ಚಿಟವ – Pratincole

ಅರೇ! ಯಾವುದೋ ಔಷಧದ ಹೆಸರಿನಂತಿರುವ ಇದು ಹಕ್ಕಿಯೇ ಎಂದು ನಿಮಗನ್ನಿಸಬಹುದು! ಹೌದು ಇದು ಹಕ್ಕಿಯೇ! ನಮ್ಮಲ್ಲಿನ ಅತಿ ಮುದ್ದಾದ ಹಕ್ಕಿಗಳಲ್ಲಿ ಒಂದು ಈ ಪ್ರಾಟಿನ್‍ಕೋಲ್. ಕನ್ನಡದಲ್ಲಿ ಇವನ್ನು ಚಿಟವ ಎಂದು ಕರೆಯುತ್ತಾರೆ. ಕವಲುಬಾಲದ ಚಿಟವ, ಸಣ್ಣ ಚಿಟವ ಇತ್ಯಾದಿ ಹೆಸರುಗಳಿಂದ ಕರೆಸಿಕೊಳ್ಳುತ್ತದೆ.

ಸಾಮಾನ್ಯವಾಗಿ ನೀರಿನಾಸರೆಗಳ ಸಮೀಪ ಕಂಡುಬರುವ ಇವು ಕಲ್ಲು, ಮರಳಿನ ಭೂಭಾಗದೊಂದಿಗೆ ಸೇರಿಹೋಗುವಂತಹ ಗರಿಹೊದಿಕೆಯನ್ನು ಹೊಂದಿದೆ. ಗುಬ್ಬಿ ಮತ್ತು ಮೈನಾದ ನಡುವಿನ ಗಾತ್ರದ ಪುಟ್ಟಕಾಲು ಮತ್ತು ಪುಟ್ಟ ಕೊಕ್ಕಿನ ಹಕ್ಕಿ. ಭಾರತದಾದ್ಯಂತ ಮತ್ತು ಪಾಕಿಸ್ಥಾನ, ನೇಪಾಳ, ಬಾಂಗ್ಲಾದೇಶಗಳಲ್ಲಿಯೂ ಕಂಡುಬರುತ್ತದೆ. ಸ್ಥಳೀಯವಾಗಿ ವಲಸೆ ಹೋಗುವ ಹಕ್ಕಿ. ಗಾಳಿಯಲ್ಲಿ ಹಾರುತ್ತಲೇ ಕೀಟಗಳನ್ನು ಹಿಡಿದು ತಿನ್ನುತ್ತವೆ. ಕೀಟಾಹಾರಿ ಹಕ್ಕಿ. ಸಾಮಾನ್ಯವಾಗಿ ಬೆಳಗ್ಗೆ ಮತ್ತು ಸಂಜೆ ಚಟುವಟಿಕೆಯಿಂದಿರುತ್ತದೆ.

ಕರ್ನಾಟಕದಲ್ಲಿ ಮೂರುಬಗೆಯ ಚಿಟವಗಳು ಕಂಡುಬರುತ್ತವೆ. ಕೊರಳುಪಟ್ಟಿ ಚಿಟವ (Collared Pratincole Glareola pratincola), ಚಿಟವ (Oriental Pratincole Glareola maldivarum) ಮತ್ತು ಸಣ್ಣ ಚಿಟವ (Small Pratincole Glareola lactea)

ಇದರ ಗೂಡು ಎಂದರೆ ನೀರಿನಾಸರೆಯ ಸಮೀಪ ನೆಲದ ಮೇಲೆ ತುಸುತಗ್ಗಿನಲ್ಲಿ ಇಲ್ಲವೇ ಬಂಡೆಕಲ್ಲುಗಳ ಸಮೀಪದ ಸ್ಥಳ! ಹೌದು ನೆಲದ ಮೇಲೆಯೇ ಮೊಟ್ಟೆಯಿಡುವ ಹಕ್ಕಿಯಿದು. ಆದರೆ, ಮೊಟ್ಟಗಳ ಬಣ್ಣ ಎಷ್ಟು ಪರಿಸರದೊಂದಿಗೆ ಹೊಂದಿಕೊಂಡಿರುತ್ತದೆ ಎಂದರೆ ಯಾರಾದರು ಹತ್ತಿರ ಹೋದಾಗ ಆ ಹಕ್ಕಿ ಎಚ್ಚರಿಕೆಯ ಕೂಗನ್ನು ಕೂಗಿದಾಗಲೇ ಅಲ್ಲೇಲ್ಲೋ ಇದರ ಗೂಡಿದೆ ಎಂದು ತಿಳಿಯುವುದು! ಹಾಗೆಯೇ ಇವುಗಳ ಮರಿಗಳು ಸಹ ಅದ್ಭುತವಾಗಿ ಪರಿಸರದೊಂದಿಗೆ ಹೊಂದಿಕೊಂಡುಬಿಟ್ಟಿರುತ್ತದೆ. ಸೂಕ್ಷ್ಮವಾಗಿ ನೋಡಿದಾಗ ಮರಿಗಳು ಗುಡುಗುಡುಗುಡು ಓಡಾಡುವುದು ಕಾಣುತ್ತದೆ.

ಇಂತಹ ವಿಸ್ಮಯದ ಹಕ್ಕಿ ನಿಮಗೆ ಕಂಡರೆ ksn.bird@gmail.com ಬರೆದು ತಿಳಿಸಿ ಅಥವಾ ಕಾಮೆಂಟ್ ಮಾಡಿ.

ಕಲ್ಗುಂಡಿ ನವೀನ್

ವನ್ಯ ಜೀವಿ ಸಂರಕ್ಷಣೆ ತಜ್ಞರು

ಚಿತ್ರಗಳು : ಜಿ ಎಸ್ ಶ್ರೀನಾಥ ಹಾಗು ಕೆ ಪಿ ಇಸ್ಮಾಯಿಲ್

ಈ ಶತಮಾನ ವನ್ಯಜೀವಿ ಮತ್ತು ಸಂರಕ್ಷಣೆಯ ಸುವರ್ಣ ಪರ್ವ

Related post

Leave a Reply

Your email address will not be published. Required fields are marked *