ಏಯ್! ಗೂಬೆ! ಹೀಗೆ ಬೈಸಿಕೊಳ್ಳದವರೇ ಅಪರೂಪ, ನಮ್ಮ ದೇಶದಲ್ಲಿ. ಅತಿ ದೊಡ್ಡ ದಡ್ಡ ಎಂದರೆ ಅವನು ಗೂಬೆಯೇ! ಕಳಂಕಕ್ಕೂ ಗೂಬೆ ಎಂದೇ ಹೆಸರು. ನಮ್ ತಲೆ ಮೇಲೆ ಗೂಬೆ ಕೂರಿಸಬೇಡಿ ಎನ್ನುವಲ್ಲಿ ಇದೇ ಭಾವ. ಗೂಬೆ ಇದ್ದಹಾಗೆ ಇದಾನೆ ಎನ್ನುತ್ತಾ ಇದಕ್ಕೆ ರೂಪಕಾಲಂಕಾರದ ಪ್ರಯೋಗವೂ ನಡೆಯುತ್ತದೆ. ಹೀಗೆ ಸಾಕಷ್ಟು ಹೇಳುತ್ತಾ ಹೋಗಬಹುದು.
ಹಾಗಾದರೆ, ಒಟ್ಟಾರೆ ಅಭಿಪ್ರಾಯವೇನು? ಗೂಬೆ ಎಂದರೆ ಕೆಟ್ಟದ್ದು, ಅನಿಷ್ಟ ಎಂದೆ? ಹಾಗೇನೂ ಇಲ್ಲ! ಈ ಗೂಬೆ ಲಕ್ಷ್ಮಿಯ ವಾಹನ! ಇದನ್ನು ನೋಡುವುದು ಅದೃಷ್ಟವನ್ನು ಕಂಡಂತೆ! ನಮ್ಮಲ್ಲಿನ ವ್ಯಾಪಾರಿ ಸಮುದಾಯ ಗೂಬೆಯ ದರ್ಶನವಾದರೆ ಲಕ್ಷ್ಮಿಯನ್ನು ನೋಡಿದಂತೆ ಎಂದು ಭಾವಿಸುತ್ತದೆ. ಇದು ನಮ್ಮ ಸಂಸ್ಕೃತಿಯಲ್ಲಿರುವ ವೈವಿಧ್ಯ. ಇದನ್ನು ಹಾಗೆಯೇ ಸ್ವೀಕರಿಸಬೇಕು. ಜಗತ್ತಿನ ಅನೇಕ ಪುರಾಣಗಳಲ್ಲಿ, ನಮ್ಮ ಋಗ್ವೇದ, ಅಥರ್ವಣವೇದಗಳಲ್ಲಿ ಗೂಬೆಗಳನ್ನು ಕುರಿತ ಉಲ್ಲೇಖಗಳಿವೆ. ಗೂಬೆಗಳಿಗೆ ಜಗತ್ತಿನಾದ್ಯಂತ ಮಾನ್ಯತೆಯಿದೆ ಎಂಬ ಮಾತೂ ನಮ್ಮ ಸಂಸ್ಕೃತಿಯಲ್ಲಿದೆ.
ಗೂಬೆಯನ್ನು ದಡ್ಡತನಕ್ಕೆ ಒಪ್ಪವಿಡುವ ಸಮುದಾಯ ಇರುವಂತೆ ಅದನ್ನು ಬುದ್ಧಿವಂತಿಕೆಯ ಪ್ರತೀಕವಾಗಿರಿಸಿರುವ ಸಮುದಾಯಗಳೂ ಜಗತ್ತಿನಲ್ಲಿವೆ. ಜಗತ್ತಿನ ಅನೇಕ ಭಾಗಗಳಲ್ಲಿ ಗೂಬೆ ವಿದ್ಯೆ ಹಾಗೂ ಬುದ್ಧಿವಂತಿಕೆಯ ಪ್ರತೀಕ! ಇವು ವಿದ್ಯಾಸಂಸ್ಥೆಯ, ವಿಶ್ವವಿದ್ಯಾಲಯದ ಲಾಂಛನವಾಗಿರುವುದೂ ಉಂಟು! ಯೂರೋಪಿನ ಅನೇಕ ಕಡೆ ಗೂಬೆ ಅಪಶಕುನದ ದ್ಯೋತಕವಾಗಿಯೇ ಬಳಸಿದ್ದಾರೆ. ಅಂದರೆ, ಒಳ್ಳೆಯದಕ್ಕೂ ಕೆಟ್ಟದ್ದಕ್ಕೂ ಗೂಬೆಯನ್ನು ಒಪ್ಪವಿಡುವ ಪ್ರತೀತಿ ಜಗತ್ತಿನ ಅನೇಕ ಭಾಗಗಳಲ್ಲಿದೆ. ಪಾಶ್ಚಾತ್ಯ ಸಂಸ್ಕೃತಿಯ ತೂಗುತೊಟ್ಟಿಲೇ ಗ್ರೀಕ್ ಪುರಾಣ ಮತ್ತು ನಾಗರಿಕತೆ. ಅಲ್ಲಿನ ಅಥೆನ್ಸ್ ನಗರದ ಹೆಸರಿಗೆ ಕಾರಣ ಗ್ರೀಕ್ ಪುರಾಣದ ಜ್ಞಾನ ಮತ್ತು ಶೌರ್ಯದೇವತೆಯಾದ ಅಥಿನಿ. ಈಕೆಯ ಲಾಂಛನವೇ ಗೂಬೆ! ಈ ಅಥಿನಿ ಎಂಬ ಹೆಸರನ್ನೇ ಮುಂದೆ ಗೂಬೆಯ ಒಂದು ಪ್ರಭೇದದ ವೈಜ್ಞಾನಿಕ ಹೆಸರಿನ ಭಾಗವಾಗಿ ತೆಗೆದುಕೊಳ್ಳಲಾಗಿದೆ. ಈ ಕುರಿತಾಗಿ ಬರೆಯಬಹುದಾದದ್ದು ಸಾಕಷ್ಟು ಇದೆ. ಸದ್ಯಕ್ಕೆ ಇಷ್ಟು ಸಾಕು.
ಸಣ್ಣ, ಮಧ್ಯಮ ಹಾಗೂ ದೊಡ್ಡಗಾತ್ರದ ಒಟ್ಟು 32 ಬಗೆಯ ಗೂಬೆಗಳು ಭಾರತ ಉಪಖಂಡದಲ್ಲೇ ಕಂಡುಬರುತ್ತವೆ (ಭಾರತದ ಉಪಖಂಡ ಎಂದರೆ ಭಾರತ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಮಾಲ್ಡೀವ್ ಸೇರುತ್ತದೆ). ದಕ್ಷಿಣ ಏಷ್ಯಾದಲ್ಲಿ ಐವತ್ತು ಹಾಗೂ ಜಾಗತಿಕವಾಗಿ 234 ಪ್ರಭೇದದ ಗೂಬೆಗಳು ಕಂಡುಬರುತ್ತವೆ. ಇದರ ಜೊತೆಗೆ ಅನೇಕ ಹದ್ದು ಗೂಬೆ, ಗಿಡುಗ ಗೂಬೆ ಮತ್ತು ಚಿಟ್ಟುಗೂಬೆಗಳಿವೆ. ಅವನ್ನು ಇಲ್ಲಿ ಸೇರಿಸಿಲ್ಲ. ಒಟ್ಟಾರೆ ಮೈದಾನ, ಒಣ ಕುರುಚಲು ಪ್ರದೇಶಗಳಿಂದ ತೊಡಗಿ ಹಿಮಚ್ಛಾದಿತ ಪ್ರದೇಶಗಳಲ್ಲಿಯೂ ಗೂಬೆಗಳು ಕಂಡುಬರುತ್ತವೆ. ಇದು ಪ್ರಧಾನವಾದ ಅಂಶ.
ಗೂಬೆಗಳಿಂದ ಮಾನವ ಕಲಿಯುವ ವಿಷಯಗಳು ಅನೇಕವಿವೆ. ಅವು ಹಾರುವಾಗ ಇನಿತೂ ಸದ್ದು ಮಾಡದಂತೆ ಹಾರುತ್ತವೆ. (ಪಾರಿವಾಳವೋ ಕಾಗೆಯೇ ನಿಮ್ಮ ಪಕ್ಕದಲ್ಲಿ ಹಾರಿಹೋದಾಗ ಎಷ್ಟು ಸದ್ದಾಗುತ್ತದೆ ನೆನಪಿಸಿಕೊಳ್ಳಿ). ಹಾಗೆ ಸದ್ದಾಗದಂತೆ ಹಾರಲು ಗರಿಗಳ ವಿನ್ಯಾಸ ಇವುಗಳಿಗೆ ಸಹಾಯ ಮಾಡುತ್ತದೆ. ಇದನ್ನು ರೈಲು ಅತಿವೇಗವಾಗಿ ಸುರಂಗಗಳಲ್ಲಿ ಚಲಿಸುವಾಗ ಶಬ್ದ ಉಂಟಾಗದಂತೆ ಮಾಡಲು ಬಳಸುವ ಸಾಧ್ಯತೆಗಳನ್ನು ವಿಜ್ಞಾನಿಗಳು ಪರಿಶೀಲಿಸುತ್ತಿದ್ದಾರೆ. ಹಾಗೆಯೇ, ಇನ್ನೊಂದು ಗುಣಲಕ್ಷಣ ಇವುಗಳ ಕಿವಿಯ ಶಕ್ತಿ. . ಶೀತ ಪ್ರದೇಶಗಳಲ್ಲಿ ನೆಲದ ಮೇಲೆ ಇಂಚುಗಳೆತ್ತರದ ಹಿಮದ ಹಾಸಿಗೆಯಿದ್ದರೂ ಅದರ ಕೆಳಗೆ ಒಳಗೆಲ್ಲೋ ಅಡಗಿರುವ ಇಲಿಯ ಕೀಚಲು ದನಿ ಇವುಗಳಿಗೆ ಕೇಳುತ್ತವೆ. ನಿಮ್ಮನ್ನು ಯಾರಾದರೂ ಗೂಬೆ ಎಂದು ಬೈದರೆ ಇದಿಷ್ಟೂ ಪುರಾಣವನ್ನು ಅವರಿಗೆ ಹೇಳಿ, ಗೂಬೆ ಎಂದು ಬೈದು ಓಡಿಸಿ!
ಇವುಗಳಿಗೆ ಇತರ ಹಕ್ಕಿಗಳಿಗೆ ಕಣ್ಣುಗಳು ಮುಖದ ಪಕ್ಕಗಳಲ್ಲಿ ಇದ್ದರೆ, ಗೂಬೆಗಳಿಗೆ ಮುಖದ ಮುಂಭಾಗದಲ್ಲಿ ಇರುತ್ತದೆ. ಇದು ಇವುಗಳು ಬೇಟೆಯಾಡುವಲ್ಲಿ ಸಹಕಾರಿ. ಮುಖಪಟಲ ಗುಂಡಗೆ ಇರುವುದರಿಂದ ಇವು ಭಯಾನಕವಾಗಿ ಕಾಣುತ್ತವೆ ಎಂಬ ಭಾವ ಬಂದಿವೆ. ಸೃಷ್ಟಿಯಲ್ಲಿ ಯಾವುದು ಕುರೂಪಿ?!
ಬೆಳಗಿನ ಹೊತ್ತು ಇವುಗಳಿಗೆ ಕಣ್ಣುಕಾಣದು ಎಂಬುದು ಸರಿಯಲ್ಲ. ಬಹುತೇಕ ಗೂಬೆಗಳು ನಿಶಾಚರಿಗಳು, ಇಲ್ಲವೆ ಸಾಯಂಕಾಲ ಮತ್ತು ರಾತ್ರಿ ಹೊತ್ತು ಚಟುವಟಿಕೆಯಿಂದ ಇರುವಂತಹ ಜೀವಿಗಳು. ಇದು ಏಕೆಂದರೆ, ಗೂಬೆಗಳ ಪ್ರಧಾನ ಆಹಾರವಾದ ಇಲಿ, ಹೆಗ್ಗಣಗಳು ನಿಶಾಚರಿಗಳು. ಹಾಗಾಗಿ ಇವು ಸಂಜೆ ಹಾಗೂ ರಾತ್ರಿ ಚಟುವಟಿಕೆಯಿಂದಿದ್ದು ಹಗಲಿನಲ್ಲಿ ಮಂಕಾಗಿರುವಂತೆ ಕಾಣುತ್ತವೆ ಅಷ್ಟೆಯೇ ಹೊರತಾಗಿ ಹಗಲಿನಲ್ಲಿ ಅವುಗಳಿಗೆ ಕಣ್ಣೇ ಕಾಣದು ಎಂಬುದು ಸುಳ್ಳು. ಇವು ಇಲಿ ಹೆಗ್ಗಣಗಳನ್ನು ತಿನ್ನುವುದರಿಂದ ಸಾವಿರಾರು ಟನ್ ಆಹಾರ ಧಾನ್ಯಗಳು ಮೂಷಿಕಗಳ ಪಾಲಾಗುವುದು ತಪ್ಪುತ್ತದೆ. ಹಾಗಾಗಿ ಗೂಬೆಗಳು ರೈತ ಹಾಗೂ ಮಾನವನ ಮಿತ್ರ.
ಈಗ ಇಂದಿನ ಹಕ್ಕಿಗೆ ಬರೋಣ! ಚುಕ್ಕೆ ಚಿಟ್ಟು ಗೂಬೆ ಎಂದು ಕರೆಯಲಾಗುವ ಇದು ಸಣ್ಣಗಾತ್ರದ ಗೂಬೆ. ಇಂಗ್ಲಿಷಿನಲ್ಲಿ ಇದನ್ನು ಸ್ಪಾಟೆಡ್ ಔಲೆಟ್ ಎನ್ನುತ್ತಾರೆ. (Spotted Owlet Athene brama). ಬಿಳಿ ಚುಕ್ಕೆಗಳಿಂದ ಕೂಡಿದ, ಕಂದುಬೂದು ಬಣ್ಣದ, ಮೈನಾ ಗಾತ್ರದ ಗೂಬೆ. ಕಣ್ಣುಗಳು ಮುಖದ ಮುಂಭಾಗದಲ್ಲಿರುತ್ತವೆ ದುರುಗುಟ್ಟಿಕೊಂಡು ನೋಡುವಂತಹ ಹಳದಿ ಕಣ್ಣುಗಳನ್ನು ಹೊಂದಿದೆ. ಇವು ವಿಶ್ರಾಂತಿ ಪಡೆಯುವ ದಿನದ ಬಹುಭಾಗ ನಮ್ಮ ಕಣ್ಣಿಗೆ ಬೀಳುವುದೇ ಇಲ್ಲ. ಇವುಗಳ ಗರಿಗಳ ಮೇಲಿನ ವರ್ಣವಿನ್ಯಾಸದಿಂದಾಗಿ ಅವು ಪರಿಸರದಲ್ಲಿ ಕರಗಿಹೋಗಿಬಿಡುತ್ತವೆ. ಬೇಟೆಯಾಡುವಾಗ ನೆಲದ ಮೇಲೆ ಬರುತ್ತದೆ ಇಲ್ಲವೇ ಒಂದು ಕೂರುಸ್ಥಳದಲ್ಲಿ ಕೂತು ವೀಕ್ಷಿಸುತ್ತದೆ. ಯಾರಾದರೂ ಗಮನಿಸುತ್ತಿದ್ದಾರೆಂಬ ಸಂದೇಹ ಬಂದರೆ ದೇಹವನ್ನು ಮೇಲೆ ಕೆಳಗೆ ಆಡಿಸಿ, ದುರುಗುಟ್ಟುಕೊಂಡು ಎಂಬಂತೆ ನೋಡಿ ಹಾರಿಹೋಗುತ್ತದೆ.
ಇವುಗಳ ಆಹಾರ ದುಂಬಿಗಳು, ಕೀಟಗಳು, ಇಲಿ, ಸಣ್ಣಗಾತ್ರದ ಹಕ್ಕಿಗಳು ಹಾಗೂ ಹಲ್ಲಿಯಂತಹ ಸರಿಸೃಪಗಳು. ಹಾಗಾಗಿ, ಗೂಬೆಗಳಿಗೆ ಆಹಾರ ಸರಪಳಿಯಲ್ಲಿ ವಿಶಿಷ್ಟವಾದ ಸ್ಥಾನವಿದೆ. ಹಳೆಯ ಲಡ್ಡುಹಿಡಿದ ಮರದ ಪೊಟರೆಯಲ್ಲೋ, ಪಾಳುಗೋಡೆಯ ರಂದ್ರದಲ್ಲಿಯೋ ಮೊಟ್ಟೆಯಿಟ್ಟು ಮರಿಮಾಡುತ್ತದೆ. ಗಂಡು ಹೆಣ್ಣು ಎರಡೂ ಮರಿಗಳ ಪಾಲನೆ ಪೋಷಣೆಯಲ್ಲಿ ತೊಡಗುತ್ತವೆ.
(ಈ ಲೇಖನ ಹಾಗೂ ಮುಂದಿನವಾರದ ಲೇಖನದಲ್ಲಿನ ವೇದ, ಪಾಶ್ಚಾತ್ಯ ಹಾಗೂ ಪೌರಾತ್ವಪುರಾಣಗಳ ವಿಷಯಗಳನ್ನು ತಿಳಿಸಿದವರು ವಿಜ್ಞಾನ ಲೇಖಕರು, ಹಿರಿಯ ಪ್ರಾಣಿವಿಜ್ಞಾನಶಾಸ್ತ್ರಜ್ಞರೂ ಆದ ಪ್ರೊ ಎನ್ ಎಸ್ ಲೀಲಾ ಅವರು. ಅವರಿಗೆ ಧನ್ಯವಾದಗಳು)
ಇಷ್ಟು ಅದ್ಭುತಗಳಿರುವ ಈ ಹಕ್ಕಿಯನ್ನು ಕಂಡಾಗ ksn.bird@gmail.com ಮೇಲ್ ಐಡಿ ಗೆ ಬರೆದು ತಿಳಿಸಿ ಅಥವಾ ಕಾಮೆಂಟ್ ಮಾಡಿ.
- ಕಲ್ಗುಂಡಿ ನವೀನ್
- ಚಿತ್ರಗಳು ಶ್ರೀ ಜಿ ಎಸ್ ಶ್ರೀನಾಥ
1 Comment
Thanks very good writing with informations