ಜೀವನದ ಮುಸ್ಸಂಜೆಯ ಕಥಾ ಪ್ರಸಂಗ!

ಶಹರದ ಮಂದಿಗೆ ಬೆಳಗ್ಗೆಗೂ ಹಾಗೂ ರಾತ್ರಿಗೂ ವ್ಯತ್ಯಾಸವೇ ಇರದು. ಎಲ್ಲವೂ ಒಂದೇ
ಆಗಿರುತ್ತದೆ. ಹೀಗಿದ್ದಾಗ ಜೀವನದ ಮುಸ್ಸಂಜೆಗೆ ಜಾರಿದವರು ತಮ್ಮ ಬಾಳು ಕತ್ತಲೆಡೆಗೆ
ನಡೆದಿದೆ ಎಂದು ಭಾವಿಸಬೇಕಿಲ್ಲ.

ಈ ಜಮಾನವು ಹಿಂದಿನಂತಿಲ್ಲ ಎನ್ನುವುದೇ ಇಲ್ಲಿ ಹೇಳ ಹೊರಟದ್ದು.

ಜೀವನದ ಎಲ್ಲಾ ಆಗುಹೋಗುಗಳನ್ನು ಅನುಭವಿಸಿ, ಅನುಭಾವದತ್ತ ಮನಸ್ಸನ್ನು
ಕೇಂದ್ರೀಕರಿಸಿಕೊಂಡು ಇದ್ದಷ್ಟು ದಿನ ಇರೋದಷ್ಟೆ. ಇನ್ನು ತುಂಬಾ ದಿನ ಈ ಘಟ
ಇಲ್ಲಿರೊಲ್ಲ. ಹೋಗುವ ಕಾಲ ಬಂದಾಯ್ತು. ಯಾವ ವ್ಯಾಮೋಹವೂ ಇಲ್ಲ. ಜೀವನ
ವ್ಯಾಪಾರ ಮುಗಿಸಿ ಅಂಗಡಿ ಬಂದ್ ಮಾಡುವ ಕಾಲ ಬಂದಿದೆ ಎನ್ನುವ ನೇರವೂ
ಅಷ್ಟೇ ದಿಟ್ಟವಾದ ಮಾತುಗಳನ್ನೂ ಹಣ್ಣಾದವರು ಹೇಳುವುದು ಮಾಮೂಲು.

ದಿನ ಕ್ರಮೇಣ ತಮ್ಮ ತಮ್ಮಲ್ಲೇ ಹೀಗೆ ಮಾತಾಡಿಕೊಳ್ಳುವುದು. ತಮ್ಮ ಅಮೂಲ್ಯ ವಸ್ತುಗಳನ್ನು
‘ತಮ್ಮವರು’ ಎಂದು ನಂಬಿದ ಹೆಂಡತಿಗೋ, ಮಗಳಿಗೋ, ಮಗನಿಗೋ, ಮುದ್ದಿನ ಮೊಮ್ಮಕ್ಕಳಿಗೋ
ತಲುಪಿಸಲು ತವಕಿಸುತ್ತಾರೆ. ಅವರೆಲ್ಲ ಅವನ್ನು ನಿರಾಕರಿಸುತ್ತಿದ್ದರೂ ತಾವು ಮಾತ್ರ ನಿರಾಳ ಭಾವದಿಂದ ವರ್ಗಾಯಿಸಿ ನಿರ್ಭಾವಕ್ಕೆ ಜಾರುತ್ತಾರೆ.

ಬ್ಯಾಂಕ್ ಖಾತೆಗಳನ್ನು ದಾಖಲೆಗಳನ್ನೂ, ಆಯಾಯ ಬ್ಯಾಂಕುಗಳ ಕಾರ್ಡ್, ಪಾಸ್‌ವರ್ಡ್‌ಗಳನ್ನು ತನ್ನ
ನಂತರದವರಿಗೆ ತಿಳಿಸಿ, ಅವನ್ನು ಅವರ ಕಪಾಟಿಗೆ ಗುಟ್ಟಾಗಿ ವರ್ಗಾಯಿಸುವ ಕೆಲಸವನ್ನೂ ಮಾಡುತ್ತಾರೆ.

ತಾನಿಲ್ಲದ ತನ್ನ ಮನೆ, ತನ್ನ ಸುತ್ತಲಿನ ಜಗತ್ತು ಹೇಗಿರುತ್ತದೆ ಎಂದು ಯೋಚಿಸುವ
ಮಟ್ಟಕ್ಕೆ ತಲುಪುತ್ತಾರೆ.

ಇಂತಹ ಯಾರಲ್ಲೂ ಹೇಳಲಾಗದ, ಅನುಭವಿಸಲಾಗದ ಗೊಂದಲ,
ತಳಮಳಗಳನ್ನು ಹಂಚಿಕೊಳ್ಳಲು ತಮ್ಮದೇ ವಯೋಮಾನದವರು ಸೇರುವ ರೈಲ್ವೇ ಸ್ಟೇಷನ್ನಿಗೋ, ಬಸ್‌ಗಳೇ ಬಾರದ ಹಳೆಯ ಬಸ್‌ಸ್ಟ್ಯಾಂಡಿಗೋ, ಪಾರ್ಕ್‌ನ ಮೂಲೆಗೋ ಹೋಗಿ ಕೂರುತ್ತಾರೆ.

ಆ ಗುಂಪಲ್ಲಿ ಕಣ್ಣು ಮಂಜಾದವರು, ನಡೆದು ಬಂದು ಸುಸ್ತಾಗಿ ಉಬ್ಬಸ, ಕೆಮ್ಮಿಂದ ಒದ್ದಾಡುವವರು, ಕೂತರೆ ಏಳಲಾಗದವರು. ಕೂರಲಾಗದೇ ನಡದೇ ಮಾತಾಡುವವರು. ಮಾತಾಡಿದರೂ ಏನು ಮಾತಾಡುತ್ತಿದ್ದಾರೆಂದೂ ಯಾರಿಗೂ ಅರ್ಥವಾಗದವರು. ಮಾತಾಡದೇ ಎಲ್ಲರ ಮಾತನ್ನು ಆಲಿಸುತ್ತಿದ್ದಾರೇನೋ ಎಂಬಂತೆ ಬುದ್ಧನಂತೆ ಕೂತ ಕಿವಿ ಕೇಳದವರು!

ಈ ಗುಂಪಲ್ಲಿ ಇರುವವರೆಲ್ಲರೂ ಎಪ್ಪತ್ತು-ಎಂಬತ್ತು ಮೀರಿದವರಾದರೂ ಅವರ ಮಾತಲ್ಲಿನ ನಗೆಯ ಚಟಾಕಿಗಳು ತಮ್ಮದೇ ಜೀವನದ ಅಂತಿಮ ಘಟ್ಟವನ್ನು ಕಿಚಾಯಿಸುವಂತಿರುತ್ತದೆ.

ತಮ್ಮ ಮುದಿತನದ ಕಾರ್ಯ ಚಟುವಟಿಕೆಗಳನ್ನು ರಂಗು ರಂಗಾಗಿ ವರ್ಣಿಸುತ್ತಾ ಹಲ್ಲಿಲ್ಲದಿದ್ದರೂ
ಬಾಯ್ತುಂಬಾ ನಕ್ಕೂ ನಕ್ಕೂ… ನಗುವು ಕೆಮ್ಮಾಗಿ ಕೆಮ್ಮು ದಮ್ಮಾಗಿ ಸುಸ್ತಾಗಿ ಹೋಗ್ತಾರೆ.

ಅಂತಹ ಸ್ಥಿತಿಯಲ್ಲೂ ಅಲ್ಲಿದ್ದವರೊಬ್ಬರು, ‘ಲೇ, ಹೀಗೆ ನೋವಲ್ಲಿ ಕೊರಗುತ್ತಾ, ಮರುಗುತ್ತಾ ಸಾಯುವ ಬದಲು ಹೀಗೇ ನಕ್ಕೋಂತ ಹೋಗಿ ಬಿಡು ಮಾರಾಯ. ಎಂದೋ ಎಲ್ಲೋ
ನಮಗೆ ಕಾಣದೇ ಕಣ್ಮುಚ್ಚಿ ಹೋದ್ರೆ ಆ ವಿಷಯ ಕೂಡ ನಮಗೆ ತಲುಪಲ್ಲ. ಕೊನೆಯ ಬಾರಿ ಮುಖ ನೋಡೋಕು ಬರೋಕೆ ಆಗಲ್ಲ. ಅದಕ್ಕೇ ಈಗ್ಲೇ ಹೀಗೆಯೇ ಹೋಗಿ ಬಿಡು.
ನಿನ್ನ ಕೊನೆಗಾಲದಲ್ಲಿ ಹತ್ತಿರವಿದ್ದ ಗೆಳೆಯರು ನಾವು ಎಂಬ ಅಭಿಮಾನವಾದರೂ ಇರುತ್ತೆ!’

‘ಲೇ, ಏನೋ ಶ್ಯಾಮೂ ಇವತ್ತೋ ನಾಳೇನೋ ಹೋಗ್ತಿಯ ಅನ್ನೋ ಹಾಗಿದ್ದರೂ ಹೊಸ ಚಪ್ಪಲಿ ಬೇರೆ ಕೊಂಡಿದ್ದೀಯಲ್ಲೋ? ನೀನು ಹೋದ ಮೇಲೆ ಅದನ್ನು ಯಾರಿಗೂ ಕೊಡೋಕೆ ಬರೊಲ್ಲ. ಅಮೂಲ್ಯವಾದದ್ದು ಎಂದೂ ಜೋಪಾನ ಮಾಡೋ ಹಾಗೂ ಇಲ್ಲ.

ಅಂತಹ ವಸ್ತುವನ್ನು ಈಗ ಕೊಂಡಿದ್ದೀಯಲ್ಲ ಮಾರಾಯಾ?’
‘ಹೌದಲ್ವೇನೋ, ಸುಬ್ಬು. ಇದು ನನಗೆ ಹೊಳೆಯಲೇ ಇಲ್ಲ. ಹೋಗ್ಲಿ ಬಿಡು.

ನಾ ಹೋದ ಮೇಲೆ, ನನ್ನ ವೈಕುಂಠ ಸಮಾರಾಧನೆಯಲ್ಲಿ ದಾನ ಕೊಡೋವಾಗ
ಈ ಚಪ್ಪಲಿಯನ್ನು ಸುಬ್ಬೂಗೆ ಕೊಡಿ, ಎಂದು ವಿಲ್ ಬರೀತೀನಿ. ಸರೀನಾ….!?’

‘ನಿನ್ನ ಮನೆಯಲ್ಲೇ ಪ್ರಾಣ ಹೋದ್ರೆ ಚಪ್ಪಲಿ ಕೂಡ ಮನೆಯಲ್ಲೇ ಇರುತ್ತೆ. ನನಗೆ
ಕೊಟ್ಟರೂ ಕೊಡಬಹುದು? ಅದ್ರೆ ನರ್ಸಿಂಗ್ ಹೋಮ್‌ನ ‘ಐಸಿಯು’ನಲ್ಲಿದ್ದಾಗ ಹೋದ್ರೆ!
ಈ ನಿನ್ನ ಹೊಸ ಚಪ್ಪಲಿಯು ನರ್ಸಿಂಗ್ ಹೋಮ್‌ನಲ್ಲಿ ಕೆಲಸ ಮಾಡೋ ವಾಚ್‌ಮನ್‌ನ
ಪಾಲಾಗುತ್ತಲ್ಲೋ ಶ್ಯಾಮು!’

‘ಅಲ್ವೋ ಸುಬ್ಬು, ಮೊನ್ನೆ ತಾನೇ ನರ್ಸಿಂಗ್ ಹೋಮ್ನಿಂದ ಹೊರಗೆ ಬಂದಿದ್ದೀಯಾ.
ಇನ್ನೊಂದು ಸರಿ ಹಾರ್ಟ್ ಅಟ್ಯಾಕ್ ಆದ್ರೆ ಉಳಿಯೋದು ಕಷ್ಟ ಎಂದಿದ್ದಾರೆ. ಹಾಗಾಗಿ
ನನಗಿಂತ ಮುಂಚೆ ನೀನೇ ಹೋಗಿ ಈ ನಿನ್ನ ವಾಕಿಂಗ್ ಸ್ಟಿಕ್ ನನಗೇ ಸಿಗಬಹುದೇನೋ?
ಅಂತದ್ದರಲ್ಲಿ ನನ್ನ ಚಪ್ಪಲಿಯ ಮೇಲೆ ನಿನಗೇಕೋ ಕಣ್ಣು?’
‘ನೋಡು ಅದನ್ನೇ ಸ್ಮಶಾನ ವೈರಾಗ್ಯ ಅನ್ನೋದು.

‘ಐಸಿಯು’ನಲ್ಲಿದ್ದಾಗ ನಿಮ್ಮನ್ನೆಲ್ಲಾ
ನೆನಿತಿದ್ದೆ. ಮತ್ತೆ ನಿಮ್ಮನ್ನೆಲ್ಲಾ ಹೀಗೆ ನೋಡ್ತೀನೋ ಇಲ್ವೋ ಎನಿಸಿತ್ತು. ಹೋಗ್ಬಿಡ್ತೀನಿ
ಅನ್ನೋ ಭಯವಲ್ಲ! ನಿಮಗೆ ನಾನು ಹೋಗಿದ್ದು ಗೊತ್ತಾಗುತ್ತೋ ಇಲ್ವೋ ಅನ್ನೋ ಭಯ.

ಅಂತೂ ಮತ್ತೆ ಇಲ್ಲಿಗೆ ಬರೋ ಹಾಗಾಯ್ತು. ನಮ್ ಮನೆಯಲ್ಲಿ ಪಾರ್ಕ್‌ಗೆ ಹೋಗಬೇಡ.
ಮತ್ತೆಲ್ಲಾದರೂ ಬಿದ್ರೆ ಯಾರು ಬರ‌್ತಾರೆ ಅಂತ ಅಡ್ಡಗಾಲು ಹಾಕಿದ್ರು. ಅವರಿಗೇನು ಗೊತ್ತು
ನಮ್ಮ ಗೆಳೆತನ!

ನಾವೆಲ್ಲರೂ ‘ಹುಟ್ಟೇ’ ಇಲ್ಲದ ದೋಣಿಯಲ್ಲಿ ಪಯಣಿಸೋರು ಅನ್ನೋದು.

ಅದೂ ಅಲ್ಲದೇ ನೀವ್ಯಾರು ನನ್ನ ಮನೇನ ನೋಡಿಲ್ಲ. ನನ್ನ ಮೊಬೈಲ್‌ನಲ್ಲಿ ಪಾರ್ಕ್ ಫ್ರೆಂಡ್ಸ್-ಒನ್ ಟೂ ತ್ರೀ. ಅಂತಾ ನಿಮ್ಮೆಲ್ಲರ ಮೊಬೈಲ್ ನಂಬರನ್ನೂ ಸೇವ್ ಮಾಡಿದ್ದೀನಿ. ಆದ್ರೆ ನಾನು ಹೋದ ಮೇಲೆ ನನ್ನ ಫೋನ್‌ನ ಯಾರು ಮುಟ್ತಾರೆ!
ಯಾರು ತಾನೆ ನಿಮಗೆಲ್ಲಾ ಫೋನ್ ಮಾಡಿ ತಿಳಿಸ್ತಾರೆ ಹೇಳು? ಹಾಗಾಗಿ ನಾನೇ ಇಲ್ಲಿಗೆ
ಒಂದು ಬಾರಿ ಬಂದು ನಿಮ್ಮನ್ನೆಲ್ಲಾ ನೋಡಿ ಹೋದರೆ ಸಾಕು ಎಂದುಕೊಂಡು
ಹಟ ಮಾಡಿ ಬಂದೆ.’ ‘ಲೇ, ನಿಮಗೆ ಗೊತ್ತಾಯ್ತಾ? ಕೊನೆ ಬೀದಿಯ ರಾಮಣ್ಣ ರಾತ್ರಿ
ಮಲಗಿದ್ದೋನು ಬೆಳಗ್ಗೆ ಏಳಲೇ ಇಲ್ವಂತೆ! ಅದೂ ಅಲ್ದೇ ಅವರ ಹಳ್ಳಿಯ ತೋಟದಲ್ಲೇ
ಮಣ್ಣು ಮಾಡೋಕೆ ಅಂತ ಯಾರಿಗೂ ಹೇಳ್ದೇ ಬೆಳಗ್ಗೇನೆ ತೊಗೊಂಡು ಹೋದರಂತೆ.

ಅವರ ಬೀದಿಯಲ್ಲಿ ಹಾಕಿದ್ದ ಫ್ಲೆಕ್ಸ್ ಬೋರ್ಡ್ ನೋಡಿಯೇ ನನಗೆ ತಿಳಿದದ್ದು’ ಎಂದು
ಹೇಳಿ ಮೆಲ್ಲಗೆ ನಿಟ್ಟುಸಿರು ಬಿಟ್ಟರು ಸೂರಪ್ಪನವರು.
‘ಅವತ್ತಿನ ಹಿಂದಿನ ಸಂಜೆ ನಾನೇ ಅವನನ್ನು ಮನೆಯ ಮೆಟ್ಟಿಲು ಹತ್ತಿಸಿ ಬಿಟ್ಟು ಹೋಗಿದ್ದೀನಿ. ನನಗೂ ಹೇಳಿಲ್ಲವಲ್ಲ. ಮಕ್ಕಳಿಗೆ ಅವರ ಅಪ್ಪನೇ ಭಾರ. ಅಂತದ್ರಲ್ಲಿ
ಅವರ ಅಪ್ಪನ ಫ್ರೆಂಡ್ಸ್‌ಗಳೆಲ್ಲ ಅವರಿಗ್ಯಾಕೆ ಬೇಕು! ಅವರಿಗೆ ಸಾವಿನ ಸುದ್ದಿಯನ್ನು ತಿಳಿಸುವ
ವ್ಯವಧಾನವೂ ಇರೊಲ್ಲ.

ಅದ್ಸರಿ ಸೂರಪ್ಪಾ, ನಿನ್ನ ಫ್ಲೆಕ್ಸ್ ಯಾವಾಗಲೋ ಬೀಳೋದು?’
ಎಂದು ಒಂಥರಾ ನೋವಲ್ಲಿ ನಕ್ಕಿದ್ದರು ತಿಮ್ಮಪ್ಪಯ್ಯನವರು! ‘ಆ ಮಾತಿಗೆ ಅಷ್ಟೇ ಸರಳವಾಗಿ, ನೇರವಾಗಿ ನಿನ್ನ ಫ್ಲೆಕ್ಸ್ ಬಿದ್ದ ಮೇಲೆ ಕಣೋ ತಿಮ್ಮಾ!’ ಎಂದದ್ದಕ್ಕೆ ಎಲ್ಲರೂ ಒಮ್ಮೆಲೆ ‘ಗೊಳ್’ ಎಂದು ನೋವೇ ಇಲ್ಲದಂತೆ ಮುಕ್ತವಾಗಿ ನಕ್ಕಿದ್ದರು.

ಇಲ್ಲಿನ ಎಲ್ಲಾ ತಮಾಷೆಯು ತಮಾಷೆಯಂತೆ ಕಂಡರೂ ಅಲ್ಲಿದ್ದವರೆಲ್ಲರ ಹಣ್ಣಾದ ಬದುಕಿನ ಮಾಗಿದ ನೋವು ನಗುವಾಗಿ ಹರಿದು ಬರುತ್ತಿತ್ತು.
‘ಲೇ ಸಾಹಿತಿ, ಶಿವ್ಯಾ ನಿನ್ನ ಭಾಷಾಂತರದ ಬುಕ್ ಪ್ರಿಂಟ್ ಆಯ್ತೋ ಇಲ್ವೋ? ಅದು
ಮುಗಿದು ಕಾಪಿ ಹೊರಗೆ ಬರೋವರೆಗೂ ಹೇಗಾದ್ರೂ ಪ್ರಾಣ ಗಟ್ಟಿಯಾಗಿ ಹಿಡಿದಿಡು.
ಹಾಗೇನಾದ್ರೂ ಅಷ್ಟರ ಒಳಗೆ ಪ್ರಾಣ ಹಾರಿ ಹೋದ್ರೆ ಪುಸ್ತಕದ ಕಾಪಿ ನಮ್ಮವರೆಗೂ
ಬರೊಲ್ಲ.

ಅದಕ್ಕೊಸ್ಕರವಾದರೂ ಪಬ್ಲಿಷರ್‌ಗೆ ಹೇಳು, ಬೇಗ ಮುಗಿಸಿ ಕೊಡಿ ಅಂತಾ!’
‘ಚಿದೂ ನೀನು ಹೇಳಿದ್ದು ಸರಿಯಾಗಿದೆ. ನಾನೂ ಅದನ್ನೇ ಯೋಚಿಸ್ತಿದ್ದೆ. ಪ್ರೂಫ್ ಹಾಕ್ತಾ ಇದ್ದೀನಲ್ಲ ಅದು ಮುಗಿದರೆ ಸಾಕು. ಪ್ರಿಂಟ್ ಆಗೋವರೆಗೂ ಕಾಯೋವಷ್ಟಿಲ್ಲ. ಅಷ್ಟರ ಒಳಗೇ ಹೋದ್ರೆ ಕರೆಕ್ಷನ್ ಹಾಕದೆಯೇ ಪ್ರಿಂಟ್ ಮಾಡ್ಬಿಡ್ತಾರೆ ಅನ್ನೋ ಭಯವಿದೆ. ಹಾಗಾಗಿ ಬೆನ್ನು, ಕುತ್ತಿಗೆ ನೋವು ಬಂದರೂ
ಎಡ ಬಿಡದೇ ‘ವರ್ಡ್ ಟು ವರ್ಡ್’ ಕರೆಕ್ಷನ್ ಹಾಕ್ತಿದ್ದೀನಿ. ಈ ವಿಷಯದಲ್ಲಿ ಯಾರನ್ನು
ನಂಬೋ ಹಾಗಿಲ್ಲ. ನಾನು ಭಾಷಾಂತರ ಮಾಡೋವಾಗ ಒಂದೊಂದು ಪದವನ್ನೂ
ಹುಡುಕಿ, ಕೆದಕಿ ‘ಸೂಟೆಬಲ್ ವರ್ಡ್’ ಅನ್ನು ಹಾಕಿದ್ದೇನೆ. ಹಾಗೇನಾದ್ರೂ ತಪ್ಪಾದ್ರೆ
ತುಂಬಾ ನೋವಾಗುತ್ತೆ ಅನ್ನೋದೇ ನನ್ನ ಕಾಳಜಿಗೆ ಕಾರಣ.’

‘ನೀನು ಬಿಡಪ್ಪಾ, ಭಾವಜೀವಿ ನೋವು, ದುಃಖ ದುಮ್ಮಾನವನ್ನು ಕವನ, ಕತೆ ಬರೆದು ದಾಖಲೆ ಮಾಡ್ತೀಯ. ನಮಗೆ ಅದೆಲ್ಲ ಬರಲ್ಲ.’

ಹೀಗೆ ಸಾವಿನ ಅಂಚಲ್ಲೂ ಹಾಸ್ಯವನ್ನು ಸ್ಫುರಿಸುತ್ತಾ ಸಾವನ್ನೂ ಉತ್ಸಾಹದಿಂದ,
ಉಲ್ಲಾಸದಿಂದ ಸ್ವೀಕರಿಸಲು ಸಿದ್ಧರಾದವರು.
ತಮ್ಮದೇ ವಯೋಮಾನದ ಗುಂಪಿಂದ ಹೊರ ಬಂದ ನಂತರ ಮೆದುವಾಗ್ತಾರೆ. ಮೂಡಿಯಾಗ್ತಾರೆ. ಶಾಂತಚಿತ್ತರಾಗ್ತಾರೆ.
ಎಲ್ಲರೂ ನಕ್ಕರೂ ತಾವು ನಗದೇ ಮುಖವನ್ನು ಮುಖವಾಡವಾಗಿಸುತ್ತಾರೆ. ಒಳಗಿನ ನೋವನ್ನು ತೋರ್ಪಡಿಸದೇ ಮ್ಲಾನರಾಗ್ತಾರೆ. ಎಲ್ಲಿ, ಯಾವಾಗ, ಎಷ್ಟು ಬೇಕೋ ಅಷ್ಟೇ ಪ್ರತಿಕ್ರಿಯೆ ಕೊಡುತ್ತಾ ಅಂತರ್‌ಮುಖಿಯಾಗಿರ‌್ತಾರೆ.

ಇಂತಹವರಿಗೆ ಬೇಕಾದ್ದು ಅನುಕಂಪವಲ್ಲ. ಆತ್ಮೀಯತೆ, ನಾವು ನಿಮ್ಮೊಂದಿಗೆ ಇದ್ದೇವೆ
ಎನ್ನುವ ಭಾವ. ನಮ್ಮಂತಹ ಕಿರಿಯರ ಜೀವನೋತ್ಸವದಲ್ಲಿ ನಿಮ್ಮದೂ ಪ್ರಮುಖ
ಪಾತ್ರವಿದೆ ಎಂದು ಆಗಾಗ ಖಾತ್ರಿಪಡಿಸಬೇಕಿದೆ.
ಅವರ ಅನುಭವವನ್ನು ಹಂಚಿಕೊಳ್ಳುವ ಮನಸ್ಥಿತಿ ಬೇಕಿದೆ. ಅವರು ನಡುರಾತ್ರೀಲಿ ಎದ್ದು ಓಡಾಡುವಾಗೆಲ್ಲಾ ನಾವೂ ಎದ್ದಿದ್ದೇವೆ
ಎಂದು ಪ್ರತಿಕ್ರಿಯಿಸುವುದು ಬೇಕಿದೆ?

ತುಂಕೂರ್ ಸಂಕೇತ್
(ಈ ಹಿಂದೆ ಕನ್ನಡಪ್ರಭದಲ್ಲಿ ಪ್ರಕಟಗೊಂಡ ಲೇಖನ)

ಚಿತ್ರಕೃಪೆ – ಮೇಗರವಳ್ಳಿ ಸುಬ್ರಹ್ಮಣ್ಯ

Related post

Leave a Reply

Your email address will not be published. Required fields are marked *