ಚಿತ್ತದೊಳಗೊಂದು ಚಿತ್ರರಂಗ

ಚಿತ್ತದೊಳಗೊಂದು ಚಿತ್ರರಂಗ

ಶ್ರೀಮತಿ ಆಶಾ ರಘು ರವರು ತಮ್ಮ ಕೃತಿಗಳಿಗೆ ಆಯ್ದುಕೊಳ್ಳುವ ವಿಷಯಗಳೇ ಬಹು ಭಿನ್ನತೆಗೊಳೊಂದಿಗೆ ಕೂಡಿರುತ್ತದೆ. ವೇದೋತ್ತರ ಕಾಲದ ವಿಷಯಗಳು ಕಾಲ್ಪನಿಕವಾಗಿ ಆವರ್ತ ದಲ್ಲಿ ಮೂಡಿಬಂದರೆ ಪುನರ್ಜನ್ಮದ ಪರಿಕಲ್ಪನೆ “ಗತ” ಕಾದಂಬರಿಯಲ್ಲಿ ಚಿತ್ರಿತವಾಗಿದೆ, 12 ನೇ ಶತಮಾನದಲ್ಲಿನ ಕಥೆಯೊಂದಿಗೆ ಅಲ್ಲಮನ ವಚನದಲ್ಲಿ ಬರುವ ಹೊನ್ನು, ಹೆಣ್ಣು, ಮಣ್ಣು “ಮಾಯೆ” ಯಾಗಿ ರಚಿತವಾಗಿದೆ. ಹಾಗೆಯೇ ತಮ್ಮ ಹೊಸ ಕಾದಂಬರಿ “ಚಿತ್ತರಂಗ” ದಲ್ಲಿ ಚಲನಚಿತ್ರರಂಗದ ಪ್ರಖ್ಯಾತ ನಿರ್ದೇಶಕ ಹಾಗು ಅವನ ಬದುಕಿನಲ್ಲಿ ಬರುವ ಮೂರು ಹೆಣ್ಣುಗಳ ಮೂಲಕ ನೈಜ ಸಂಗತಿಗಳಿಗೆ ಕಥೆಯ ಮೆರಗು ಕೊಟ್ಟು ಸುಂದರ ಕಾದಂಬರಿಯಾಗಿಸಿದ್ದಾರೆ.

ಸುಬ್ಬಣ್ಣ – ನಿರ್ದೇಶಕ
ರಾಜೇಶ್ವರಿ – ಸುಬ್ಬಣ್ಣನ ಪತ್ನಿ
ಕಸ್ತೂರಿ – ಖ್ಯಾತ ಚಿತ್ರನಟಿ
ಅಹಲ್ಯ – ಸುಬ್ಬಣ್ಣನಿಂದ ಖ್ಯಾತಳಾದ ಚಿತ್ರನಟಿ

ರಂಗನಾಥ್ ಎಂಬ ಪತ್ರಕರ್ತರಿಗೆ ಸುಬ್ಬಣ್ಣ ಸಂದರ್ಶನ ಕೊಡುವ ಮೂಲಕ ಚಿತ್ತರಂಗ ತೆರೆದುಕೊಳ್ಳುತ್ತದೆ. ಸುಬ್ಬಣ್ಣ ತನ್ನ ಬಾಲ್ಯವನ್ನು ವೃತ್ತಿರಂಗಕ್ಕೆ ಪ್ರವೇಶಿಸಲು ಪಟ್ಟ ಕಷ್ಟ, ಮುಂದೆ ಗುರುಗಳ ಅನುಗ್ರಹದೊಂದಿಗೆ ಒದಗಿ ಬಂದ ಅವಕಾಶ, ನಿರ್ದೇಶಕನಾಗಿ ಖ್ಯಾತನಾಗಿದ್ದು ಹಾಗು ತನ್ನ ಮದುವೆ ಅಷ್ಟನ್ನು ಮಾತ್ರ ಹೇಳಿ ಪತ್ರಕರ್ತರನ್ನು ಸಾಗಹಾಕಿ ನಂತರ ಮುಂದಿನ ಅಧ್ಯಾಯಗಳಲ್ಲಿ ನಾಲ್ಕು ಪಾತ್ರಗಳ ನಿಜವಾದ ಅಂತರಂಗದ ಮೂಲಕ ವಿಭಿನ್ನ ಭಾವಗಳ, ತೊಳಲಾಟಗಳ, ಅಸಹಾಯಕತೆ, ಮುಗ್ದತೆಗಳ ಮೂಲಕ 70 – 80 ರ ದಶಕದಲ್ಲಿ ನೆಡೆದ ನೈಜ ಸಂಗತಿಯನ್ನು ಕಾದಂಬರಿಯಾಗಿಸಿದ್ದಾರೆ.

ಸುಬ್ಬಣ್ಣ ಖ್ಯಾತ ನಿರ್ದೇಶಕ, ಸದಾ ಮಹಿಳಾ ಆಧಾರಿತ ಕಾದಂಬರಿಗಳನ್ನೇ ಆಯ್ಕೆ ಮಾಡಿ ಚಿತ್ರಕತೆಯನ್ನು ತನ್ನ ನಿರ್ದೇಶನ ಕೌಶಲ್ಯತೆಯಿಂದ ಇನ್ನಷ್ಟು ಸುಂದರವಾಗಿಸಿ ಯಶಸ್ವಿ ಚಿತ್ರಗಳನ್ನು ಕೊಟ್ಟರೂ ಎಲ್ಲೋ ಒಂದು ಕಡೆ ನಾನು ಎಂಬುವ ಅಹಂ ಸಹಜವಾಗಿ ಬಂದು ಕಸ್ತೂರಿಯ ಪರಿಚಯ, ಒಡನಾಟ, ಪ್ರಣಯ ಸಂಭಂದಕ್ಕೆ ತಿರುಗಿ ಕಸ್ತೂರಿಯ ಕೆಲ ಸ್ವಭಾವಗಳಿಂದ ಅವಳಿಂದ ಅಂತರ ಕಾಯ್ದುಕೊಂಡು ಮುಂದೆ ಚಿತ್ರರಂಗದಲ್ಲಿ ಯಶಸ್ವಿಯ ಮೆಟ್ಟಿಲಲ್ಲಿ ಇರುವಾಗಲೇ ಆತನಿಗೆ ಅಹಲ್ಯ ಹತ್ತಿರವಾಗುತ್ತಾಳೆ. ಅಹಲ್ಯಾಳ ಸಂಭಂದದ ಸುಳಿಯ ಸೆಳೆತ ಎಷ್ಟಿರುತ್ತದೆಂದರೆ ತಮ್ಮ ಎಲ್ಲ ಚಿತ್ರಗಳಿಗೆ ಅಹಲ್ಯಾಳನ್ನೇ ನಾಯಕಿಯನ್ನಾಗಿಸಿ ಅವಳಿಗಾಗಿಯೇ ಸಿನಿಮಾ ಕಥೆಗಳನ್ನು ಹೆಣೆದು ಚಿತ್ರರಂಗದಲ್ಲಿ ಯಶಸ್ವಿ ಚಿತ್ರಗಳನ್ನು ಕೊಡುತ್ತ ಹೋಗುತ್ತಾರೆ. ಹೂವಿನ ಜೊತೆ ನಾರು ಎಂಬಂತೆ ಅಹಲ್ಯಾಳು ಇದರಿಂದ ಚಿತ್ರರಂಗದಲ್ಲಿ ಬೆಳೆದು ಸುಬ್ಬಣ್ಣನವರ ಮುಂದೆಯೇ ಇನ್ನೊಬ್ಬ ನಟನ ಜೊತೆ ಸಲುಗೆಯಿಂದ ಓಡಾಡುತ್ತ ಸುಬ್ಬಣ್ಣ ಪರಿತಪಿಸುವಂತೆ ಮಾಡಿ ಕೊನೆಗೂ ಅಹಲ್ಯಳನ್ನು ತೊರೆದು ತಮ್ಮ ಧರ್ಮಪತ್ನಿ ರಾಜೇಶ್ವರಿಯ ಬಳಿಗೆ ಹೋಗುವಷ್ಟರಲ್ಲಿ ಸುಬ್ಬಣ್ಣನವರ ಮಾನಸಿಕ ಸ್ಥಿತಿ ಬಹಳ ಚಿಂತಾಜನಕವಾಗಿರುತ್ತದೆ.

ಇತ್ತ ಕಸ್ತೂರಿ ಚಿತ್ರರಂಗದ ಮೇರು ನಟನನ್ನೇ ಸರಿಯಾಗಿ ಮಾತನಾಡಿಸದೆ ಅವಮಾನಿಸಿದಳು ಎಂಬುದೇ ನೆಪವಾಗಿ ಮುಂದೆ ಎಲ್ಲೂ ಅವಕಾಶ ಸಿಗದೇ ಇತ್ತ ಸೋಮನಾಥ್ ಎಂಬ ಉದ್ಯಮಿಯೊಬ್ಬರ ಸಾಂಗತ್ಯ ಬೆಳೆದು ಶಾಸ್ತ್ರೋಕ್ತ ವಿವಾಹವು ಆಗದೆ ಅವಮಾನಿಸಲ್ಪಟ್ಟು ಪುನಃ ಬದುಕಿಗಾಗಿ ರಂಗಭೂಮಿಗೆ ತೆರಳಿ ನಾಟಕಗಳಲ್ಲಿ ನಟಿಸುತ್ತಾ ಅಲ್ಲಿ ದಾಂಡೇಲಿ ನರಸಪ್ಪ ಎಂಬ ವ್ಯಕ್ತಿಯ ಪರಿಚಯವಾಗಿ ಪರಿಚಯ ಸಲುಗೆಗೆ ತಿರುಗಿ ಕೊನೆಗೂ ಅವನನ್ನು ಮದುವೆಯಾಗಿ ಅಧಿಕೃತ ವಿವಾಹಿತೆ ಎಂಬ ಪಟ್ಟ ಸಿಕ್ಕಿದರೂ ಮುಂದೆ ಅವಳ ಜೀವನ ನರಕ ಸದೃಶ್ಯವಾಗುತ್ತದೆ. ಇವೆಲ್ಲಾ ಸಂಗತಿಗಳು ತಿಳಿದು ಸಹ ಸುಬ್ಬಣ್ಣನವರನ್ನು ಕೊನೆಯವರೆಗೂ ಪ್ರೀತಿಸಿ ನಾಲ್ಕು ಮಕ್ಕಳನ್ನು ಹೆತ್ತುಕೊಟ್ಟ ರಾಜೇಶ್ವರಿಯ ಪಾತ್ರ ಇವೆಲ್ಲವನ್ನೂ ಮೀರಿದಂತದ್ದು ಮತ್ತು ಬಹಳ ಕಾಲ ನೆನಪಿನಲ್ಲಿ ಇರುವಂತದ್ದು.

ಸುಬ್ಬಣ್ಣನವರದು ಸಂಬಂಧಗಳ ಸುಳಿಯಲ್ಲಿ ಸಿಲುಕಿ ಪರಿತಪಿಸುವ ಅಸಹಾಯಕ ಪಾತ್ರವಾದರೆ, ಕಸ್ತೂರಿಯದ್ದು ದುರಂತ, ಇಲ್ಲಿ ಬೆಣ್ಣೆಯಂತೆ ನುಣುಚಿಕೊಳ್ಳುವ ಪಾತ್ರವೇ ಅಹಲ್ಯ. ಸುಬ್ಬಣ್ಣನವರು ಅಷ್ಟೆಲ್ಲಾ ಹಿತಾಸಕ್ತಿ ತೋರಿಸಿ ಅಹಲ್ಯಾಳ ಹಿರಿಮೆಯನ್ನು ಹೊಸ ಹೊಸ ಪಾತ್ರಗಳನ್ನೂ ಸೃಷ್ಟಿಸುತ್ತ ಯಶಸ್ಸಿನ ಶಿಖರಕ್ಕೆ ಕೊಂಡೊಯ್ದರು ಅವರ ಪ್ರೀತಿಯನ್ನು ಆಧುನಿಕತೆಯ ಸೋಗಿನಲ್ಲಿ ಮರೆತು ಅವರ ಅಂತರಂಗವನ್ನು ಅರಿಯದೆ ಕಡೆಗಣಿಸುತ್ತಾಳೆ. ತನ್ನನ್ನು ಕಡೆಗಣಿಸಿದಳು ಎಂಬ ಅವಮಾನವನ್ನೇ ಒಂದು ಯಶಸ್ವಿ ಚಿತ್ರವನ್ನಾಗಿಸುವ ಸುಬ್ಬಣ್ಣ ಕಸ್ತೂರಿಯ ದುರಂತದಿಂದ ತಮ್ಮನ್ನೇ ತಾವು ಕಂಡುಕೊಂಡು ನೊಂದುಕೊಳ್ಳುತ್ತಾರೆ. ರಾಜೇಶ್ವರಿ ತಮ್ಮ ಬದುಕಿನುದ್ದಕ್ಕೂ ಎಲ್ಲವನ್ನು ಸರಿದೂಗಿಸಿಕೊಂಡು ನಾಲ್ಕು ಮಕ್ಕಳ ವಿದ್ಯಾಭ್ಯಾಸ ನೋಡಿಕೊಂಡು ತಮ್ಮ ಇಡೀ ಜೀವನವನ್ನೇ ಸುಬ್ಬಣ್ಣನವರಿಗೆ ಮುಡುಪಾಗಿಡುತ್ತಾರೆ.

ಲೇಖಕಿ ಆಶಾ ರಘು ನಟಿ ಶ್ರುತಿಯವರಿಗೆ ಕಾದಂಬರಿಯನ್ನು ಅರ್ಪಿಸಿದ್ದಾರೆ

ಆಶಾ ರಘು ತಮ್ಮ “ಗತ” ಕಾದಂಬರಿಯಲ್ಲಿ ನಾಯಕಿಯ ಪುನರ್ಜನ್ಮದ ನೆನಪುಗಳನ್ನು ಅದರಿಂದ ಹಾಗುವ ಮಾನಸಿಕ ತಲ್ಲಣಗಳನ್ನು ಇತರರಿಂದ ಹೇಳಿಸುವ ಅಥವಾ ಕೆಲವೊಂದು ಕಡೆ ತಾವೇ ಹೇಳಿ ಒಂದು ಹೊಸ ಪ್ರಯೋಗವನ್ನು ಮಾಡಿದ್ದರು ಆದರೆ ಚಿತ್ತರಂಗದಲ್ಲಿ ಇಡೀ ಕಥೆಯನ್ನು ತಾವು ಹೇಳದೆ ಪಾತ್ರಗಳ ಮೂಲಕ ಹೇಳಿಸಿರುವುದು ಕಥಾವಸ್ತುವಿಗೆ ಸರಿಯಾಗಿದೆ, ಅದೂ ಅಲ್ಲದೆ ಈ ಕಥೆ 60 ರಿಂದ 80 ರ ದಶಕದಲ್ಲಿ ನಿಜವಾಗಿ ಘಟಿಸಿದ್ದು ಲೇಖಕಿ ಆ ಎಳೆಯನಷ್ಟೇ ತೆಗೆದುಕೊಂಡು ತಮ್ಮದೇ ಕಥೆಯನ್ನು ಹೆಣೆದು ಓದುಗರು ಇಡೀ ಕಾದಂಬರಿಯನ್ನು ಎಲ್ಲೂ ನಿಲ್ಲಿಸದೆ ಓದಿಕೊಂಡು ಹೋಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಕಾದಂಬರಿಯ ಕೊನೆಯಲ್ಲಿ ಅಹಲ್ಯಾಳ ಸಧ್ಯದ ಬದುಕಿನ ಸ್ಥಿತಿ ವಿವರಿಸಿರುವುದನ್ನು ಓದಿದರೆ ಮೋಡದೊಳಗಿನ ಉಳಿದ ಬಾಕಿ ಮಳೆ ಹನಿಗಳು ಇನ್ನಷ್ಟು ಬಿದ್ದು ನೀಲಾಕಾಶ ಗೋಚರಿಸಬಹುದಿತ್ತು ಎನಿಸುತ್ತದೆ.

ಇಂಥದೊಂದು ಕಥಾವಸ್ತುವನ್ನು “ಚಿತ್ತರಂಗ” ಕೃತಿಯ ಮೂಲಕ ಕನ್ನಡ ಸಾಹಿತ್ಯಲೋಕಕ್ಕೆ ಹೊಸ ನಿರೂಪಣೆಯೊಂದಿಗೆ ಶ್ರೀಮತಿ ಆಶಾ ರಘು ರವರು ಕೊಟ್ಟಿದ್ದಾರೆ. ಈ ಕಾದಂಬರಿಯು ಎಲ್ಲ ಓದುಗರ ಮೆಚ್ಚುಗೆ ಪಡೆಯಲಿ ಎಂಬುದು ಸಾಹಿತ್ಯಮೈತ್ರಿ ವತಿಯಿಂದ ಆಶಿಸುತ್ತೇವೆ.

ಕು ಶಿ ಚಂದ್ರಶೇಖರ್

Related post

Leave a Reply

Your email address will not be published. Required fields are marked *