“ಚಿತ್ತರಂಗ” – ಆಶಾ ರಘು ಹೊಸ ಕಾದಂಬರಿ
ಕನ್ನಡದ ಕಾದಂಬರಿಗಾರ್ತಿ ಶ್ರೀಮತಿ ಆಶಾ ರಘು ರವರು ತಮ್ಮ “ಆವರ್ತ” ಕಾದಂಬರಿಯ ಮೂಲಕ ಕನ್ನಡ ಸಾಹಿತ್ಯಲೋಕದಲ್ಲಿ ಜನಪ್ರಿಯರಾದವರು ಮತ್ತು ಆ ಕೃತಿಗಾಗಿಯೇ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಇತರ ಪ್ರಶಸ್ತಿಗಳನ್ನು ಮುಡುಪಿಗೇರಿಸಿಕೊಂಡವರು. ಆವರ್ತ, ಗತ, ಮಾಯೆ ಕಾದಂಬರಿಗಳ ನಂತರ ತಮ್ಮ ಮತ್ತೊಂದು ಕಾದಂಬರಿ “ಚಿತ್ತರಂಗ” ದ ಮೂಲಕ ಮತ್ತೊಮ್ಮೆ ಕನ್ನಡ ಓದುಗರ ಮುಂದೆ ಬಂದಿದ್ದಾರೆ.
“ಚಿತ್ತರಂಗ” ಲೇಖಕರೇ ಹೇಳಿದಂತೆ ಇದೊಂದು ಎಪ್ಪತ್ತು-ಎಂಭತ್ತರ ದಶಕದ ಕನ್ನಡ ಚಿತ್ರರಂಗದ ವಾತಾವರಣವನ್ನು ಹೊಂದಿರುವ ಕಥೆ. ಈ ಕಾದಂಬರಿಯಲ್ಲಿ ಬರುವ ಎಲ್ಲಾ ಪಾತ್ರಗಳೂ ಹಾಗೂ ಸನ್ನಿವೇಶಗಳೂ ಕೇವಲ ಕಾಲ್ಪನಿಕವಾಗಿದ್ದು, ಯಾರದೇ ನಿಜ ಬದುಕು ಅಥವಾ ಘಟನೆಗಳಿಗೆ ಸಂಬಂಧಪಟ್ಟುದಲ್ಲ. ಚಿತ್ರ ನಿರ್ದೇಶಕನೊಬ್ಬನ ಹಾಗೂ ಅವನೊಂದಿಗೆ ನಿಕಟ ಸ್ನೇಹವಲಯಕ್ಕೆ ಬರುವ ಕಲಾವಿದೆಯರ ಬದುಕಿನ ತೆರೆಮರೆಯ ಅಂತರಂಗವೇ ‘ಚಿತ್ತರಂಗ’. ಕೇವಲ ತಾಂತ್ರಿಕ ಅಥವಾ ಮನೋಧರ್ಮದ ದೃಷ್ಟಿಯಿಂದ ಇದು ಎಪ್ಪತ್ತು-ಎಂಭತ್ತರ ದಶಕದ ಕನ್ನಡ ಚಿತ್ರರಂಗದ ವಾತಾವರಣವನ್ನು ಉಳ್ಳದ್ದಾಗಿದೆಯೆಂದು ಉಲ್ಲೇಖಿಸುತ್ತಿದ್ದೇನೆಯೋ ಹೊರತು, ಉಳಿದಂತೆ ಇದು ಯಾವ ಕಾಲಘಟ್ಟದಲ್ಲಿ ಬೇಕಾದರೂ ಕಲ್ಪಿಸಿಕೊಳ್ಳಬಹುದಾದ ಕಥೆಯೇ ಆಗಿದೆ.
ಶ್ರೀಮತಿ ಆಶಾ ರಘು ರವರು ರಂಗಭೂಮಿಯ ಹಿನ್ನೆಲೆಯಿಂದ ಬಂದವರು ಅಭಿನಯ ತರಂಗ’ದಲ್ಲಿ ರಂಗಭೂಮಿಯ ಡಿಪ್ಲೊಮೊ ಮಾಡಿ, ಕೆಲವು ನಾಟಕಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಕೆಲಕಾಲ ‘ನವರಸ ಕಲಾಶಾಲೆ’ ಎಂಬ ಕಲಾಶಾಲೆಯನ್ನು ಸ್ಥಾಪಿಸಿ ರಂಗಭೂಮಿ ಹಾಗೂ ಸಿನಿಮಾ ವಿಭಾಗದ ವಿದ್ಯಾರ್ಥಿಗಳಿಗೆ ಹಲವು ನಾಟಕಗಳನ್ನು ರಚಿಸಿ, ಸ್ವತಃ ನಿರ್ದೇಶನವನ್ನೂ ಕೂಡ ಮಾಡಿದ್ದಾರೆ. ಟಿ.ಎನ್.ಸೀತಾರಾಮ್, ನಾಗತಿಹಳ್ಳಿ ಚಂದ್ರಶೇಖರ್, ಎಂ.ಎನ್.ಜಯಂತ್ ಮೊದಲಾದವರೊಂದಿಗೆ ಕಿರುತೆರೆಯ ಧಾರಾವಾಹಿಗಳಿಗೆ ಕಥಾವಿಸ್ತರಣೆ ಹಾಗೂ ಸಂಭಾಷಣೆ ವಿಭಾಗದಲ್ಲಿ ಕೆಲಸ ಮಾಡಿದೆ. ಸಿನಿಮಾವೊಂದಕ್ಕೆ ಸಹಾಯಕ ನಿರ್ದೇಶಕಿಯಾಗಿ ಕೂಡಾ ಕಾರ್ಯ ನಿರ್ವಹಿಸಿದ್ದಾರೆ. ಆನಂತರ ಉಪನ್ಯಾಸಕಿಯಾಗಿ ಕೆಲಕಾಲ ದುಡಿದು, ನಂತರ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡು, ಪೂರ್ಣ ಪ್ರಮಾಣದಲ್ಲಿ ಅದರಲ್ಲಿಯೇ ನಿರತರಾಗಿದ್ದಾರೆ. ಆ ಅಲ್ಪಕಾಲದ ಕಿರುತೆರೆ ಹಾಗೂ ಬೆಳ್ಳಿತೆರೆಗಳ ಅನುಭವಗಳನ್ನು ತಾಂತ್ರಿಕವಾಗಿ “ಚಿತ್ತರಂಗ” ಕೃತಿಯಲ್ಲಿ ತಂದಿದ್ದಾರೆ.
ಮುನ್ನುಡಿಯಲ್ಲಿ ಡಾ.ಎಚ್.ಎಸ್.ಸತ್ಯನಾರಾಯಣ ಅವರು ಈ ಕಾದಂಬರಿಯು ಆ ಕಾಲದ ಕನ್ನಡದ ಸುಪ್ರಸಿದ್ಧ ನಿರ್ದೇಶಕರೊಬ್ಬರ ಕುರಿತಾದದ್ದು ಇರಬಹುದೇ ಅನ್ನಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅವರ ಅಭಿಪ್ರಾಯವನ್ನು ಲೇಖಕಿ ಗೌರವಿಸಿ “ಆ ಕಾಲಘಟ್ಟದ ಎಲ್ಲ ಜನಪ್ರಿಯ ನಿರ್ದೇಶಕರೂ, ತಾರೆಯರೂ, ಅವರುಗಳ ಜೀವನದ ಕಥೆಗಳೂ ನನ್ನನ್ನು ಪ್ರಭಾವಿಸಿರುವುದು ನಿಜ. ಆದರೆ, ನಾನು ಕಾದಂಬರಿಯನ್ನು ಅದು ಎಳೆದುಕೊಂಡ ಹೋದ ಹಳ್ಳ ದಿಣ್ಣೆ ದಾರಿಯಲ್ಲೆಲ್ಲಾ ಸಾಗಿ, ಸಂದಿಗೊಂದಿಗಳಲ್ಲೆಲ್ಲಾ ತಿರುಗಿ, ಹಿಗ್ಗಿಸಿ… ಕುಗ್ಗಿಸಿ… ಕೆಲವೊಮ್ಮೆ ಗೌಣವಾಗಿಯೂ, ಕೆಲವೊಮ್ಮೆ ಅತಿರೇಕವಾಗಿಯೂ ಸಂದರ್ಭಗಳನ್ನು ಚಿತ್ರಿಸಿ ನನ್ನದೇ ಆದ ರೀತಿಯಲ್ಲಿ ಪಾತ್ರಪೋಷಣೆ ಮಾಡಿದ್ದೇನೆ. ಕಥೆಯನ್ನು ನನ್ನಿಷ್ಟಕ್ಕೂ, ಕಾದಂಬರಿಯು ತಾನೇ ಬೇಡಿದಂತೆಯೂ ಹುಲುಸಾಗಿ ಬೆಳೆಸಿದ್ದೇನೆ! ಈ ಕಾದಂಬರಿಯಲ್ಲಿ ಬರುವ ಪಾತ್ರಗಳ ಕಥೆಯನ್ನು ನಿಜ ವ್ಯಕ್ತಿಗಳ ಕಥೆಯೆಂದು ಭಾವಿಸಿದರೆ ಬಹಳ ಅನಾಹುತವೂ, ಅಪಚಾರವೂ ಆಗುವುದು. ಆದ್ದರಿಂದ ಓದುಗರು ಇದನ್ನು ಕೇವಲ ಒಂದು ಸೃಜನಶೀಲ ಕಲ್ಪಿತ ಕಾದಂಬರಿಯಾಗಿಯಷ್ಟೇ ಭಾವಿಸಬೇಕು” ಎಂದು ವಿನಂತಿಸಿಕೊಂಡಿದ್ದಾರೆ.
ಈ ಕಾದಂಬರಿಯನ್ನು ಶ್ರೀ ರಘುವೀರ್ ಸಮರ್ಥ್ ರವರು ತಮ್ಮ ಸಾಹಿತ್ಯಲೋಕ ಪಬ್ಲಿಕೇಷನ್ ನಿಂದ ಹೊರತರುತ್ತಿದ್ದಾರೆ. ಮುಂದಿನ ತಿಂಗಳು ಈ ಕೃತಿಯ ಲೋಕಾರ್ಪಣೆಯಾಗಲಿದೆ. ಶ್ರೀಯುತ ಜೋಗಿಯವರು ಈ ಕಾದಂಬರಿಗೆ ಬೆನ್ನುಡಿ ಬರೆದಿದ್ದಾರೆ.
ಶ್ರೀಮತಿ ಆಶಾ ರಘು ರವರು ಸದಾ ವಿಭಿನ್ನ ವಸ್ತುವನ್ನು ಆಯ್ದುಕೊಂಡು ಸಾಹಿತ್ಯದಲ್ಲಿ ಅಳವಡಿಸುತ್ತಿರುವುದು ಕನ್ನಡ ಸಾಹಿತ್ಯಲೋಕಕ್ಕೆ ಸಂತಸದ ವಿಷಯ. ಈ ಕಾದಂಬರಿಯು ಕನ್ನಡ ಸಾಹಿತ್ಯಲೋಕಕ್ಕೆ ಮತ್ತೊಂದು ಮುಕುಟವಾಗಲಿ ಎಂದು ಸಾಹಿತ್ಯಮೈತ್ರಿ ತಂಡ ಹಾರೈಸುತ್ತದೆ.
ಈ ಕಾದಂಬರಿಯು ಪ್ರಿ-ಆರ್ಡರ್ ಮಾಡಿ ತರಿಸಿಕೊಳ್ಲಲು ರಘುವೀರ್ ಸಮರ್ಥ್ ರವರ ವಾಟ್ಸಪ್ ಸಂಖ್ಯೆ 9945939436 ಗೆ ಸಂಪರ್ಕಿಸಬಹುದು. ಪುಸ್ತಕದ ಮುಖಬೆಲೆ ರೂ 370/- ಪ್ರಿ-ಆರ್ಡರ್ ಮಾಡಿದರೆ ವಿಶೇಷ ರಿಯಾಯಿತಿಯಲ್ಲಿ ರೊ 320/- ಕ್ಕೆ ಕೃತಿ ಲಭ್ಯವಿದೆ.
ಸಾಹಿತ್ಯಮೈತ್ರಿ ತಂಡ