ಜಲ ಚತುರೆ ಈ ಗುಳುಮುಳಕ

ಜಲ ಚತುರೆ ಈ ಗುಳುಮುಳಕ

ಶಾಲೆಯ ಬೇಸಿಗೆ ರಜೆ ಬಂತೆಂದರೆ ಸಾಕು ನಾನು ನನ್ನ ತಂಗಿ ನಮ್ಮ ತಾಯಿಯೊಡನೆ ನಮ್ಮ ಅಜ್ಜಿಯ ಊರಿಗೆ ಹೊರಟು ಬಿಡುತ್ತಿದ್ದೆವು. ಮಂಡ್ಯದ ಬಸ್ ನಿಲ್ದಾಣದಲ್ಲಿ ಆ ಬಿರು ಬೇಸಿಗೆಯಲ್ಲಿ ಕೆಂಪು ಬಸ್ಸನ್ನು ಕಾಯುತ್ತಾ ಬಸ್ಸು ಬಂದೊಡನೆ ಸೀಟಿಗಾಗಿ ಖರ್ಚಿಫು, ಬ್ಯಾಗು ಇನ್ನಿತರ ವಸ್ತುಗಳನ್ನು ಕಿಟಕಿಯ ಮೂಲಕ ಹಾಕುವ ಜನರ ನಡುವೆ ನಾನು ಕಿಟಕಿಯಿಂದಲೇ ತೂರಿ ಒಳಗೆ ನುಗ್ಗಿ ಅದೇಗೋ ಮೂರು ಸೀಟಿನ ಜಾಗವನ್ನು ಆಕ್ರಮಿಸಿಬಿಡುತ್ತಿದ್ದೆ. ನಮ್ಮ ತಾಯಿ ಕೊನೆಯ ಸೀಟಿನಲ್ಲಿ ನನ್ನ ತಂಗಿ ಕಿಟಕಿಯ ಪಕ್ಕ ನಾನು ಅವರಿಬ್ಬರ ಮದ್ಯೆ. ಆ ಅಸಾಧ್ಯ ಶೆಕೆಯಲ್ಲಿ ಬಸ್ಸು ಹೊರಡುವುದನ್ನೇ ಕಾಯುತ್ತಿದ್ದ ನಮಗೆ ಅಂತೂ ಬಸ್ಸು ಹೊರಟ ಮೇಲೆ ಬರುವ ತಂಗಾಳಿಯ ಖುಷಿ ಚಿಕ್ಕ ಮಂಡ್ಯದ ದೊಡ್ಡ ಕೆರೆಯನ್ನು ಕಂಡೊಡನೆ ಜಾಸ್ತಿಯಾಗುತ್ತಿತ್ತು. ಕೆರೆಗೆ ಬೀಳುತ್ತಿದ್ದ ಹುಡುಗರ ನಡುವೆ ನಮಗೆ ಇನ್ನೂ ಮತ್ತೊಮ್ಮೆ ನೋಡಬೇಕೆನಿಸುತ್ತಿದದ್ದು ಅಲ್ಲಿನ ಗುಳುಮುಳುಕಗಳನ್ನು.

ಪುಟ್ಟ ಗಾತ್ರದ ಗುಳುಮುಳುಕಗಳು ಅದೆಷ್ಟು ವೇಗದಲ್ಲಿ ಮುಳುಗುತ್ತಿದ್ದವೆಂದರೆ ಎಂತಹ ಪರಿಣಿತರಿಗೂ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯಲು ಕಷ್ಟವಾಗುತ್ತದೆ. ಈಗ ಕಂಡಷ್ಟೇ ವೇಗದಲ್ಲಿ ನೀರಿನೊಳಗೆ ಮುಳುಗಿ ಇನ್ನಿಲ್ಲದಂತೆ ಮಾಯವಾಗಿ ಬಿಡುತ್ತಿದ್ದವು.

“ಲಿಟಲ್ ಗ್ರೇಬ್”, “ಡ್ಯಾಬ್ ಚಿಕ್” ಎಂದು ಹೆಸರಿರುವ ಇವುಗಳಿಗೆ ಕನ್ನಡದಲ್ಲಿ ಅವು ನೀರಿನಲ್ಲಿ ಮುಳುಗುವುದನ್ನು ನೋಡಿಯೊ ಏನೋ “ಗುಳುಮುಳುಕ” ಎಂದೂ ಹಾಗು ನೀರಿನಲ್ಲಿ ಅವು ಪರಿಣಿತರಂತೆ ತಮ್ಮ ಚತುರ ಬುದ್ದಿಯನ್ನು ತೋರಿಸುವದರಿಂದಲೋ “ಜಲ ಚತುರೆ” ಎಂದು ಸಹ ಕರೆಯುತ್ತಾರೆ. ಇದರ ಮೂಲ ಹೆಸರು ಗ್ರೀಕ್ ಮೂಲದ್ದು Tachybaptus ruficollis ಎಂದು, ಅಂದರೆ ಬೇಗ ಮುಳುಗು ಎಂಬ ಅರ್ಥವಿದೆ. ಇವು ಬಾತುಕೋಳಿಗಳ ಹತ್ತಿರ ಸಂಬಂಧಿ.

1764 ರಲ್ಲಿ “ಪೀಟರ್ ಸಿಮೋನ್” ಎಂಬ ಜರ್ಮನ್ ಪರಿಸರವಾದಿ ಈ ಗುಳುಮುಳುಕಗಳನ್ನು ಮೊದಲ ಬಾರಿ ಅಧ್ಯಯನ ಮಾಡಿ ದಾಖಲಿಸಿದ. ನಂತರ ಇವುಗಳ ಪ್ರತ್ಯೇಕ ಇರುವಿಕೆಯು ಆರು ವಿಧದಲ್ಲಿ ಯುರೋಪ್, ಆಫ್ರಿಕಾ, ಇರಾನ್, ಇರಾಕ್, ಶ್ರೀಲಂಕಾ, ಭಾರತ, ನೇಪಾಳ, ಕೊರಿಯಾ, ಜಪಾನ್ ಮತ್ತು ಫಿಲಿಪ್ಪಿನ್ಸ್ ದೇಶಗಳಲ್ಲಿ ಇರುವುದು ದಾಖಲಾಗಿದೆ. 9 ರಿಂದ 11 ಇಂಚು ಗಾತ್ರದ ಇವು ತಮ್ಮ ಸಂತಾನೋತ್ಪತ್ತಿಯ ಅವಧಿಯಲ್ಲಿ ಇವುಗಳ ಕುತ್ತಿಗೆ ಹಾಗು ರೆಕ್ಕೆಗಳು ತುಕ್ಕು ಕೆಂಪು ಮಿಕ್ಕ ಭಾಗ ಕಂದು ಬೂದು ಬಣ್ಣದಿಂದ ಕಾಣಿಸಿಕೊಂಡರೆ ಉಳಿದ ಕಾಲದಲ್ಲಿ ಇವುಗಳ ಮೈ ಬಣ್ಣ ಸಂಪೂರ್ಣ ಕಂದು ಬೂದು ಮಿಶ್ರಿತವಾಗಿಬಿಡುತ್ತದೆ.

ಗುಳುಮುಳುಕಗಳು ಮಿಕ್ಕ ಪಕ್ಷಿಗಳಂತೆ ಹಾರಲಾರವು ಆದರೆ ಅಪಾಯ ಅರಿತಾಕ್ಷಣ ಚಂಗನೆ ಸ್ವಲ್ಪ ಮೇಲೆ ಅಥವಾ ದೂರದಲ್ಲಿ ಹಾರಿಬಿಡುತ್ತವೆ. ಇವುಗಳ ಪಾದ ರಚನೆ ನೀರಿನಲ್ಲಿ ಜೀವಿಸಲು ಬಹಳ ಅನುಕೂಲಕರವಾಗಿದ್ದು ಅದೇ ಇವುಗಳಿಗೆ ದೈವವಿತ್ತ ವರ. ಇತರೆ ಪರಬಕ್ಷಕಗಳ ದಾಳಿಯಿಂದ ಇವು ನೀರಿನ ಒಳಗೆ 20 ರಿಂದ 30 ಕ್ಷಣಗಳ ಕಾಲ ಮುಳುಗಿ ತಮ್ಮನ್ನು ತಾವು ಅಪಾಯದಿಂದ ರಕ್ಷಿಸಿಕೊಳ್ಳಬಲ್ಲವು. ನೀರಿನ ಪೊದೆಗಳಲ್ಲಿ ಇವು ಅಡಗಿಕೊಂಡರೆ ಹುಡುಕುವುದು ತುಂಬಾ ಕಷ್ಟ ಆದರೆ ಇವುಗಳು ಹೊರಡಿಸುವ ಧ್ವನಿಯಿಂದಾಗಿ ಇರುವಿಕೆಯನ್ನು ಗುರುತಿಸಬಹುದು ಅಷ್ಟರಮಟ್ಟಿಗೆ ಇವು ರಹಸ್ಯ ಜೀವಿಗಳು.

ನೀರಿನಲ್ಲಿ ಸಿಗುವ ಸಣ್ಣ ಗಾತ್ರದ ಮೀನು, ಏಡಿಗಳು ಹಾಗು ಕಪ್ಪೆಗಳೇ ಇವುಗಳ ಮುಖ್ಯ ಆಹಾರವಾದರೂ ಜೊತೆಗೆ ನೀರಿನಲ್ಲಿ ಬೆಳೆಯುವ ಸಸ್ಯಗಳನ್ನು ಅವುಗಳ ಪೌಷ್ಟಿಕಾಂಶ ಭರಿತ ಬೇರುಗಳನ್ನು ತಿನ್ನುವುದರಿಂದ ಕೆಲಮಟ್ಟಿಗೆ ಮಿಶ್ರಹಾರಿಯೂ ಹೌದು. ಫೆಬ್ರವರಿ ತಿಂಗಳಿಂದ ಸೆಪ್ಟೆಂಬರ್ ರವರಿಗೂ ಇದರ ಸಂತಾನೋತ್ಪತಿ ಸಮಯ, ಈ ಅವಧಿಯಲ್ಲಿ ಹೆಣ್ಣು ಗುಳುಮುಳಕ ಎರಡು ಬಾರಿ ಮೊಟ್ಟೆಗಳನ್ನು ಇಡುವುದು ಇವುಗಳ ವಿಶೇಷತೆ. ಸಂತಾನೋತ್ಪತಿಯಲ್ಲದ ಸಮಯದಲ್ಲಿ ಇವುಗಳು ಕೇವಲ ಕಂದುಮಿಶ್ರಿತ ಬಣ್ಣದಲ್ಲಿ ವಿರಹಿಗಳ ತರಹ ಸದಾ ಮಂಕಾಗಿ ಕಾಣಿಸಿಕೊಂಡರೂ ಮಿಕ್ಕ ಎಂಟು ತಿಂಗಳು ಉಲ್ಲಾಸಬರಿತದಿಂದ ವಿಹರಿಸುತ್ತವೆ. ಆ ಸಮಯದಲ್ಲಿ ಇವುಗಳ ಹೊಳಪಿನಿಂದ ಕೂಡಿದ ಕಂದುಮಿಶ್ರಿತ ಬಣ್ಣದ ಜೊತೆಗೆ ಕೆನ್ನೆ ಹಾಗು ಕುತ್ತಿಗೆಯ ಮೇಲೆ ಕೇಸರಿಮಿಶ್ರಿತ ಕೆಂಪುಬಣ್ಣವು ಆವರಿಸಿ ನವತರುಣಿಯ ಯೌವನದ ದಿನಗಳ ನಾಚಿಕೆಯನ್ನು ನೆನಪಿಸುತ್ತದೆ.

ಗಂಡು ಗುಳುಮುಳಕವು ತನ್ನ ಸಂಗಾತಿಯನ್ನು ಸೆಳೆಯಲು ನೀರಿನ ಮೇಲ್ಮೈಯನ್ನು ತನ್ನ ರೆಕ್ಕೆಗಳಿಂದ ಸತತವಾಗಿ ಬಡಿಯಲು ಹೆಣ್ಣು ಹಕ್ಕಿಯು ಆಕರ್ಷಿತಳಾಗಿ ತನ್ನ ಇನಿಯನನ್ನು ಆಯ್ಕೆ ಮಾಡುತ್ತದೆ. ಎರಡೂ ಹಕ್ಕಿಗಳು ಸೇರಿ ಗೂಡಿನ ಜಾಗವನ್ನು ಆಯ್ಕೆ ಮಾಡಿಕೊಂಡು ನೀರಿನಲ್ಲಿ ಸಿಗುವ ಸಸ್ಯ ಕಾಂಡಗಳು, ಪಾಚಿಗಳು ಮತ್ತು ಗಿಡಗಳ ಎಲೆಗಳನ್ನು ಒಟ್ಟುಗೂಡಿಸಿ ಎರಡು ಕಡೆ ಗೂಡು ಕಟ್ಟುತ್ತವೆ ಆದರೆ ಕೊನೆಯದಾಗಿ ಒಂದನ್ನು ಆಯ್ಕೆ ಮಾಡಿ ನಾಲ್ಕರಿಂದ ಆರು ಮೊಟ್ಟೆಗಳಿಗೆ ಪೋಷಕರಾಗುತ್ತವೆ. ಮೊಟ್ಟೆಗಳಿಗೆ ಪೋಷಕರಿಬ್ಬರೂ ಸಹ 3 ವಾರಗಳ ಕಾಲ ಸರದಿಯಲ್ಲಿ ಕಾವು ಕೊಟ್ಟ ನಂತರ ಪುಟ್ಟ ಪುಟ್ಟ ಮರಿಗಳು ಹೊರಬರುತ್ತವೆ. ಒಂದು ವಾರಗಳ ಕಾಲ ಪೋಷಕ ಹಕ್ಕಿಗಳೆರಡು ತಮ್ಮ ಮರಿಗಳಿರುವ ಗೂಡನ್ನು ದೊಡ್ಡ ದೊಡ್ಡ ಎಲೆಗಳಿಂದ ಮುಚ್ಚಿ ಇನ್ನಿಲ್ಲದಂತೆ ಕಾಪಾಡುತ್ತವೆ. ಮರಿಗಳು ಒಂದು ವಾರಗಳ ಕಾಲವಷ್ಟೇ ಗೂಡಿನಲ್ಲಿ ಇದ್ದು ವಾರದ ನಂತರ ಅಪ್ಪ ಅಮ್ಮನ ಜೊತೆ ನೀರಿಗಿಳಿದು ಆಹಾರ ಬೇಟೆಯ ತರಬೇತಿ ಪಡೆಯುತ್ತವೆ. ಗುಳುಮುಳುಕಗಳು ತಮ್ಮ ಮರಿಗಳನ್ನು ತಮ್ಮ ಬೆನ್ನ ಮೇಲೆ ಕೂಸು ಮರಿ ಮಾಡಿಕೊಂಡು ನೀರಿನಲ್ಲಿ ಹೊರಡುವುದನ್ನು ನೋಡುವುದೇ ಒಂದು ಚಂದದ ದೃಶ್ಯ, ಒಮೊಮ್ಮೆ ಪ್ರವಾಹ ಬಿರುಗಾಳಿಗಳಿಂದ ಇವುಗಳ ತೆಳುಬರಿತ ಗೂಡುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೊಟ್ಟೆಗಳು ಹಾಳಾಗುವ ಸಂಭವವು ಉಂಟು. ಗುಳುಮುಳಕಗಳು 10 ರಿಂದ 15 ವರ್ಷಗಳವರೆಗೂ ಬಾಳಬಲ್ಲವು.

ಚಂದ್ರಶೇಖರ್ ಕುಲಗಾಣ

Related post

3 Comments

  • ಗುಳುಮುಳುಕಗಳ ಬಗ್ಗೆ ತುಂಬಾ ರೋಚಕ ಸಂಗತಿಗಳನ್ನು ತಿಳಿಸಿದ್ದೀರಿ.

  • ಕರ್ನಾಟಕ ಕರಾವಳಿಯಲ್ಲಿ ಈ ಹಕ್ಕಿಗಳನ್ನು ನಾನು ನೋಡಿಲ್ಲ
    ಬಹಳ ಅಪೂರ್ವ ಮಾಹಿತಿಯ ಲೇಖನ

  • ಗುಳುಮುಖನ ಜೀವನ ರೋಚಕ ಇನ್ನಷ್ಟು ಹಕ್ಕಿಗಳ ವಿಚಾರ ನಿಮ್ಮಿಂದ ಹೊರಬರಲಿ.

Leave a Reply

Your email address will not be published. Required fields are marked *