ಜಲ ಜೀವನ

ಜಲ ಜೀವನ

ಚೆಂದದ ರಾತ್ರಿಯಲ್ಲಿ ನೀರವ ಮೌನದಲ್ಲಿ ಕಾರ್ಮೋಡದ ಕತ್ತಲಲ್ಲಿ ಮಿರಗುಟ್ಟುವ ಡಾಂಬರಿನ ರಸ್ತೆಯ ಮೇಲೆ ಕಪ್ಪನೆಯ ಕಾರೊಂದು ಭರ್ರನೇ ಓಡುತಿದೆ. ಕಾರಿನಲ್ಲಿ ನಾಲ್ಕು ಜನರು ಇದ್ದಾರೆ. ಕಾರಿನ ಸ್ಟೀರಿಯೋದಲ್ಲಿ ಹಿಂದಿ ಹಾಡೊಂದು ಕೇಳುತ್ತಿದೆ. ಕಾರು ಸುಮಾರು ಅರವತ್ತು ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದೆ. ರಸ್ತೆಯ ಇಕ್ಕೆಲಗಳಲ್ಲಿ ಎತ್ತರೆತ್ತರದ ಮರಗಳು ಗರಬಡಿದಂತೆ ನಿಂತಿವೆ. ಕಾರಿನ ಹೆಡ್‌ಲೈಟು ಪ್ರಖರವಾಗಿ ರಸ್ತೆಯ ಹಳ್ಳಕೊಳ್ಳಗಳನ್ನು ತೋರುತ್ತಿದೆ. ಗಾಡಿಯ ವೇಗ ಕ್ರಮೇಣ ಕ್ಷೀಣಿಸುತ್ತಿದೆ. ಕಾರಿನೊಳಗಿದ್ದ ಎಲ್ಲರೂ ಕುಳಿತಲ್ಲೇ ತುಸು ನೇರವಾದ್ರು,ಇದ್ದಕ್ಕಿಂದತೆಯೇ ರಸ್ತೆಯ ಇಕ್ಲೆಲಗಳ ಮರಗಳು ಕಡಿಮೆಯಾಗಿ ಆ ಜಾಗದಲ್ಲಿ ಬೀದಿ ದೀಪಗಳು ಕಾಣತೊಡಗಿದವು. ಕಾರಿನ ವೇಗ ಮೂವತ್ತು ಕಿಲೋಮೀಟರ್ ವೇಗಕ್ಕೆ ಇಳಿಯಿತು. ಕಾರನ್ನು ಚಾಲನೆ ಮಾಡುತ್ತಿದ್ದ ರಾಹುಲ್ ರಸ್ತೆ ಬದಿಯಲ್ಲಿ ಎಲ್ಲಾದ್ರೂ ಟೀ ಸಿಗುವುದೇನೋ ಎಂದು ನೋಡುತ್ತಿದ್ದ. ರಸ್ತೆಗಳೆಲ್ಲ ನಿರ್ಮಾನುಷವಾಗಿದೆ. ಗಡಿಯಾರವನ್ನೊಮ್ಮೆ ನೋಡಿಕೊಂಡ ಸಮಯ ಒಂದೂ ಕಾಲಾಗಿತ್ತು. ಮುಂದೆ ಯಾವುದೋ ಹೋಟೆಲ್ ತೆಗೆದಿದ್ದಂತೆ ಕಂಡಿತು. ಕಾರನ್ನು ಆ ಹೋಟೆಲ್‌ನ ಬಳಿ ನಿಲ್ಲಿಸಿದ, ಕಾರಲ್ಲಿದ್ದ ನಾಲ್ವರೂ ಇಳಿದರು, ಆ ಹೋಟೆಲ್ ಒಳಹೊಕ್ಕರು.

ಸಣ್ಣ ದನಿಯಲ್ಲಿ ಯಾವುದೋ ಹಾಡು ಕೇಳುತ್ತಿತ್ತು. ಅಷ್ಟರಲ್ಲಿ ಹೋಟೆಲ್ ಮಾಲೀಕ ಏನು ಕೊಡ್ಲಿ ಎಂಬಂತೆ ಸನ್ನೆ ಮಾಡಿದ. ರಾಹುಲ್ ನಾಲ್ಕು ಟೀ ಕೊಡಿ ಎಂದ… ಹೋಟೆಲ್ ಮಾಲೀಕ ಟೀ ಮಾಡಲು ಗ್ಯಾಸ್ ಒಲೆ ಹೊತ್ತಿಸಿ, ಹಾಲನ್ನು ಟೀ ಪಾತ್ರೆಯಲ್ಲಿ ಹಾಕಿ ಒಲೆಯಮೇಲಿಟ್ಟ… ರಾಹುಲನ ಜೊತೆಯಿದ್ದ ಪ್ರತಾಪ್ ಮೂಲೆಯಲ್ಲಿದ್ದ ಫ್ರಿಡ್ಜ್‌ನಿಂದ ಒಂದು ಲೀಟರ್ ನೀರಿನ ಬಾಟಲಿ ತೆಗೆದುಕೊಂಡ, ಹಾಲು ಬಿಸಿಯಾಗುತ್ತಿದ್ದಂತೆ ಟೀ ಪುಡಿಯನ್ನು ಹಾಕಿದ ಹೋಟೆಲಿನವ, ಪ್ರತಾಪ್ ಸಕ್ಕರೆ ಕಡಿಮೆ ಇರಲಿ ಯಜಮಾನ್ರೇ ಅಂತ ನಸುನಗುತ್ತಾ ಹೇಳಿದ. ಪ್ರತಿಯಾಗಿ ಆ ವ್ಯಕ್ತಿಯೂ ನಸುನಕ್ಕ…

ಅಷ್ಟರಲ್ಲಿ ಅದೆಂತದ್ದೋ ಗಲಾಟೆಯ ದನಿಗಳು ಶುರುವಾದವು. ಇವರಿಗೂ ಗಾಬರಿಯಾಯ್ತು. ಏನಾಯ್ತಪ್ಪ ಎಂದುಕೊಂಡು, ಹೋಟೆಲಿಂದ ಹೊರಗೋಡಿ ನೋಡಿದರು, ಸಂಪೂರ್ಣ ನಿರ್ಮಾನುಷವಾಗಿದ್ದ ಆ ಊರಿನ ಬೀದಿಗಳ ತುಂಬಾ ಜನ ಸೇರಿಬಿಟ್ಟಿದ್ದಾರೆ.. ಏನೋ ಗಲಾಟೆ ಇರಬೇಕು ಅಂದ್ಕೊಂಡು ಮತ್ತೆ ಹೋಟೆಲ್ ಒಳಗೆ ಬಂದ್ರೆ, ಟೀ ಕಾಯಿಸುತ್ತಿದ್ದ ವ್ಯಕ್ತಿ ನಾಪತ್ತೆ. ಪ್ರತಾಪ ಯಜಮಾನ್ರೇ ಯಜಮಾನ್ರೇ ಅಂತ ಕೂಗಿದ, ಒಳಗಿನಿಂದ ಆ ವ್ಯಕ್ತಿ ಬಂದೇ ಎಂದು ಹೇಳಿದ್ದಷ್ಟೇ ಕೇಳಿಸಿತು. ಒಳಗಿನಿಂದ ದಡಬಡಾಂತ ಶಬ್ದ ಶುರುವಾಯ್ತು. ಇವರುಗಳಿಗೆ ಏನೂ ಅರ್ಥವಾಗುತ್ತಿಲ್ಲ. ಅಷ್ಟರಲ್ಲಿ ಒಳಗಿನಿಂದ ಖಾಲಿ ನೀರಿನ ಕೊಡಗಳನ್ನು ಹಿಡಿದುಕೊಂಡು ಆ ಹೋಟೆಲ್ ಯಜಮಾನನ ಪತ್ನಿ, ಮಕ್ಕಳು, ಕೆಲಸದವರು ಮತ್ತು ಖುದ್ದು ಹೋಟೆಲ್ ಯಜಮಾನ ಕೊಡಪಾನಗಳನ್ನು ಹಿಡಿದುಕೊಂಡು ಹೊರಗೋಡಿದರು.

ಇವರಿಗೆ ಈಗ ಒಂಚೂರು ಅರ್ಥವಾಗತೊಡಗಿತು. ಇವರೂ ಅದೇನು ನೋಡೇ ಬಿಡೋಣ ಅಂತ ಹೊರಗಡೆ ನಡೆದ್ರು, ಹೋಟಲಿಂದ ಸ್ವಲ್ಪ ದೂರದಲ್ಲಿರುವ ಒಂದು ಕೊಳಾಯಿಯಲ್ಲಿ ನೀರು ಸಣ್ಣಗೆ ಬರುತ್ತಿದೆ. ಆ ನೀರನ್ನು ಹಿಡಿಯಲು ಆ ಊರಿನ ಸಣ್ಣಪುಟ್ಟ ಮಕ್ಕಳಿಂದ ಹಿಡಿದು ಎಲ್ಲರೂ ಕೊಳಾಯಿಯ ಮುಂದೆ ಸಾಲಾಗಿ ನಿಂತಿದ್ದಾರೆ. ಇವರುಗಳನ್ನು ನೋಡಿದ ಹೋಟೆಲಿನವ ಓಡಿಬಂದು ಏನ್ಮಾಡೋದು ಸ್ವಾಮಿ ವಾರಕ್ಕೊಂದು ಬಾರಿ ಮಾತ್ರಾ ನೀರು ಬರೋದು,ಇವತ್ತು ನೀರು ಹಿಡಿಯೋದು ಮರೆತ್ರೆ ಇನ್ನೊಂದು ವಾರ ನೀರು ಬರಲ್ಲ ಅದಕ್ಕೇ ಈ ಗಡಿಬಿಡಿ ಅಂತ ಹೇಳುತ್ತಾ ಹೋಟೆಲಿನ ಕಡೆ ಹೆಜ್ಜೆ ಹಾಕಿದ, ಟೀ ಮತ್ತೆ ಬಿಸಿ ಮಾಡಿ ಗಾಜಿನ ಲೋಟಗಳಲ್ಲಿ ಬಗ್ಗಿಸಿಕೊಟ್ಟ… ಎಲ್ರೂ ಚಹಾ ಕುಡಿದು, ಹಣ ನೀಡಿ ಹೊರನಡೆದರು.

ಮತ್ತೆ ಕಾರನ್ನೇರಿದ ನಾಲ್ವರೂ ಪ್ರಯಾಣ ಮುಂದುವರೆಸಿದರು. ಆ ಊರಿನ ಪ್ರತೀ ಬೀದಿಗಳಲ್ಲಿ ಇದೇ ಪರಿಸ್ಥಿತಿ. ಒಂದೊಂದು ಕೊಳಾಯಿಯ ಎದುರಿನಲ್ಲೂ ನೂರಾರು ಜನ. ನಿದ್ದೆಗೆಟ್ಟ ಮಕ್ಕಳು ಅಳುತ್ತಾ, ಕಣ್ಣೊರೆಸಿಕೊಳ್ಳುತ್ತಿದ್ದ ದೃಶ್ಯವೇ ಕಣ್ಮುಂದೆ ಕಾಣುತ್ತಿದೆ. ಕಾರು ಊರಿನ ಸರಹದ್ದು ದಾಟಿದ ನಂತರ ಪಟ್ಟಣ ಮತ್ತು ನಗರಗಳಲ್ಲಿ ಜನ ಪೋಲು ಮಾಡುವ ನೀರಿನ ಬಗ್ಗೆಯೇ ಚರ್ಚೆ. ಒಂದು ಕಾರನ್ನು ತೊಳೆಯಲು ಬಳಸುವ ನೀರಿನ ಪ್ರಮಾಣ ಎಲ್ಲಾ ನೆನಪಿಸಿಕೊಂಡು ಎಲ್ಲರಲ್ಲೂ ಬೇಸರ ಹುಟ್ಟಿಸಿತು. ನಾಲ್ವರೂ ಆ ಸರಿರಾತ್ರಿಯಲ್ಲಿ ಇನ್ಮುಂದೆ ನೀರನ್ನು ಮಿತವಾಗಿ ಬಳಸುವ ತೀರ್ಮಾನ ಮಾಡಿ, ತಮ್ಮ ಪ್ರಯಾಣ ಮುಂದುವರೆಸಿದರು……

ಸಿ.ಎನ್. ಮಹೇಶ್

Related post

Leave a Reply

Your email address will not be published. Required fields are marked *