ಜಪಾನಿನ ಮೃತ್ಯುಂಜಯ (ಟ್ಸುಟೊಮು ಯಮಗುಚಿ)

ಅಂದು ಆಗಸ್ಟ್ 6 ‘ಟ್ಸುಟೊಮು ಯಮಗುಚಿ’ ಎಂಬ 29 ವರ್ಷದ ಜಪಾನಿಗ ತುಂಬ ಖುಷಿಯಲ್ಲಿದ್ದ. ಮಿಟ್ಸುಬಿಷಿ ಕಂಪನಿಯ ಪರವಾಗಿ ಹಿರೋಷಿಮಾ ನಗರಕ್ಕೆ ಬಂದ ಟ್ಸುಟೊಮು ಮೂರು ತಿಂಗಳು ಊರಿಗೆ ವಾಪಸಾಗದೆ ತೈಲ ಟ್ಯಾಂಕರ್ ಗಳ ರೂಪು ರೇಷೆಯ ಕೆಲಸದಲ್ಲಿ ನಿರತನಾಗಿದ್ದ. ಒಮ್ಮೆ ಪ್ರಾಜೆಕ್ಟ್ ಕೆಲಸ ಮುಗಿಯಿತು. ಮಾರನೆಯ ಅವನು ತನ್ನ ಊರಿಗೆ ಮರಳಿ ತನ್ನ ಮಡದಿ ‘ಹಿಸಾಕೊ’ ಮತ್ತು ಮಗ ‘ಕತ್ಸುತೋಶಿ’ ಯರನ್ನು ಸೇರುವ ಖುಷಿಯಲ್ಲಿದ್ದ. ಹಾಗಾಗಿ ಬೆಳಿಗ್ಗೆಯೇ ಎದ್ದು ನೌಕಾ ಪ್ರದೇಶವನೊಮ್ಮೆ ಕೊನೆಯ ಬಾರಿಗೆ ನೋಡಿ ಬರುವ ಎಂದು ಬರುತಿದ್ದಾಗ ಸುಮಾರು 8:15 ರ ವೇಳೆಗೆ ಅಮೆರಿಕಾದ ಯುದ್ಧ ವಿಮಾನವೊಂದು ತಲೆಯ ಮೇಲೆ ಹಾದು ಹೋದದ್ದನ್ನು ಹಾಗೂ ಅದು ಸ್ವಲ್ಪ ದೂರದಲ್ಲಿ ಚಿಕ್ಕ ವಸ್ತುವೊಂದನ್ನು ಪ್ಯಾರಾಚೂಟ್ ಮೂಲಕ ತೇಲಿ ಬಿಟ್ಟಿದ್ದನ್ನು ನೋಡಿದ. ತತ್ ಕ್ಷಣವೇ ಆ ವಸ್ತುವಿನಿಂದ ಮಿಂಚಿನ ಬೆಳಕೊಂದು ಸ್ಪೋಟಿಸಿ ಕಣ್ಣಿಗೆ ಕತ್ತಲೆ ಉಂಟಾಗಿ ಏನಾಗುತ್ತಿದೆ ಎಂದು ಅಂದಾಜಿಸುವಷ್ಟರಲ್ಲಿ ಸ್ಪೋಟದ ತೀವ್ರತೆಗೆ ಸ್ವಲ್ಪ ದೂರದಲ್ಲಿದ್ದ ಆಲೂಗೆಡ್ಡೆ ದಾಸ್ತಾನಿನ ಒಳಗೆ ಎಸೆಯಲ್ಪಟ್ಟ.

ಎರಡನೇ ಮಹಾಯುದ್ಧವನ್ನು ಅಮೆರಿಕಾ ತಾನು ಕಂಡು ಹಿಡಿದ ಅಣು ಬಾಂಬನ್ನು ಹಿರೋಷಿಮಾ ನಗರದ ಮೇಲೆ ಹಾಕಿ ಸಮಾಪ್ತಿಗೊಳಿಸಿತ್ತು.

ಲಕ್ಷಾಂತರ ಜನರ ಮಾರಣಹೋಮಕ್ಕೆ ಕಾರಣವಾಗಿದ್ದ ಆ ಅಣು ಬಾಂಬಿಗೆ ‘ಲಿಟಲ್ ಬಾಯ್’ ಎಂದು ಹೆಸರಿಟ್ಟದ್ದರು.
ಸಹಿಸಲಸಾಧ್ಯ ನೋವಿನೊಂದಿಗೆ ಎದ್ದ ‘ಟ್ಸುಟೊಮು’ ದೂರದಲ್ಲಿ ಅವನ ಸಹಚರರಾದ ‘ಅಕಿರಾ ಮತ್ತು ಕುನಿಯೋಶಿ’ ಸ್ವಲ್ಪ ದೂರದಲ್ಲೇ ಇದ್ದರು. ಹೇಗೋ ಚೇತರಿಸಿಕೊಂಡು ಎದ್ದು ನಿಂತ. ಅವರನ್ನು ನೋಡಿ ಅವರ ಜೊತೆ ಬಂಕರ್ ಒಂದರಲ್ಲಿ ಸೇರಿಕೊಂಡ. ಅವರಿಬ್ಬರೂ ಮಾತನಾಡುತ್ತಿದದ್ದು ಟ್ಸುಟೊಮುವಿಗೆ ಏನೂ ಕೇಳುಸುತ್ತಿರಲಿಲ್ಲ ಕಾರಣ ಬಾಂಬಿನ ಶಬ್ದಕ್ಕೆ ಕಿವಿ ತಾತ್ಕಾಲಿಕವಾಗಿ ಕೇಳದಂತಾಗಿತ್ತು.

Photos: voanews.com

ಪೂರ್ತಿ ದಿನ ಆ ಬಂಕರ್ ನೊಳಗೆ ಕಳೆದು ಬೆಳಗಿನ ಜಾವ ಅಳುಕಿನಿಂದಲೇ ರೈಲ್ವೆ ಸ್ಟೇಷನ್ ನತ್ತ ಆ ಮೂವರೂ ಹೆಜ್ಜೆ ಹಾಕಿದರು. ಬಾಂಬಿನಿಂದ ನೌಕಾ ಪ್ರದೇಶವು ಪೂರ್ತಿ ಹಾಳಾಗಿತ್ತು. ಏನೆಂದರೆ ಏನೂ ಗುರುತು ಸಿಗದಂತಾಗಿತ್ತು.

ಹೊರಗೆ ಬಂದರೆ ಕಟ್ಟಡಗಳ ಅವಶೇಷಗಳು ಬಿದ್ದು ದಾರಿಯೇ ಇಲ್ಲದಾಗಿತ್ತು. ಜೊತೆಗೆ ಎಲ್ಲೆಂದರಲ್ಲಿ ಹೆಣಗಳು. ಚದುರಿ ಬಿದ್ದ ಕೈ ಕಾಲುಗಳು, ರುಂಡ ಮುಂಡಗಳು ಅರ್ಧ ಜೀವವಾಗಿದ್ದವರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಮೂವರಿಗೂ ಏನು ಮಾಡಬೇಕೆಂದು ತೋಚದೆ ಮೂಕ ಪ್ರೇಕ್ಷಕರಾದರು.
ದಾರಿಗಿದ್ದ ಸೇತುವೆಗಳು ಮುರಿದುಹೋಗಿದ್ದವು.

Photo:https://www.npr.org/

ಮೂವರೂ ನದಿಯಲ್ಲಿ ಹೆಣಗಳ ಮದ್ಯೆ ತೇಲುತ್ತ ಕೊನೆಗೂ ರೈಲ್ವೆ ಸ್ಟೇಷನ್ ತಲುಪಿದರು. ಅವರ ಪುಣ್ಯಕ್ಕೆ ರೈಲೊಂದು ನಾಗಾಸಾಕಿಗೆ ಹೋಗಲು ಸಿದ್ದವಾಗಿತ್ತು. ದುಗುಡದಿಂದಲೇ ಹತ್ತಿದ್ದ ಅವರಿಗೆ ಕಂಡದ್ದು ರೈಲಿನ ತುಂಬಾ ಅರೆ ಬೆಂದ ಹಾಗೂ ಸುಟ್ಟ ಗಾಯಗಳಿಂದ ಆರ್ತನಾದ ಮಾಡುತಿದ್ದ ಪ್ರಯಾಣಿಕರು. ಬಾಂಬಿನ ತೀವ್ರತೆ ಎಷ್ಟಿತ್ತೆಂದರೆ ತಕ್ಷಣಕ್ಕೆ 80 ಸಾವಿರ ಜನರು ಮೃತರಾಗಿದ್ದರೂ ಬಾಂಬು ಸ್ಪೋಟಗೊಂಡಾಗ ಎದ್ದ ದಟ್ಟ ಕಾರ್ಮೋಡವು ವಾರಗಳು ಕಳೆದರು ಸೂರ್ಯನ ರಶ್ಮಿಗೆ ಅಡ್ಡಗಾಲಾಗಿದ್ದವು.

ಟ್ಸುಟೊಮು ತನ್ನ ಊರಾದ ನಾಗಾಸಾಕಿಗೆ ಬೆಳಗಿನ ಜಾವ ಹಿಂತಿರುಗಿ ನೇರವಾಗಿ ಹತ್ತಿರದಲ್ಲಿದ್ದ ಆಸ್ಪತ್ರೆಯೊಂದಕ್ಕೆ ದಾಖಲಾದ. ಅಲ್ಲಿನ ವೈದ್ಯನೊಬ್ಬ ಅವನ ಶಾಲಾವದಿನಗಳ ಸ್ನೇಹಿತನಾಗಿದ್ದ. ಕೈ ಕಾಲು ಮುಖ ಸುಟ್ಟುಕೊಂಡಿದ್ದ ಅವನನ್ನು ಸ್ನೇಹಿತ ಗುರುತು ಹಿಡಿಯದಾದ. ಟ್ಸುಟೊಮು ಕಷ್ಟಪಟ್ಟು ತನ್ನ ಪರಿಚಯ ಹೇಳಿದೊಡನೆ ಗುರುತು ಹತ್ತಿ ವೈದ್ಯ ಮಿತ್ರ ಅವನನ್ನು ಇಡೀ ದಿನ ಉಪಚರಿಸಿ ರಾತ್ರಿ ಅವನ ಮನೆಗೆ ಕಳುಹಿಸಿದ. ಮೈತುಂಬ ಬ್ಯಾಂಡೇಜ್ನೊಂದಿಗೆ ಬಂದವನನ್ನು ನೋಡಿ ಟ್ಸುಟೊಮು ತಾಯಿ ಹಾಗೂ ಹೆಂಡತಿ ಗಾಬರಿ ಬಿದ್ದರು. ರಾತ್ರಿ ಮಲಗಿದರು. ಟ್ಸುಟೊಮುವಿಗೆ ನಿದ್ದೆಯೇ ಇಲ್ಲಾ, ಅರೆ ನಿದ್ರೆಯಲ್ಲೇ ಇಡೀ ರಾತ್ರಿ ಕಳೆದನು. ಬೆಳಿಗ್ಗೆ ಮನೆಯಲ್ಲಿ ಯಾರೂ ಎಷ್ಟು ಹೇಳಿದರು ಕೇಳದೆ ತನ್ನ ಆಫೀಸಿಗೆ ಹೋಗಿ ಕೆಲಸಕ್ಕೆ ಹಾಜರಾದ.
ತನ್ನ ಕಂಪನಿಯ ನಿರ್ದೇಶಕನೊಂದಿಗೆ ಹಿರೋಷಿಮಾ ನಗರದಲ್ಲಿ ಆದ ಅವಘಡವನ್ನು ಇಡೀ ನಗರವನ್ನು ಬಾರಿ ಅಣಬೆ ಆಕಾರದ ಕಾರ್ಮೋಡ ಸುತ್ತುವರೆದಿದ್ದು ಟ್ಸುಟೊಮು ವಿವರಿಸುತ್ತಿದ್ದರೆ ನಿರ್ದೇಶಕ ಇವನ ತಲೆ ಸರಿಯಾಗಿದೆಯೇ ಎಂದು ಅನುಮಾನದೊಂದಿಗೆ ‘ಅದು ಹೇಗೆ ಒಂದು ಬಾಂಬು ಇಡೀ ನಗರವನ್ನು ನಾಶಪಡಿಸಿತು’ ಎಂದು ಪ್ರಶ್ನೆ ಹಾಕಿದ. ಟ್ಸುಟೊಮು ನಿರ್ದೇಶಕರಿಗೆ ವಿವರಿಸುವಷ್ಟರಲ್ಲಿ ಮತ್ತೊಂದು ಮಿಂಚು ಬಾರಿ ಶಬ್ದದೊಂದಿಗೆ ಸ್ಪೋಟಿಸಿ ಬಾಗಿಲು ಕಿಟಕಿಗಳೆಲ್ಲಾ ಚೂರುಚೂರಾಗಿ ಟ್ಸುಟೊಮು ಅಕ್ಷರಶ ಆಫೀಸಿನಿಂದ ಆಚೆ ಎಸೆಯಲ್ಪಟ್ಟ.

Photo: Time Magazine

ಚೇತರಿಸಿಕೊಂಡು ನೋಡಿದರೆ ಅದೇ ಆಕ್ರಂದನ, ಹೊಗೆ, ಧೂಳು ಆಕಾಶದಲ್ಲಿ ಬಾರಿ ಅಣಬೆಯಾಕಾರದ ಕಾರ್ಮೋಡ. ಯಾಕೋ ಟ್ಸುಟೊಮುವಿಗೆ ಹಿರೋಷಿಮಾದಲ್ಲಿ ಮೂಡಿದ ಕಾರ್ಮೋಡ ತನ್ನನ್ನು ಹಿಂಬಾಲಿಸಿ ಬಂದಂತೆ ಅನಿಸಿತು.

ಈ ಸಲ ಅಮೆರಿಕಾದವರು ‘ಲಿಟಲ್ ಬಾಯ್’ ಗಿಂತಲೂ ಶಕ್ತಿಶಾಲಿಯಾದ ಇನ್ನೊಂದು ಅಣು ಬಾಂಬ್ ‘ಫ್ಯಾಟ್ ಮ್ಯಾನ್’ ನನ್ನ ನಾಗಾಸಾಕಿಯ ನಗರದ ಮೇಲೆ ಸ್ಪೋಟಿಸಿದ್ದರು.

ಬಾಂಬಿನ ಸ್ಪೋಟದ ತೀವ್ರತೆ ಎಷ್ಟಿತ್ತೆಂದರೆ ಮಿಟ್ಸುಬಿಷಿ ಆಫೀಸಿನ ಹತ್ತಿರವಿದ್ದ ಸಾಮಾನ್ಯ ಎತ್ತರದ ಗುಡ್ಡವೇ ಇಲ್ಲವಾಗಿತ್ತು. ಟ್ಸುಟೊಮುವಿನ ಬ್ಯಾಂಡೇಜ್ ಎಲ್ಲ ಕಳಚಿ ಹಾರಿ ಹೋಗಿದ್ದವು. ಹತ್ತಿರದಲ್ಲಿ ನೋಡಿದರೆ ಅದೇ ಆಕ್ರಂದನ ಅರೆಬೆಂದ ಹೆಣಗಳು, ಬದುಕುಳಿದವರ ಆರ್ತನಾದಗಳು ಅದೇ ದೂಳು ಎಲ್ಲವೂ ಕಣ್ಣಿಗೆ ರಾಚಿ ಏನೂ ಕಾಣದಾಯಿತು.

ಎರಡೂ ಸ್ಪೋಟದಲ್ಲಿ ಟ್ಸುಟೊಮು ಬಾಂಬು ಬಿದ್ದ ಸ್ಥಳದಿಂದ ಸುಮಾರು ಎರಡೂ ಕಿಲೋಮೀಟರ್ ದೂರವಿದ್ದ. ಟ್ಸುಟೊಮುವಿಗೆ ತಕ್ಷಣವೇ ತಾಯಿ ಹೆಂಡತಿ ಮಕ್ಕಳ ನೆನಪಾಗಿ ಕಷ್ಟಪಟ್ಟು ಮನೆಯ ಕಡೆ ಓಡಿದ. ಅವನ ಅದೃಷ್ಟಕ್ಕೆ ಮನೆಯವರು ಸಣ್ಣ ಪುಟ್ಟ ಸುತ್ತ ಗಾಯಗಳೊಂದಿಗೆ ಪಾರಾಗಿದ್ದರು. ಗಂಡನಿಗೆ ಹಿರೋಷಿಮಾ ನಗರದಲ್ಲಿ ಆದ ಅನುಭವವನ್ನು ಕೇಳಿ ಮುಂಜಾಗ್ರತೆಯಿಂದ ಅವನ ಹೆಂಡತಿ, ತಾಯಿ ಹಾಗು ಮಕ್ಕಳು ಸುರಂಗವೊಂದರಲ್ಲಿ ಆಶ್ರಯ ಪಡೆದಿದ್ದರು.

Photo:https://www.surfolks.com/

ಟ್ಸುಟೊಮುವಿಗೆ ಹಿರೋಷಿಮಾ ಅನುಭವ ಆಗದಿದ್ದರೆ ಅವನ ಮನೆಯವರು ಉಳಿಯುತ್ತಿರಲಿಲ್ಲವೇನೋ ? ವಿಧಿಯ ಅದೃಷ್ಟ ಎರಡೂ ಬಾರಿ ಟ್ಸುಟೊಮುವಿಗೆ ಒಲಿದಿತ್ತು. ಮುಂದೆ ಟ್ಸುಟೊಮುವಿಗೆ ಬಾಂಬಿನ ವಿಕಿರಣದ ಪರಿಣಾಮವಾಗಿ ಕೂದಲೆಲ್ಲ ಉದುರಿ ಚರ್ಮ ರೋಗ ತಗುಲಿದರೂ ಸಾಕಷ್ಟು ದಿನಗಳ ಮೇಲೆ ಮೊದಲಿನಂತೆ ಇರಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಟ್ಸುಟೊಮು ಇನ್ನು ಎರಡು ಹೆಣ್ಣು ಮಕ್ಕಳಿಗೆ ತಂದೆಯಾಗಿ ಸೈನ್ಯದಲ್ಲಿ ಅನುವಾದಕನ ಕೆಲಸ ಮಾಡುತ್ತಾ ತನ್ನ ಎರಡು ದುಸ್ವಪ್ನಗಳನ್ನು ಕವಿತೆಗಳನ್ನು ಗೀಚುತ್ತ ಮರೆಯಲು ಪ್ರಯತ್ನ ಪಟ್ಟ. ಟ್ಸುಟೊಮು 2006 ರಲ್ಲಿ ನ್ಯೂಯಾರ್ಕ್ ನಗರಕ್ಕೆ ಬಂದು ಅಲ್ಲಿ ಎಲ್ಲರ ಮುಂದೆ ತನಗೊಲಿದ ಎರಡೂ ಅದೃಷ್ಟಗಳನ್ನು ಹೇಳುತ್ತಿದ್ದರೆ ಜನರು ನಿಜಕ್ಕೂ ನಂಬದಾದರೂ. ಅಲ್ಲಿಯವರೆಗೂ ಟ್ಸುಟೊಮು ಎರಡೂ ಬಾಂಬ್ ಸ್ಪೋಟದಲ್ಲಿ ಬದುಕಿರುವವನೆಂದು ಯಾರಿಗೂ ಗೊತ್ತಿರಲಿಲ್ಲ!

ಇತಿಹಾಸದಲ್ಲಿ ದಾಖಲಾದಂತೆ ಇನ್ನು ಸುಮಾರು ಜನರು ಈ ಎರಡೂ ಬಾಂಬ್ ದಾಳಿಯಲ್ಲಿ ಬದುಕುಳಿದಿದ್ದರು ಟ್ಸುಟೊಮು ಮಾತ್ರ ಅಧಿಕೃತವಾಗಿ ದಾಖಲಾಗಿ ಜಪಾನಿನ ಮೃತ್ಯುಂಜಯ (ನಿಜು ಹಿಬಾಕುಶಾ) ಎಂದೇ ಹೆಸರಾದವನು.

ಟ್ಸುಟೊಮು ತನ್ನ ಸುದೀರ್ಘ ಬದುಕಿನ ಪಯಣವನ್ನು2010 ರ ಜನವರಿ 4 ರಂದು ರಲ್ಲಿ ಮುಗಿಸಿ ಇಹಲೋಕ ತ್ಯಜಿಸಿದ.

ಕು ಶಿ ಚಂದ್ರಶೇಖರ್
ಮಾಹಿತಿ : history.com

Related post

Leave a Reply

Your email address will not be published. Required fields are marked *