ಜಿಂಕೆಗಳು
ಸೀಳುಗೊರಸುಳ್ಳ ಜಿಂಕೆಗಳು ಮೆಲುಕಾಡಿಸುವ (Ruminants) ಪ್ರಾಣಿಗಳ ಗಣಕ್ಕೆ ಸೇರಿದ್ದು Cervidae ಕುಟುಂಬದಲ್ಲಿ ಬರುತ್ತವೆ, ಇವುಗಳಿಗೆ ಕವಲುಗೊಂಬುಗಳು (Antlers) ಇದ್ದು ವಾಡಿಕೆಯಾಗಿ ಗಂಡುಗಳಿಗೆ ಕೊಂಬುಗಳು ಇರುತ್ತವೆ, ಆದರೆ ಕಸ್ತೂರಿ ಮೃಗಕ್ಕೆ ಹೆಣ್ಣು ಮತ್ತು ಗಂಡು ಎರಡಕ್ಕೂ ಕೊಂಬುಗಳು ಇರುವುದಿಲ್ಲ. ರೇನ್ ಡೀರ್, ಕ್ಯಾರಿಬೂಗಳಿಗೆ ಹೆಣ್ಣಿಗೂ ಕೊಂಬುಗಳಿವೆ.
ಜಿಂಕೆಗಳ ಕೊಂಬುಗಳು ಕಾಲಕಾಲಕ್ಕೆ ಬಿದ್ದು ಹುಟ್ಟುತ್ತವೆ. ಚಿಲಿಯ ಪುಡು (Pudu) ಜಿಂಕೆ 40 ಸೆಂಮೀ ಎತ್ತರವಿದ್ದರೆ, ಯುರೇಶಿಯಾದ ಎಲ್ಕ್ ಜಿಂಕೆ 150 ಸೆಂಮೀ ಎತ್ತರವಿದೆ.ಜಿಂಕೆಗಳ ಕೋರೆ ಹಲ್ಲುಗಳು ಅಭಿವೃದ್ಧಿ ಹೊಂದಿವೆ.ಕಸ್ತೂರಿ ಮೃಗ ಬಿಟ್ಟು ಉಳಿದ ಜಿಂಕೆಗಳಿಗೆ ಪಿತ್ತಕೋಶವಿಲ್ಲ (lack of gallbladder)
ನಮ್ಮ ದೇಶದಲ್ಲಿ ಕಂಡು ಬರುವ ಜಿಂಕೆಗಳ ವಿವರ ನೋಡುವುದಾದರೆ ನಾಲ್ಕು ಜಾತಿ ಎಂಟು ಪ್ರಭೇದದ ಜಿಂಕೆಗಳನ್ನು ನೋಡಬಹುದು.
೧. ಕಡವೆ – Samber Deer
೨. ಬೊಗಳುವ ಜಿಂಕೆ – Barking Deer
೩. ಚುಕ್ಕೆ ಜಿಂಕೆ – Spotted Deer
ಈ ಮೂರು ಜಾತಿಗಳನ್ನು ನಮ್ಮ ರಾಜ್ಯದಲ್ಲಿ ಕಾಣಬಹುದು.ಇವುಗಳಲ್ಲಿ ಕಡವೆ ನಮ್ಮ ದೇಶದ ಎಲ್ಲಕ್ಕೂ ದೊಡ್ಡ ಜಿಂಕೆಯಾಗಿದೆ.
೪. ಜವಳು ಜಿಂಕೆ ಅಥವಾ ಬಾರಾಸಿಂಘಾ – Swamp Deer or Barasingha
ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಿದ್ದು ಮಧ್ಯ ಪ್ರದೇಶದ ಕಾನ್ಹಾ ಅಭಯಾರಣ್ಯ ಇವುಗಳಿಗೆ ಪ್ರಸಿದ್ಧವಾಗಿದೆ.
೫. ಕಸ್ತೂರಿ ಮೃಗ – Musk Deer
ಕಸ್ತೂರಿ ಮೃಗ ಇದು ಜಿಂಕೆ ಮತ್ತು ಎರಳೆಗಳ ನಡುವಿನ ಪ್ರಾಣಿ, ಜಿಂಕೆಯಂತಾಗಿ ವಿಕಸನಗೊಳ್ಳದೆ ಹಿಂದುಳಿದ ಪ್ರಾಣಿಯಾಗಿದ್ದು ಗಂಡು ಮತ್ತು ಹೆಣ್ಣಿಗೆ ಕೊಂಬುಗಳಿಲ್ಲ, ಉಳಿದ ಜಿಂಕೆಗಳಿಗೆ ಇಲ್ಲದ ಗಾಲ್ ಬ್ಲಾಡರ್, ಕಾಡಲ್ ಗ್ಲಾಂಡ್, ಮಸ್ಕ್ ಗ್ಲಾಂಡ್ ಈ ಜಿಂಕೆಗಿದೆ. ಹಿಂದಿನ ಕಾಲು ಉದ್ದವಿರುದರಿಂದ ಶರೀರದ ಹಿಂಬಾಗ ಎದ್ದಿದೆ, ಕಿವಿಗಳು ಮೊಲದ ಕಿವಿಗಳಂತೆ ಉದ್ದವಾಗಿವೆ. ಗಂಡು ಹೆಣ್ಣಿಗೆ ಉದ್ದ ಕೋರೆ ಹಲ್ಲುಗಳು ಇವೆ. ಗಂಡುಮೃಗಗಳು ಮಾತ್ರ ಪರಿಮಳ ದ್ರವ್ಯವಾದ ಕಸ್ತೂರಿಯನ್ನು ಉತ್ಪತ್ತಿ ಮಾಡುತ್ತವೆ, ಹೊಕ್ಕಳು ಮತ್ತು ಜನನಾಂಗಗಳ ನಡುವೆ ಕಸ್ತೂರಿಯನ್ನು ಸ್ರವಿಸುವ ಗ್ರಂಥಿಗಳು ಇರುತ್ತವೆ. ಬೆಲೆಯುಳ್ಳ ಕಸ್ತೂರಿ ದ್ರವ್ಯಕ್ಕಾಗಿ ಗಂಡುಗಳನ್ನು ಬೇಟೆಯಾಡುತ್ತಾರೆ. ಹಿಮಾಲಯದ ಭಾಗಗಳಲ್ಲಿ ಇವನ್ನು ಕಾಣಬಹುದು.
೬. ಹುಬ್ಬು ಕೊಂಬಿನ ಜಿಂಕೆ – Brow-antlered Deer
ಹಣೆಯ ಕೊಂಬಿನ ಜಿಂಕೆ, ಥಾಮಿನ್ ಇವುಗಳ ಕೊಂಬುಗಳು ಹಣೆಯ ಮೇಲೆ ಚಂದ್ರಾಕೃತಿಯಲ್ಲಿ ಬೆಳೆಯುತ್ತವೆ. ಇವು ಮಣಿಪುರದಲ್ಲಿ ಮಾತ್ರ ಕಂಡು ಬರುವ ಜಿಂಕೆಗಳಾಗಿದ್ದು ನೀರಿರುವ ಜವುಳು ಪ್ರದೇಶಗಳ ಆಸುಪಾಸಲ್ಲಿ ವಾಸಿಸುತ್ತವೆ ಇವು ಸದ್ಯ ನಮ್ಮ ದೇಶದಲ್ಲಿ ಅತೀ ಗಂಡಾಂತರ ಎದುರಿಸುತ್ತಿರುವ ಜಿಂಕೆಗಳಾಗಿವೆ.
೭. ಹಂದಿ ಜಿಂಕೆ – Hog Deer
ಹಂದಿ ಜಿಂಕೆ ಇವು ಚೀತಲ್ ಜಾತಿಗೆ ಸೇರಿದ ಹಂದಿಯಂತೆ ಕಾಣುವ ಮತ್ತು ಹಂದಿಯ ಚಲನ ವಲನ ಹೊಂದಿದ ಜಿಂಕೆ ಯಾಗಿದೆ. ಇವು ಉತ್ತರ ಭಾರತದ ಹಿಮಾಲಯದ ಕೆಳಗೆ ಗಂಗಾ- ಬ್ರಹ್ಮಪುತ್ರ ನದಿಗಳ ಹುಲ್ಲುಗಾವಲುಗಳಲ್ಲಿ ಇವನ್ನು ಕಾಣಬಹುದು.
೮. ಕಾಶ್ಮೀರ ಕಡವೆ ಅಥವಾ ಹಂಗುಲ್ (Hangul)
ಕಾಶ್ಮೀರದಲ್ಲಿ ಬೆಳೆವ Horse chestnut ಹಣ್ಣುಗಳನ್ನು ಹೆಚ್ಚು ತಿನ್ನುವುದರಿಂದ ಇದಕ್ಕೆ ಹಂಗುಲ್ ಎಂದು ಹೆಸರು, ಕಾಶ್ಮೀರಿ ಭಾಷೆಯಲ್ಲಿ Horse Chestnut ಗಿಡಕ್ಕೆ ಹಾನ್ (Han) ಎಂಬ ಹೆಸರಿದೆ, ಈ ಜಿಂಕೆಗಳನ್ನು ಕಾಶ್ಮೀರದ ಡಚಿಗ್ಯಾಮ್ ರಾಷ್ಟ್ರೀಯ ಉದ್ಯಾನದಲ್ಲಿ ಹೆಚ್ಚು ಕಾಣಬಹುದು.
ಜಿಂಕೆಗಳಲ್ಲಿ ಅತೀ ಚಿಕ್ಕದಾದ ಬರ್ಕ ಅಥವಾ Mouse Deer ಇದಕ್ಕೆ ಮೊಲಗಳಂತಹ ಚಿಕ್ಕ ಜಿಂಕೆ ಎನ್ನಬಹುದು, ಇದು ನಿಶಾಚರಿಯಾಗಿದೆ. ಜಿಂಕೆಗಳಿಗೂ ಬರ್ಕಗಳಿಗೂ ಬಹಳ ವ್ಯತ್ಯಾಸಗಳು ಇವೆ, ಇದು ನಿಜವಾದ ಜಿಂಕೆ ಅಲ್ಲದಿರುವುದರಿಂದ Tragulidae ಎಂಬ ಪ್ರತ್ಯೇಕ ಕುಟುಂಬದಲ್ಲಿ ಇರಿಸಲಾಗಿದೆ, ಇದನ್ನೂ ಸೇರಿಸಿದರೆ 9 ಪ್ರಬೇಧದ ಜಿಂಕೆಗಳನ್ನು ನಮ್ಮ ದೇಶದಲ್ಲಿ ನೋಡಬಹುದು.
ನಾಗರಾಜ್ ಬೆಳ್ಳೂರು
Nisarga Conservation Trust