ಜನಪದ ಚಿತ್ರಗಳು ಸಾಮಾನ್ಯವಾಗಿ ಕಾಲದಿಂದ ಕಾಲಕ್ಕೆ ತಮ್ಮ ಅಭಿವ್ಯಕ್ತಿಗಳ ಅಸ್ತಿತ್ವವನ್ನು ಬದಲಿಸಿಕೊಳ್ಳುತ್ತಾ ಬರುತ್ತಿವೆ. ಈ ಬದಲಾವಣೆಯನ್ನು ಪರಿವರ್ತನೆ ಅಥವಾ ರೂಪಾಂತರ ಎಂಬ ಹೆಸರಿನಲ್ಲಿ ವಿದ್ವಾಂಸರು ಗುರುತಿಸುತ್ತಾ ಬಂದಿದ್ದಾರೆ. ಅಂದರೆ ಅದರ ಮೂಲ ಸ್ವರೂಪವನ್ನು ಉಳಿಸಿಕೊಂಡು ಹಲವು ವಿಧಿವಿಧಾನಗಳ ಹಿನ್ನೆಲೆಯಲ್ಲಿ ಅಲ್ಪ ಸ್ವಲ್ಪ ಬದಲಾವಣೆಯನ್ನು ಮಾಡಿಕೊಳ್ಳುತ್ತಾ ಇದು ಸಾಗಿದೆ. ಜನಪದ ಚಿತ್ರಗಳ ಸಾಮಾನ್ಯ ಸ್ವರೂಪವನ್ನು ಜನಪದ ಭಿತ್ತಿಚಿತ್ರಗಳ ಮೂಲ ಹಾಗೂ ಅವುಗಳ ನೇಪಥ್ಯ, ಚಾರಿತ್ರಿಕ, ಭೌಗೋಳಿಕ, ನೈಸರ್ಗಿಕ ಹಿನ್ನೆಲೆಯಲ್ಲಿ ಕನ್ನಡ ಜನಪದ ಚಿತ್ರಕಲೆಯ ಪ್ರಯೋಗ ವಿಧಾನ, ವಿಕಾಸ, ಗ್ರೀಕ್, ಸಂಸ್ಕೃತ, ಆಂಗ್ಲ ಮತ್ತು ಕನ್ನಡ ಸಂಸ್ಕೃತಿ ಆಧಾರಿತ ಜನಪದ ಚಿತ್ರ ಸಾಧನಗಳು ಎಂದು ಹಂತ ಹಂತವಾಗಿ ವಿಶ್ಲೇಷಿಸಲಾಗಿದೆ. ಜನಪದ ಚಿತ್ರಭೂಮಿಕೆಯನ್ನು ಹಸೆ, ಚಿತ್ತಾರ, ಮಂಡಲ, ಭಿತ್ತಿಚಿತ್ರ, ಹಚ್ಚೆ ಹೀಗೆ ನಾನಾ ಹೆಸರುಗಳಿಂದ ಕರೆಯುತ್ತಾರೆ. ಭಿತ್ತಿಚಿತ್ರಗಳು ಅವುಗಳಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಭಿತ್ತಿ ಎಂದರೆ ಚಿತ್ರಿಸಲು ಬೇಕಾದ ಆವರಣ ಅಥವಾ ಅವಕಾಶ. ಈ ಅವಕಾಶವು ಗೋಡೆ, ಬಂಡೆ, ಮತ್ತ್ಯಾವುದೇ ಚಿತ್ರಿಸಲ್ಪಡುವ ಮಾಧ್ಯಮವಾಗಬಹುದು.ಆದರೆ ನಾವಿಂದು ಜೀವಿಸಲ್ಪಡುವ ಜೀವನ ಶೈಲಿಯ ಚಿತ್ರಗಳಿಗೂ ನಮಗಿಂತಲೂ ಮೊದಲೇ ಆಗಿ ಹೋದ ಜಾನಪದ ಚಿತ್ರಗಳಿಗೂ ಬಹಳ ವ್ಯತ್ಯಾಸವಿರುತ್ತದೆ.ಇದು ಸಂಸ್ಕರಿಸಲ್ಪಟ್ಟ ಜನಪದೀಯ ಅನುಭಾವಗಳ ಸಾಂಸ್ಕೃತಿಕ ದಾಖಲೆಯಾಗಿದೆ. ಇಂತಹ ಅನುಭಾವಗಳ ಸಂಸ್ಕರಣವೇ ಜನಪದ ಚಿತ್ರಗಳ ಉಗಮಕ್ಕೆ ಕಾರಣವಾಯಿತು ಎನ್ನಬಹುದು.
ಇಂಥಾ ಚಿತ್ರಗಳನ್ನು ಸಮಾಜದ ಯಾವ ವ್ಯಕ್ತಿಯಾದರೂ ಚಿತ್ರಿಸಬಹುದಾಗಿದ್ದು ಆಯಾ ಸಮುದಾಯದ ಸಾಂಸ್ಕೃತಿಕ ಲೇಪನವು ಸಹಜವಾಗಿಯೇ ಆಗಿರುತ್ತದೆ.ಇಂಥ ಚಿತ್ರಚತುರತೆಯುಳ್ಳವರು ಚಿತ್ರಗಾರ್, ಬಣಗಾರ್, ಬಹುರೂಪಿ, ತಲಾರೊಳ್ಳು ಮೊದಲಾದ ಹೆಸರುಗಳಿಂದ ಗುರುತಿಸಿಕೊಂಡಿದ್ದಾರೆ.ಪುಡಿಸೊಪ್ಪಿನ ಕುಂಚ, ಈಚಲು ಮರದ ಕುಂಚ, ಸುಣ್ಣ, ಮಣ್ಣು ಮೊದಲಾದ ನೈಸರ್ಗಿಕ ಮಾದ್ಯಮ ಪರಿಕರಗಳನ್ನು ಬಳಸಲಾಗುತ್ತದೆ.ಜಾನಪದಚಿತ್ರಗಳಿಗೆ ಮೂಲವಾದ ಪೂರಕ ಜಾನಪದ ಕಲೆಗಳು ಅನೇಕ. ಅದೆಷ್ಟೋ ವರುಷಗಳಿಂದ ಜಾನಪದ ಕಲಾಪ್ರಕಾರಗಳಾದ ನೃತ್ಯ, ಸಂಗೀತ, ತೊಗಲುಬೊಂಬೆಯಾಟ, ಬರ‍್ರಕಥೆ, ಯಕ್ಷಗಾನ, ವೀಧಿನಾಟಕ, ಹಗಲು ವೇಷ ಮೊದಲಾದ ಪ್ರದರ್ಶನ ಕಲೆಗಳಲ್ಲಿಯೂ ತನ್ನ ಅಸ್ಥಿತ್ವನನ್ನು ಉಳಿಸಿಕೊಂಡು ಬೆಳೆಯುತ್ತಾ ಬಂದಿದೆ.ಅವುಗಳನ್ನು ಮುಂದಿನ ಅಧ್ಯಾಯದಲ್ಲಿ ಚರ್ಚಿಸಲಾಗಿದೆ. ಇಂತಹ ದೇಸೀ ಸಂಪ್ರದಾಯಗಳ ಹಿನ್ನೆಲೆಯಲ್ಲಿ ಜನಪದ ಚಿತ್ರಕಲೆಯಲ್ಲಿ ಸಂಸ್ಕೃತಿಯ ಮಹತ್ವದ ಬಗ್ಗೆ ಹಾಗೂ ಪರಂಪರಾಗತವಾದ ಈ ಕಲೆಗಳನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಮೂಲಕ ಅದರ ಜೀವಂತಿಕೆಯ ಉದಾಹರಣೆಗಳನ್ನು ಈ ತಲೆಮಾರಿನ ಯುವಕರಿಗೆ ತಿಳಿಸುವ ನಿಟ್ಟಿನಲ್ಲಿ ಜನಪದ ಚಿತ್ರಕಲೆ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಜಾನಪದ ಚಿತ್ರಕಲೆಯ ಮೂಲ ಪ್ರಕಾರಗಳನ್ನು ಹಾಗೂ ಅವುಗಳ ನೇಪಥ್ಯವನ್ನು ಈ ಅಧ್ಯಾಯದಲ್ಲಿ ಪರಿಚಯಿಸಲಾಗಿದೆ.ಆಧುನಿಕತೆ ಒಗ್ಗಿಕೊಂಡ ಇಂತಹ ದೃಶ್ಯ ಕಲಾ ಪ್ರಕಾರಗಳ ಜನಪದ ರಚನಾ ನೇಪಥ್ಯ, ಪ್ರದರ್ಶನ, ಪ್ರಯೋಗ, ಹಾಗೂ ಅವುಗಳಲ್ಲಿನ ಅನ್ವಯಿಕ ಜಾನಪದದ ನೆಲೆಯನ್ನು ಮುಂದಿನ ಅಂಕಣಗಳಲ್ಲಿ ಪ್ರಸ್ತಾಪಿಸಲಾಗಿದೆ.
ಗೋದ್ನ ಚಿತ್ರಕಲೆ
ಶ್ರೀಮತಿ ಶಾಂತಾ ಬಾಯಿ ಮೊರಾವಿ ಇವರ ಹಚ್ಚೆ (ಗೋದ್ನಾ ಚಿತ್ರ್ ) ಕಲೆಯು ಬಿಲ್ ಆದಿವಾಸಿ ಜನಾಂಗದ ಜೀವಸೆಲೆಯ ಮೂಲಧಾತು. ಜೀವನದ ಸಾರ್ಥಕತೆಯನ್ನು ಕಂಡುಕೊಳ್ಳುವ ಮೋಕ್ಷಪ್ರದ ಚಿತ್ರ.
ಅವರ ಪುರಾಣ ಮತ್ತು ಧಾರ್ಮಿಕ ಆಚರಣೆಗಳ ಕೇಂದ್ರಿತವಾಗಿ ಈ ಕಲೆಯು ಅವರ ಬದುಕಿನೊಂದಿಗೆ ಹೆಣೆದುಕೊಂಡಿದೆ. ‘ಶಾಂತಿ ಬಾಯಿಯವರು ತಮ್ಮ ಅಜ್ಜ ಅಜ್ಜಿಯರು ಹಾಕುವ ಹಚ್ಚೆ ಕಲೆಯನ್ನು ನೋಡುತ್ತ ಕಲಿತವರು. ಕೇವಲ ಸಣ್ಣ ಸಣ್ಣ ಆಕೃತಿಗಳನ್ನು ದೇಹದ ಮೇಲೆಲ್ಲಾ ಮೂಡಿಸದೇ ದೊಡ್ಡ ದೊಡ್ಡ ಹಾಳೆಗಳ ಮೇಲೆ ಈ ಹಚ್ಚೆಯ ಆಕಾರಗಳನ್ನು ಬಣ್ಣ ಮತ್ತು ಕುಂಚದಿಂದ ಮೂಡಿಸಿ ಆಧುನಿಕ ಕಲಾವಲಯದಲ್ಲಿ ಹೊಸ ತಂತ್ರವನ್ನು ಸ್ಥಾಪಿಸಿದರು ಇವರು ‘ಬಗಿಯಾ’ ಜನಾಂಗಕ್ಕೆ ಸೇರಿದವರಾಗಿದ್ದು, ದೇಹದ ಅಲಂಕಾರ ಮತ್ತು ವಿಶೇಷ ಕೌಶಲ್ಯದಿಂದ ಇವರ ಹಚ್ಚೆ ಕಲೆಯು ಚಾರಿತ್ರಿಕ ಹಿನ್ನೆಲೆಯನ್ನು ಪಡೆದಿವೆ. ಬಿಲ್ ಸಮುದಾಯದ ಸ್ತ್ರೀ ಮತ್ತು ಪುರುಷರಿಬ್ಬರೂ ತಮ್ಮ ದೇಹಗಳ ಮೆಲೆ ನಿಗಧಿತ ಸ್ಥಳಗಳಲ್ಲಿ ನಿಗಧಿತ ಹಚ್ಚೆ ಹಾಕಿಸಿಕೊಳ್ಳುವ ಸಾಂಪ್ರದಾಯಿಕ ಅನುಭವದಿಂದ ಇವು ಪ್ರತ್ಯೇಕವಾದ ಗುರುತನ್ನು ಹೊಂದಿದ್ದು ಈ ಸಂಪ್ರದಾಯಕ್ಕೆ ‘ಬಡಿ’ ಎಂದು ಕಲೆಯುತ್ತಾರೆ. ಹಚ್ಚೆಗಳನ್ನು ಹಾಕಿಸಿಕೊಂಡ ಹೆಂಗಸನ್ನು ‘ಬದ್ನಿನ್’ ಎಂದು ಕರೆಯುತ್ತಾರೆ. ಶಾಂತಿ ಬಾಯಿ ಅವರೇ ಸ್ವತಃ ಬದ್ನಿನ್ ಆಗಿದ್ದು ಈಕೆಯು ಹಚ್ಚೆ ಕಲೆಯನ್ನು ತನ್ನ ಪೂರ್ವಜರಿಂದ ಕಲಿತಿದ್ದಾರೆ. ಹಚ್ಚೆ ಹಾಕಿಸಿಕೊಂಡವರು ಆರೋಗ್ಯವಾಗಿದ್ದು ಅವರ ಪಾಪಗಳನ್ನು ಈ ಹಚ್ಚೆಯು ತೊಳೆಯಿತ್ತದೆಂದೂ, ಸತ್ತ ನಂತರ ಈ ಹಚ್ಚೆಗಳು ಅವರ ಜೊತೆ ಸ್ವರ್ಗಕ್ಕೆ ಬರುತ್ತವೆಂದೂ ನಂಬುತ್ತಾರೆ’ .
“ಟ್ರೆಬಲ್ ಆರ್ಟ ಮ್ಯೂಸಿಯಂ”ನ ಲಾಂಛನವಾಗಿ ಶಾಂತಾ ಬಾಯಿ ಅವರು ಮೂಡಿಸಿದ ಹಚ್ಚೆ ಚಿತ್ತಾರದ ಆಕೃತಿಯನ್ನೇ ಬಳಸಿದ್ದಾರೆ ಅವರ ಆ ಆಕೃತಿಯು ಅಷ್ಟು ಪರಿಣಾಮಕಾರಿಯಗಿದೆ. ತಮ್ಮ ಹಚ್ಚೆಗಳಲ್ಲಿ ಚೇಳು, ಮೀನು, ಕುದುರೆ, ಹೂ, ಮೀನಿನ ಗಾಳ, ನವಿಲು, ಮಾವಿನ ಹಣ್ಣಿನ ಮರಗಳ ಸಾಲು, ಒಲೆಯಲ್ಲಿನ ಬೆಂಕಿ, ಬೆಳೆದು ನಿಂತ ಪೈರು, ಧಾನ್ಯ ರಾಶಿ, ಮೆಟ್ಟಿಲು ಬಾವಿ, ಅಂಬಾ ನವಿಲಿನ ಜೋಡಿ, ಜೋಡಿ ಕೋಳಿ, ಸೀತಾ ಚೌಕ, ಧ್ವಜ, ಬಳ್ಳಿ, ಕಣ್ಣು ಬಿಲ್ ಸಮುದಾಯದವರು ಬಳಸುವ ದಿನನಿತ್ಯದ ಸಾಮಾನ್ಯ ವಸ್ತುಗಳನ್ನು ಚಿತ್ರಿಸುತ್ತಾ ಅವರ ದುಃಖ ಮತ್ತು ಬಯಕೆ ತೋರುತ್ತಾರೆ. ಮಾನವನ ಪರಿಪೂರ್ಣತೆ ಕೇವಲ ಅವನ ಜನ್ಮದಿಂದಲ್ಲ ಅವನಿಗೆ ಹಚ್ಚೆಯ ಆಭರಣವನ್ನು ಅಲಂಕರಿಸಿದಾಗ ಮಾತ್ರ ಸಂಪೂರ್ಣಗೊಳ್ಳುತ್ತಾನೆ. ಎಂದು ಇವರು ಬಲವಾಗಿ ನಂಬುತ್ತಾರೆ. ಇವು ಜಾಗೃತ ಉದ್ದೇಶಗಳಾಗಿದ್ದು ಈ ಸಮುದಾಯದ ನಡೆದಾಡುವ ಜೀವಂತ ಸಾಂಸ್ಕೃತಿಕ ದಾಖಲೆಯಾಗಿದೆ.
ಈ ಹಚ್ಚೆ ಕಲೆಗೆ ಜನಪದರು ನಂಬುವ ಒಂದು ಪುರಾಣ ಕಥೆಯಿದೆ. ಒಮ್ಮೆ ವಿಶ್ವ ಸೃಷ್ತಿಯು ಅರ್ಧಕ್ಕೆ ನಿಂತು ಹೋಗಿದ್ದು ಎಲ್ಲ ದೇವಾನು ದೇವತೆಗಳೂ ಗೊಂದಲದಲ್ಲಿದ್ದರು. ಆಗ ಕೋಪಗೊಂಡ ಇಂದ್ರನು ಸಭೆಯನ್ನು ಬಿಟ್ಟು ಹೊರಟು ಹೋದನು. ಉಳಿದ ದೇವತೆಗಳೆಲ್ಲಾ “ಇಂದ್ರನು ಈ ಸಭೆಯನ್ನು ಅರ್ಧಕ್ಕೇ ಬಿಟ್ಟುಹೋಗಿ ನಮ್ಮನ್ನೆಲ್ಲಾ ಅವಮಾನಿಸಿದ್ದಾನೆ. ಆತನಿಂದಲೇ ಜಗತ್ತು ನಡೆಯುತ್ತಿದೆ ಎಂದು ದರ್ಪ. ಎನಾದರೂ ಸರಿ ನಾವೇ ಈ ಕೆಲಸವನ್ನು ಮುಂದುವರಿಸೋಣ ಒಂದು ವೇಳೆ ನಮ್ಮ ಬದುಕು ದುರ್ಭರವಾದರೆ ಎದೆಗುಂದದೆ ಗೆಡ್ಡೆ ಗಣಸು ತಿಂದು ಜೀವಿಸೋಣ. ನಾವು ಯಾವತ್ತೂ ಇಂದ್ರನ ಬಳಿ ಹೋಗಬಾರದು” ಎಂದು ಎಲ್ಲ ದೇವಾನು ದೇವತೆಗಳೂ ತೀರ್ಮಾನಿಸುತ್ತಾರೆ.
ಆದರೆ ಭೂಮಿಯು ಮಳೆಯಿಲ್ಲದೆ ಬರಡಾಗಿ ಹೋಯಿತು. ನೀರಿಲ್ಲದೆ, ತಿನ್ನಲು ಆಹಾರವಿಲ್ಲದೆ, ಜೀವರಾಶಿಗಳು ಅವಸಾನದ ಅಂಚಿಗೆ ಬಂದವು. ಇದನ್ನೆಲ್ಲಾ ಮೇಲಿಂದಲೇ ನೋಡುತ್ತಿದ್ದ ಶಿವಪಾರ್ವತಿಯರು ಭೂಮಿಗೆ ಸೇವೆ ಮಾಡುವ ‘ನಾಗಬೈಗಿನಿ’ ಮತ್ತು ‘ನಾಗಬೈಗ’ನನ್ನು ಕರೆದು. ತಮ್ಮ ಶೃಂಗಾರ ನೃತ್ಯದ ಭಾವ ಭಂಗಿಗಳಿಂದ ಇಂದ್ರನನ್ನು ಸಂಪ್ರಿತಗೊಳಿಸಿ ಭೂಮಿಗೆ ಮಳೆಯನ್ನು ಸುರಿಸುವಂತೆ ಮಾಡಬೇಕು ಎಂದು ಆಜ್ಞಾಪಿಸಿದರು. ಆದರೆ ‘ನಾಗಬೈಗಿನಿ’ ಮತ್ತು ‘ನಾಗಬೈಗ’ರು ಶೃಂಗಾರ ಮಾಡಿಕೊಳ್ಳದೆ ಹಾಗೇ ಬಂದಿದ್ದರು ಮತ್ತು ಅಂಥಹ ಸಾಧನಗಳನ್ನೂ ಸಹ ತಂದಿರಲಿಲ್ಲ. ಕೂಡಲೇ ಶಿವಪಾರ್ವತಿಯರು ಹಚ್ಚೆ ಹಾಕುವ “ಬಡೆ ಬೈದಿನಿ” ದಂಪತಿಗಳನ್ನು ಸೃಷ್ಟಿಸಿ ಆ ‘ನಾಗಬೈಗಿನಿ’ ಮತ್ತು ‘ನಾಗಬೈಗ’ರನ್ನು ಸುಂದರವಾಗಿ ಸಿಂಗರಿಸುವಂತೆ ಹೇಳಿದರು. ಆಗ ಬೈಗಿನಿ ದಂಪತಿಗಳು ಅವರಿಬ್ಬರ ದೇಹವನ್ನೆಲ್ಲಾ ಹಚ್ಚೆ ಕಲೆಯಿಂದ ಅಲಂಕರಿಸಿದರು. ಸಂಪೂರ್ಣ ಸಿಧ್ಧರಾದ ಬೈಗ ಮತ್ತು ಬೈಗಿನಿಗಳಿಬ್ಬರೂ ಇಂದ್ರನ ಆಸ್ಥಾನಕ್ಕೆ ಹೋಗಿ ಭೂಮಿಯಲ್ಲಿ ಮಳೆಯಿಲ್ಲದೆ ಜೀವಕೋಟಿ ಪಡುತ್ತಿರುವ ಬಾಧೆಗಳನ್ನು ತಮ್ಮ ನಾಟ್ಯದ ಮೂಲಕ ಇಂದ್ರನಿಗೆ ಮನ ಮುಟ್ಟುವಂತೆ ಅಭಿನಯಿಸಿ ನಾಟ್ಯ ಪ್ರದರ್ಶನ ಮಾಡಿದರು.
ಇತ್ತ ಶಿವನು ಭೂಮಿಗೆ ನೇಗಿಲನ್ನು ಇಟ್ಟು ಉಳಲು ಆರಂಭಿಸಿದನು. ಹೀಗೆ ಉಳುಮೆಯಾಗುತ್ತಿದ್ದ ವೇಳೆ ಬಂಡೆಯ ಕೆಳಗೆ ಇದ್ದ ಕಪ್ಪೆಯೊಂದು ನೇಗಿಲ ಹರಿತಕ್ಕೆ ಗಾಯಗೊಂಡು ಅಳಲು ಆರಂಭಿಸಿತು. ಇದನ್ನು ಕಂಡ ‘ಸನ್‌ಸಂಜೋರ್’ ಎಂಬ ನವಿಲು ಅಳಲಾರಂಭಿಸಿತು ಅಲ್ಪ ಸಮಯದಲ್ಲೇ ಎಲ್ಲ ಪ್ರಾಣಿ ಪಕ್ಷಿಗಳೂ ಅಳಲು ಆರಂಭಿಸಿದವು ಈ ಆರ್ತನಾದವು ಇಂದ್ರ ಲೋಕವನ್ನು ಮುಟ್ಟಿತು. ಇದನ್ನು ಆಲಿಸಿದ ಇಂದ್ರನಿಗೆ ಬೈಗ ಮತ್ತು ಬೈಗಿನಿಯರು ಹೇಳಿದ ಮಾತು ಸತ್ಯವೆಂದು ತಿಳಿಯಿತು. ತಾನು ಮಳೆಯನ್ನು ಸುರಿಸುವುದು ತಡವಾದರೆ ಎಲ್ಲ ಜೀವಿಗಳೂ ಇಂದ್ರಲೋಕಕ್ಕೆ ದಂಡೆತ್ತಿ ಬರುವವು ಎಂದು ಹೆದರಿ ಭೂಮಿಗೆ ಮಳೆ ಸುರಿಸುವಂತೆ ಮಾಡಿದನು.
ಇಂದಿಗೂ ಬೈಗರು ಭೂಮಿಗೆ ಪೂಜೆ ಮಾಡುತ್ತಾರೆ ಹಾಗೆ ಮಾಡದೇ ಇದ್ದರೆ ಮಳೆ ಬರುವುದಿಲ್ಲ ಎಂಬ ನಂಬಿಕೆ ಇದೆ. ಶಿವಪಾರ್ವತಿಯರು ಸೃಷ್ಟಿಸಿದ ಬಡೀ ಬದ್ನಿನ್ ದಂಪತಿಗಳಿಂದಲೇ ಭೂಮಿಗೆ ಮಳೆ ಬಂದಿದ್ದು ಇದರಿಂದಲೇ ಜೀವರಾಶಿಗಳು ಚೈತನ್ಯ ಪಡೆದಿದ್ದು, ಇಂದ್ರನನ್ನು ಒಲಿಸಲು ಸಾಧ್ಯವಾದದ್ದು ಎಂದು ಬೈಗಿನ್ ದಂಪತಿಗಳು ಹೇಳುತ್ತಾರೆ.
ಇಂಥಾ ಅನೇಕ ರೀತಿಯ ಹಚ್ಚೆ ಹಾಕುವ ಕಾರ್ಯದ ಬಗ್ಗೆ ಇರುವ ಕಥೆಗಳು ಬೈಗಾ, ಬಿಲ್, ಗೋಂಡ್ ಮತ್ತಿತರ ಆದಿವಾಸಿ ಸಮುದಾಯಗಳಲ್ಲಿ ವಿಭಿನ್ನ ರೀತಿಯಲ್ಲಿ ಹಾಸು ಹೊಕ್ಕಾಗಿ ಇವೆ. ಎಲ್ಲ ಮೂಲ ಜನಪದರೂ ಹೇಳಲಾಗುವ ಸಾಮಾನ್ಯ ಮೂರು ಅಂಶಗಳೆಂದರೆ.
೧) ತಾಯಿಯಾಗುವ ಹೆಣ್ಣಿಗೆ ಪ್ರಸವ ವೇದನೆಯನ್ನು ತಡೆಯುವ ಮತ್ತು ಜಿವನದ ಎಲ್ಲ ಕಷ್ಟಗಳನ್ನು ಎದುರಿಸುವ ಶಕ್ತಿಯನ್ನು ಈ ಹಚ್ಚೆ ನೀಡುತ್ತದೆ.
೨) ಹೆಣ್ಣೊಂದು ಬೈಗಾ, ಬಿಲ್, ಗೋಂಡ್ ಸಮುದಾಯಕ್ಕೆ ಸೇರಿದವರೇ ಎಂದು ತಿಳಿಯಬಹುದು. ವಿವಿಧ ಸಮುದಾಯಕ್ಕೆ ವಿವಿಧ ವಿನ್ಯಾಸಗಳಿರುತ್ತವೆ.
೩) ಹೆಣ್ಣೊಂದು ಪರಲೋಕ ಯಾತ್ರೆ ಮಾಡುವಾಗ ಹಚ್ಚೆಯೊಂದೇ ಆಕೆಯ ಜೊತೆ ಹೋಗುವುದು.
ಪವಾಡ ಸದೃಶವಾದ ಈ ಕಲೆಯು ಒಂದು ಕಾವ್ಯ ವಿಸ್ಮಯ ವಾಗಿದೆ. ಬದುಕಿನ ಮೂಲ ಉದ್ದೇಶಗಳನ್ನು ಬಿಟ್ಟುಕೊಡದೆ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ. ಪ್ರಕೃತಿಯಲ್ಲಿ ಸ್ತ್ರೀ ಸಹಜವಾದ ಸೌಂದರ್ಯಪ್ರಿಯಳು ಅದರಿಂದಲೇ ಆಕೆಯ ದೇಹವು ಸಹಜವಾಗಿಯೇ ಅಲಂಕಾರವನ್ನು ಬಯಸುತ್ತದೆ. ಭೂಮಿಯೇ ಹಸಿರು, ನೀಲ, ಹಳದಿ ಬಣ್ಣಗಳ ಅಲಂಕಾರಗಳಿಂದ ನಿತ್ಯ ಕಂಗೊಳಿಸುವ ಅಲಂಕಾರ ಪ್ರಿಯೆ. ದೇಹವು ಧರಿಸುವ ಆಭರಣ ಕೃತಕ ಆದರೆ ದೇಹಕ್ಕೆ ಅನಿವಾರ್ಯ ಇವೆರಡೂ ಒಂದಕ್ಕೊಂದು ಪೂರಕ.
ಹಚ್ಚೆ ಕಲೆಯ ಬಗೆಗಿನ ನಂಬಿಕೆಗಳು, ಈ ರೀತಿಯಾದ ಆಚಾರಗಳು ಪ್ರಪಂಚದಾದ್ಯಂತ ಹಾಸು ಹೊಕ್ಕಾಗಿ ಇವೆ.
ಲಕ್ಷ್ಮೀನಾರಾಯಣ್ ಟಿ
ಚಿತ್ರ ಕೃಪೆ : Pininterest.com