ಚಿರಸ್ನೇಹದ ಭಾವ
ಗೆಳೆತನವೆಂದರೆ ಬಂಧನವಲ್ಲ
ಬರೇ ಕಾಡುಹರಟೆಯ ಬಂಧವಲ್ಲ..
ಕೊಟ್ಟು ದೂರಾಗುವ ಸಂಬಂಧವಲ್ಲ..
ಮೋಡವಿರದ ತಿಳಿಯಾಗಸದ ಭಾವವೇ ಸ್ನೇಹ!!
ಯಾರಲೂ ಹೇಳಲಾಗದ ಬೇಗುದಿಯ
ಕಾಡುವ ಮನದಲಡಗಿದ ವಿಪ್ಲವವ..
ಕೇಳಿ ಹೃದಯವ ಸಂತೈಸುವ..
ಜಲಪಾತದಂದದಿ ಭೋರ್ಗರೆವ ಭಾವವೇ ಸ್ನೇಹ!!
ನಿತ್ಯ ಸಂಭಾಷಣೆಯು ಬೇಕಿಲ್ಲದ
ಕಡುಮೌನದಲೇ ಎಲ್ಲ ಗುರುತಿಸಬಲ್ಲ..
ಯಾವ ಪ್ರಚಾರದ ಅಗತ್ಯವಿರದ..
ತಾಯಪ್ರೇಮದಂತೆ ಸ್ವಾರ್ಥವಿರದ ಭಾವವೇ ಸ್ನೇಹ!!
ಗೆಳೆಯ ಗೆಳತಿಯರ ಗೆಳೆತನವು
ಪವಿತ್ರ ಬಾಂಧವ್ಯದ ಬಂಧುರವು..
ಯಾರ ಅಂಕೆಗೂ ನಿಲುಕದೀ ಬಂಧವು..
ಕನ್ನಡಿಯಂತೆ ಸ್ವಚ್ಛವಾದ ಬಿಂಬವೇ ಸ್ನೇಹ!!
ಸುಮನಾ ರಮಾನಂದ