ಜೀವನದ ಅಮೂಲ್ಯ ರತ್ನಗಳು

ನಮ್ಮ ಜೀವನದಲ್ಲಿ ನಂಬಿಕೆ‌, ಪ್ರೀತಿ ಇವೆರಡು ರತ್ನಗಳು ದೈವದತ್ತವಾಗಿ ನಮಗೆ ಭಾವನೆಗಳ ಮೂಲಕ ಬಂದಂತಹ ಒಂದು ಕೊಡುಗೆಯಾಗಿದೆ. ಜೀವನದಲ್ಲಿ ಇವುಗಳಿಗೆ ಇದರದೇ ಆದ ಒಂದು ಪಾವಿತ್ರ್ಯ ಮೌಲ್ಯವಿದೆ. ನಮ್ಮ‌ ಜೀವನದಲ್ಲಿ‌ ಎಲ್ಲ ವಸ್ತುಗಳನ್ನು ದುಡ್ಡು ಕೊಟ್ಟು ಪಡೆಯಬಹುದು. ಆದರೆ, ನಂಬಿಕೆ, ಪ್ರೀತಿ ಮನುಷ್ಯನ ಭಾವನೆಯಿಂದ ಮೂಡುವಂತಹ ಪ್ರಕ್ರಿಯೆ.

ಪ್ರತೀ ಮಾನವ ಜೀವನದಲ್ಲಿ ಇವುಗಳು ಇಲ್ಲದೇ ಬಾಳಲು ಸಾದ್ಯವಿಲ್ಲ. ಜೀವನದ ತಳಹದಿಗೆ ಇವುಗಳು ಆದಾರಸ್ತಂಭಗಳಾಗಿವೆ. ಇದರಲ್ಲಿ‌ ಒಂದನ್ನು ಕಳೆದುಕೊಂಡರು ನಮ್ಮ ಜೀವನ‌ದ ಲಯ ಕಳೆದುಕೊಂಡಂತೆ. ಆದರೆ, ಇಂದು ಎಲ್ಲೋ ಇವುಗಳು ತನ್ನ ಅರ್ಥವನ್ನು ಕಳೆದುಕೊಳ್ಳುತ್ತಿದೆ ಎಂದು ಎನಿಸದೆ ಇರಲಾರದು. ಕೂಡು ಕುಟುಂಬದಲ್ಲಿ ಬದುಕುತ್ತಿದ್ದ ಸಂಸಾರಗಳು ಇಂದು ಮರೆಯಾಗುತ್ತಿದೆ, ಸಂಸಾರದಲ್ಲಿ ಸಾಮರಸ್ಯತೆ‌ ಇಲ್ಲ, ನೆರೆಹೊರೆಯವರೊಡನೆ, ಸ್ನೇಹಿತರೊಡನೆ ಆತ್ಮೀಯತೆ ಕಡಿಮೆಯಾಗುತ್ತಿದೆ.

ಮಾನವ ಸಂಘ ಜೀವಿ.‌ ನಾವು ನಂಬಿಕೆ, ಪ್ರೀತಿಯನ್ನು ಕಳೆದುಕೊಂಡಾಗ ನಮಗೆ‌ ಒಂಟಿತನ ಕಾಡದೇ ಇರಲಾರದು. ಒಂಟಿತನ ಮನುಷ್ಯನನ್ನು ಕತ್ತಲ ಕೂಪಕ್ಕೆ ತಳ್ಳಬಹುದು. ಇತ್ತೀಚಿನ ದಿನಗಳಲ್ಲಿ ನಮ್ಮ ಪ್ರಾಶಸ್ತ್ಯ ಹಣ ಗಳಿಕೆಯೊಂದೇ. ಹಣದ ಹಿಂದೆ ಹೋಗುವಂತಹ ಮನುಷ್ಯ ಇಂತಹ ಮಾನವೀಯ ಮೌಲ್ಯಗಳ ಅರ್ಥವನ್ನು ಕಳೆದುಕೊಳ್ಳುತ್ತಿದ್ದಾನೆ. ಒಂದು ಸಂಬಂಧ ಗಟ್ಟಿಯಾಗಬೇಕಾದರೆ ಅಲ್ಲಿ ಮೊದಲಿಗೆ ಪ್ರೀತಿ ಇರಬೇಕು ಹಾಗೂ ಆ ಪ್ರೀತಿ‌ ಮೇಲೆ ನಂಬಿಕೆ ಬಲವಾಗಿರಬೇಕು.

ಸಂಬಂಧದಲ್ಲೋ, ಗೆಳೆತನದಲ್ಲೋ ತಪ್ಪುಗಳು ಸಹಜ. ತಪ್ಪು ಮಾಡದೇ ಇರುವ ಮನುಷ್ಯನನ್ನು ಹುಡುಕುವುದು ಕಷ್ಟ. ಆದರೆ, ಕ್ಷುಲ್ಲಕ ವಿಷಯಗಳಿಗೆ ನಂಬಿಕೆ ಕಳೆದುಕೊಂಡು ಅವರ ಪ್ರೀತಿಯಿಂದ ವಂಚಿತರಾಗಬಾರದು. ಒಂದು ಸಂಬಂಧ ಹುಟ್ಟಲು ಯಾವುದೇ ಕಾರಣಗಳು ಬೇಕಿಲ್ಲ. ಅಲ್ಲಿ ಬೇಕಾಗಿರುವುದು ಪ್ರೀತಿ ಅವರ ಮೇಲಿನ ನಂಬಿಕೆ. ನಮ್ಮ‌ ಒಣ ಪ್ರತಿಷ್ಠೆ ಯಿಂದಾಗಿ ಸಂಬಂಧಗಳು ನಂಬಿಕೆ‌ ಕಳೆದುಕೊಳ್ಳುತ್ತಿದೆ. ಹಾಗೂ ಅವುಗಳಿಗೆ ಅವರೇ ಕೊಡುವ ಪದ‌ ‘ನಂಬಿಕೆ ದ್ರೋಹ’.

ಒಬ್ಬ ಸ್ನೇಹಿತನಾದವನಿಗೋ ಅಥವಾ ಸಂಬಂಧ ಪಟ್ಟಂತಹ ವ್ಯಕ್ತಿ ‌ನಮಗೇನಾದರೂ ಬುದ್ದಿ ಹೇಳುತ್ತಾರೆ ಎಂದಾದರೆ ಅದು ಅವರಿಗಿರುವ ನಮ್ಮ‌ ಮೇಲಿನ ಕಾಳಜಿ ಹಾಗೂ‌ ಪ್ರೀತಿಯಷ್ಟೇ. ಅದನ್ನು ನಾವು ತಪ್ಪಾಗಿ ಅರ್ಥೈಸಿದರೆ ಅದು ನಮಗೆ ನಾವು ಮಾಡಿಕೊಳ್ಳುವ ದ್ರೋಹ. ಪ್ರೀತಿಗೆ‌ ನಂಬಿಕೆಗೆ‌ ನಮ್ಮ‌ಅಹಂ ತಲೆಬಾಗಲೇಬೇಕು. ಪ್ರೀತಿಗಿಂತ ಅಹಂ‌ ಮೇಲುಗೈಯಾದಾಗ ನಮಗೆ‌ ಎಲ್ಲಾ ಸಮಸ್ಯೆಗಳು ತಲೆದೋರುತ್ತವೆ.ಆಗ ಸಂಬಂಧದ ಮೇಲಿನ ನಂಬಿಕೆಯೂ ಕಡಿಮೆಯಾಗುತ್ತದೆ. ಯಾವುದೇ ವಿಷಯವನ್ನು ದೊಡ್ಡದು ಮಾಡುವ ಬದಲು, ಯಾಕೆ ಹೇಳಿರಬಹುದು ಎಂದು ಸ್ವಲ್ಪ ಹೊತ್ತು ಕೂತು ನಿಧಾನವಾಗಿ ಯೋಚನೆ ಮಾಡಿದರೆ ಕೋಪನೂ ಕರಗುತ್ತದೆ ಹಾಗೂ ಪರಿಹಾರನೂ ಸಿಗುತ್ತದೆ. ನಮ್ಮ‌ ಪ್ರೀತಿಯ ಮೇಲೆ‌ ನಂಬಿಕೆ ಬಲವಿದ್ದಾಗ ಯಾವ ಅನುಮಾನಗಳಿಗೂ ಜಾಗವಿರುವುದಿಲ್ಲ. ಯಾವುದನ್ನು ಕೇಳಬೇಕು, ಯಾವುದನ್ನು ಕೇಳಬಾರದು, ಯಾವುದನ್ನು ಹೇಳಬೇಕು‌, ಯಾವುದನ್ನು ಹೇಳಬಾರದು ಎನ್ನುವ ಅರಿವು ನಮ್ಮಲ್ಲಿರಬೇಕು.

ನಿಜಕ್ಕೂ‌ ನಂಬಿಕೆ ದ್ರೋಹ ಅನ್ನುವುದು ದೊಡ್ಡ ಮಾತೇ ಸರಿ. ಕ್ಷುಲ್ಲಕ ವಿಷಯಗಳಿಗೆ ಇದನ್ನು ಬಳಸುವುದು ಸೂಕ್ತವಲ್ಲ ಎನ್ನುವುದು ನನ್ನ ಅಭಿಪ್ರಾಯವಷ್ಟೆ. ಒಬ್ಬೊಬ್ಬರ ಅಭಿಪ್ರಾಯ ಒಂದೊಂದು ತರಹ ಇರುತ್ತದೆ ಅಲ್ಲವೇ. ನಮ್ಮ ಪ್ರೀತಿ ನಿಜವಾಗಿದ್ದಲ್ಲಿ ಅದರ ಮೇಲೆ‌ ನಂಬಿಕೆ ಬಲವಾಗಿದ್ದಲ್ಲಿ ಯಾರೂ ನಮ್ಮ ಮದ್ಯೆ ಇರುವಂತಹ ನಂಬಿಕೆಗೆ ದ್ರೋಹ ಮಾಡಲಾರರು. ಒಂದು ವೇಳೆ ಹಾಗಾಗಿದ್ದಲ್ಲಿ ಅದರಲ್ಲಿ‌ ನಮ್ಮ‌ ಪಾಲು ಎಷ್ಟಿದೆ ಎಂಬುದನ್ನು ನೋಡಬೇಕು. ಪ್ರತೀಯೊಂದು ಸಮಸ್ಯೆಗೂ‌ ಪರಿಹಾರ ಇದ್ದೇ ಇರುತ್ತದೆ. ಅಂತಹ ಭಿನ್ನಾಭಿಪ್ರಾಯ ಮೂಡಿದ್ದಲ್ಲಿ ಒಂದೆಡೆ ಕುಳಿತು ಅದನ್ನು‌ ಪರಿಹರಿಸಿಕೊಳ್ಳಬೇಕೇ ಹೊರತು ಏಕಾಏಕಿ ನಂಬಿಕೆ ದ್ರೋಹ ಎನ್ನಬಾರದು.

ಕೆಲವರಿಗೆ ಬೇರೆಯವರು ಏನಾದರೂ ಬುದ್ದಿವಾದ ಹೇಳಿದಾಗ ಕೇಳುವ ವ್ಯವಧಾನ ಇರುವುದಿಲ್ಲ. ತಾವೇ ಸರಿ ಎನ್ನುವ ಹಠಕ್ಕೆ ಬೀಳುತ್ತಾರೆ. ಎರಡು ಕೈ ಸೇರಿದರೆ ಚಪ್ಪಾಳೆ ಹಾಗೇನೆ ಪ್ರತೀ‌ ಸಂಬಂಧವನ್ನು‌ ಕೆಡಿಸಿಕೊಳ್ಳಲು ಎರಡೂ ಕಡೆಯಿಂದನೂ ತಪ್ಪಾಗಿರುತ್ತದೆ.‌ ನಾವು ನಮ್ಮನ್ನು ಸಮರ್ಥಿಸಿಕೊಂಡು ಅದನ್ನು ಅವರ ತಲೆ ಮೇಲೆ‌ ಎತ್ತಿ ಹಾಕುವುದು ಸರಿಯಲ್ಲ. ಇನ್ನೊಬ್ಬರನ್ನು ತೂಗಿ ಅಳೆಯುವುದು ಸುಲಭ. ನಮ್ಮನ್ನು‌ ನಾವು ಅಳೆಯುವುದು ಕಷ್ಟ. ಅಂದರೆ, ನಮ್ಮ ತಪ್ಪುಗಳನ್ನು ಯಾರಾದರು ಹೇಳಿದಾಗ ನಮಗೆ‌ ಎಲ್ಲಿಂದೆಲ್ಲಿಂದನೋ ಕೋಪ ಬರುತ್ತದೆ. ಅದೇ ಬೇರೆಯವರ ತಪ್ಪುಗಳನ್ನು ಅಷ್ಟೇ ಸುಲಭವಾಗಿ ಎತ್ತಿಹಿಡಿಯುತ್ತೇವೆ. ಕಣ್ಣಾರೆ ಕಂಡರೂ ಪ್ರಮಾಣಿಸಿ ನೋಡು ಎಂಬ ಗಾದೆಯಿದೆ ಆದರೆ, ನಾವು ಹಾಗಲ್ಲ ಕಣ್ಣುಮುಚ್ಚಿ ಎಲ್ಲವನ್ನೂ ಎಲ್ಲದಕ್ಕೂ ತೀರ್ಪುಕೊಟ್ಟು ಬಿಡುತ್ತೇವೆ. ನಾವು‌ ಮಾಡುವುದು ತಪ್ಪಲ್ಲ ಅದೇ ತಪ್ಪನ್ನು ಬೇರೆಯವರು ಮಾಡಿದಾಗ ಅದು ದೊಡ್ಡ ತಪ್ಪು, ನಂಬಿಕೆ ದ್ರೋಹ, ವಿಶ್ವಾಸ ಘಾತಕ, ಮೋಸ, ಎನ್ನುವ ಏನೇನೋ ಪದಗಳು.

ಇತ್ತೀಚಿನ ದಿನಗಳಲ್ಲಿ‌ ಸಂಬಂಧಗಳು ಬಹಳ ಬೇಗ ಹಳಸಿ ಹೋಗುತ್ತದೆ. ಕಾರಣ, ಅವರಲ್ಲಿರುವ ಪ್ರೀತಿ‌ ಮೇಲೆ ಅವರಿಗೆ ನಂಬಿಕೆ‌ ಇಲ್ಲ. ನಾವು ದೇವಸ್ಥಾನಕ್ಕೆ ಹೋಗುವುದು ದೇವರಿದ್ದಾನೆ, ನಮ್ಮನ್ನು ಕಾಪಾಡುತ್ತಾನೆ, ಎಂಬ ಭರವಸೆಯಿಂದ. ದೇವರನ್ನು ಪ್ರಾರ್ಥಿಸಿ ಯಾವುದೋ ಒಂದು‌ ಒಳ್ಳೆಯ ಕೆಲಸಕ್ಕೆ ಕೈ ಹಾಕುತ್ತೇವೆ. ನಮ್ಮ ಅಜಾಕರೂಕತೆಯಿಂದ ಅದರಲ್ಲಿ‌ ಏನೋ ಒಂದು ಸಮಸ್ಯೆ ಎದುರಾದಾಗ ನಾವು ಅಯ್ಯೋ ದೇವರೆ ನಮ್ಮ‌ ಕೈ ಬಿಟ್ಟ ಬಿಟ್ಟ ಎನ್ನುತ್ತೇವೆಯೇ ಹೊರತು ನಮಗೆ ದೇವರು ನಂಬಿಕೆ ದ್ರೋಹ ಮಾಡಿದ ಎನ್ನುವುದಿಲ್ಲ. ಹಾಗಾದರೆ ಸಂಬಂಧದಲ್ಲಿ‌ ಮಾತ್ರ ಈ ನಂಬಿಕೆ ದ್ರೋಹ ಹುಟ್ಟು ಹಾಕಿದವರು ಯಾರು. ಸರಿ, ಒಂದು ಸಂಬಂಧ ಹುಟ್ಟುವಾಗ ನಾನು‌ ನಿನ್ನನ್ನು ಪ್ರೀತಿಸುತ್ತೇನೆ, ನೀನು‌ ನನ್ನನ್ನು ಪ್ರೀತಿಸಬೇಕು. ನಿನ್ನ ಮೇಲೆ‌ ನನಗೆ ನಂಬಿಕೆ ಇದೆ. ನನಗೂ ನಿನ್ನ ಮೇಲೆ‌ ನಂಬಿಕೆ‌ ಇದೆ ಎನ್ನುವ ಷರತ್ತುಗಳನ್ನು ಹಾಕಿಕೊಳ್ಳುವ ಮುಖಾಂತರ ಏನಾದರೂ ಸಂಬಂಧಗಳು ಏರ್ಪಟ್ಟಿವೆಯೇ ಅದೂ….. ಇಲ್ಲ…ಹಾಗಾದರೆ, ನಾವು ಪ್ರೀತಿ ಹಾಗೂ ನಂಬಿಕೆಯ ಬಗ್ಗೆ ಯೋಚಿಸಬೇಕಾದದ್ದು ಬಹಳಷ್ಟಿದೆ.

ನಮ್ಮ ಜೀವನದ ಪಯಣದಲ್ಲಿ ನಮ್ಮ ತಂಗುದಾಣ ಬರುವಾಗ ಇಳಿಯಲೇಬೇಕು. ಮದ್ಯೆ‌ ನಮ್ಮ‌ ಜೀವನ ನಮಗೆ ನಿರಾಸದಾಯಕವಾಗಿರಬಾರದು. ಆ ಮಧ್ಯೆ ನಮ್ಮ ಜೀವನ ಒಂಟಿಯಾಗಿ‌ ಕಳೆದು ಬೇರೆಯವರನ್ನು ದೂಷಿಸುತ್ತಾ, ನಮಗೆ ದ್ರೋಹವಾಯಿತಲ್ಲಾ ಎಂದು ಕೊರಗುತ್ತಾ ನಮ್ಮ ಅಮೂಲ್ಯವಾದ ಜೀವನವನ್ನು ಕಳೆಯುವ ಬದಲು ಆದ ತಪ್ಪನ್ನು ಕ್ಷಮಿಸುತ್ತಾ ಖುಷಿ ಖುಷಿಯಾಗಿ ಕಳೆದರೆ ಎಷ್ಟು ಚಂದ ಅಲ್ವಾ.

ಒಂದು‌ ನಿಮಿಷ ನಮ್ಮನ್ನು‌ ಪ್ರೀತಿಸುವ ಜೀವಿಗೆ ಅವರ ತಪ್ಪನ್ನು ಕ್ಷಮಿಸಿ ಅವರನ್ನು ಸ್ವೀಕರಿಸಿ ಸಂಬಂಧಗಳನ್ನು ಉಳಿಸುವುದು ಜಾಣತನ. ಅದರ ಬದಲು ತಮಗೆ ತಾವೇ ನೋವುಂಡು ಅವರ ಮೇಲೆ ದ್ವೇಷವನ್ನು ಸಾಧಿಸಿ ನಾವು‌ ಪಡೆಯುವುದಾದರು ಏನು ಎಂಬುವುದನ್ನು ನಾನಂತು ಅರಿಯಲಾರೆ. ಪ್ರೀತಿ ನಮ್ಮನ್ನು ಬೆಳೆಸುತ್ತದೆ. ದ್ವೇಷ ನಮ್ಮನ್ನು ಕುಗ್ಗಿಸುತ್ತದೆ. ಒಂದು ವೇಳೆ ಕೆಲ‌ ಸಂಬಂಧಗಳು ನಮ್ಮಿಂದ ದೂರವಾಗುತ್ತಿದೆ ಎನ್ನುವುದಾದರೆ ಆಗಲಿ‌ ಬಿಡಿ.‌ ಯಾಕೆಂದರೆ ಆ ಸಂಬಂಧಕ್ಕೆ‌ ನಾವು ಬೇಕಾಗಿಲ್ಲ ಅಷ್ಟೆ. ಆಗ ಅವರ ನಿಜವಾದ ವ್ಯಕ್ತಿತ್ವದ ಬಿಂಬ ನಮ್ಮೆದುರು ಅನಾವರಣಗೊಳ್ಳುತ್ತದೆ. ಸಂಬಂಧದ ಉಳಿವು ಬೇಕಾಗಿದ್ದಲ್ಲಿ ಅದನ್ನು ಉಳಿಸಿಕೊಳ್ಳುವ ಸಣ್ಣ ಪ್ರಯತ್ನ ಮಾಡುತ್ತಾರೆ.

ನಮಗೆ ದೇವರು ಅತ್ಯದ್ಭುತವಾದ ಒಂದು ಉಡುಗೊರೆ ಕೊಟ್ಟಿದ್ದಾನೆ ಅದುವೇ ‘ಅರಿವು’. ಇದು ಒಳ್ಳೆ ಯೋಚನೆಗಳಿಗೆ ಬಳಕೆಯಾಗಲಿ.

ತಪ್ಪುಮಾಡುವುದು ಮನುಷ್ಯ ಗುಣ ಅದನ್ನು ಕ್ಷಮಿಸಿ ಬಾಳುವುದು ಮಾನವನ ದೊಡ್ಡ ಗುಣ.‌ ನಾಲ್ಕು ದಿನ ಬದುಕಿದರೂ ನಮ್ಮನ್ನು‌ ಪ್ರೀತಿಸಿದವರಿಗೆ ಪ್ರೀತಿಯನ್ನು ಹಂಚೋಣ.‌ ನಮ್ಮನ್ನು ಪ್ರೀತಿ ಮಾಡುವವರ ಮೇಲಿನ ನಂಬಿಕೆ ಬಲವಾಗಿರಲಿ. ನಮ್ಮ‌ ಪ್ರೀತಿ ಮನಸ್ಸಿನಾಳದಿಂದ ಮೂಡಲಿ. ಬೇರೆಯವರ ಮೇಲಿನ‌ ನಂಬಿಕೆ ಪ್ರೀತಿ ಯಾವತ್ತೂ ಕಡಿಮೆಯಾಗದಂತೆ ದೇವರು ಶಕ್ತಿಯನ್ನು‌ ಕೊಡಲಿ.

ಸೌಮ್ಯಾ ನಾರಾಯಣ್

Related post

3 Comments

  • ಅದ್ಭುತ

  • ಒಳ್ಳೆಯ ಮಾತು. ಸರಿಯಾಗಿ ಹೇಳಿದಿರಿ. ಈಗಿನ ವಾತಾವರಣ ಈಗೆಯೇ ಇರುವುದು.

  • Good article

Leave a Reply

Your email address will not be published. Required fields are marked *