ಜನ್ಮದಿನದ (ಸಂ)ಭ್ರಮ
ಸಂದಿಹವು ವರುಷಗಳು
ನೆನಪುಗಳ ಮೆರವಣಿಗೆಯಲಿ
ನಾನು ಇಟ್ಟ ಹೆಜ್ಜೆಗಳ ಲೆಕ್ಕವಿಲ್ಲ
ಕಂಡ ಕನಸುಗಳ ಪರಿವೆಯಿಲ್ಲ
ನೆನಪುಗಳ ದಾರದಲಿ ಪೋಣಿಸಿಹ
ಮಧುರ ನೆನಪುಗಳ
ಹೂವಿನ ಘಮಲು ಮಾತ್ರ
ಇಂದಿಗೂ ಆಗೀಗ ಕಾಡುತ್ತ
ನನ್ನೊಳಗಿನ ನಾನು ಎಚ್ಚೆತ್ತು
ಒಮ್ಮೆ ಕಣ್ಣಹನಿಯು ಜಾರುತ್ತ
ಮತ್ತೊಮ್ಮೆ ಹರಿಯಲಾಗದೇ ಇಂಗುತ್ತಾ
ಮಗದೊಮ್ಮೆ ದಿಂಬಿನಾಸರೆಯಲ್ಲಿ
ನಿರಾಳವಾಗಿ ನಿಟ್ಟುಸಿರು ಬಿಡುತ್ತದೆ
ಅಂದು ಮುತ್ತಿನ ಹನಿಯಂತೆ
ಫಳಫಳನೆ ಹೊಳೆದು
ಕೋಡಿ ಒಡೆದು ಜಾರಿದ ಕಣ್ಣೀರು
ಇಂದು ಕಟ್ಟೆ ಕಟ್ಟಿದರೂ ತುಂಬದ
ಬರಡು ಜಲಾಶಯದಂತೆ
ಅಳುವಿಗೂ ತತ್ವಾರ ತಂದಿದೆ
ಬೆಳಕಿನರಮನೆಯಲ್ಲಿ ಕುಳಿತವಗೆ
ಅಂತರಂಗದ ಕತ್ತಲೆಯ ತೊಡೆವ
ದಾರಿ ಕಾಣದಾಗಿದೆ
ಒಡಲೊಳಗಿನ ಬಾಗಿಲಿಗೆ
ಬೀಗ ಜಡಿದಿರುವಾಗ
ಗುರಿಗೆ ಎಲ್ಲಿಯ ದಾರಿ!?
ಮೌನವನು ಆಲಿಸಿದ ಕಿವಿಗೆ
ಮಾತು ಇಷ್ಟವಾಗುತ್ತಿಲ್ಲ
ನೆನಪಿನಂಗಳದಿ ಚದುರಿಹೋದ
ಭಾವಗಳನ್ನು ಹೆಕ್ಕಿ ತೆಗೆಯಲು
ಪಾಳುಬಿದ್ದ ಕನಸಿನರಮನೆಯು
ಬಿಕ್ಕಳಿಸಿ ಗುಟುಕಿಗಾಗಿ ಹುಡುಕಿದೆ
ಇಟ್ಟ ಪುಟ್ಟ ಹೆಜ್ಜೆಗಳಲಿ
ಸುಟ್ಟ ಮಾಯದ ಗಾಯಗಳು
ಕಾಲದೋಟದಲ್ಲಿ ಅವಿತು ಕುಳಿತು
ಆಗಾಗ್ಗೆ ಚುರ್ರೆಂದು ಚುಚ್ಚಿ
ಮಾಯದ ಗಾಯವನ್ನು ನೆನಪಿಸಿ
ಅಟ್ಟಹಾಸದಿ ಮೆರೆಯುತ್ತವೆ
ಮಾತು ಮನಸನ್ನು ಮುಟ್ಟಿ
ಮೌನ ಆತ್ಮವನ್ನು ತಟ್ಟುತ್ತಾ
ಬದುಕಿನ ಪುಟಗಳಲಿ
ವಿಧಿಯ ಬರಹಗಳನು
ಓದಲಾಗದೇ ತತ್ತರಿಸುತ್ತಾ
ಬಿಕ್ಕುವ ಬದುಕಿನ ಜೊತೆಗೆ ನಗುತ್ತಾ
ಕಂಬನಿಯ ಜೊತೆಗೆ ಸೆಣಸಲಾಗದೇ
ಸೋತು ನಡೆಯುತ್ತಲೇ
ಮನದೊಳಗಿನ ಮಾತಿಗೆ
ಕಾವ್ಯದ ಮಾಲೆ ಕಟ್ಟುತ್ತದೆ..
ಅಶರೀರವಾಣಿಯೊಂದು ನುಡಿಯುತ್ತಿದೆ
ಬಾಳು ಬಾಳದೇ ಬಿಡದು!!!
ಸುನೀಲ್ ಹಳೆಯೂರು