 1745 ರಲ್ಲಿ ಇಂಗ್ಲೀಷರು ಕದ್ದೊಯ್ದಿದ್ದರೆ 1817ರಲ್ಲಿ ಫ್ರೆಂಚರು ಎತ್ತಿಕೊಂಡು ಹೋಗಿದ್ದರು. ಈ ಚಿಕ್ಕ ಮೂರ್ತಿಗೆ ವಾರ್ಡ್ ರೋಬ್ ತುಂಬಾ ಆಕರ್ಷಕ ಬಟ್ಟೆಗಳಿದೆ ಎಂದರೆ ನೀವು ಚಕಿತರಾಗಬಹುದು. ಕೆಲವೊಂದು ರಾಷ್ಟ್ರೀಯ ಹಬ್ಬ ಮುಂತಾದ ಸಂಧರ್ಬದಲ್ಲಿ ಈ ಹುಡುಗನಿಗೆ ಬಟ್ಟೆಗಳನ್ನು ಹಾಕಿ ಸಿಂಗರಿಸಿರುತ್ತಾರೆ. ಅವೆಲ್ಲಾ ಬಟ್ಟೆಗಳನ್ನು ಅಗಾಗ ಪ್ರದರ್ಶನಕ್ಕಿಡುತ್ತಾರೆ. ಈ ಮೂತ್ರ ವಿಸರ್ಜಿಸುತ್ತಿರುವ ಹುಡುಗನ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ಈ ಮೂರ್ತಿಯ ಹೆಸರಿನಲ್ಲಿ ನೆದರ್ಲ್ಯಾಂಡ್ ಪ್ರಸಿದ್ದ ಫಿಂಗರ್ ಚಿಪ್ಸ ಕೂಡ ಇದೆ!

ಇಲ್ಲಿಂದ ಒಂದು ಕಿಮೀ ನೆಡೆದರೆ ನೀವು ಭವ್ಯ ಬೆಲ್ಜಿಯಂ ರಾಯಲ್ ಅರಮನೆಯ ಮುಂದೆ ಇರುತ್ತೀರಿ. ರಾಜಮನೆತನ ವಾಸವಿದ್ದ ಈ ಅರಮನೆ ಈಗ ರಾಜಕೀಯ ಕಾರ್ಯಗಳಿಗೋಸ್ಕರ ಉಪಯೋಗಿಸಲಾಗುತ್ತದೆಯಲ್ಲದೇ ರಾಜ ರಾಣಿಯರ ಕಛೇರಿಗಳು, ರಾಜನ ಸೈನ್ಯದ ಕಛೇರಿ, ಮಂತ್ರಿ ಮಂಡಲದ ಕಛೇರಿಗಳು ಇಲ್ಲೇ ಕಾರ್ಯನಿರ್ವಹಿಸುತ್ತದೆ. ಈ ಅರಮನೆ ಜುಲೈನಿಂದ ಸೆಪ್ಟೆಂಬರ್ ನಲ್ಲಿ ಮಾತ್ರ ಬೆಳಗ್ಗೆ 10:30 ರಿಂದ 4:30 ರವರೆಗೆ ಮಾತ್ರ ಸಾರ್ವಜನಿಕರ ವಿಕ್ಷಣೆಗೆ ಮುಕ್ತವಾಗಿರುತ್ತದೆ. ನಾವು ಹೋಗಿದ್ದು ಏಪ್ರಿಲ್‍ ನಲ್ಲಾದ್ದರಿಂದ ನಮಗೆ ಒಳಗೆ ನೋಡುವ ಅವಕಾಶ ಸಿಗಲಿಲ್ಲ. ಈ ಅರಮನೆಯ ಎದುರುಗಡೆ ರಾಜಮನೆತನದ ಸುಂದರ ಉದ್ಯಾನವನವಿದೆ. ಅದರ ಎದುರಿಗೆ ಪಾರ್ಲಿಮೆಂಟ್ ಭವನವಿದೆ. ಜಾನ್ ಎಂಬ ಶಿಲ್ಪಶಾಸ್ತ್ರಜ್ಞನ ಕೈಚಳಕದಿಂದ ಮೂಡಿಬಂದಿರುವ ಈ ಅರಮನೆ 18ನೇ ಶತಮಾನದಲ್ಲಿ ನಿರ್ಮಾಣವಾಗಿದೆ. ಈಗಿರುವ ರಾಜರಾಣಿ ಬ್ರಸೆಲ್ಸ್ ನಗರದ ಹೊರವಲಯದಲ್ಲಿರುವ “ಲೆಕೆನ್” ಎಂಬ ರಾಜಮನೆತನದ ಅರಮನೆಯಲ್ಲಿ ವಾಸಿಸುತ್ತಿದ್ದಾರೆ. ಅರಮನೆಯ ಮುಂದಿನ ಹಸಿರು ಹುಲ್ಲಿನ ರಾಶಿ ಅರಮನೆಗೆ ಇನ್ನಷ್ಟು ಮೆರಗನ್ನು ತಂದುಕೊಟ್ಟಿದೆ.

ಬೆಲ್ಜಿಯಂ ಅನೇಕ ವಿಷಯಗಳಿಗಾಗಿ ಪ್ರಸಿದ್ದಿ. ಇದನ್ನು ಪ್ರಪಂಚದ ಚಾಕೋಲೇಟ್ ರಾಜಧಾನಿ ಎಂದೇ ಕರೆಯುತ್ತಾರೆ. ಇಲ್ಲಿನ ಮನೆಗಳಲ್ಲಿ ತಯಾರಾಗುವ ಹೋಮ್ ಮೇಡ್ ಚಾಕೋಲೇಟ್ ಗಳನ್ನು ರುಚಿ ನೋಡದೆ ಬಂದರೆ ಬೆಲ್ಜಿಯಂಗೆ ಹೋಗಿಬಂದದ್ದು ನಿರರ್ತಕ. ಚಾಕೋಲೇಟ್ ತಯಾರಿಕೆಗಾಗಿಯೇ ಇಲ್ಲೊಂದು ಚಾಕೋಲೇಟ್ ವಿಲೇಜ್ ಇದೆ. ಗಲ್ಲಿಗಲ್ಲಿ ಗಳಲ್ಲಿ ಚಾಕೋಲೇಟ್ ಮಾರುವ ಅಂಗಡಿಗಳಿದೆ. ಇಲ್ಲಿಗೆ ಬರುವ ಪ್ರವಾಸಿಗರು ಮರೆಯದೇ ಮನೆಗೆ ಚಾಕೋಲೇಟ್ ತೆಗೆದುಕೊಂಡು ಹೊಗುತ್ತಾರೆ. ಇದಲ್ಲದೇ ಚಾಕೋಲೇಟ್ ವ್ಯಾಫೆಲ್ಸ್ ಕೂಡ ಇಲ್ಲಿ ಪ್ರಸಿದ್ದಿ ಹಾಗೂ ತಿನ್ನಲು ರುಚಿಕರ. ಪ್ರಪಂಚದಲ್ಲಿ ಅತ್ಯಧಿಕ ಚಾಕೋಲೇಟ್ ಗಳು ಬೆಲ್ಜಿಯಂನ ಏರ್ ಪೋರ್ಟ್ ಗಳಲ್ಲಿ ಮಾರಾಟವಾಗುತ್ತದೆ.

ಬೆಲ್ಜಿಯಂ ಚಾಕೋಲೇಟ್

ಚಾಕೋಲೇಟ್ ಅಲ್ಲದೇ ಪ್ರಪಂಚದ ವಜ್ರದ ರಾಜಧಾನಿಯೆಂದು ಬೆಲ್ಜಿಯಂನ್ನು ಕರೆಯುತ್ತಾರೆ. ಪ್ರಪಂಚದ ಶೇಕಡಾ 90ರಷ್ಟು ಕಚ್ಚಾ ವಜ್ರ ಇಲ್ಲಿಂದಲೇ ಹೊರಬರುತ್ತದೆ.

ಅಟೋಮಿಯಂನಿಂದ ಸ್ವಲ್ಪ ಮುಂದೆ ಬಂದರೆ ನಿಮಗೆ “ಮಿನಿ ಯುರೋಪ್” ದರ್ಶನವಾಗುತ್ತದೆ. ಇಲ್ಲಿ ಯುರೋಪಿನ 80 ನಗರಗಳ ಸುಮಾರು 350ಕ್ಕೂ ಅಧಿಕ ಪ್ರಸಿದ್ದ ಸ್ಥಳಗಳ ಪ್ರತಿಕೃತಿಯ ಮಾದರಿಗಳನ್ನು ನೋಡಬಹುದು. ಇಲ್ಲಿರುವ ಒಂದೊಂದು ಪ್ರತಿಕೃತಿಗಳು ಕೋಟ್ಯಾಂತರ ರೂಪಾಯಿ ಬೆಲೆ ಬಾಳುತ್ತದೆ. ಆರು ಎಕರೆ ಜಾಗದಲ್ಲಿ ಅವರಿಸಿರುವ ಈ ಮಿನಿ ಯೂರೋಪನ್ನು ಒಂದು ಸುತ್ತು ಹಾಕಿದರೆ ಯುರೋಪಿನ ಎಲ್ಲಾ ಪ್ರಸಿದ್ದ ಸ್ಥಳಗಳನ್ನು ನೋಡಿದಂತಾಗುತ್ತದೆ. ಇಲ್ಲಿರುವ ಐಫೆಲ್ ಟವರ್, ಪೀಸಾಗೋಪುರ ಮುಂತಾದ ಮಾದರಿಗಳು ಎಲ್ಲರನ್ನು ಆಕರ್ಷಿಸುತ್ತದೆ. ಇಡಿ ಯುರೋಪನ್ನು ಒಂದೆ ಜಾಗದಲ್ಲಿ ಕಣ್ತುಂಬಿಕೊಳ್ಳಬೇಕೆಂದರೆ ಮಿನಿಯುರೋಪಿಗೆ ಭೇಟಿ ಕೊಡಬೇಕು.

ಪ್ರಕಾಶ್.ಕೆ.ನಾಡಿಗ್

Related post

Leave a Reply

Your email address will not be published. Required fields are marked *