ಚೇಳು

ಚೇಳುಗಳನ್ನು “ಲಾಟ್ರೋಡಕ್ಟಸ್ ಮ್ಯಾಕ್ಟನ್ಸ್” ವೈಜ್ಞಾನಿಕ ಹೆಸರಿನಿಂದ ಗುರುತಿಸುತ್ತಾರೆ. ಇವು ಜೇಡದಂತ ಕೀಟಗಳ ಜಾತಿಗೆ ಸೇರುತ್ತವೆ. ಇವುಗಳ ಗಾತ್ರ 2 ಸೆಂಟಿಮೀಟರಿನಿಂದ ಹಿಡಿದು 3.3 ಮೀಟರ್ ವರೆಗೆ ಇರುತ್ತವೆ. ಇವುಗಳಿಗೆ 4 ಜೊತೆ ಕಾಲುಗಳು, ತಲೆ, ಕುಟುಕು ಅಂಗ ಮತ್ತು ಶರೀರ ಇರುತ್ತದೆ.

ಇವು ಅಕಶೇರುಕಗಳಾಗಿದ್ದು ಶರೀರವನ್ನು ರಕ್ಷಿಸಲು ಕವಚ ಹೊಂದಿರುವ ಬಹು ಕಾಲಿನ ಪ್ರಾಣಿಗಳಾಗಿವೆ. ಇವುಗಳಿಗೆ ಎಲುಬುಗಳಿಲ್ಲ, ರಕ್ತವಿಲ್ಲ. ಚಳಿಗಾಲದಲ್ಲಿ ಚೇಳುಗಳು ಶೀತನಿದ್ರೆಗೆ ಜಾರುತ್ತವೆ. ಅವುಗಳ ಜೀವಿತಾವಧಿಯಲ್ಲಿ ಚೇಳುಗಳು 7 ಸಲ ಅವುಗಳ ಕವಚವನ್ನು ಬದಲಾಯಿಸುತ್ತವೆ. ಅತ್ಯಂತ ಕಡಮೆ ಪ್ರಮಾಣದ ಆಮ್ಲಜಕದಲ್ಲಿಯೂ ಸಹ ಇವು ಬದುಕಬಲ್ಲವು. ಕಾರಣ ಇವು ನೀರಿನಡಿಗೂ ಸಹ ೪೮ ಗಂಟೆ ಬದುಕಬಲ್ಲವು. ಚೇಳುಗಳು ಸುಮಾರು 10-25 ವರ್ಷ ಬದುಕುತ್ತವೆ.

ಎಲ್ಲೆಲ್ಲಿವೆ ಚೇಳುಗಳು?

ಅಂಟಾರ್ಕ್ಟಿಕಾ ಖಂಡವನ್ನು ಹೊರತು ಪಡಿಸಿ ಪ್ರಪಂಚದ ಎಲ್ಲಾ ದೇಶಗಳಲ್ಲಿ ಚೇಳುಗಳಿವೆ. ಈ ಜೀವಿಗಳಲ್ಲಿ 1750 ವರ್ಗಗಳಿದ್ದು ಮನುಷ್ಯ ಮತ್ತು ಪ್ರಾಣಿಗಳಲ್ಲಿ ಸಾವನ್ನಂಟು ಮಾಡುವುದು ಮಾತ್ರ 17 ಪ್ರಬೇಧಗಳು. ಸಾಮಾನ್ಯವಾಗಿ ಮರುಭೂಮಿಯಲ್ಲಿ ಮತ್ತು ಗುಡ್ಡಗಾಡು ಪ್ರದೇಶದಲ್ಲಿ ಇವು ವಾಸಿಸುವುದು ಜಾಸ್ತಿ. ಇವುಗಳು ಭೂಮಿಯಲ್ಲಿ 450 ಮಿಲಿಯನ್ ವರ್ಷಗಳಿಂದಲೂ ಇವೆ. ಪ್ರಾಣಿಗಳಲ್ಲಿಯೇ ಅತ್ಯಂತ ಹಿರಿಯ ಜೀವಿಗಳಾದ ಇವು ಇವು ಡೈನೋಸಾರುಗಳಿಗಿಂತ 200 ಮಿಲಿಯನ್ ಹಿಂದೆಯೇ ಈ ಪ್ರಪಂಚದಲ್ಲಿ ಇದ್ದವು ಎಂಬುದಕ್ಕೆ ಪಳಿಯುಳಿಕೆ ಸಾಕ್ಷಿ ದೊರೆತಿದೆ. ಇವು ಮನುಷ್ಯನಿಗಿಂತ 2100 ಪಟ್ಟು ಪುರಾತನ ಜೀವಿಗಳು !!.

ದೇಹ ವಿನ್ಯಾಸ ಆಹಾರ ಕ್ರಮ

ಚೇಳುಗಳು ದವಡೆಯನ್ನು ಹೊಂದಿಲ್ಲ. ಆದರೆ ಅದರ ಕವಲೊಡೆದ ಕಾಲುಗಳು ಬೇಟೆಯನ್ನು ಹಿಡಿಯಲು ಸಹಕಾರಿಯಾಗುತ್ತವೆ. ಇವುಗಳ ಮೈಮೇಲೆಲ್ಲಾ ರೋಮದಂತ ಚೂಪಾದ ಕೂದಲುಗಳಿವೆ. ಉದ್ದನೆಯ ಹೃದಯ, ಶ್ವಾಸಕೋಶ, ಸುಮಾರಾಗಿ ಬೆಳೆದ ನರವ್ಯೂಹ ಇತ್ಯಾದಿ ಹೊಂದಿವೆ. ಚೇಳುಗಳಿಗೆ 5-10 ಕಣ್ಣುಗಳು ತಲೆಯ ಭಾಗದಲ್ಲಿದ್ದರೂ ಸಹ ಇವುಗಳು ಸರಿಯಾಗಿ ಜಗತ್ತನ್ನು ನೋಡಲಾರವು. ಇವುಗಳ ಆಹಾರ ಸಣ್ಣ ಸಣ್ಣ ಕೀಟಗಳು, ಜೇಡಗಳು, ಸಣ್ಣ ಜಿರಲೆಗಳು, ಚಿಕ್ಕಿಲಿಗಳು. ಎರೆಹುಳಗಳು ಇದರ ಇಷ್ಟದ ಖಾದ್ಯ. ಅನೇಕ ಚೇಳುಗಳು ಸ್ವಜಾತಿ ಭಕ್ಷಕಗಳು. ದೊಡ್ಡ ಚೇಳುಗಳು ಸಣ್ಣ ಸಣ್ಣ ಚೇಳುಗಳನ್ನು ಭಕ್ಷಿಸುತ್ತವೆ. ಇವು ಯಾವುದೇ ಜೀವಿಯ ಮೇಲೆ ಆಕ್ರಮಣ ಮಾಡುವುದಿಲ್ಲ. ಬದಲಾಗಿ ಕಾದು ಕುಳಿತು ಹತ್ತಿರ ಬೇಟೆ ಬಂದ ಕೂಡಲೆ ತನ್ನ ಬಲಶಾಲಿಯಾದ ಕವೆಯಂತ ಕಾಲಿನಿಂದ ಬಡಿದು ಸಾಯಿಸಿ ಅವುಗಳನ್ನು ಮುಕ್ಕುತ್ತದೆ.

ಚೇಳುಗಳು ನುಂಗಿದ ಕೀಟಗಳನ್ನು ಅವುಗಳ ಕೊಳವೆ ಹೊಟ್ಟೆಯಲ್ಲಿನ ಜೀರ್ಣದ್ರವದಲ್ಲಿ ಕರಗಿಸಿಬಿಡುತ್ತವೆ. ಅವುಗಳಿಗೆ ದವಡೆಯಾಕಾರದ ಅಂಗವಿರುತ್ತದೆ. ಇದು ಬದುಕಲು ತಿನ್ನುತ್ತದೆ. ಇವು ಅತ್ಯಂತ ನಿಧಾನವಾಗಿ ಅನೇಕ ಘಂಟೆಗಳ ವರೆಗೂ ಕೀಟಗಳನ್ನು ಮೆಲ್ಲುತ್ತವೆ. ಇವುಗಳು 2 ವಾರಕ್ಕೊಮ್ಮೆ ಆಹಾರ ಸೇವಿಸುತ್ತವೆ ಮತ್ತು ಸುಮಾರು ೪ ವರ್ಷ ಆಹಾರವಿಲ್ಲದೇ ಬದುಕಬಲ್ಲವು.

ಚೇಳಿನ ಸಂತಾನೋತ್ಪತ್ತಿ

ಆಶ್ಚರ್ಯಕರವೆಂಬಂತೆ ಇವು ತತ್ತಿ ಇಡುವುದಿಲ್ಲ. ಇವು ಮರಿ ಹಾಕುವ ಜೀವಿಗಳು. ಅವುಗಳ ಗರ್ಭಧಾರಣಾ ಅವಧಿ 2-18 ತಿಂಗಳು. ಗಂಡು ಮತ್ತು ಚೇಳು ಹೆಣ್ಣು ಚೇಳುಗಳು ಮಿಲನದ ಪೂರ್ವದಲ್ಲಿ ನರ್ತನ ಮಾಡುತ್ತದೆ. ಮನುಷ್ಯರು ಕೈ ಕೈ ಹಿಡಿದುಕೊಂಡು ನರ್ತಿಸಿದಂತೆ ಇವು ವೃತ್ತಾಕಾರದಲ್ಲಿ ತಿರುಗುತ್ತಾ ನರ್ತಿಸುತ್ತವೆ. ಈ ನರ್ತನ ಕೆಲ ನಿಮಿಷದಿಂದ ಕೆಲವು ಘಂಟೆಗಳ ಕಾಲ ನಡೆಯುತ್ತದೆ. ಮಿಲನ ಕ್ರಯೆಯಾದ ಕೂಡಲೇ ಗಂಡು ಚೇಳು ಓಡಿ ಪರಾರಿಯಾಗುತ್ತದೆ. ಇಲ್ಲದಿದ್ದರೆ ನರ್ತನ ಮಾಡಿ ಹಸಿದುಕೊಂಡಿರ್ವ ಹೆಣ್ಣು ಚೇಳು ಗಂಡನ್ನು ಭಕ್ಷಸಿ ಬಿಡುತ್ತದೆ. ಇದರಿಂದ ಅದಕ್ಕೆ ವಿದವಾ ಪಟ್ಟ ದೊರೆಯುತ್ತದೆ. ಒಮ್ಮೆ ಒಂದು ಚೇಳು 10-15 ಮರಿ ಹಾಕುತ್ತದೆ. ಈ ಎಳೆಮರಿಗಳನ್ನು ಅದು ಬೆನ್ನ ಮೇಲೆಯೇ ಕೂರಸಿಕೊಂಡು ಸವಾರಿ ಮಾಡುತ್ತದೆ. ಎಳೆಮರಿಗಳಿಗೆ ಹೊರಗಿನ ಕವಚ ಬೆಳೆದು ಅವು ಸ್ವಂತವಾಗಿ ಆಹಾರವನ್ನು ಹುಡುಕಿಕೊಳ್ಳಲು 2-3 ವಾರ ಬೇಕು. ಅಲ್ಲಿಯ ವರೆಗೆ ಇವುಗಳ ಸವಾರಿ ತಾಯಿಯ ಬೆನ್ನ ಮೇಲೆಯೇ. ಕೆಲವೊಮ್ಮೆ ಅವು 2 ವರ್ಷಗಳ ವರೆಗೂ ಸಹ ತಾಯಿಯ ಮೇಲೆ ಸವಾರಿ ಮಾಡುವುದಿದೆ. ಒಮ್ಮೊಮ್ಮೆ ತೀವ್ರ ಹಸಿವಾದಾಗ ತಾಯಿ ಚೇಳು ಅವುಗಳ ಮರಿಗಳನ್ನೇ ತಿಂದು ಬಿಡುತ್ತದೆ. ಇದಕ್ಕೆ ತದ್ವಿರುದ್ಧವೆಂಬಂತೆ ಕೆಲವೊಂದು ಕರುಣಾಮಯಿ ತಾಯಿ ಚೇಳುಗಳು ಹುಟ್ಟಿದ ಮರಿಗಳಿಗೆ ತಮ್ಮನ್ನು ತಾವು ತಿನ್ನಲು ಬಿಟ್ಟು ತ್ಯಾಗಮಯಿಯಾಗಿ ಹುತಾತ್ಮ ಜೀವಿಗಳಾಗುತ್ತವಂತೆ !.

ಚೇಳಿನ ವಿಷ – ಪರಿಣಾಮ

ಪ್ರಪಂಚದಲ್ಲಿ ಪ್ರತಿ ವರ್ಷ 125000 ಚೇಳು ಕಡಿತಗಳಾಗುತ್ತಿದ್ದು ಸಾವಿನ ಪ್ರಮಾಣ 3250. ಚೇಳುಗಳು ಅವುಗಳ ಉದ್ದವಾದ ಬಾಲದಿಂದ ಕುಟುಕುತ್ತವೆ. ಈ ಬಾಲದ ತುದಿಯಲ್ಲಿ ವಿಷದ ಗ್ರಂಥಿಗಳಿದ್ದು ವಿಷ ಪ್ರಾಷನವಾಗುತ್ತದೆ. ಇವು ಗಾಬರಿಯಿಂದ ಕಚ್ಚುತ್ತವೆಯೇ ಹೊರತು ಉದ್ದೇಶಪೂರ್ವಕವಾಗಿ ಕಚ್ಚುವದಿಲ್ಲ. ಪ್ರಪಂಚದಲ್ಲಿ ಸುಮಾರು 1500 ವಿಧದ ಚೇಳುಗಳಿದ್ದು, ಇವುಗಳಲ್ಲಿ ಕೇವಲ 25 ವಿಧಗಳು ಮಾತ್ರ ವಿಷಕಾರಿ. ಮನುಷ್ಯ ಮತ್ತು ಪ್ರಾಣಿಗಳಲ್ಲಿ ಸಾವನ್ನಂಟು ಮಾಡುವುದು ಮಾತ್ರ 17 ಪ್ರಬೇಧಗಳು. ಅಂಟಾರ್ಕ್ಟಿಕಾ ಖಂಡವನ್ನು ಹೊರತು ಪಡಿಸಿ ಪ್ರಪಂಚದ ಎಲ್ಲಾ ದೇಶಗಳಲ್ಲಿ ಚೇಳುಗಳಿವೆ. ಚೇಳಿನ ವಿಷವು ವಿಶ್ವದ ಅತ್ಯಂತ ದುಬಾರಿ ವಿಷಗಳಲ್ಲಿ ಒಂದಾಗಿದೆ. ಕೆಲವೊಂದು ಔಷಧಗಳನ್ನು ಚೇಳಿನ ವಿಷದಿಂದ ತಯಾರಿಸಲಾಗುತ್ತದೆ. ಹಾಗಾಗಿಯೇ ಚೇಳಿನ ವಿಷಕ್ಕೆ ಹೆಚ್ಚಿನ ಬೇಡಿಕೆಯಿದೆ. ಸದ್ಯ ಒಂದು ಗ್ರಾಂ ಚೇಳಿನ ವಿಷ 80 ಸಾವಿರದವರೆಗೆ ಮಾರಾಟವಾಗುತ್ತಿದೆ. ಇದು ವಿಶ್ವದ ಅತ್ಯಂತ ದುಬಾರಿ ವಿಷ ಎಂಬ ಮನ್ನಣೆಯನ್ನು ಗಳಿಸಿದೆ. ಇದರಿಂದಾಗಿ ಟರ್ಕಿಯ ಲ್ಯಾಬ್‌ಗಳಲ್ಲಿ ಚೇಳುಗಳನ್ನು ಸಾಕಲಾಗುತ್ತಿದೆ.ಟರ್ಕಿಯ ಪ್ರಯೋಗಾಲಯವು ದಿನಕ್ಕೆ 2 ಗ್ರಾಂ ವಿಷವನ್ನು ಚೇಳುಗಳಿಂದ ಸಂಗ್ರಹಿಸುತ್ತದೆ. ಚೇಳುಗಳನ್ನು ಪೆಟ್ಟಿಗೆಗಳಿಂದ ಹೊರತೆಗೆಯಲಾಗುತ್ತದೆ ಮತ್ತು ವಿಷವನ್ನು ವಿಶೇಷ ವಿಧಾನಗಳಲ್ಲಿ ಸಂಗ್ರಹಿಸಲಾಗುತ್ತದೆ.

ಚೇಳುಗಳಲ್ಲಿ ಮುಖ್ಯವಾದವು ಕಪ್ಪುಬಣ್ಣದ ಚೇಳುಗಳು, ಕಂದು ಬಣ್ಣದ ಚೇಳುಗಳು, ಕೆಂಪು ಕಾಲಿನ ಚೇಳುಗಳು, ಹಾರುವ ಮತ್ತು ಓಡುವ ಚೇಳುಗಳು, ಇತ್ಯಾದಿ. ಒಟ್ಟಾರೆ ಪ್ರಾಣಿಗಳಲ್ಲಿ ಈ ಕಪ್ಪು ಬಣ್ಣದ ಚೇಳುಗಳು ಮುಖ್ಯವಾಗಿ ನಾಯಿ ಮತ್ತು ಬೆಕ್ಕುಗಳನ್ನು ಹೆಚ್ಚಾಗಿ ಬಾಧಿಸುತಿದ್ದು . ಈ ಚೇಳು ಹೆಚ್ಚು ಅಪಾಯಕಾರಿ ವಿಷವಾದ ಆಲ್ಫಾ ಲಾಟರೋಟಾಕ್ಸಿನ್ ಎಂಬ ವಿಷಕಾರಿ ಅಂಶವನ್ನು ಸ್ರವಿಸುತ್ತವೆ. ಚೇಳಿನ ವಿಷದಲ್ಲಿ ನರವಿಷ, ಹೃದಯವಿಷ, ಮೂತ್ರಜನಕಾಂಗವಿಷ, ರಕ್ತವಿಷ, ಹಿಸ್ಟಮಿನ್, ಫಾಸ್ಫೋಲೈಪೇಸ್ ಇತ್ಯಾದಿ ವಿಷಗಳ ಸಮೂಹವೇ ಇದೆ.ಈ ವಿಷಕಾರಿ ಅಂಶವು ಪ್ರಾಣಿ ಮತ್ತು ಮನುಷ್ಯನ ನರಮಂಡಲದ ಮೇಲೆ ಅತಿಯಾದ ಹಾನಿಯನ್ನುಂಟುಮಾಡುವುದಲ್ಲದೆ ಜೀವಕೋಶಗಳ ವಿವಿಧ ಜೈವಿಕ ಕ್ರಿಯೆಗೆ ಅತ್ಯವಶ್ಯಕವಾದ ಕ್ಯಾಲ್ಸಿಯಂ ಕಣಗಳ ಜೊತೆ ಅಂಟಿಕೊಂಡು ಜೀವಕೋಶದ ಒಳಭಾಗದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗುವಂತೆ ಮಾಡುತ್ತದೆ. ಇದರಿಂದಾಗಿ ಜೀವಕೋಶದ ಸಾಮಾನ್ಯ ಜೈವಿಕ ಕ್ರಿಯೆಗೆ ದಕ್ಕೆಯನ್ನುಂಟುಮಾಡುತ್ತದೆ. ಈ ವಿಷಕಾರಿ ಆಂಶವು ಲ್ಯೂಸಿನ್, ಟೈರೋಸಿನ್ ಮತ್ತು ಹಯಲುರಿನಿಡೇಸ್ ಎಂಬ ಅಂಶಗಳ ಮಿಶ್ರಣವಾಗಿದ್ದು ಸಾಮಾನ್ಯ ಹಾವಿನ ವಿಷಕ್ಕಿಂತ 10 ರಿಂದ 15 ಕ್ಕಿಂತ ಹೆಚ್ಚುಪಟ್ಟು ತೀಕ್ಷ್ಣವಾದ ವಿಷವಾಗಿದೆ.

ಚೇಳುಗಳು ಪ್ರಾಣಿಗಳನ್ನು ಕಡಿದ ಜಾಗದಲ್ಲಿ ಅತಿಯಾದ ಬೇನೆ ಕಂಡುಬರುತ್ತದೆ. ಆ ಜಾಗವನ್ನು ಸ್ವಲ್ಪ ಬಲವಾಗಿ ಒತ್ತಿದಲ್ಲಿ ಗಟ್ಟಿಯಾದ ದ್ರವದಂತೆ ಕಡಿದ ಜಾಗದಲ್ಲಿ ಉರಿಯೂತ ಕಂಡುಬರುತ್ತದೆ. ಅತಿಯಾದ ನೋವಿನಿಂದ ಪ್ರಾಣಿಗಳು ಉದ್ರೇಕಗೊಳ್ಳುತ್ತವೆ. ಪಕ್ಕೆ ಮತ್ತು ಹೊಟ್ಟೆಯ ಮಾಂಸಖಂಡಗಳು ಹಿಡಿದುಕೊಂಡಂತಾಗುತ್ತದೆ. ಮಾಂಸಖಂಡದ ಬಿಗಿತದಿಂದ ನರವ್ಯೂಹದ ಕ್ರಿಯೆಯಲ್ಲೂ ಬದಲಾವಣೆ ಕಂಡುಬರುವುದರ ಜೊತೆಗೆ ರೋಗ ಲಕ್ಷಣಗಳಾದ ವಾಂತಿ, ಅಸಿವಾಗದಿರುವಿಕೆ, ನಿಶಕ್ತಿ, ಉಸಿರಾಟದ ತೊಂದರೆಯಿಂದಾಗಿ ಪ್ರಾಣಿಗಳು ಹೆಚ್ಚು ಗಾಬರಿಗೊಳ್ಳುತ್ತವೆ. ಚೇಳಿನ ವಿಷಕಾರಿ ಅಂಶವು ದೇಹದ ರಕ್ತನಾಳಗಳ ಒಳಪದರನ್ನು ಹಾನಿಗೊಳಿಸಿ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟುವಂತೆ ಮಾಡಿ ಜೀವಕೋಶಗಳಿಗೆ ರಕ್ತದ ಸರಬರಾಜನ್ನು ಕುಂಠಿತಗೊಳಿಸುತ್ತದೆ. ಇದರಿಂದಾಗಿ ದೇಹದ ಎಲ್ಲಾ ಜೀವಕೋಶಗಳು ತನ್ನ ಕ್ರಿಯೆಯನ್ನು ನಿರ್ವಹಿಸಲು ಅಶಕ್ತಗೊಂಡು ಸಾವನ್ನಪ್ಪುತ್ತವೆ. ಕೆಲವು ಸಂಧರ್ಭಗಳಲ್ಲಿ ಚೇಳುಗಳು ಕಡಿದ ಬಳಿಕ ಕೇವಲ 4 ರಿಂದ 6 ಗಂಟೆಗಳಲ್ಲಿ ಪ್ರಾಣಿಗಳು ಸಾವನ್ನಪ್ಪಿರುವುದೂ ಸಹ ಇದೆ.

ಚೇಳಿನ ಕಡಿತಕ್ಕೆ ಚಿಕಿತ್ಸೆ

ಪ್ರಥಮ ಚಿಕಿತ್ಸೆಯಾಗಿ ಚೇಳುಗಳು ಕಡಿದ ಜಾಗವನ್ನು ಸ್ವಚ್ಚಗೊಳಿಸಿ ಹಾಕಿ ಅದಕ್ಕೆ ಸ್ಪಿರಿಟ್ ಅಥವಾ ಅಯೋಡಿನ್ ದ್ರಾವಣ ಹಾಕಬೇಕು. ಅತ್ಯಂತ ನೋವು ಇರುವುದರಿಂದ ನೋವು ನಿವಾರಕದ ತುಂತುರು ಹಾಕಬಹುದು. ಕಡಿದ ಸ್ಥಳಕ್ಕೆ ಮಂಜುಗಡ್ಡೆ ಹಾಕಿದಲ್ಲಿ ಒಂದಿಷ್ಟು ನೋವು ಕಡಿಮೆಯಾಗುತ್ತದೆ. ತ್ವರಿತವಾಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಬೇಕು.

  • ಅಮೇರಿಕಾದಂತ ದೇಶಗಳಲ್ಲಿ ಚೇಳುಗಳ ಕಡಿತ ವಿಷಬಾಧೆ ಜಾಸ್ತಿ ಇರುವ ಸ್ಥಳಗಳಲ್ಲಿ ಪ್ರತ್ಯೌಷಧ ಇದೆ. ಆದರೆ ಪಶುಗಳಲ್ಲಿ ಈ ವಿಷಬಾಧೆಗೆ ಯಾವುದೇ ಪ್ರತಿವಿಷವಿರುವುದಿಲ್ಲ.
  • ರೋಗ ಲಕ್ಷಣಗಳಿಗನುಸಾರವಾಗಿ ಚಿಕಿತ್ಸೆ ಒದಗಿಸುವುದು. ಮನುಷ್ಯರಲ್ಲಿ ನೋವನ್ನು ಮತ್ತು ಜ್ವರವನ್ನು ಕಡಿಮೆ ಮಾಡಲು ಪ್ಯಾರಾಸೆಟಮಾಲ್ ಗುಳಿಗೆ, ಉದ್ರೇಕಶಮನ ಔಷಧಿ,ಪ್ರಾಝೋಸಿನ್ ಔಷಧಿ ಇತ್ಯಾದಿ ನೀಡುತ್ತಾರೆ.
  • ಮಾಂಸಖಂಡಗಳಲ್ಲಿ ಬಿಗಿತ ಹೆಚ್ಚಾಗಿರುವುದನ್ನು ಮತ್ತು ಪ್ರಾಣಿಗಳು ಅತಿರೇಕಗೊಂಡಿರುವುದನ್ನು ನಿಯಂತ್ರಣಗೊಳಿಸಲು ಕ್ಯಾಲ್ಸಿಯಂ ಗ್ಲೂಕೋನೇಟ್, ಸೋಡಿಯಂ ಬೈ ಕಾರ್ಬೊನೇಟ್ ಔಷಧಗಳನ್ನು ಅಳವಡಿಸುವುದು.
  • ಅಗತ್ಯವಾದ ಲವಣಾಂಶಗಳ ಬಳಕೆ ಮತ್ತು ಉಸಿರಾಟಕ್ಕೆ ಅನುಕೂಲವಾಗುವ ಔಷಧಗಳನ್ನು ಅಳವಡಿಸುವುದು.
  • ಕಾರ್ಟಿಕೊಸ್ಟೀರಾಯ್ಡ್ ಮತ್ತು ಅಟ್ರೋಪಿನ್ ಎಂಬ ಔಷದಗಳಿಂದಲೂ ಸಹ ಉಪಚರಿಸಬಹುದಾಗಿದೆ.
  • ಚೇಳಿನ ವಿಷಬಾಧೆಗೆ ಒಳಪಟ್ಟ ಪ್ರಾಣಿಗಳನ್ನು ಹತ್ತಿರದ ಪಶುವೈದ್ಯರ ಸಂಪರ್ಕದ ಮೇರೆಗೆ ಚಿಕಿತ್ಸೆ ಒದಗಿಸುವುದು ಒಳಿತು.

ಚೇಳುಗಳು ಇರುವ ಪ್ರದೇಶದಲ್ಲಿ ಜಾನುವಾರುಗಳು ಮೇಯದಂತೆ ನೋಡಿಕೊಳ್ಳುವುದು, ಕೊಟ್ಟಿಗೆಯಲ್ಲಿ ಚೇಳುಗಳ ಆವಾಸಸ್ಥಾನವನ್ನು ಹುಡುಕಿ ಅವುಗಳನ್ನು ಹೊರಗಟ್ಟುವುದು ಇತ್ಯಾದಿ ಸಹ ಅವಶ್ಯಕ.

ಡಾ. ಎನ್.ಬಿ. ಶ್ರೀಧರ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ

Related post

Leave a Reply

Your email address will not be published. Required fields are marked *