ಜಾನಪದ ಕಣಜ

ಜಾನಪದ ಕಣಜ

ಅನಂತ ಜ್ಞಾನದಾಳವ
ನಿಂತಲ್ಲರಹುತಲಿ
ಭೋದಪ್ರದವೂ, ಸಾಂದ್ರವೂ
ಆದ ಸೂಕ್ತಿಯೀ ಗಾದೆ!

ಕಲಿತವರ ನುಡಿಯದು
ವೇದವೆಂದೆನಿಸಿದರೆ,
ಜನ ಸಾಮಾನ್ಯರ
ವೇದದಂತಿಹುದೀ ಗಾದೆ !

ಸಂಕ್ಷಿಪ್ತತೆ, ಪೂರ್ಣತೆ,
ತೀಕ್ಷ್ಣತೆಯೊಡನೆ,
ತಲೆತಲೆಮಾರಿನಿಂದಲೂ
ಜನಪ್ರಿಯವು ಈ ಗಾದೆ!

ಹಾಸ್ಯ,ವಿಡಂಬನೆಗಳ
ಕೂಟ, ಅನುಭವದ,
ಪ್ರಾಮಾಣಿಕತೆಯ
ಸೂಕ್ಷ್ಮದೃಷ್ಟಿಯೀ ಗಾದೆ!

ಬಿಸಿಲು-ಬೆಳದಿಂಗಳಂತೆ,
ಬೆಂಕಿ-ಇಬ್ಬನಿಯಂತೆ
ಕಾಲಕಾಲದಿ ಜನರ
ಮನಸಿನಲ್ಲಿಹುದೀ ಗಾದೆ!

ಮೆದುಳಿಗೆ ಮೇವು,
ಕಾವ್ಯಗುಣಗಳ ಗಣಿ,
ಜಾನಪದ ಸಾಹಿತ್ಯದ
ಜೀವಸತ್ವವೀ ಗಾದೆ !

ಜನ ಜೀವನದ
ವ್ಯಾಪಕ ಸತ್ವ-ತತ್ವ,
ನೂರಾರು ಭಾವಗಳ
ಅಭಿವ್ಯಕ್ತಿ ಈ ಗಾದೆ !

ಶ್ರೀವಲ್ಲಿ ಮಂಜುನಾಥ
ಬೆಂಗಳೂರು

Related post