ಜೀವಜಲ
ರಸ್ತೆಯ ತುಂಬೆಲ್ಲಾ ಕರೆಕಟ್ಟಿದ ಸಗಣಿಯ ರಾಶಿ, ಅಲ್ಲೇ ಒಣಗಿಹೋದ ಗೋಮೂತ್ರದ ಕರೆಗಳು, ರಸ್ತೆಯ ಇಕ್ಕೆಲಗಳಲ್ಲಿ ನಿಂತ ಅಸಹಾಯಕರಂತೆ , ಅಮಾಯಕರಂತೆ ಕಾಣುವ ಮಂದಿ. ಬಾನಿನಲ್ಲಿ ನಿಗಿನಿಗಿ ಹೊಳಿಯುತಿಹ ಸೂರ್ಯ.. ಅಲ್ಲಲ್ಲಿ ಓಡಾಡುತ್ತಿರುವ ವಾಹನಗಳು. ರಸ್ತೆಯ ಕೂಡು ಸ್ಥಳಗಳಲ್ಲಿ ನಿಂತ ಯುವಕರ ಹತಾಶ ಮುಖಗಳು. ಕೊಳೆ ಬಟ್ಟೆಗಳನ್ನು ಧರಿಸಿದ್ದಾರೆ. ಎಣ್ಣೆ ಕಾಣದ ಕೂದಲು, ಹಾಗೆಯೇ ಊರಿನ ಒಳ ಹೊಕ್ಕರೆ ಪ್ರತಿ ಮನೆಯ ಎದುರಿನಲ್ಲೂ ಹತ್ತಾರು ಕೊಡಪಾನಗಳು, ಪ್ಲಾಸ್ಟಿಕ್ ಬಿಂದಿಗೆಗಳು..
ರಾತ್ರಿಯ ಹನ್ನೆರಡೂವರೆ ಸುಮಾರು, ಬೀದಿಗಳಲ್ಲಾ ನಿರ್ಮಾನುಷವಾಗಿದೆ. ಬೀದಿ ನಾಯಿಗಳು ಕಸದ ರಾಶಿಯನ್ನು ಎಳೆದಾಡುತ್ತಿವೆ. ಟ್ರಿಂಗ್ ಟ್ರಿಂಗ್ ಅಂತ ಸೈಕಲ್ ಬೆಲ್ ಶಬ್ದ ಮಾಡುತ್ತ ಸೈಕಲ್ ಸವಾರನೊಬ್ಬ ಊರಿನ ಮುಖ್ಯರಸ್ತೆಯತ್ತ ಬರುತ್ತಿದ್ದಾನೆ. ಸಂಪೂರ್ಣ ನಿರ್ಮಾನುಷವಾಗಿದ್ದ ರಸ್ತೆಗಳಲ್ಲಿ ನಿಧಾನವಾಗಿ ಸಪ್ಪಳ ಕೇಳಿ ಬರಲಾರಂಭಿಸಿತು. ಒಂದೊಂದೇ ಮನೆಗಳ ದೀಪಗಳು ಹೊತ್ತಿಕೊಳ್ಳಲಾರಂಭಿಸಿದವು.
ಸೈಕಲ್ ಸವಾರನು ತನ್ನ ಸೈಕಲನ್ನು ಮುಖ್ಯರಸ್ತೆಯ ಲೈಟ್‌ಕಂಬಕ್ಕೆ ಒರಗಿಸಿ ನಿಲ್ಲಿಸಿದನು. ತನ್ನ ಸೈಕಲ್‌ನ ಕ್ಯಾರಿಯರ್‌ಗೆ ಸಿಲುಕಿಸಿದ್ದ ಪೈಪ್ ಆಕಾರದ ವಸ್ತುವೊಂದನ್ನು ತೆಗೆದುಕೊಂಡನು. ಎರಡು ಹೆಜ್ಜೆ ಮುಂದಕ್ಕೆ ನಡೆದು ಮುಚ್ಚಿದ್ದ ಅಂಗಡಿಯೊಂದರ ಜಗುಲಿಯ ಮೇಲೆ ಕುಳಿತುಕೊಂಡನು. ಜೇಬಿನಿಂದ ಬೀಡಿ ಮತ್ತು ಬೆಂಕಿ ಪಟ್ಟಣವನ್ನು ತೆಗೆದು ಬೀಡಿಯೊಂದನ್ನು ಬಾಯಿಗಿರಿಸಿ ಕಡ್ಡಿ ಗೀರಿದನು. ಅಷ್ಟರಲ್ಲಾಗಲೇ ಒಂದೆರೆಡು ಮನೆಗಳ ಯುವಕರು ಮನೆಯಿಂದ ಹೊರಬಂದು ಇವನತ್ತಲೇ ಹೆಜ್ಜೆ ಇರಿಸಲಾರಂಭಿಸಿದರು. ಸೈಕಲ್ ಸವಾರನು ಜಗುಲಿಗೆ ಒರಗಿಸಿಟ್ಟಿದ್ದ ತನ್ನ ಪೈಪ್ ಆಕಾರದ ವಸ್ತುವನ್ನು ಕೈಗೆ ತೆಗೆದುಕೊಂಡನು. ಆ ಯುವಕರು ಹತ್ತಿರವಾಗುತ್ತಿದ್ದಂತೆಯೇ ಇವನೂ ಅತ್ತಲೇ ನಡೆದನು.
ಆ ಯುವಕರು ಇವನ ಬಳಿಗೆ ಬಂದವರೇ ” ಏನಣ್ಣಾ, ಹೀಗೆ ಹದಿನೈದು ದಿನಗಳಿಗೊಮ್ಮೆ ಬಂದ್ರೆ ಹೆಂಗೆ, ನಿನ್ನನ್ನೇ ನಂಬಿಕೊಂಡಿರೋ ನಮ್ಮ ಪಾಡೇನು? ” ಅಂತ ಹೇಳಿದ್ರು, ಇವನು ” ನನ್ನ ಕೈಲಿ ಏನೈತ್ರಪ್ಪ, ದೊಡ್ಡೋರು ಹೇಳ್ದಂಗೆ ನಾ ಕೇಳ್ಬೇಕು. ” ಅಂತ ಮರುನುಡಿದ. “ಸರಿ ನಡೀರಿ ಲೇಟಾಯ್ತದೆ ಹೋಗೋಣ” ಅಂತ ಆ ಯುವಕರೊಡನೆ ಹೆಜ್ಜೆ ಹಾಕಿದ. ಮೂವರೂ ಊರಿನ ಹೊರಭಾಗದ ಕಡೆ ನಡೆಯಲಾಂಭಿಸಿದರು.
ಸುಮಾರು ಒಂದು ಕಿಲೋಮೀಟರ್ ದೂರ ನಡೆದುಕೊಂಡು ಮೂವರೂ ಬಂದ್ರು. ಅಲ್ಲಿ ದೊಡ್ಡ ಅರಳೀಮರ ಮೈ ಚಾಚಿ ನಿಂತಿತ್ತು. ಸುತ್ತಲೂ ಮನೆಗಳಿಲ್ಲ. ಊರಿಗೆ ಸೇರಿದವರ ಜಮೀನುಗಳಿಗೆ ಹೋಗುವ ಕಾಲುದಾರಿಯು ಈ ಮರದ ಪಕ್ಕದಿಂದಲೇ ಶುರುವಾಗುತ್ತಿತ್ತು. ಮರದ ಇನ್ನೊಂದು ಭಾಗದಲ್ಲಿ ದೊಡ್ಡ ದೊಡ್ಡ ಕಲ್ಲುಗಳನ್ನು ಒಂದರಮೇಲೊಂದರಂತೆ ಪೇರಿಸಿಡಿಲಾಗಿತ್ತು. ಅವುಗಳ ಮಧ್ಯದಲ್ಲಿ ಸ್ವಲ್ಪ ಜಾಗವನ್ನು ಬಿಡಲಾಗಿತ್ತು. ಆ ಸೈಕಲ್ ಸವಾರ ನಿಧಾನವಾಗಿ ಆ ಕಲ್ಲುಗಳ ಮೇಲೆ ಏರಲಾರಂಭಿಸಿದ. ಆಗ ಯುವಕರು ತಮ್ಮ ಕಿಸೆಗಳಲ್ಲಿದ್ದ ಮೊಬೈಲ್ ಫೋನ್‌ನಲ್ಲಿನ ಟಾರ್ಚ್ ದೀಪವನ್ನು ಬೆಳಗಿಸಿದರು. ಆ ಕಿರುಬೆಳಕಿನಲ್ಲಿ ಆ ಸೈಕಲ್‌ನವನು ತನ್ನ ಕೈಯ್ಯಲ್ಲಿದ್ದ ಪೈಪಿನಂತಹ ವಸ್ತುವನ್ನು ಆ ಕಲ್ಲುಗಳ ನಡುವಿನ ಸಂಧಿಯಲ್ಲಿ ಹಾಕಿದನು. ಟಣ್ಣಂತ ಶಬ್ದ ಬಂತು. ಆಗ ಆ ವಸ್ತುವನ್ನು ಬಲದಿಂದ ಎಡಕ್ಕೆ ನಿಧಾನವಾಗಿ ಗಟ್ಟಿಯಾಗಿ ತಿರುಗಿಸಲಾರಂಭಿಸಿದನು. ಸುಮಾರು ನಲ್ವತ್ತು ಸೆಕೆಂಡುಗಳ ಕಾಲ ಹಾಗೆಯೇ ತಿರುವಿ, ಆ ವಸ್ತುವನ್ನು ಹೊರತೆಗೆದುಕೊಂಡನು. ಮೂವರೂ ಮತ್ತೆ ಲೋಕಾಭಿರಾಮದ ಮಾತುಗಳನ್ನಾಡುತ್ತಾ ಊರಿನ ಕಡೆ ಮುಖಮಾಡಿದರು.
ವಾಪಸ್ ಬಂದು ನೋಡಿದ್ರೆ ಆ ಸರಿರಾತ್ರಿಯಲ್ಲಿ ಊರಿನ ಚಿತ್ರಣವೇ ಬದಲಾಗಿಹೋಗಿದೆ. ಎಲ್ಲರೂ ಮನೆಗಳಿಂದ ಹೊರಬಂದಿದ್ದಾರೆ. ಪುಟಾಣಿ ಮಕ್ಕಳಿಂದ ಹಿಡಿದು ತೀರಾ ವಯಸ್ಸಾದವರೂ ಕೂಡಾ ಲಗುಬಗೆಯಿಂದ ಓಡಾಡುತ್ತಿದ್ದಾರೆ. ಎಲ್ಲರೂ ತಂತಮ್ಮ ಮನೆಗಳ ಮುಂದಿರುವ ಪುಟ್ಟ ಪುಟ್ಟ ಗುಣಿಗಳಲ್ಲಿರುವ ಕೊಳಾಯಿಯಿಂದ ನೀರನ್ನು ಹಿಡಿಯುತ್ತಿದ್ದಾರೆ. ಸಣ್ಣ ಸಣ್ಣ ಬಿಂದಿಗೆಗಳಿಂದ ನೀರನ್ನು ತುಂಬಿ ಮನೆಯೊಳಗಿನ ಕೊಳಗ, ಡ್ರಂಗಳಲ್ಲಿ ಶೇಖರಿಸುತ್ತಿದ್ದಾರೆ. ಸೈಕಲ್ ಸವಾರನ ಜೊತೆ ಬಂದ ಯುವಕರೂ ಸಹ ತಮ್ಮ ಮನೆಗಳತ್ತ ಓಡುತ್ತಾ ಸಾಗಿದರು. ಸೈಕಲ್ ಸವಾರನು ತನ್ನ ಬಳಿಯಿದ್ದ ವಸ್ತುವನ್ನು ತನ್ನ ಸೈಕಲ್‌ನ ಕ್ಯಾರಿಯರ್‌ಗೆ ಸೇರಿಸಿ, ಅದೇ ಜಗುಲಿಯ ಮೇಲೆ ಕುಳಿತು ಮತ್ತೊಂದು ಬೀಡಿಯನ್ನು ಎಳೆಯಲು ಶುರುಮಾಡಿದನು.
ಹೀಗೇ ಸುಮಾರು ಎರಡು ಗಂಟೆಗಳ ಕಾಲ ಎಲ್ಲರೂ ನೀರು ಸಂಗ್ರಹಿಸುತ್ತಿದ್ದಾರೆ. ಆ ಸೈಕಲ್ ಸವಾರ ಕುಳಿತಲ್ಲೇ ನಿದ್ದೆಗೆ ಜಾರಿದ್ದ. ಕ್ರಮೇಣ ನೀರು ಸಣ್ಣದಾಗುತ್ತಾ ಬಂತು. ಮತ್ತೆ ಎಲ್ಲರೂ ಬೇಗ ಬೇಗ ಅಂತ ಕೂಗಾಡುತ್ತಾ ನೀರನ್ನು ಹಿಡಿಯುತ್ತಿದ್ದಾರೆ. ಇನ್ನೊಂದು ಹತ್ತು ನಿಮಿಷ ಆಗುವಷ್ಟರಲ್ಲಿ ನೀರು ನಿಂತೇ ಹೋಯ್ತು. ಕೆಲವರು ಸಮಾಧಾನ ಪಟ್ರೆ ಕೆಲವರು ಅತೃಪ್ತಿಯ ನಿಟ್ಟುಸಿರು ಬಿಡುತ್ತಿದ್ದರು. ಮತ್ತದೇ ಯುವಕರು ಸೈಕಲ್ ಸವಾರನ ಬಳಿಗೆ ಬಂದು ” ಅಣ್ಣಾ ಅಣ್ಣಾ ” ಅಂತ ಅವನನ್ನು ಎಬ್ಬಿಸಿದರು. ಅವನು ಎದ್ದು “ನೀರು ನಿಂತೋಯ್ತಾ?” ಅಂತ ಕೇಳಿದನು. ಇವರಿಬ್ಬರೂ ತಲೆಯಾಡಿಸಿದರು. ಮತ್ತೆ ಆ ಮೂವರೂ ಊರ ಹೊರಭಾಗದ ಅದೇ ಅರಳೀಮರದ ಕಡೆ ಆ ಪೈಪಿನಂತಹ ಬೀಗದ ಕೈ ಜೊತೆ ನಡೆದರು. ದಾರಿಯಲ್ಲಿ ” ಅಣ್ಣಾ ಏನಾದ್ರೂ ಮಾಡಣ್ಣ, ಕನಿಷ್ಟ ವಾರಕ್ಕೊಂದು ಸಲವಾದ್ರೂ ನೀರು ಕೊಡಣ್ಣಾ” ಅಂತ ಕೇಳಿದಾಗ ಅವನು ” ಮುಂದೆ ಶಾನೆ ಕಷ್ಟ ಐತ್ರಪ್ಪ. ನಾ ಏನ್ ಮಾಡ್ಲಿ, ಮೇಲ್ನೋರು ಹೆಂಗೆ ಹೇಳ್ತಾರೋ ಹಂಗೆ ನಾ ಮಾಡ್ತೀನಿ. ನೀವೂ ವಸಿ ಹುಶಾರಾಗಿ ನೀರು ಬಳಸಿ, ಇನ್ಮುಂದೆ ನೋಡ್ಬೇಕು, ಟೈಂಗೆ ಸರಿಯಾಗಿ ಮಳೆ ಬರ್ಲಿಲ್ಲಾಂದ್ರೆ ತಿಂಗಳಿಗೊಂದ್ಸಲ ನೀರು ಬತ್ತದೇನೋ? ” ಅಂತ ಹೇಳಿದನು… ಯುವಕರಲ್ಲಿ ಆ ಮಾತು ಕೇಳಿ ಜಂಘಾಬಲವೇ ಉಡುಗಿಹೋದಂತಾಯ್ತು.
ಮೇಲಿನ ಈ ಚಿತ್ರಣ ನಮ್ಮ ರಾಜ್ಯದ ಹಲವೆಡೆ ಕಂಡು ಬರುತ್ತದೆ. ನಮ್ಮ ಮಿತವಾದ ನೀರಿನ ಬಳಕೆ ಮತ್ತೊಬ್ಬರಿಗೆ ಜೀವಜಲವಾಗಬಲ್ಲದು. ನೀರನ್ನು ರಕ್ಷಿಸೋಣ. ಪೋಲಾಗದಂತೆ ನೋಡಿಕೊಳ್ಳೋಣ.
ಸಿ.ಎನ್. ಮಹೇಶ್