ಚಾರಣಿಗರಿಗೆ ಸವಾಲು ಈ ಕುಮಾರ ಪರ್ವತ

ಚಾರಣಿಗರಿಗೆ ಸವಾಲು ಈ ಕುಮಾರ ಪರ್ವತ

ಕುಮಾರ ಪರ್ವತ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ..? ಹೌದು ಇಲ್ಲಿ ಹೇಳ ಹೊರಟಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರಗಳಲ್ಲೊಂದಾದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಅತ್ಯಂತ ಸಮೀಪವಿರುವ (ದೇವಾಲಯದ ಮುಖ್ಯ ಗೋಪುರ ಮುಂಭಾಗದಲ್ಲಿ ನಿಂತಾಗ ದೂರದಲ್ಲಿ ಕಾಣಿಸುವ ಬೆಟ್ಟ) ಪರ್ವತದ ಕುರಿತು. ಇದು ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಸುಮಾರು 280 ಕಿ.ಮೀ. ದೂರದಲ್ಲಿದೆ. ಕರ್ನಾಟಕದ ಮಟ್ಟಿಗೆ ಚಾರಣದ ಪರ್ವತಗಳಲ್ಲೇ ಇದು ಅತ್ಯಂತ ಕಠಿಣ ಹಾಗೂ ದೀರ್ಘಕಾಲದ ಚಾರಣದ ಬೆಟ್ಟವೆಂದೇ ಹೇಳಬಹುದು.

ಕುಕ್ಕೆಸುಬ್ರಹ್ಮಣ್ಯದಿಂದ ಕಡಿದಾದ ಕಾಲ್ನಡಿಗೆಯ ಮೂಲಕ ಸುಮಾರು ಹದಿಮೂರು ಕಿ.ಮೀ ದೂರದಲ್ಲಿರುವ ಕುಮಾರ ಪರ್ವತದ ಶೃಂಗವನ್ನು ತಲುಪಬಹುದು. ಇಲ್ಲಿನ ಪರ್ವತ ಪ್ರದೇಶವು ಕರ್ನಾಟಕ ಸರಕಾರದ ಪಶ್ಚಿಮಘಟ್ಟದ ಪುಷ್ಪಗಿರಿ ವನ್ಯಜೀವಿ ಉದ್ಯಾನವನ ವ್ಯಾಪ್ತಿಗೆ ಬರುತ್ತಿದ್ದು, ಇಲ್ಲಿ ಇಲಾಖೆಯ ಮುಖ್ಯ ಗೇಟ್‌ನಲ್ಲಿ ಚಾರಣ ದರವನ್ನು ಚಾರಣಿಗನೊಬ್ಬನಿಗೆ ತಲಾ ರೂ. 350/- ರಂತೆ ಪಾವತಿಸಬೇಕಾಗಿದೆ. ಈ ಪರ್ವತವನ್ನು ಯಾವುದೇ ಮಾರ್ಗದರ್ಶಕರ (ಗೈಡ್) ಸಹಾಯವಿಲ್ಲದೇ ಏರಬಹುದಾಗಿದೆ. ಇಲ್ಲಿನ ನಿಸರ್ಗ ಸೌಂದರ್ಯವು ಫೋಟೋಗ್ರಫಿಗೆ ಹೇಳಿ ಮಾಡಿಸಿದಂತಿದ್ದು, ಪ್ರತಿಯೊಂದು ಹಂತಗಳೂ ಚಾರಣಿಗನಿಗೆ ಪ್ರಕೃತಿಸಿರಿಯ ಸೊಬಗಿನ ರಸದೌತಣವನ್ನೀಯುತ್ತದೆ.

‘ಕುಮಾರ ಪರ್ವತ’ವು ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಗಡಿಭಾಗದಲ್ಲಿದ್ದು, ಇದು ಕೊಡಗು ಜಿಲ್ಲೆಯ ‘ತಡಿಯಾಂಡಮೋಲ್ ಪರ್ವತ’ವನ್ನು ಬಿಟ್ಟರೆ ಎರಡನೇ ಅತ್ಯಂತ ಎತ್ತರದ ಪರ್ವತವಾಗಿದೆ. ಇಲ್ಲಿನ ಚಾರಣ ಅತ್ಯಂತ ಕಠಿಣ ಏಕೆಂದರೆ ಚಾರಣದ ಪ್ರಾರಂಭದಿಂದಲೇ ಇಲ್ಲಿನ ಕೆಲವೊಂದು ಪ್ರದೇಶಗಳು ಅತ್ಯಂತ ಕಠಿಣವಾದ ಏರು ಪ್ರದೇಶಗಳನ್ನು ಹೊಂದಿದ್ದು, ಗಟ್ಟಿ ಗುಂಡಿಗೆಯಿದ್ದರೆ ಮಾತ್ರ ಕುಮಾರ ಪರ್ವತದ ತುತ್ತ ತುದಿಯ ಸವಿಯನ್ನು ಅನುಭವಿಸಬಹುದು. ಚಾರಣದ ಆರಂಭ ಹಂತ ಪ್ರಾರಂಭವಾಗುವುದೇ ಕುಕ್ಕೆಸುಬ್ರಹ್ಮಣ್ಯ ದೇವಾಲಯದ ಬಲಭಾಗದ ರಸ್ತೆಯ ಮೂಲಕ. ಕುಮಾರಪರ್ವತ ಚಾರಣವನ್ನು ಸುಮಾರು ಐದು ಹಂತಗಳಾಗಿ ವಿಭಾಗಿಸಬಹುದಾಗಿದ್ದು, ಮೊದಲನೆಯದಾಗಿ ಕುಕ್ಕೆಸುಬ್ರಹ್ಮಣ್ಯದಿಂದ ಅರಣ್ಯಪ್ರದೇಶದ ರಸ್ತೆ, ಎರಡನೆಯದಾಗಿ ಅರಣ್ಯ ಪ್ರದೇಶ ಪ್ರಾರಂಭದಿಂದ ಭಟ್ರಮನೆ, ಮೂರನೆಯದಾಗಿ ಭಟ್ರ ಮನೆಯಿಂದ ಕಲ್ಲು ಮಂಟಪ, ನಾಲ್ಕನೆಯದಾಗಿ ಕಲ್ಲು ಮಂಟಪದಿಂದ ಶೇಷಪರ್ವತ, ಐದನೆಯದಾಗಿ ಶೇಷಪರ್ವತದಿಂದ ಕುಮಾರ ಪರ್ವತದ ಅಂತಿಮ ಹಂತ (ದೇವಸ್ಥಾನ).

ಕುಕ್ಕೆ ಸುಬ್ರಹ್ಮಣ್ಯಕ್ಕೆ ದೂರ ದೂರದ ಊರುಗಳಿಂದ ಅಗತ್ಯಕ್ಕೆ ಅನುಗುಣವಾಗಿ ರಾತ್ರಿ ಬಸ್ ವ್ಯವಸ್ಥೆಯಿದ್ದು ಸುಬ್ರಹ್ಮಣ್ಯಕ್ಕೆ ಬೆಳಗ್ಗಿನ ಜಾವ ತಲುಪಿದಲ್ಲಿ ಇಲ್ಲಿ ಲಾಡ್ಜುಗಳಲ್ಲಿ ಬೆಳಗಿನ ಪ್ರಾತರ್ವಿಧಿಗಳನ್ನು ಪೂರೈಸಿ ಅಲ್ಲೇ ಇರುವ ಹೋಟೆಲ್‌ನಿಂದ ಅಗತ್ಯವಿರುವ ಆಹಾರವನ್ನು ಹಾಗೂ ಹಣ್ಣುಗಳನ್ನು ಮತ್ತು ನೀರಿನ ಬಾಟಲಿಗಳನ್ನು ಜೋಡಿಸಿಕೊಂಡು ದೇವಾಲಯದ ಬಲ ಭಾಗದಲ್ಲಿರುವ ಟಾರು ರಸ್ತೆಯ ಮೂಲಕ ಚಾರಣವನ್ನು ಪ್ರಾರಂಭಿಸಬಹುದಾಗಿದ್ದು, ಇದೇ ಒಂದನೆಯ ಹಂತ ಬೆಳಕು ಹರಿಯುವ ಮೊದಲೇ ಚಾರಣವನ್ನು ಪ್ರಾರಂಭಿಸಿದರೆ, ಸೂರ್ಯನ ಪ್ರಖರ ಕಿರಣಗಳಿಂದ ಪಾರಾಗಬಹುದು. ಟಾರು ರಸ್ತೆಯಲ್ಲಿ ಸುಮಾರು ಒಂದರಿಂದ ಎರಡು ಕಿ.ಮೀ. ಕ್ರಮಿಸಿದ ನಂತರ ಅರಣ್ಯ ಇಲಾಖೆಯ ಭೂಪ್ರದೇಶವು ಪ್ರಾರಂಭವಾಗುತ್ತದೆ. ಇದೇ ಎರಡನೆಯ ಹಂತ. ರಸ್ತೆಯ ಎಡಭಾಗದಲ್ಲಿ ಸೂಕ್ತ ನಾಮಫಲಕವಿದ್ದು ಇಲ್ಲಿನ ಕಾಡು ದಾರಿಯಲ್ಲಿ ಕಡಿದಾದ ತಿರುವುಗಳಿಂದ ಕೂಡಿದ ಕಾಲು ದಾರಿಯಲ್ಲಿ ಕೆಲವೊಂದು ಅತ್ಯಂತ ಕಠಿಣವಾದ ಏರು ಪ್ರದೇಶಗಳನ್ನು ದಾಟಿ ಸಾಗಬೇಕು. ಈ ಪ್ರಯಾಣದ ಅವಧಿಯಲ್ಲಿ ಅಲ್ಲಲ್ಲಿ ನೀರಿನ ತೊರೆಗಳ ಲಭ್ಯತೆ ಇದ್ದು, ಈ ಪ್ರಯಾಣವು ಅಷ್ಟೊಂದು ಕಠಿಣವಾಗಿಲ್ಲ. ಸುಮಾರು ಐದರಿಂದ ಆರು ಕಿ.ಮೀ. ಕ್ರಮಿಸಿದ ನಂತರ ಗಿರಿಗದ್ದೆ ಎಂಬಲ್ಲಿ ಕೇವಲ ಒಂದೇ ಒಂದು ಮನೆಯಿದ್ದು, ಅದುವೇ ‘ಭಟ್ರಮನೆ’.

ಭಟ್ರಮನೆ ಎಂದರೆ ಚಾರಣಿಗರ ಪಾಲಿನ ‘ಕಾಮಧೇನು’ ಅಥವಾ ‘ಕಲ್ಪವೃಕ್ಷ’ ಎಂದರೂ ತಪ್ಪಾಗಲಾರದು. ಏಕೆಂದರೆ ಈ ಪ್ರದೇಶಕ್ಕೆ (ಮನೆಗೆ) ಯಾವುದೇ ವಾಹನ ಸಂಚಾರ ಸಾಧ್ಯವೇ ಇಲ್ಲವಾಗಿದ್ದು ಇಲ್ಲಿಗೆ ಯಾವುದೇ ವಸ್ತುಗಳು ಮತ್ತು ದಿನಸಿ ಸಾಮಾಗ್ರಿಗಳ ಅವಶ್ಯಕತೆ ಇದ್ದರೂ ಅದನ್ನು ಕಡಿದಾದ ದಾರಿಯ ಮೂಲಕ ಕಾಲ್ನಡಿಗೆಯಲ್ಲಿ ಹೊತ್ತುಕೊಂಡೇ ಸಾಗಬೇಕಾಗಿರುವುದು ವಿಶೇಷವಾಗಿದೆ. ಚಾರಣಿಗರಿಗೆ ಬೇಕಾಗುವ ಊಟೋಪಚಾರ, ಉಳಿದುಕೊಳ್ಳಲು ಮತ್ತು ಶೌಚಾಲಯದ ವ್ಯವಸ್ಥೆ ಸಿಗುವುದು ಸುಬ್ರಹ್ಮಣ್ಯ ಪಟ್ಟಣವನ್ನು ಬಿಟ್ಟ ನಂತರ ಗಿರಿಗದ್ದೆ ಭಟ್ರಮನೆಯಲ್ಲಿ ಮಾತ್ರ. ಮೇ ತಿಂಗಳಾಂತ್ಯದ ನಂತರವಂತೂ (ಮಳೆಗಾಲ) ಚಾರಣವು ಸಂಪೂರ್ಣ ನಿಷಿದ್ಧ. ಭಟ್ರ ಮನೆಯಲ್ಲಿ ಸರಳವಾದ ಅನ್ನ ಮತ್ತು ಸಾಂಬಾರು ಊಟದ ಲಭ್ಯತೆ ಇದ್ದು ಒಂದು ಊಟಕ್ಕೆ ರೂ.100/- ರಿಂದ ರೂ.130/- ದರವಿದೆ. ರಾತ್ರಿಯ ಹೊತ್ತು ಭಟ್ರ ಅನುಮತಿಯೊಂದಿಗೆ ಮಹಿಳಾ ಚಾರಣಿಗರು ಇವರ ಮನೆಯಲ್ಲೇ ತಂಗಬಹುದಾಗಿದ್ದು, ಪುರುಷರು ಮನೆಯ ಅಕ್ಕಪಕ್ಕದಲ್ಲಿ ಟೆಂಟ್‌ಗಳನ್ನು ನಿರ್ಮಿಸಿಕೊಂಡು ಉಳಿದುಕೊಳ್ಳಬಹುದಾಗಿದೆ.

ಯಾವುದೇ ಕಾರಣಕ್ಕೂ ಕುಮಾರ ಪರ್ವತ ತಪ್ಪಲಿಂದ ಮೇಲ್ಬಾಗದಲ್ಲಿ ರಾತ್ರಿ ತಂಗಲು ಅವಕಾಶವಿರುವುದಿಲ್ಲ ಮತ್ತು ಇಲ್ಲಿ ಆನೆಗಳು ಮತ್ತು ಕಾಡು ಪ್ರಾಣಿಗಳ ಓಡಾಟ ಹೆಚ್ಚಿರುವುದರಿಂದ ಇದು ಅಪಾಯಕಾರಿಯೂ ಹೌದು. ಭಟ್ರಮನೆ ತಲಪುವಸ್ಟರಲ್ಲಿ ಬಹುತೇಕ ಚಾರಣಿಗರು ತಮ್ಮ ಚಾರಣದ ಉತ್ಸಾಹವನ್ನೇ ಕಳೆದುಕೊಂಡು ಬಿಡುತ್ತಾರೆ. ಇದು ಕೇವಲ ಚಾರಣದ ಒಂದು ಹಂತ ಅಷ್ಟೇ. ನಮ್ಮ ತಂಡದಲ್ಲಿ ಒಟ್ಟು ಒಂಬತ್ತು ಮಂದಿ ಚಾರಣವನ್ನು ಮಾಡಿದ್ದು ಅರ್ಧದಷ್ಟು ಮಂದಿ ಭಟ್ರಮನೆಗೇ ಕುಮಾರ ಪರ್ವತದ ಸಹವಾಸ ಸಾಕಪ್ಪಾ ಅಂದಿದ್ದೂ ಇದೆ. ಭಟ್ಟರ ಮನೆಯಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿಯನ್ನು ಪಡೆದು ಬೇಕಾದಷ್ಟು ನೀರಿನ ಕ್ಯಾನ್‌ಗಳನ್ನು ಇಲ್ಲೇ ತುಂಬಿಕೊಂಡು ಮತ್ತೆ ಮೂರನೇ ಹಂತದ ಚಾರಣವನ್ನು ಪ್ರಾರಂಭಿಸಲು ಅಣಿಯಾಗುವುದು ಉತ್ತಮ. ಏಕೆಂದರೆ ಇಲ್ಲಿಂದ ಮುಂದಕ್ಕೆ ಹೋಗುತ್ತಿದ್ದಂತೆ ಕೆಲವೊಂದು ತಿಂಗಳುಗಳಲ್ಲಿ ಎಲ್ಲೂ ನೀರೇ ಸಿಗದಂತಹ ಸನ್ನಿವೇಶಗಳೂ ಎದುರಾಗುತ್ತದೆ. ಇಲ್ಲಿಂದ ಒಂದು ಕೀ.ಮೀ ಕ್ರಮಿಸುತ್ತಿದ್ದಂತೆ ಒಂದು ವಿಶಾಲವಾದ ವೀಕ್ಷಣಾ ಸ್ಥಳವು ದೊರೆಯುತ್ತದೆ. ಇಲ್ಲಿ ಹಲವು ಕೋನಗಳಲ್ಲಿ ಸಿಮೆಂಟ್ ಬೆಂಚ್‌ಗಳನ್ನು ಅರಣ್ಯ ಇಲಾಖೆ ಅಳವಡಿಸಿದ್ದು ಬೆಟ್ಟಗಳ ಛಾಯಾಚಿತ್ರವನ್ನು ವಿವಿಧ ಕೋನಗಳಲ್ಲಿ ಸೆರೆಹಿಡಿದು ತುಸು ವಿಶ್ರಾಂತಿಯನ್ನೂ ಪಡೆಯಬಹುದಾಗಿದೆ. ಇಲ್ಲಿಂದ ಸ್ವಲ್ಪ ದೂರ ಕ್ರಮಿಸಿದರೆ ಅರಣ್ಯ ಇಲಾಖೆಯ ಪ್ರವೇಶದ್ವಾರ ಸಿಗುತ್ತದೆ. ಇಲ್ಲಿ ಚಾರಣಿಗರು ತಮ್ಮ ಹೆಸರು ವಿಳಾಸ ಮತ್ತಿತ್ತರ ವಿವರಗಳನ್ನು ನೊಂದಾಯಿಸಿ ಪ್ರವೇಶ ಶುಲ್ಕವನ್ನು ಪಾವತಿ ರಸೀದಿಯನ್ನು ಪಡೆದುಕೊಳ್ಳಬೇಕು. ಇಲ್ಲಿಯೂ ಹೇರಳ ನೀರಿನ ಲಭ್ಯತೆಯಿದ್ದು ಅರಣ್ಯ ಇಲಾಖೆಯು ನೀರಿನ ನಲ್ಲಿಗಳನ್ನು ಅಳವಡಿಸಿದೆ. ಈ ಪ್ರದೇಶದಲ್ಲೂ ಚಾರಣಿಗರು ರಾತ್ರಿ ಹೊತ್ತನ್ನು ಟೆಂಟ್‌ಗಳನ್ನು ಹಾಕಿಕೊಂಡು ಉಳಿದುಕೊಳ್ಳಲು ಅವಕಾಶವಿದೆ.

ಇಲ್ಲಿಂದ ಮುಂದಿನ ಚಾರಣವು ಅಷ್ಟೊಂದು ಕಠಿಣವಾಗಿಲ್ಲವಾದ್ದರಿಂದ ಇಲ್ಲಿಂದ ಸುಮಾರು ಒಂದು ಒಂದೂವರೆ ಕೀ.ಮೀ ದೂರದಲ್ಲಿ ಮತ್ತೊಂದು ವೀಕ್ಷಣಾಸ್ಥಳವಿದ್ದು, ಚಾರಣಿಗರು ವಿರಮಿಸಿಕೊಳ್ಳಲು ಅವಕಾಶವಿದೆ. ಇಲ್ಲಿಂದ ಮುಂದಕ್ಕೆ ನಿಜವಾದ ಚಾರಣ ಪ್ರಾರಂಭವಾಗುತ್ತದೆ. ಭಟ್ಟರ ಮನೆಯಿಂದ ಪ್ರಾರಂಭಿಸುವ ಮೂರನೇ ಹಂತದ ಚಾರಣವು ಸುಮಾರು ಮೂರರಿಂದ ಮೂರೂವರೆ ಕೀ.ಮೀ ದೂರವಿದ್ದು ಇದನ್ನು ಕ್ರಮಿಸಲು 2 ರಿಂದ 3 ಗಂಟೆ ಅವಧಿಯನ್ನು ತೆಗೆದುಕೊಳ್ಳುತ್ತದೆ. ಬೆಟ್ಟವನ್ನು ಕ್ರಮಿಸುವ ದಾರಿಯಲ್ಲಿ ಕೆಲವೇ ಕೆಲವು ಕಡೆಗಳಲ್ಲಿ ಮಾತ್ರ ಮರಗಳಿದ್ದು ಇದರ ನೆರಳಲ್ಲಷ್ಟೇ ದಣಿವಾರಿಸಿಕೊಳ್ಳಬಹುದಾಗಿದೆ. ಇದನ್ನು ಬಿಟ್ಟರೆ ಕಣ್ಣು ಹಾಯಿಸಿದಷ್ಟೂ ಬರೀ ಹುಲ್ಲಿನಿಂದ ಕೂಡಿದ ಬೆಟ್ಟಗುಡ್ಡವಷ್ಟೇ ಕಾಣುತ್ತದೆಯೇ ವಿನಃ ಬೇರೇನೂ ಸಿಗುವುದಿಲ್ಲ. ಸುಡುಬಿಸಿಲಿದ್ದರೂ ಎಲ್ಲೂ ಬಿಸಿಲಿನ ಪ್ರಖರತೆ ಗೋಚರವಾಗದಂತೆ ವೇಗವಾಗಿ ಬೀಸುವ ತಂಪಾದ ಗಾಳಿಯ ಶ್ರೀರಕ್ಷೆಯಿರುವುದರಿಂದ ಚಾರಣಿಗರು ಅಷ್ಟೊಂದು ಸುಸ್ತಾಗುವುದಿಲ್ಲ. ಕಲ್ಲು ಮಂಟಪವನ್ನು ಸಮೀಪಿಸುತ್ತಿರುವಂತೆಯೇ ನೀರಿನ ತೊರೆಯಿರುವ ಪ್ರದೇಶವಿದ್ದು ಡಿಸೆಂಬರ್ ಅಂತ್ಯದವರೆಗೆ ಮಾತ್ರ ಇಲ್ಲಿ ನೀರಿನ ಹರಿವು ಇರುತ್ತದೆ. ಸಂಜೆ ನಾಲ್ಕು ಗಂಟೆಯ ನಂತರ ಕಲ್ಲು ಮಂಟಪವನ್ನು ತಲುಪಿದಲ್ಲಿ ಇಲ್ಲಿಂದ ನಾಲ್ಕನೇ ಮತ್ತು ಐದನೇ ಹಂತದ ಚಾರಣವನ್ನು ಮುಂದುವರಿಸುವುದು ಅಷ್ಟೊಂದು ಕ್ಷೇಮವಲ್ಲ. ಈ ಕಲ್ಲುಮಂಟಪವು ಕುಮಾರ ಪರ್ವತದಲ್ಲೊಂದು ಕೇಂದ್ರ ಬಿಂದು. ಇಲ್ಲಿ ವಿವಿಧ ಕೋನಗಳಲ್ಲಿ ಪ್ರಕೃತಿಯ ಸೊಬಗಿನೊಂದಿಗೆ ಫೋಟೋ ತೆಗೆದುಕೊಳ್ಳುವುದೇ ಚಂದ. ಇಲ್ಲಿ ಚಾರಣಿಗರು ರಾತ್ರಿ ಟೆಂಟ್ ಹಾಕಿಕೊಂಡು ವಿಶ್ರಾಂತಿಯನ್ನು ಪಡೆಯಲು ಸ್ಥಳಾವಕಾಶವಿದ್ದರೂ ಸುರಕ್ಷತೆಯ ದೃಷ್ಟಿಯಿಂದ ಇಲ್ಲಿ ರಾತ್ರಿಯ ಕ್ಯಾಂಪ್‌ಫೈರ್‌ಗೆ ಅವಕಾಶವನ್ನು ಇಲಾಖೆಯು ನೀಡುತ್ತಿಲ್ಲ.

ನಾಲ್ಕನೆಯ ಹಂತವಾದ ಕಲ್ಲುಮಂಟಪದಿಂದ ಶೇಷಪರ್ವತದೆಡೆಗೆ ಚಾರಣವು ಕುಮಾರ ಪರ್ವಹತಾರೋಹಣದಲ್ಲೇ ಅತ್ಯಂತ ಕಠಿಣವಾದ ಹಂತವಾಗಿದ್ದು, ಇಲ್ಲಿನ ಹಾದಿಯು ಬಹಳಷ್ಟು ಕಡಿದಾಗಿ, ಮೆಟ್ಟಿಲುಗಳು ಅತ್ಯಂತ ಎತ್ತರವಾಗಿರುವುದರಿಂದ ಎಂತಹ ಗಟ್ಟಿಗನನ್ನೂ ಈ ಹಂತವು ಅಧೀರರನ್ನಾಗಿಸುತ್ತದೆ. ಸಾಕಪ್ಪ ಈ ಚಾರಣ ವಾಪಸ್ಸು ಹೋಗಿ ಬಿಡೋಣ ಎಂದು ಈ ಹಂತದಲ್ಲಿ ಅನ್ನಿಸಿದರೂ ಅಚ್ಚರಿಯಿಲ್ಲ. ಈ ಹಂತದಲ್ಲಿ ಹಲವೆಡೆ ಅತ್ಯಂತ ಭಯಾನಕವಾದ ಕಂದಕಗಳು ಮತ್ತು ಅತ್ಯುತ್ತಮ ಪರ್ವತದ ದೃಶ್ಯಗಳನ್ನು ವಿವಿಧ ಕೋನಗಳಿಂದ ಸೆರೆಯಿಡಿಯುವ ಅವಕಾಶಗಳೂ ಲಭ್ಯವಿದ್ದು, ಚಾರಣಿಗರು ಬಹಳ ಎಚ್ಚರಿಕೆಯಿಂದಿರುವುದು ಉತ್ತಮ. ಇಲ್ಲಿ ಬಿಸಿಲಿನಿಂದ ರಕ್ಷಣೆಗಾಗಿ ಮರಗಳೇ ಇಲ್ಲವೆಂದು ಹೇಳಬಹುದು. ಇಲ್ಲಿ ಛಲ ಮತ್ತು ಆತ್ಮವಿಶ್ವಾಸದಲ್ಲಿ ಕೊಂಚ ಕೊರತೆಯಾದಲ್ಲಿ ಇಡೀ ಚಾರಣವನ್ನೇ ಮೊಟಕುಗೊಳಿಸಿ ಅರ್ಧದಿಂದಲೇ ಹಿಂತಿರುಗುವವರು ಹೆಚ್ಚು (ನಮ್ಮ ಒಂಬತ್ತು ಮಂದಿಯ ತಂಡದ ಮುಂಬಾಗದಲ್ಲಿ ಅಲ್ಲಿಯವರೆಗೂ ಬಹಳ ಉತ್ಸಾಹದಿಂದ ಮುನ್ನಡೆಯುತ್ತಿದ್ದ ತಂಡವೊಂದು ಚಾರಣದ ಕಠಿಣತೆಗೆ ಸೋತು ಅರ್ಧದಲ್ಲೇ ಅಂತಿಮ ಹಂತವನ್ನು ಪೂರೈಸಲಾರದೇ ಹಿಂದಿರುಗಿರುವುದು ಇದೇ ಹಂತದಲ್ಲಿ). ಈ ಹಂತವು ಸುಮಾರು ಮೂರರಿಂದ ಮೂರೂವರೆ ಕೀ.ಮೀ ದೂರವಿದ್ದು, ಮೂರರಿಂದ ನಾಲ್ಕು ಗಂಟೆಯಷ್ಟು ಅವಧಿಯನ್ನು ಕ್ರಮಿಸಲು ತೆಗೆದುಕೊಳ್ಳುತ್ತದೆ. ಇಲ್ಲಿ ಚಾರಣಿಗರ ಮನೋಸ್ಥೈರ್ಯ ಉನ್ನತ ಮಟ್ಟದಲ್ಲಿರಬೇಕೆಂಬುದನ್ನು ನೆನಪಿನಲ್ಲಿಡಬೇಕು.

ಐದನೇ ಹಂತದ ಚಾರಣಕ್ಕೆ ಕಾಲಿಡುತ್ತಿದ್ದಂತೆ ಈಗಾಗಲೇ ನಾಲ್ಕನೇ ಹಂತದ ಚಾರಣದಲ್ಲಿ ಸುಸ್ತಾದ ಚಾರಣಿಗರು ಮುಂದಿರುವ ದೂರವನ್ನು ನೋಡಿ ಬೆಚ್ಚಿ ಬೀಳವುದೂ ಸಹಜ. ಆದರೆ ಈ ಹಂತ ವಿಭಿನ್ನವಾದ ಹಾದಿಯನ್ನು ಹೊಂದಿದ್ದು ಚಾರಣಿಗರಿಗೆ ವಿಭಿನ್ನ ಪರಿಸರಗಳು ಸ್ವ ಪ್ರೇರಣೆಯನ್ನು ನೀಡುವುದರೊಂದಿಗೆ ನವೋಲ್ಲಾಸವನ್ನು ನೀಡುತ್ತದೆ. ಸುಮಾರು ಒಂದು ಕೀ.ಮೀ ದೂರವನ್ನು ದಟ್ಟಾರಣ್ಯದಲ್ಲೇ ಕ್ರಮಿಸಬೇಕಾಗಿದ್ದು, ಈ ಪ್ರದೇಶದಲ್ಲಿ ಅಲ್ಲಲ್ಲಿ ಆನೆಯ ಲದ್ದಿಯೂ ಕಾಣಸಿಗುವುದರಿಂದ ಚಾರಣಿಗರು ಸ್ವಲ್ಪ ಮಟ್ಟಿನ ಆತಂಕಕ್ಕೊಳಗಾಗವುದೂ ಸಹಜ. ಇಲ್ಲಿಂದ ಮುಂದಕ್ಕೆ ಮನಸ್ಸಿಗೆ ಮುದವನ್ನು ನೀಡುವ (ಕಲ್ಲನ್ನು ಏರುವ) ವಿಶಿಷ್ಟವಾದ ಸವಾಲು ಎದುರಾಗುತ್ತದೆ. ಇಲ್ಲಿ ಚಾರಣದ ಷೂ ಧರಿಸಿದ್ದಲ್ಲಿ ಸರಳವಾಗಿ ಅರ್ಧ ಕೀ.ಮೀ ದೂರದ ಕಲ್ಲನ್ನು ಏರಬಹುದು. ಈ ಕಲ್ಲನ್ನು ಏರುವಾಗ ಹಾಗೂ ಇಳಿಯುವಾಗ ಅತ್ಯಂತ ವಿಶೇಷ ಮುಂಜಾಗ್ರತೆಯನ್ನು ವಹಿಸುವುದು ಉತ್ತಮ. ಇಲ್ಲಿ ಚಾರಣಿಗರ ದಟ್ಟಣೆ ಜಾಸ್ತಿಯಿರುವುದರಿಂದ ಸ್ವಲ್ಪ ಒಬ್ಬರನ್ನೊಬ್ಬರು ತಳ್ಳಾಡಿಕೊಂಡರೂ ಅಪಾಯ ಅಥವಾ ಪ್ರಾಣಕ್ಕೇ ಸಂಚಕಾರ ಖಚಿತ. ಷೂ ಅಥವಾ ಚಪ್ಪಲಿ ರಹಿತವಾಗಿ ಈ ಕಲ್ಲನ್ನೇರುವ ಪ್ರಯತ್ನವನ್ನು ಮಾಡಿದರೆ ಇನ್ನೂ ಉತ್ತಮ.

ಈ ಜಾಗ ಅತ್ಯಂತ ಕಡಿದಾಗಿದ್ದು ಸುಮಾರು 45 0 ರಿಂದ 60 0 ಕೋನದ ಏರುವಿಕೆಯಿಂದ ಕೂಡಿದೆ. ಕಡಿದಾದ ಕಲ್ಲನ್ನು ಏರುತ್ತಿದ್ದಂತೆ ಮಧ್ಯದಲ್ಲಿ ಕುಳಿತು ನೋಡಿದರೆ ಶೇಷಪರ್ವತದ ದಾರಿಯು ದಟ್ಟಾರಣ್ಯದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಇಲ್ಲಿಯೂ ನೀರಿನ ತೊರೆಯು ಲಭ್ಯವಿದ್ದು ಡಿಸೆಂಬರ್ ಅಂತ್ಯದ ನಂತರ ಇಲ್ಲಿ ನೀರಿನ ಲಭ್ಯತೆ ಕಡಿಮೆಯಾಗುತ್ತದೆ. ಆದ್ದರಿಂದ ಡಿಸೆಂಬರ್ ನಂತರ ಚಾರಣ ಮಾಡುವ ಸಂದರ್ಭದಲ್ಲಿ ಹೇರಳವಾದ ನೀರಿನೊಂದಿಗೆ ಚಾರಣ ಮಾಡುವುದೇ ಕ್ಷೇಮ. ಈ ಪ್ರಯಾಣವು ಸುಮಾರು 2 ಕೀ.ಮೀ ದೂರವಿದ್ದು ಸುಮಾರು ಎರಡರಿಂದ ಎರಡೂವರೆ ಗಂಟೆಯ ಸಮಯವನ್ನು ತೆಗೆದುಕೊಳ್ಳುತ್ತದೆ. ಕಲ್ಲನ್ನು ಏರಿದ ಬಳಿಕ ಕುಮಾರ ಪರ್ವತದ ಮೇಲ್ಭಾಗವನ್ನು ತಲುಪುತ್ತಿದ್ದಂತೆ ತುತ್ತತುದಿಯಲ್ಲಿ ಕೇಸರಿ ಬಣ್ಣದ ಬಾವುಟವು ಗಾಳಿಯಲ್ಲಿ ಸ್ವಚ್ಛಂದವಾಗಿ ಹಾರಾಡುವ ದೃಶ್ಯವು ಕಾಣಿಸುತ್ತದೆ. ಇದನ್ನು ಚಾರಣಿಗರ ವಿಜಯ ಪತಾಕೆಯೆಂದೇ ಹೇಳಬಹುದು. ಏಕೆಂದರೆ ಈಗಾಗಲೇ ಬಳಲಿ ಬೆಂಡಾಗಿರುವ ಚಾರಣಿಗರು ಇಲ್ಲಿ ತಲುಪಿದಾಗ ಅದೇನೋ ಮಹತ್ತರವಾದುದನ್ನು ಸಾಧಿಸಿದಂತಹ ಆನಂದ ಮನದಲ್ಲಿ ಮೂಡುತ್ತದೆ. ಇಲ್ಲಿ ಅಲ್ಲಲ್ಲಿ ಬಿದ್ದಿರುವ ಕಲ್ಲುಗಳನ್ನು ಜೋಡಿಸಿ ಕಟ್ಟಿದ ಹಳೆಯ ಕಾಲದ ಶಾಂತಮಲ್ಲಿಕಾರ್ಜುನ ಸ್ವಾಮಿ ದೇವಾಲಯವಿದ್ದು ಇದಕ್ಕೆ ಪ್ರದಕ್ಷಿಣಿಯನ್ನು ಹಾಕಿ ಅಲ್ಲೇ ಸ್ವಲ್ಪ ವಿಶ್ರಮಿಸಬಹುದಾಗಿದೆ. ಇಲ್ಲಿಂದ ಬೆಟ್ಟದ ಇನ್ನೊಂದು ಮಗ್ಗುಲಿನ ಕೆಳಗಡೆಯ ವಿಶಾಲ ಚಿತ್ರಣವನ್ನು ವೀಕ್ಷಿಸಲು ಅನುಕೂಲವಾಗುವಂತಹ ವೀಕ್ಷಣಾ ಸ್ಥಳವಿದ್ದು ಇಲ್ಲಿ ಚಾರಣಿಗರು ಬಹಳ ಜಾಗರೂಕರಾಗಿರುವುದು ಉತ್ತಮ. ಏಕೆಂದರೆ ಇಲ್ಲಿ ಯಾವುದೇ ತಡೆಗೋಡೆಗಳಿಲ್ಲದಿರುವುದರಿಂದ ಸ್ವಲ್ಪ ಎಚ್ಚರ ತಪ್ಪಿದರೂ ಪ್ರಪಾತದ ಪಾಲಾಗುವುದು ಖಚಿತ. ಇಲ್ಲಿ ಬೇಸಿಗೆ ಕಾಲದಲ್ಲಿ ನೀರಿನ ಲಭ್ಯತೆ ಇಲ್ಲದಿದ್ದು ಈ ಪ್ರದೇಶ ಮೂಲಕವೂ ಪರ್ವತದಿಂದ ಕೆಳಗಿಳಿದರೆ ಹೆಗ್ಗಡೆ ಮನೆ ಕುಮಾರಳ್ಳಿ ಗ್ರಾಮದ ಮೂಲಕ ಕೊಡಗು ಜಿಲ್ಲೆಯ ಸೋಮವಾರಪೇಟೆಗೆ ತಲುಪಬಹುದಾಗಿದೆ. ಕೆಲವು ಚಾರಣಿಗರು ಇದೇ ರಸ್ತೆಯ ಮೂಲಕ ವಿರುದ್ದ ದಿಕ್ಕಿನಲ್ಲಿ ಚಾರಣವನ್ನೂ ಮಾಡುತ್ತಾರೆ. ಆದರೆ ಇಲ್ಲಿ ನೈಜ ಚಾರಣದ ಸವಾಲು ಹಾಗೂ ಫಲವನ್ನು ಕಂಡುಕೊಳ್ಳಲಾಗದೇ ಕಾಟಾಚಾರದ ಚಾರಣವೆಂದು ಹೇಳಬಹುದು.

ಚಾರಣದ ದಾರಿಯ ಸ್ವರೂಪ:
ಪ್ರಥಮ ಹಂತ: ಅತ್ಯಂತ ಸರಳವಾಗಿದ್ದು ಕಾಲ್ನಡಿಗೆ ಅಥವಾ ವಾಹನದ ಮೂಲಕ ತಲುಪಬಹುದು.
ಎರಡನೆಯ ಹಂತ: ನೆರಳಿನಿಂದ ಕೂಡಿದ್ದು ಕಠಿಣತೆ ಹಾಗೂ ಸರಳತೆ ಎರಡನ್ನೂ ಹೊಂದಿದೆ.
ಮೂರನೆಯ ಹಂತ: ಸಾಧಾರಣವಾಗಿ ಸರಳವಾಗಿದೆ.
ನಾಲ್ಕನೆಯ ಹಂತ: ಅತ್ಯಂತ ಕಠಿಣವಾದ ಚಾರಣದ ಅನುಭವವನ್ನು ನೀಡುತ್ತದೆ.
ಐದನೆಯ ಹಂತ: ವಿಭಿನ್ನವಾದ ಹಾಗೂ ಹೊಸತನದ ಅನುಭವವನ್ನು ನೀಡುತ್ತದೆ.
ಚಾರಣದ ದೂರ: ಸುಬ್ರಹ್ಮಣ್ಯ ದೇವಸ್ಥಾನದಿಂದ ಚಾರಣದ ಅಂತಿಮ ಹಂತ ಒಟ್ಟು 13 ಕಿ.ಮೀಗಳು.
ಚಾರಣದ ಅವಧಿ: ಸುಮಾರು 10 ಗಂಟೆಗಳು, ಅಕ್ಟೋಬರ್ ತಿಂಗಳಿಂದ ಫೆಬ್ರವರಿ ತಿಂಗಳು ಪ್ರಶಸ್ತ ಅವಧಿ.
ಪರ್ವತದ ಒಟ್ಟು ಎತ್ತರ: ಸಮುದ್ರ ಮಟ್ಟದಿಂದ 1,712 ಅಡಿಗಳು
ಚಾರಣ ಸಂದರ್ಭದ ಧಿರಿಸುಗಳು: ಜೀನ್ಸ್ ಪ್ಯಾಂಟ್ ಹಾಗೂ ಬಿಗಿ ಉಡುಪುಗಳನ್ನು ಧರಿಸದಿರುವುದೇ ಸೂಕ್ತ, ಏಕೆಂದರೆ ಇಲ್ಲಿನ ಕೆಲವೊಂದು ಮೆಟ್ಟಿಲುಗಳು ಚಾರಣ ಅತ್ಯಂತ ಕಠಿಣವಾಗಿವೆ (ನೈಟ್‌ಡ್ರೆಸ್, ಟಿ- ಶರ್ಟ್/ಅರ್ಧ ಪ್ಯಾಂಟ್ ಉತ್ತಮ). ಚಾರಣ ಶೂಗಳು ಅತ್ಯಂತ ಅವಶ್ಯಕವಾಗಿದ್ದು, ಬಿಸಿಲಿನಿಂದ ರಕ್ಷಣೆ ಪಡೆಯಲು ಟೊಪ್ಪಿ, ಕೂಲಿಂಗ್ ಕನ್ನಡಕ, ಟಾರ್ಚ್ ಲೈಟ್, ನಶ್ಯದ ಡಬ್ಬಿ (ಇಂಬಳದ ಕಾಟವಿದ್ದಲ್ಲಿ) ನೀರಿನ ಕ್ಯಾನ್‌ಗಳು ಮತ್ತು ದೊಡ್ಡ ಟವಲ್ (ಅತಿಯಾದ ಬಿಸಿಲಿನ ಝಳದ ರಕ್ಷಣೆಗಾಗಿ)
ನೀರಿನ ಲಭ್ಯತೆ: ಚಾರಣದ ವಿವಿಧ ಹಂತಗಳಲ್ಲಿ ನೀರಿನ ಲಭ್ಯತೆಯ ಕುರಿತಾಗಿ ಅರಣ್ಯ ಇಲಾಖೆಯ ಗೇಟ್‌ನಲ್ಲೇ ವಿಚಾರಿಸಿ ಪ್ರಯಾಣಿಸಿದರೆ ಇನ್ನೂ ಉತ್ತಮ.
ಆಹಾರದ ವ್ಯವಸ್ಥೆ: ಚಾರಣದ ಮುನ್ನಾ ದಿನವೇ ಗಿರಿಭಟ್ರಿಗೆ ಫೋನಾಯಿಸಿ ಯಾವ ಹೊತ್ತಿಗೆಲ್ಲಾ ಊಟದ ವ್ಯವಸ್ಥೆ ಬೇಕೆಂದು ಮುಂಚಿತವಾಗಿ ತಿಳಿಸಬೇಕು.

ಕುಮಾರ ಪರ್ವತವು ಕಠಿಣತೆಯ ಚಾರಣದ ಪರ್ವತವಾಗಿದ್ದು, ಸಾಹಸಿ ಚರಣಿಗರಿಗೆ ಅದ್ಭುತವಾದ ಅನುಭವದೊಂದಿಗೆ ಸದಾಕಾಲ ನೆನಪಿನಂಗಳದಲ್ಲಿ ಉಳಿಯುವ ಚಾರಣವಾಗಬಹುದು. ಇಲ್ಲಿನ ವಿವಿಧ ಹಂತಗಳ ಚಾರಣ ವ್ಯವಸ್ಥೆಯು ಹಿಮಾಲಯ ಇವೇ ಮೊದಲಾದ ಹೆಸರುವಾಸಿ ಪರ್ವತಾರೋಹಣ ಮಾಡಬಯಸುವವರಿಗೂ ಒಂದು ಅತ್ಯುತ್ತಮ ಕಲಿಕೆಯ ಅನುಭವದೊಂದಿಗೆ ಇಲ್ಲಿನ ವಾತಾವರಣದ ವಿಭಿನ್ನತೆಗೆ ಹೊಂದಿಕೊಳ್ಳುವ ಹಾಗೂ ನೈಜತೆಯ ಕಲೆಯನ್ನು ಕಲಿಸಬಲ್ಲ್ಲದು. ಇಲ್ಲಿ ಪ್ರತೀ ವರ್ಷ ಸುಮಾರು 3-4 ಸಾವಿರ ಮಂದಿ ದೇಶದ ವಿವಿಧ ರಾಜ್ಯಗಳ ಹಾಗೂ ವಿದೇಶೀ ಚಾರಣಿಗರು ಆಗಮಿಸುತ್ತಿದ್ದು ಇಲ್ಲಿ ಅತ್ಯಧಿಕ ಚಾರಣ ಶುಲ್ಕವನ್ನೂ ವಿಧಿಸಲಾಗುತ್ತದೆ. ಇಲ್ಲಿ ಹಲವಾರು ಮೂಲಭೂತ ಸೌಕರ್ಯಗಳ ಕೊರತೆಯಿದ್ದು ಉತ್ತಮವಾದ ಶೌಚಾಲಯ ಹಾಗೂ ಸ್ನಾನಗೃಹದ ವ್ಯವಸ್ಥೆಯನ್ನು ಹಾಗೂ ಮಹಿಳೆಯರಿಗೆ ಉಳಿದುಕೊಳ್ಳಲು ವ್ಯವಸ್ಥೆಯನ್ನು ಮಾಡಿದಲ್ಲಿ ಮತ್ತು ಸೂಕ್ತ ನಿರ್ದೇಶನ ಫಲಕಗಳನ್ನು ಅಲ್ಲಲ್ಲಿ ಅಳವಡಿಸಿದಲ್ಲಿ ಈ ಚಾರಣ ಬೆಟ್ಟವು ಇನ್ನಷ್ಟು ಹೆಸರನ್ನು ಪಡೆಯುವ ಮೂಲಕ ಕರ್ನಾಟಕ ರಾಜ್ಯ ಪ್ರವಾಸೋಧ್ಯಮಕ್ಕೆ ಹೊಸ ಆಯಾಮವನ್ನು ನೀಡುವುದರಲ್ಲಿ ಅನುಮಾನವೇ ಇಲ್ಲ. ಚಾರಣಿಗರಿಗೆ ಉಳಿದುಕೊಳ್ಳುವ ಹಾಗೂ ಊಟದ ವ್ಯವಸ್ಥೆಗಾಗಿ ಮಹಾಲಿಂಗೇಶ್ವರ ಭಟ್ (ಚಾರಣಿಗರು ಪ್ರೀತಿಯಿಂದ ಕರೆಯುವುದು ಗಿರಿಭಟ್ರು ಎಂದು)

ಸಂಪರ್ಕ ಸಂಖ್ಯೆ : 9448647947, 994568495, 9480527765

ಸಂತೋಷ್ ರಾವ್. ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160

Related post

Leave a Reply

Your email address will not be published. Required fields are marked *