ಜನುಮದ ಮೈತ್ರಿ
ನಿನ್ನ ಬೆರಗಿನ ಸವಿನೋಟದಲಿ
ನಿನ್ನೊಲವಿನ ಅನುಭೂತಿಯಲಿ!
ಮನದಲಿ ಮಿಂಚಿನ ರಿಂಗಣ..
ಇರಲೆಂದಿದೆ ಬಾಳಲಿ ಅನುದಿನ!!
ಯಾವ ಜನ್ಮದ ಮೈತ್ರಿಯಿದು
ಅನುಭಾವದಲಿ ಮನ ಮಿಡಿದು!
ನೆಮ್ಮದಿ ಕಂಡಿದೆ ನಿನ್ನ ಕಂಗಳಲಿ..
ಹಸಿರು ತಬ್ಬಿದಂತೆ ಕಾನನದಲಿ!!
ಒಂದೇ ರಾಗದಿ ಒಂದೇ ಭಾವದಿ
ತಲ್ಲೀನಗೊಳಿಸಿಹುದು ಈ ಲೋಕದಿ!
ಬೆರೆತಿಹುದು ನಮ್ಮ ಮನಗಳಿಂದು..
ಬೆರೆತಂತೆ ನದಿಯು ಕಡಲಲಂದು!!
ಅನುಗಾಲವೂ ಇರಲಿ ಆತ್ಮಪ್ರೀತಿ
ದಿಗಂತದಿ ಅನಂತವಾಗುವಾ ರೀತಿ!
ನೀ ಬಾಳಿನಾ ಜೀವದುಸಿರು..
ಅಳಿಯಲಿ ಅದರಲಿ ನನ್ನುಸಿರು!!

ಸುಮನಾ ರಮಾನಂದ