ಚಿರಸ್ಥಾಯಿ

ಆ ಮ್ಯಾದರ ದಂಪತಿಗಳನ್ನು ಎಳೆದೊಯ್ಯುತ್ತಿದ್ದ ರಾಜಭಟ್ಟರನ್ನು ಆ ಮುದ್ದಾದ ಸುಮಾರು ಏಳೆಂಟು ವರುಷದ ಬಾಲೆ ಕಾಲು ಹಿಡಿದು ಅಂಗಲಾಚಿ ಬೇಡಿದ್ದಳು. “ಅಣ್ಣಂದಿರ, ನನ್ನ ಅಪ್ಪ ಅಮ್ಮ ಕೊಡಬೇಕಾಗಿದ್ದ ಸುಂಕವನ್ನು ನಾನೇ ಹೇಗಾದರೂ ತಂದುಕೊಡುವೆ ಅವರನ್ನು ಬಿಟ್ಟಿಬಿಡಿ, ನನ್ನನು ನಿಮ್ಮ ಪುಟ್ಟ ಮಗಳು ಎಂದು ತಿಳಿಯಿರಿ”.

ಕಿವಿ ಕೇಳಿಸದೇನೋ ಎಂಬಂತೆ ಆ ಭಟರು ಧೂಳು ತುಂಬಿದ ಆ ದಾರಿಯಲ್ಲಿ ಆ ದಂಪತಿಯನ್ನು ರಾಕ್ಷಸರಂತೆ ಎಳೆದುಕೊಂಡು ಹೋದರು. “ಈ ರಾಜ್ಯ ಬೊಕ್ಕಸಕ್ಕೆ ನನ್ನ ತಂದೆ ತಾಯಿ ನೀಡುವ ಸುಂಕ ಕಡಿಮೆ ಆಗಿತ್ತೇ ?, ಕೊಳಲುಗಳನ್ನು ಮಾರಿ ಹೊಟ್ಟೆ ತುಂಬಿಸಿಕೊಳ್ಳುವುದೇ ಕಷ್ಟ, ಇನ್ನು ಸುಂಕ ಎಲ್ಲಿಂದ ತರೋದು ? ” ಎಂದು ತನ್ನಲ್ಲೇ ಅಂದುಕೊಳ್ಳುತ್ತಾ ಕೈಯಲ್ಲಿ ಕುಡುಗೋಲು ಹಿಡಿದು ಬೆಳಕೇ ನುಸುಳದ ಕಾಡಿಗೆ ಆ ಹೆಣ್ಣು ಮಗಳು ಮೆಲ್ಲನೆ ನಡೆದಳು.

ಆಗ ತಾನೇ ಚಿಗುರಿದ ಬಲವಾದ ಚೂಪಾದ ಬಿದಿರಿನ ಮೊಳಕೆಗಳ ಪಕ್ಕದಲ್ಲೇ ಮೃದುವಾದ ಪಾದವನ್ನು ಇಡುತ್ತ, ನಗುವ ಹೂಗಳನ್ನು ನೋಡುತ್ತಾ ಉದ್ದನೆಯ ಮುಳ್ಳುಗಳಿಂದ ಚುಚ್ಚಿ ರಕ್ತ ಹೀರಬಲ್ಲ ಮುಳ್ಳುಗಳ ಕವಲುಗಳನ್ನು ಮೆತ್ತನೆಯ ಕೈಗಳಿಂದ ಪಕ್ಕಕ್ಕೆ ಸರಿಸುತ್ತಾ, ನಡೆದಳು ಬಾಲೆ. ಅದೆಷ್ಟು ಗುಡ್ಡ ಹತ್ತಿದಳೋ ? ಎಂತೆಂತ ಬೆಟ್ಟ ಇಳಿದಿದ್ದಳೋ ? ಕೊನೆಗೂ ಕಂಡಿತು ದೂರದಲ್ಲೊಂದು ಬಿದಿರ ಮೆಳೆ. ಕುಡುಗೋಲು ಸೊಂಟ ಪಟ್ಟಿಯಿಂದ ಹುಡಿಗಿಯ ಕೈ ಸೇರಿತ್ತು

ಬಿದಿರ ಮೆಳೆಗೆ ಹಾಕಿದ ಮೃದುವಾದ ಏಟುಗಳು ಆ ನಿಶ್ಯಬ್ದವನ್ನು ಘಾಸಿಗೊಳಿಸಿದವು. ಎಲ್ಲೆಡೆ ಶಾಂತ.. ತಕ್ಷಣ ಅಪರಿಚಿತ ಧ್ವನಿ “ಯಾರದು ? ಈ ಕಾಡಿನಲ್ಲಿ ನನ್ನ ಅನುಮತಿಯಿಲ್ಲದೆ ಯಾರು ಒಂದು ಹುಲ್ಲು ಕಡ್ಡಿಯೊಂದನ್ನು ಸಹ ಕುಯ್ಯುವಂತಿಲ್ಲ ನಿಲ್ಲಿಸು ನಿನ್ನ ಅಧಿಕ ಪ್ರಸಂಗ,ಹೊರಡು ಇಲ್ಲಿಂದ” ಆ ಮುಗ್ದ ಹುಡುಗಿ ಭಯದಿಂದ ತರತರ ನಡುಗಿ ಮೆಲ್ಲನೆ ತಲೆಯೆತ್ತಿ ನೋಡಿದಳು… ಅಲ್ಲಿ ನೀಲವರ್ಣದ ದೇಹದವನು ಕೈಯಲ್ಲಿ ಕೊಳಲು, ಹಣೆಯಲ್ಲಿ ನಾಮ, ಕೌಸ್ತುಭ ಮಾಲೆಯು ಕೊರಳಲ್ಲಿ ಇರುವ ವ್ಯಕ್ತಿ. “ಅರೆ ನೀನು ಕೃಷ್ಣ ಅಲ್ಲವೇ! ಅಮ್ಮ ಹೇಳುತಿದ್ದ ಭಾಗವತದ ಕತೆಯಲ್ಲಿ ಇರುವಂತೆಯೇ ಇದ್ದೀಯ. ಹೇ ಭಗವಂತ ಧ್ರುವನಿಗೆ ವಿಷ್ಣುವಿನಂತೆ, ಪ್ರಹ್ಲಾದನಿಗೆ ನರಸಿಂಹನಂತೆ ಅವರ ಕಷ್ಟಗಳನ್ನು ಪರಿಹರಿಸಿದೆ. ನನ್ನ ಕಷ್ಟಗಳನ್ನು ದೂರಮಾಡುವೆಯ ತಂದೆ ?” ಎಂದು ಆ ಹುಡುಗಿ ಕೈ ಮುಗಿಯುವಷ್ಟರಲ್ಲಿ ” ನೀನು ನನ್ನವು ಸ್ತುತಿಸಿದ್ದು ಸಾಕು. ನನಗೆ ಈಗ ನಿಮ್ಮ ಸ್ತುತಿಗಳಿಗಿಂತ ನೀವು ನೀಡುವ ಕಾಣಿಕೆಗಳೇ ತುಂಬಾ ಉಪಯುಕ್ತ, ನನ್ನ ಕಾಡಿನಿಂದ ಏನನ್ನೇ ಪಡೆಯಲಿ ಪಡೆದುಕೊಂಡವರು ನನಗೆ ಸುಂಕವನ್ನು ನೀಡಬೇಕು, ನೀನು ನನಗೆ ಸುಂಕವನ್ನು ಕೊಡಬಲ್ಲೆಯಾ ? ಹಾಗಿದ್ದರೆ ನಿನ್ನ ಬಿದುರಿನ ಕಟಾವು ಕೆಲಸ ಮುಂದುವರೆಸು. ಇಲ್ಲದಿದ್ದರೆ ಹೊರಡು ಇಲ್ಲಿಂದ”. ಈ ಪ್ರತಿಕ್ರಿಯೆಯನ್ನು ನಿರೀಕ್ಷಿಸದ ಬಾಲೆ “ಎಲ್ಲರನು ಕಾಪಾಡುವ ನೀನೆ ಈ ರೀತಿ ಮಾತನಾಡುತ್ತಿರುವುದು ನನ್ನಿಂದ ನಂಬಲಾಗುತ್ತಿಲ್ಲ, ನಿನಗೆ ಕೊಡಲು ನನ್ನ ಬಳಿ ಏನಿದೆ ಸ್ವಾಮಿ? ಇದೋ ನನ್ನ ಬಳಿ ಇರುವ ಒಂದೇ ಒಂದು ವಸ್ತು ಈ ಕುಡುಗೋಲು ಮಾತ್ರ ಇದನ್ನೇ ತೆಗೆದುಕೋ” ಎಂದು ಕೊಳಲನ್ನು ನೀಡಿದಳು. ಇದನ್ನು ಪಡೆದು ಆತ ಕಾಲುದಾರಿಯಲ್ಲಿ ಮರೆಯಾದ.  ಅದನ್ನು ಕಂಡು ಅವಳು ಮನದಲಿ “ಇದೇನು ಕೃಶವಾಗಿ ಕಾಣುತ್ತಿರುವ ಈತ ಕೃಷ್ಣನನ್ನೇ ಹೋಲಿದರು ಸಾಮಾನ್ಯ ಮನುಷ್ಯನ ಹಾಗೆ ಕಾಣುತ್ತಾನಲ್ಲ?” ಅಂದುಕೊಂಡಳು.

“ಈಗೇನು ಮಾಡುವುದು ? ಕುಡುಗೋಲು ಇಲ್ಲದೆ ಕೊಳಲಿಗೆ ಬೇಕಾದ ಬಿದಿರಿನ ಕೋಲನ್ನು ಹೇಗೆ ತಾನೇ ಕುಯ್ಯಲಿ  ನಂತರ ಅದನ್ನು ತಯಾರಿಸಿ ಅವನ್ನು ಮಾರಿ ಬಂದ ಹಣವನ್ನು ಮಹಾರಾಜರ ಬೊಕ್ಕಸಕ್ಕೆ ಸುಂಕ ನೀಡಿ ನನ್ನ ತಂದೆ ತಾಯಿಯರನ್ನು ಹೇಗೆ ತಾನೇ ಬಿಡಿಸಲಿ” ದಿಕ್ಕು ತೋಚದೆ  ಆ ಬಾಲೆ ಅಲ್ಲೇ ವಿಶಾಲವಾದ ಬಿದಿರುಮೆಳೆಯ ಬುಡದಲ್ಲಿ ಕುಕ್ಕರುಗಾಲಲ್ಲಿ ಕುಳಿತಳು. ನಿದಾನವಾಗಿ ಸಂಜೆಯಾಯಿತು.. ಹುಡುಗಿ ಹೆದರಿದಳು, ಹಾಗೆ.. ರಾತ್ರಿಯಾಯಿತು ಚಳಿಯಲ್ಲಿ ನಡುಗಿದಳು, ಒಂದಾದ ಮೇಲೆ ಒಂದರಂತೆ ಎಲ್ಲ ಕಾಡು ಮೃಗಗಳು ಘೀಳಿಡುತ್ತಿದವು. ಭಯದಿಂದ ಬಾಲೆ ಅದುರಿ ನಡುಗಿ ಅಳಲು ಶುರುಮಾಡಿದಳು. ಆ ಕಾಡಿನಲ್ಲಿ ಅವಳನ್ನು ಮುದ್ದು ಮಾಡಿ ಸಮಾಧಾನವನ್ನು ಮಾಡಲು ಯಾರು ಇರಲಿಲ್ಲ. ಆದರೆ ಮುದ ನೀಡುವ ಬೆಳದಿಂಗಳು ಸಾಂತ್ವಾನಿಸಿದಂತೆ ಕಾಣಿತು. ಬೆಳದಿಂಗಳ ಚಳಿಯಲ್ಲೂ ಹತ್ತಿಕೊಂಡ ಕಾಳ್ಗಿಚ್ಚು ಬಾಲೆಯನ್ನು ಬೆಚ್ಚಗಾಗಿಸಲೇ ಬಂದಂತಿತ್ತು. ಆ ಬಾಲೆ ಪ್ರಾಣಿಗಳಿಂದ ರಕ್ಷಣೆ ಪಡೆಯಲು ಒಂದು ಉರಿಯುವ ಕೊಳ್ಳಿಯನ್ನು ಹಿಡಿದು ಅಲ್ಲೇ ಇದ್ದ ಬೃಹದ್ದಾಕಾರವಾದ ಬಿದಿರಿನೊಳಗೆ ನುಗ್ಗಿ ಕುಳಿತಳು. ಅವಳು ನುಗ್ಗಿದ ಆ ಬಿದಿರು ಈ ಬೆಟ್ಟದಿಂದ ಆ ಬೆಟ್ಟಕ್ಕೆ ಉದ್ದನೆಯ ಸೇತುವೆಯ ಹಾಗೆ ಚಾಚಿಕೊಂಡು ಮುರಿದುಬಿತ್ತು. ಆ ಹುಡುಗಿಯು ನುಸುಳಿದ ಬಿದಿರು ಬೆಂಕಿಯಿಂದ ಸುತ್ತುವರೆದಿದ್ದು ಶಾಖ ಹೆಚ್ಚುತ್ತಾ ಹೋಯಿತು. ಬೆಂಕಿಯ ಕೆನ್ನಾಲಿಗೆಯು ಉದ್ದವಾದಂತೆಲ್ಲಾ ಆ ಬಾಲೆಗೆ ಭಯವಾಗಿ ಬಿದಿರಿನ ಆಳಕ್ಕೆ ಸರಿದಳು. ಅವಳು ಕೊಳ್ಳಿಯೊಂದಿಗೆ ಸರಿದ ಜಾಗದಲ್ಲೆಲ್ಲ ಬೆಂಕಿ ತಗುಲಿ ಅವಳಿದ್ದ ಬಿದಿರು ಸುತ್ತು ರಂದ್ರಗಳಾಗಿ ಒಂದು ಸುಂದರ ಕೊಳಲಿನ ರೂಪ ತಾಳಿತು. ಬೆಳಗಾಗುವ ಏಳು ಘಳಿಗೆಗಳಲ್ಲಿಆ ಕೊಳಲಲ್ಲಿ ಏಳು ರಂದ್ರಗಳಾಗಿದ್ದವು. ಏಳು ಬೆಟ್ಟಗಳಾಚೆಯಿಂದ ಕೂಡ ನೋಡುವವರಿಗೆ ಅದೊಂದು ಅಪರೂಪದ ಬೃಹತ್ ಕೊಳಲಾಗಿ ಕಾಣುತಿತ್ತು.

ಜೋರಾಗಿ ಬೀಸುವ ಗಾಳಿ ಆ ಬೃಹತ್ ಕೊಳಲಲ್ಲಿ ಹಾಯುವಾಗಲೆಲ್ಲ ಮೈ ಮರೆಸುವಂತ ನಾದದ ಅಲೆ ಹೊಮ್ಮುತಿತ್ತು. ಹಾಗೆ ಹೊರ ಹೊಮ್ಮಿದ ನಾದದ ಅಲೆಗಳು ಕಾಡು, ಬೆಟ್ಟ ಹಳ್ಳಿ, ಊರು ಎಲ್ಲವನ್ನು ದಾಟಿ ಅರಮನೆಯಲ್ಲಿನ ಶಯನಗೃಹದಲ್ಲಿ ವಿಶ್ರಮಿಸುತ್ತಿದ್ದ ರಾಜನ ಕಿವಿಗೆ ಮಧುರವಾಗಿ ಅಪ್ಪಳಿಸಿತು. ಈ ಕಾಡ ಕೊಳಲಿನ ನಾದದಿಂದ ಕೆಲವೇ ಕ್ಷಣಗಳಲ್ಲಿ ಆ ರಾಜ್ಯವೇ ಒಂದು ಗಂಧರ್ವ ಲೋಖವಾಗಿ ಮಾರ್ಪಟ್ಟಿತು. ನಾದವು ಎಲ್ಲಿಂದ ತೇಲಿಬರುತ್ತಿದೆ ಎಂದು ಯಾರಿಗೂ ತಿಳಿಯದಾಗಿತ್ತು. ಕೊನೆಗೆ ಇಡೀ ರಾಜಧಾನಿಯೇ ನಾದದ ಮೂಲವನ್ನು ತಂಡೋಪ ತಂಡವಾಗಿ ಹೊರಟಿತು.

ಪಂಜುಗಳನ್ನು ಹಿಡಿದ ಆ ಜನಸ್ತೋಮ ಆ ನಾದರಂಬವನ್ನು ಹುಡುಕಿ ಹೊರಟಾಗ ರಾಜ್ಯದ ಚೇತನವೇ ಜ್ಯೋತಿಯ ರೂಪದಲ್ಲಿ ನಾಡನ್ನೇ ತ್ಯಜಸಿ ಹೊರಟಂತಿತ್ತು. ಆಗ ತಾನೇ ಚಿಗುರಿದ ಬಲವಾದ ಚೂಪಾದ ಬಿದಿರಿನ ಮೆಳೆಯ ಪಕ್ಕದಲ್ಲೇ ಉದ್ದನೆಯ ಮುಳ್ಳುಗಳ ಕಾವಲನ್ನು ಪಕಕ್ಕೆ ಸರಿಸುತ್ತಾ ಅದೆಷ್ಟು ಬೆಟ್ಟ ಗುಡ್ಡಗಳನ್ನು ಹತ್ತಿ ಇಳಿದಿದ್ದರೋ ಕೊನೆಗೂ ಕಂಡಿತು ಆ ಬಾಲೆಯಿದ್ದ ದೂರದ ಬಿದಿರಮೆಳೆ. ಆಗ ಆ ಬೃಹತ್ ಕೊಳಲು ಬಾರಿ ಜನಸ್ತೋಮಕ್ಕೆ ದರುಶನವಾಯಿತು. ಎಲ್ಲರ ಮನಸುಗಳು ಆ ಇಂದ್ರಜಾಲವನ್ನು ಮೂಕವಿಸ್ಮಿತರಾಗಿ ಕಣ್ಣು ಬಾಯಿ ತೆರೆದು ನೋಡುತ್ತಿದ್ದರು.

ತಕ್ಷಣ ಪ್ರತ್ಯಕ್ಷನಾದ ಕೃಷ್ಣನನ್ನು ಕಂಡು “ಹೇ ಭಗವಂತ, ಲೋಕೋದ್ಧಾರಕ, ಈ ಜಗವನ್ನು ಉದ್ಧರಿಸುವವ ನೀನೆ, ನಿನ್ನ ದರುಶನದಿಂದ ನಾವು..” ಎನ್ನುವ ಮಾತನ್ನು ಕೃಷ್ಣನು ಅರ್ಧದಲ್ಲೇ ನಿಲ್ಲಿಸಿ “ನಿಮ್ಮ ಈ ಮಾತುಗಳು ಕೆಲಸಕ್ಕೆ ಬಾರದವು!. ನನನ್ನು ಹೀಗೆ ಹೊಗಳಿ ಹೊಗಳಿ ನನ್ನಿಂದ ಎಂತೆಂತಹ ಕೆಲಸಗಳನ್ನು ಮಾಡಿಸಿಬಿಟ್ಟಿರಿ… ವೈಕುಂಠದಿಂದ ಭಕ್ತನೊಬ್ಬನಿಗೆ ಪ್ರತ್ಯಕ್ಷನಾಗಿ ವರವನ್ನು ಕೊಡಲು ಬಂದಿದ್ದೆ. ಈ ರೀತಿಯಾಗಿ ವರಗಳನ್ನು ನೀಡಿ ನಮ್ಮ ದಿವ್ಯ ಶಕ್ತಿಗಳು ಕ್ಷೀಣಿಸಿದರಿಂದ ನಾನು ಮತ್ತೆ ವೈಕುಂಠಕ್ಕೆ ಮರಳಿ ಹೋಗುವ ದಾರಿಯನ್ನು ಕಾಣುವ ಒಳಗಿನ ದೃಷ್ಟಿಗೆ ಮಂಕು ಕವಿದಿತ್ತು. ಆ ಶಕ್ತಿಯನ್ನು ಕಳೆದುಕೊಂಡ ಈ ಕೃಷ್ಣನಿಗೆ ಈ ಕಲಿಯುಗದಲ್ಲಿ ದ್ವಾಪರಯುಗದಲಿದ್ದಂತ ಅತೀತ ಶಕ್ತಿಗಳಿಲ್ಲ. ನಿಮ್ಮಂತ ಭಕ್ತರು ತೋರುವ ಭಕ್ತಿ, ಕಾಣಿಕೆಗಳೇ ನನಗೆ ಶಕ್ತಿಯಾಗಿವೆ. ಸರಿ ಏಳು ಬೆಟ್ಟಗಳಾಚೆ ದನಕಾಯುತಿದ್ದ ನನ್ನನು ಸಹ ಈ ಮದುರ ನಾದ ಇಲ್ಲಿಗೆ ಕರೆದು ತಂದಿತು. ಯಾರು ಈ ಮದುರ ನಾದವನ್ನು ಹೊಮ್ಮಿಸುತ್ತಿರುವವರು ?” ಎಲ್ಲರು ಮೌನ. ಆದರೆ ರಾಜನು ಸೇರಿದಂತೆ ಎಲ್ಲ ಪ್ರಜೆಗಳು ಆ ಅದ್ಬುತ ಸೃಷ್ಟಿಗೆ ಕಾರಣರಾದವರನ್ನು ಹುಡುಕಲು ಮತ್ತೊಮ್ಮೆ ಶುರುಮಾಡಿ ಸೋತು ಕೈಚೆಲ್ಲಿದರು.

ಸೋತ ಜನರನ್ನು ಕಂಡ ಕೃಷ್ಣನು “ಪ್ರಿಯ ಬಂಧುಗಳೇ ದಯವಿಟ್ಟು ಆ ಮಾಯ್ಕಾರ ಕಲೆಗಾರನನ್ನು ಹುಡುಕಿಕೊಡಿ. ನಾನು ಮತ್ತೆ ಮರಳಿ ವೈಕುಂಠಕ್ಕೆ ಹೋಗಲು ದಿವ್ಯಶಕ್ತಿಯ ಅವಶ್ಯಕತೆಯಿದೆ ದಯವಿಟ್ಟು ಆ ಮಹಿಮಾನ್ವಿತ ವ್ಯಕ್ತಿಯನ್ನು ಹುಡುಕಿ ಕೊಡಿ” ಎಂಬ ಕೃಷ್ಣನ ದಮ್ಮಯ್ಯ ಬೇಡಿಕೆಗಳನ್ನು ಕೇಳಿಸಿಕೊಂಡು ಜನರು “ಈತ ದೇವರೋ ಅಥವಾ ಸುಳ್ಳು ಹೇಳುತ್ತಿರುವ ಸಾಮಾನ್ಯ ಮನುಷ್ಯನೋ” ಎಂದು ಗುಮಾನಿಯಿಂದ ನೋಡತೊಡಗಿದರು. ಇದ್ದಕಿದ್ದ ಹಾಗೆ ಜನರೆಲ್ಲಾ ತೂರಿಹೋಗುವಾಗೆ ಆ ಕಾಡಿನಲ್ಲಿ ಜೋರಾಗಿ ಗಾಳಿ ಬೀಸಿ ಎಲ್ಲರ ಪಂಜುಗಳು ನಂದಿಹೋದವು. ಕಣ್ಣು ಕಿತ್ತುಕೊಂಡರು ಕಾಣದ ಬೆಳಕು, ಇನ್ನು ಈ ಕತ್ತಲಿನಲ್ಲಿ ಆ ಕಲೆಗಾರನನ್ನು ಹುಡುಕುವುದು ಅಸಾಧ್ಯ ಎಂದು ಎಲ್ಲರು ನೆಲ ಕಚ್ಚಿದರು.

ದೂರದ ಎರಡು ಬೆಟ್ಟಗಳ ನಡುವೆ ಸೇತುವೆಯಂತೆ ಮಲಗಿರುವ ಕೊಳಲು ತಕ್ಷಣ ಸಾಮಾನ್ಯ ಮರದ ಗಾತ್ರಕ್ಕೆ ಇಳಿದು ತನ್ನ ಏಳು ರಂಧ್ರಗಳಿಂದ ನೀಲಿ ಬೆಳಕು ಹೊರಹೊಮ್ಮಿಸಿತು. ಮೆಲ್ಲನೆ ಕೃಷ್ಣನು ಅದರಲ್ಲಿ ಬಗ್ಗಿ ನೋಡಿದಾಗ ಅಲ್ಲಿ ಆಯಾಸಗೊಂಡ ಪುಟ್ಟ ಬಾಲೆ ನೆಮ್ಮದಿಯಾಗಿ ಮಲಗಿರುವುದನ್ನು ಕಂಡನು. ಜನರ ಮಾತಿನ ಗದ್ದಲಕ್ಕೆ ಎಚ್ಚರಗೊಂಡ ಆ ಬಾಲೆ ಹಗಲಾಯಿತೇನೋ ಎಂದು ನೋಡಿದಳು. ಆಗ ರಾಜನು ” ಯಾರಮ್ಮ ನೀನು ಇಲ್ಲಿ ಹೇಗೆ ಬಂದೆ ? ಈ ಕೊಳಲು ಯಾರದ್ದು? ಎಂದು ಕೇಳಿದನು. ಆಗ ಬಾಲೆಯು ಮುಗ್ದವಾಗಿ “ನನ್ನ ತಂದೆ ತಾಯಿ ಯನ್ನು ರಾಜಭಟರು ಸುಂಕ ಕೊಡಲಿಲ್ಲ ಎಂದು ಹೇಳಿ ಬಂಧಿಸಿ ಕರೆದೊಯ್ದರು ಆಗ ನಾನು ಅವರ ಬಿಡುಗಡೆಗಾಗಿ ಕೊಳಲನ್ನು ತಯಾರು ಮಾಡಿ ಅವುಗಳನ್ನು ಮಾರಿ ಹಣ ಸಂಪಾದಿಸಬೇಕೆಂದು ಬಂದೆ” ಎಂದು ನುಡಿದಳು.

ಆಗ ಕೃಷ್ಣನು ಆ ಮುಗ್ದ ಬಾಲೆಯನ್ನು ತಬ್ಬಿದ್ದಾಕ್ಷಣ ಚೈತನ್ಯದ ಬೆಳಕೊಂದು ಕೃಷ್ಣನ ದೇಹಕ್ಕೆ ಮೆಲ್ಲನೆ ಪಸರಿಸಿತು. ಕೃಷ್ಣನು ಸಂತೋಷದಿಂದ “ನೋಡಿ ಎಷ್ಟೋ ಸಹಸ್ರ ವರ್ಷಗಳಿಂದ ನನ್ನ ಸ್ವ ಸ್ಥಳಕ್ಕೆ ಮರಳಲು ಚೈತನ್ಯವಿರದೆ ಅಶಕ್ತನಾಗಿ ಇಲ್ಲಿಯೇ ಉಳಿದಿದ್ದೆ. ಈಗ ಆ ಶಕ್ತಿ ನನಗೆ ಮರಳಿ ಬಂದಿದೆ. ಇಂಥ ಮುಗ್ದ ಪ್ರಾಮಾಣಿಕ ಮನಸುಗಳಲ್ಲಿ ಸದಾ ಹರಿವ ಚೈತನ್ಯದ ಶಕ್ತಿಯೇ ನಮ್ಮೊಳಗೇ ಆವರಿಸಿ ಪ್ರಭಾವಿತ ದೇವರನ್ನಾಗಿ ಮಾಡಿವೆ” ಎಂದು ಹೇಳಿ ಮಗುವನ್ನು ಮತ್ತೊಮ್ಮೆ ಮುದ್ದಿಸಿ ಗಗನದಲ್ಲಿ ಏರುತ್ತ ಮಾಯವಾದ.

ಆಗ ರಾಜನು ಮಗುವಿನ ತಂದೆ ತಾಯಿಯನ್ನು ಬಿಡುಗಡೆ ಮಾಡಲು ಆದೇಶಿಸಿ ಶ್ರಮಿಕರ ಹಾಗು ಬಡವರ ಸುಂಕವನ್ನು ಮನ್ನಾ ಮಾಡಲು ಹೇಳಿ ಆ ಕೊಳಲನ್ನು ಮತ್ತು ಆ ಬಾಲೆಯನ್ನು ತನ್ನ ಪಲ್ಲಕಿಯಲ್ಲಿ ರಾಜಧಾನಿಗೆ ಕರೆತರುತ್ತಾನೆ. ತಂಗಾಳಿ, ಮೆದುಗಾಳಿ, ಬಿಸಿಗಾಳಿ, ಜೋರುಗಾಳಿ,ಬಿರುಗಾಳಿ ಮೊದಲಾಗಿ ಯಾವುದೇ ಗಾಳಿ ಬಂದರು ಈ ಕೊಳಲು ನಾದಲಹರಿಯನ್ನು ಮುಂದುವರೆಸಲೆಂದು ರಾಜನು ಅದನ್ನು ರಾಜಧಾನಿಯ ಮಹಾದ್ವಾರಕ್ಕೆ ತಗಲಿಹಾಕಿದನು. ಅಂದಿನಿಂದ ಆ ರಾಜ್ಯವು ಗಂಧರ್ವ ಲೋಕದಂತೆ ಮಾರ್ಪಟ್ಟಿತು. ಆ ಬಾಲೆಯ ಹೆಸರು “ಚಿರಸ್ಥಾಯಿ” ಎಂದಾಯಿತು.

ಈಗಲೂ ಆ ಕೊಳಲಿನ ಧ್ವನಿಯ ಅನುಭವವಾಗಬೇಕೆಂದರೆ ನಂದಿ ಬೆಟ್ಟದ ಮೇಲೋ ಅಥವಾ ಎತ್ತರದ ಯುಟಿಲಿಟಿ ಬಹು ಮಹಡಿಯಂತಹ ಕಟ್ಟಡವನ್ನು ಏರಿ ಕಿವಿ ಕೊಟ್ಟಿ ಆಲಿಸಿದರೆ ಮಧುರ ನಾದವು ಕೇಳಿಸುತ್ತದೆ ಆದರೆ ವಾಹನ ದಟ್ಟಣೆಯ ಕರ್ಕಶ ಶಬ್ದ ಇರಬಾರದು!.

ಕಥೆ ಹಾಗು ಚಿತ್ರ ಬರಹ

ಟಿ. ಲಕ್ಷ್ಮೀನಾರಾಯಣ

ಬೆಂಗಳೂರು

Related post