ಮಕ್ಕಳಿಗೊಂದು ನೀತಿ ಕಥೆ…
ಹಿಂದೆ ಕಾಶಿಯಲ್ಲಿ ಒಬ್ಬ ರಾಜ ಇದ್ದನಂತೆ, ಅವನಿಗೆ ಅನಾರೋಗ್ಯ ಬಂದು ಇದ್ದಕ್ಕಿದ್ದಂತೆ ಒಂದು ದಿನ ಅಕಾಲ ಮರಣಕ್ಕಿಡಾದ, ಅವನಿಗೆ ಮಕ್ಕಳಿರಲಿಲ್ಲ. ಹಿಂದೆಲ್ಲಾ ರಾಜ್ಯವಾಳುವ ರಾಜ ಹೀಗೆ ಅಕಾಲ ಮರಣಕ್ಕಿಡಾದರೆ ಮಂತ್ರಿಗಳು ಆನೆಯ ಸೊಂಡಿಲಲ್ಲಿ ಒಂದು ಹಾರ ಕೊಡುತ್ತಿದ್ದರು. ಆದು ಯಾರ ಕೊರಳಿಗೆ ಹಾರ ಹಾಕುತ್ತದೋ, ಅವನನ್ನು ಆ ರಾಜ್ಯದ ರಾಜ ಮಾಡುತ್ತಿದ್ದರು. ಆದರೆ ಮಂತ್ರಿಗಳಿಗೆ ಇದು ಯಾಕೋ ಸರಿ ಕಾಣಲಿಲ್ಲ. ಮಂತ್ರಿಗಳೆಲ್ಲ ಯೋಚನೆ ಮಾಡಿ ಒಂದು ಬೇರೆಯ ಉಪಾಯ ಮಾಡಿದರು.
ಊರಿನ ಮಧ್ಯದಲ್ಲಿದ್ದ ದೇವಸ್ಥಾನದಲ್ಲಿ ಒಂದು ಘಂಟೆ ಕಟ್ಟುವುದು, ಯಾರಿಗೆ ತಾನು ರಾಜ್ಯವನ್ನು ಆಳಬಲ್ಲೇ ಅಂತ ಅನ್ನಿಸುತ್ತದೆಯೋ ಅವರು ಹೋಗಿ ಘಂಟೆ ಬಾರಿಸಬಹುದು. ಹೀಗೆ ಘಂಟೆ ಬಾರಿಸಿದವನನ್ನು ಆ ರಾಜ್ಯದ ರಾಜನನ್ನಾಗಿ ಮಾಡುವುದೆಂದು ತೀರ್ಮಾನಿಸಿದರು. ಆದರೆ ರಾಜನಾಗುವುದಕ್ಕೆ ಒಂದು ಕರಾರು ಇತ್ತು, ಅದೇನೆಂದರೆ ಹೀಗೆ ರಾಜನಾದವನು ಖಾಯಂ ರಾಜನಾಗಿರುತ್ತಿರಲಿಲ್ಲ. ಅವನ ಅವಧಿ ಎರಡು ವರ್ಷಗಳು ಮಾತ್ರ. ಎರಡು ವರ್ಷ ಮುಗಿದ ನಂತರ ಅವನನ್ನು ದೋಣಿಯಲ್ಲಿ ಕೂರಿಸಿಕೊಂಡು ರಾಜ್ಯದ ಪಕ್ಕ ಗಂಗಾನದಿ ಹರಿಯುತ್ತಿತ್ತಲ್ಲ, ಗಂಗಾ ನದಿಯ ಆ ಕಡೆ ದಟ್ಟ ಕಾಡು. ಅಲಿ ಎಲ್ಲಾ ಬಗೆಯ ಬೀಕರ ಪಶು ಪ್ರಾಣಿಗಳಿದ್ದವು. ಅಲ್ಲಿ ಎರಡು ವರ್ಷ ಪೂರೈಸಿದ ರಾಜನನ್ನು ಬಿಟ್ಟು ಬರುವುದು ಎಂದಿತ್ತು. ಘಂಟೆ ಬಾರಿಸಿ ಈ ಕರಾರಿಗೆ ಒಪ್ಪಿದವರನ್ನು ರಾಜ್ಯದ ರಾಜನನ್ನಾಗಿ ಮಾಡುತ್ತಿದ್ದರು.
ಮೊದಮೊದಲೆಲ್ಲಾ ಉತ್ಸಾಹದಿಂದ ರಾಜನಾಗಲು ಬಹಳ ಜನ ಮುಂದೆ ಬಂದರು, ಎರಡು ವರ್ಷ ರಾಜಯೋಗ ಅನುಭವಿಸಬಹುದಲ್ಲಾ ಅಂತಾ, ಅದರೆ ಆರು ತಿಂಗಳು ಕಳೆಯುತ್ತಿದ್ದಂತೆ ಅವರಿಗೆ ಕಾಡಿಗೆ ಹೋಗಬೇಕಲ್ಲಾ ಎಂಬ ಭಯ ಕಾಡಲಾರಂಭಿಸಿತು. ಅಯ್ಯೋ ಅನ್ಯಾಯವಾಗಿ ಪ್ರಾಣಿಗಳ ಬಾಯಿಗೆ ತುತ್ತಾಗಬೇಕಲ್ಲಾ ಎಂದು ಭಯದಿಂದ ಓಡಲಾರಂಭಿಸಿದರು. ಆದರೆ ಸೈನಿಕರು ಬಿಡುತ್ತಾರೆಯೇ? ಅರಮನೆಯಿಂದ ರಾಜ ಓಡಿ ಹೋಗದಂತೆ ಪಹರೆ ಕಾಯುತ್ತಿದ್ದರು. ಆದರೆ ಜನರಿಗೆ ರಾಜನಾಗಲು ಭಯ ಪ್ರಾರಂಭವಾಯಿತು. ಏಕೆಂದರೆ ಹೊರಗೆ ಇದ್ದರೆ ಒಂದಿಪ್ಪತ್ತು ವರ್ಷವಾದರೂ ಬದುಕಿರುತ್ತೇವೆ, ಅದರೆ ರಾಜನಾಗುವ ಆಸೆಯಿಂದ ಹೋದ್ರೆ ಎರಡು ವರ್ಷ ಆದಮೇಲೆ ಖಂಡಿತಾ ಸಾಯುವುದು ಗ್ಯಾರಂಟಿ ಅಂತ ಯಾರು ಘಂಟೆ ಬಾರಿಸಲು ಮುಂದೆ ಬರಲಿಲ್ಲ. ಇದರಿಂದ ಮಂತ್ರಿಮಂಡಲ ಯೋಚನೆಗಿಟ್ಟುಕೊಂಡಿತು, ರಾಜನಿಗೆ ಮಕ್ಕಳು ಇಲ್ಲ, ಹೀಗಾದರೆ ನಮ್ಮ ರಾಜ್ಯದ ಗತಿಯೇನು? ಎಂದು ಯೋಚಿಸುತ್ತಿರುವಾಗಲೇ ದೇವಸ್ಥಾನದಲ್ಲಿ ಕಟ್ಟಿದ್ದ ಘಂಟೆಯ ಸದ್ದಾಯಿತು. ಮಂತ್ರಿಗಳಿಗೆಲ್ಲಾ ಖುಷಿಯಾಯಿತು, ಸದ್ಯ ರಾಜನಾಗುವ ಆಸೆಯಿಂದ ಮತ್ತೊಬ್ಬ ಬಂದನಲ್ಲಾ ಎಂದು ಎಲ್ಲರೂ ಅಲ್ಲಿ ಹೋಗಿ ನೋಡಿದರೆ, ಘಂಟೆ ಬಾರಿಸಿದ್ದು ಯಾರು? ಅದು ಒಬ್ಬ ಭಿಕ್ಷುಕ, ಇವನನ್ನು ನೋಡಿ ಮುಖ್ಯ ಮಂತ್ರಿ ಯಾಕಯ್ಯ ಘಂಟೆ ಬಾರಿಸಿದ್ದು ಎಂದರು. ಅದಕ್ಕೆ ಭಿಕ್ಷುಕ ನಾನು ರಾಜ ಅಗ್ಬೇಕು ಅಂದ. ಅದಕ್ಕೆ ಮಂತ್ರಿ ರಾಜ ಆದ್ರೆ ನಿನಗೆ ಎರಡು ವರ್ಷ ಆದಮೇಲೆ ಏನಾಗತ್ತೆ ಗೊತ್ತಾ? ಅಂದ್ರು. ಗೊತ್ತು, ಎರಡು ವರ್ಷ ಆದಮೇಲೆ ನನ್ನನ್ನು ಗಂಗಾ ನದಿ ದಾಟಿಸಿ ಕಾಡಿಗೆ ಕರೆದು ಕೊಂಡು ಹೋಗಿ ಬಿಡುತ್ತೀರಿ, ನಾನು ಪ್ರಾಣಿಗಳ ಬಾಯಿಗೆ ಸಿಕ್ಕು ಸಾಯುವೆ ಅಷ್ಟೇ ತಾನೆ? ಎಂದ, ಆದರೆ ಕರಾರಿನ ಪ್ರಕಾರ ಘಂಟೆ ಬಾರಿಸಿದವನನ್ನು ರಾಜನನ್ನಾಗಿ ಮಾಡಲೇ ಬೇಕು. ಮಂತ್ರಿಗಳು ಭಿಕ್ಷುಕನನ್ನು ಕರೆದುಕೊಂಡು ಹೋಗಿ ರಾಜನ ಪಟ್ಟ ಕಟ್ಟಿದರು.
ಇವನನ್ನು ರಾಜನನ್ನಾಗಿ ಪಟ್ಟ ಕಟ್ಟಿದ ಮೇಲೆ ಮಂತ್ರಿಗಳು ಗಮನಿಸಿದರು, ಆ ಭಿಕ್ಷುಕ ಎಷ್ಟು ಚೆನ್ನಾಗಿ ರಾಜ್ಯಭಾರ ಮಾಡುತ್ತಿದ್ದ ಎಂದರೆ ಇವನೇ ಖಾಯಂ ಆಗಿ ರಾಜನಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಆದರೆ ಅದು ಸಾಧ್ಯವಿರಲಿಲ್ಲ. ಮಂತ್ರಿಗಳು ಮಾಡಿದ ಸಂವಿಧಾನವೇ ಹಾಗಿತ್ತಲ್ಲವೇ? ಹಾಗೂ ಹೀಗೂ ಒಂದು ವರ್ಷ ಕಳೆದು ಹೋಯಿತು. ಮಂತ್ರಿಗಳು ರಾಜನ ಬಳಿ ಹೋಗಿ ‘ಸ್ವಾಮಿ ಇನ್ನು ಒಂದು ವರ್ಷ ಮಾತ್ರ ಉಳಿದಿದೆ ಎಂದರು’. ಹೀಗೆ ದಿನಗಳುರಿಳಿದವು, ಆರು ತಿಂಗಳು, ಮೂರು ತಿಂಗಳು, ಇನ್ನು ಹದಿನೈದು ದಿನ ಉಳಿದಿತ್ತು. ಸ್ವಾಮಿ ಹದಿನೈದು ದಿವಸಕ್ಕೆ ನಿಮ್ಮ ರಾಜ್ಯಭಾರದ ಅದಿಕಾರವಧಿ ಮುಗಿಯುತ್ತೆ, ನೀವು ಕಾಡಿಗೆ ಹೋಗಲು ತಯಾರಿರಬೇಕು ಎಂದರು. ಅದಕ್ಕೆ ಭಿಕ್ಷುಕ ಮುಗುಳ್ನಗುತ್ತಾ ಆಯಿತು ನಾನು ತಯಾರಿದ್ದೇನೆ ಎಂದ. ಮಂತ್ರಿಗಳಿಗೆ ಬೇಜಾರಾಯಿತು. ಎಷ್ಟು ಒಳ್ಳೆ ರಾಜನನ್ನು ಕರೆದು ಕೊಂಡು ಹೋಗಿ ಕಾಡಿಗೆ ಬಿಡಬೇಕಲ್ಲ ಎಂದು. ಆದರೆ ಕರಾರು ಹಾಗೆಯೇ ಇತ್ತಲ್ಲವೇ? ಎರಡು ವರ್ಷ ಪೂರೈಸಲು ಇನ್ನು ಒಂದು ದಿನ ಇದ್ದಾಗ ಮಂತ್ರಿ ಬಂದು ಸ್ವಾಮಿ ನಾಳೆ ನಿಮ್ಮ ಅಧಿಕಾರವದಿ ಮುಗಿಯುತ್ತದೆ. ನಾವು ಸೂರ್ಯೋದಯವಾಗುತ್ತಲೇ ಬರುತ್ತೇವೆ, ನೀವು ಕಾಡಿಗೆ ಹೋಗಲು ತಯಾರಾಗಿರಿ ಎಂದರು.
ಮರುದಿನ ಮಂತ್ರಿಗಳು ಬರುವ ವೇಳೆಗಾಗಲೇ ಇವನು ತಯಾರಾಗಿ ಕುಳಿತಿದ್ದ. ಮುಖದಲ್ಲಿ ಭಯವಾಗಲಿ ಆತಂಕವಾಗಲಿ ಇಲ್ಲ. ಮಂತ್ರಿಗಳಿಗೆ ಒಂದು ರೀತಿಯ ಆತಂಕ, ಪಾಪ ಇಷ್ಟು ಚೆನ್ನಾಗಿ ರಾಜ್ಯಭಾರ ಮಾಡಿದವನನ್ನು ಕಾಡು ಪ್ರಾಣಿಗಳ ಬಾಯಿಗೆ ಬಿಡಬೇಕಲ್ಲಾ ಎಂದು. ರಾಜನನ್ನು ದೋಣಿಯಲ್ಲಿ ಕೂರಿಸಿಕೊಂಡು ಹೊರಟರು.
ದೊಡ್ಡ ನದಿ, ನಾವೆ ನಿಧಾನವಾಗಿ ಸಾಗುತ್ತಿತ್ತು. ಮಂತ್ರಿ ರಾಜನ ಮುಖ ನೋಡುತ್ತಾನೆ, ಭಿಕ್ಷುಕ ರಾಜ ನಿರಾತಂಕವಾಗಿ ಕುಳಿತಿದ್ದಾನೆ. ಮಂತ್ರಿಗಳು ಅವನಿಗೆ ಕೇಳಿದರು, ತುಂಬಾ ಒಳ್ಳೆ ಮನುಷ್ಯ ನೀವು, ಅನ್ಯಾಯವಾಗಿ ಕಾಡು ಪ್ರಾಣಿಗಳ ಬಾಯಿಗೆ ಆಹಾರವಾಗಿ ಸತ್ತು ಹೋಗುತ್ತಿರಿ, ಭಯವಾಗುತ್ತಿಲ್ಲವೇ? ಎಂದರು. ಅದಕ್ಕೆ ಭಿಕ್ಷುಕ ಮುಗುಳ್ನಗುತ್ತಾ, ಭಯವೇ? ಕಾಡಿದ್ದರೆ ತಾನೇ ಭಯ, ತಿರುಗಿ ನೋಡಿ ಎಂದ. ಮಂತ್ರಿಗಳೆಲ್ಲರೂ ತಿರುಗಿ ನೋಡುತ್ತಾರೆ. ಕಾಡೆಲ್ಲಿದೆ? ಕಾಡಿದ್ದ ಕಡೆ ಭವ್ಯವಾದ ಅರಮನೆ ತಲೆ ಎತ್ತಿ ನಿಂತಿದೆ. ಅಲ್ಲಿ ಒಂದು ಪಟ್ಟಣ ಕಾಣಿಸುತ್ತಾ ಇದೆ, ಜನ ಒಡಾಡುತ್ತಿದ್ದಾರೆ. ದೊಡ್ಡ ದೊಡ್ಡ ಮನೆಗಳು ಕಾಣಿಸ್ತಾ ಇವೆ . ಆಶ್ಚರ್ಯ ಆಯಿತು ಅವರಿಗೆ, ಕಾಡು ಎನಾಯಿತು ? ಎಂದು ಕೇಳಿದರು. ಅದಕ್ಕೆ ಭಿಕ್ಷುಕ ಹೇಳಿದ. ನಾನು ರಾಜನಾದ ದಿನವೇ ಮುಂದೆ ಈ ದಿನ ಬಂದೆ ಬರುತ್ತೆ ಅಂತ ನನಗೆ ಗೊತ್ತಿತ್ತು. ಅದಕ್ಕೆ ರಾಜ್ಯಭಾರ ವಹಿಸಿಕೊಂಡ ಮರುದಿನದಿಂದಲೇ ನಾನು ಕಾರ್ಯ ಪ್ರವೃತ್ತನಾದೆ. ಬೇಟೆಗಾರರನ್ನು ಕಳಿಸಿ ಕಾಡು ಪ್ರಾಣಿಗಳನ್ನೇಲ್ಲ ಹಿಡಿಸಿ ಬೇರೆ ಕಡೆ ಬಿಡಿಸಿದೆ. ತಂತ್ರಜ್ಞರನ್ನೆಲ್ಲಾ ಕರೆಸಿ ಇಲ್ಲೊಂದು ಪಟ್ಟಣ ನಿರ್ಮಿಸಿದೆ. ಇದು ಕಾಶಿಯ ಉತ್ತರಕ್ಕೆ ಇರುವುದರಿಂದ ಉತ್ತರ ಕಾಶಿ ಎಂದು ನಾಮಕರಣ ಮಾಡಿದ್ದೇನೆ. ಅರಮನೆನೂ ಕಟ್ಟಿಸಿದ್ದೇನೆ. ಮಂತ್ರಿ ಮಾಂಡವರನ್ನು ಕೂಡ ನೇಮಕ ಮಾಡಿದ್ದೇನೆ. ನಾವು ದಡಕ್ಕೆ ಹೋಗುವ ಹೊತ್ತಿಗೆ ಅವರೆಲ್ಲರೂ ನನ್ನ ಸ್ವಾಗತಕ್ಕೆ ಬರುತ್ತಾರೆ. ಬಂದು ನನಗೆ ಕೀರಿಟವನ್ನು ಹಾಕುತ್ತಾರೆ. ನಾನೇ ಉತ್ತರ ಕಾಶಿಯ ಖಾಯಂ ರಾಜನಾಗಿರುತ್ತೇನೆ ಎಂದ. ಹಾಗಾದರೆ ನಮ್ಮ ಗತಿ ಏನು ಎಂದರು. ಮಂತ್ರಿಗಳು. ನೀವು ಒಪ್ಪುವುದಾದರೇ ಕಾಶಿ, ಉತ್ತರ ಕಾಶಿ ಎರಡು ರಾಜ್ಯವನ್ನು ನಾನೇ ನೋಡಿಕೊಳ್ಳುತ್ತೇನೆ. ಎಂದನು. ಇದಕ್ಕೆ ಮಂತ್ರಿಗಳು ಒಪ್ಪಿದರು. ದೋಣಿ ದಡಕ್ಕೆ ಹೋಗುತ್ತಲೇ ಮಂತ್ರಿಗಳು ಬಂದು ಇವನನ್ನು ಸ್ವಾಗತಿಸಿ, ಮಂತ್ರ ಘೋಷದೊಂದಿಗೆ ಕೀರಿಟವನ್ನು ಹಾಕಿ ಸಿಂಹಾಸನದ ಮೇಲೆ ಕೂರಿಸಿದರು. ನಂತರ ಇವನು ಕಾಶಿ ಮತ್ತು ಉತ್ತರ ಕಾಶಿಯನ್ನು ಬಹಳ ವರ್ಷಗಳ ವರೆಗೆ ರಾಜ್ಯಭಾರ ಮಾಡಿದನೆಂದು ಪ್ರತೀತಿ.
ಮಕ್ಕಳೇ ಈ ಕಥೆಯಲ್ಲಿ ನೀತಿಯೂ ಅಡಗಿದೆ, ಭಿಕ್ಷುಕ ತನಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡದ್ದರಿಂದ, ಎರಡು ವರ್ಷ ಕಷ್ಟ ಪಟ್ಟು ತನ್ನ ಮುಂದಿನ ಜೀವನವನ್ನು ರೂಪಿಸಿಕೊಂಡು ಜೀವನ ಪರ್ಯಂತ ಸುಖವಾಗಿ ಬದುಕಿದ, ಹಾಗೆಯೇ ವಿದ್ಯಾರ್ಥಿಗಳು ಕೂಡಾ ಓದುವ ಸಮಯದಲ್ಲಿ ಚೆನ್ನಾಗಿ ಓದಿದರೆ ಮುಂದೆ ಒಳ್ಳೆ ಉದ್ಯೋಗ ಸಿಕ್ಕು ಜೀವನದಲ್ಲಿ ಯಶಸ್ಸನ್ನು ಕಾಣಬಹುದು ಎಂಬುದೇ ಈ ಕಥೆಯಿಂದ ತಿಳಿಯುವ ನೀತಿ.
(ಹಿರಿಯರು ಹೇಳಿದ ಕಥೆ)
ಡಾ.ಪ್ರಕಾಶ್.ಕೆ.ನಾಡಿಗ್
ತುಮಕೂರು