ಜೀವರಕ್ಷಕ ಓಝೋನ್ ಪದರ

ಜೀವರಕ್ಷಕ ಓಝೋನ್ ಪದರ

ನಮ್ಮ ಭೂಮಿಯ ಮೇಲಿನ ವಾಯುಮಂಡಲದಲ್ಲಿನ ಭೂರಕ್ಷಕ ಓಜೋನ್ ಪದರವು ದಿನೇ ದಿನೇ ಹಾಳಾಗುತ್ತಿರುವುದು ಎಲ್ಲರಿಗು ತಿಳಿದಿರುವ ಕಹಿ ಸತ್ಯ. ಈ ನಿಟ್ಟಿನಲ್ಲಿ ಓಜೋನ್ ಪದರದ ಬಗ್ಗೆ ಅದರ ಮಹತ್ವ ಹಾಗು ಅದರ ರಕ್ಷಣೆಯ ಬಗ್ಗೆ ತಿಳಿಯೋಣ.

ಓಝೋನ್ (O3) ಅಥವಾ ಟ್ರಿಯೊಕ್ಸಿಝೇನ್ ಎಂದು ಕರೆಯಲ್ಪಡುವ ಈ ಅನಿಲವು ಮೂರು ಆಮ್ಲಜನಕ ಪರಮಾಣುಗಳನ್ನು ಒಳಗೊಂಡ ಅಣುವಾಗಿದೆ. ಆಮ್ಲಜನಕದ ಅಣುಗಳು ಪರಮಾಣು ಆಮ್ಲಜನಕದ ಎರಡು ವಿಭಿನ್ನ ಶಕ್ತಿಯ ಮಟ್ಟಗಳಾಗಿ ವಿಭಜನೆಗೊಳ್ಳಲು ಸಿದ್ಧಗೊಂಡಾಗ ಓಝೋನ್ ರೂಪುಗೊಳ್ಳುತ್ತದೆ. ಅದೇ ರೀತಿ ವಿವಿಧ ಪರಮಾಣುಗಳ ನಡುವಿನ ಘರ್ಷಣೆಯೂ ಓಝೋನ್ ಅನಿಲದ ನಿರ್ಮಾಣಕ್ಕೆ ಕಾರಣ. ಆದ್ದರಿಂದ, ಇದು ಆಮ್ಲಜನಕದ ಅತ್ಯಂತ ಸಕ್ರಿಯ ರೂಪವಾಗಿದೆ.

ಓಝೋನ್ ಅನಿಲವು ವಾಯುಮಂಡಲದಲ್ಲಿದ್ದು, ಅದು ಭೂಮಿಯ ಮೇಲ್ಮೈನಿಂದ 10 ಕಿ.ಮೀ ನಿಂದ 50 ಕಿ.ಮೀ ಮಧ್ಯದ ಓಝೋನ್ ಪದರ ಎಂದೂ ಕರೆಯಲ್ಪಡುವ ಪ್ರದೇಶದಲ್ಲಿದೆ. ಓಝೋನ್ ಪದರ ಅಥವಾ ಅನಿಲವು ಸೂರ್ಯನಿಂದ ಹೊರಬರುವ ನೇರಳಾತೀತ ಕಿರಣಗಳು ಎಂದು ಕರೆಯಲ್ಪಡುವ, ಅಥವಾ ನೇರಳಾತೀತ ಬೆಳಕಿನ ಅಲ್ಪ ತರಂಗಾಂತರಗಳಲ್ಲಿ (320 tm ಗಿಂತ ಕಡಿಮೆ) ಅಡಗಿರುವ ಫೋಟಾನುಗಳನ್ನು ಈ ಪದರ ಅಥವಾ ಅನಿಲವು ತಡೆಯುತ್ತದೆ. ಈ ನೇರಳಾತೀತ ಕಿರಣಗಳನ್ನು ತಡೆಯದಿದ್ದರೆ ಭೂಮಿಯ ಮೇಲಿನ ಜೀವರಾಶಿಗಳ ಬದುಕಿಗೆ ಕಂಟಕವಾಗುತ್ತದೆ. ಮನುಷ್ಯನ ದೇಹದಲ್ಲಿ ‘ಡಿ’ ಜೀವಸತ್ವದ ಉತ್ಪಾದನೆಗೆ ಇದೇ ತರಂಗಗಳು ಸಹಾಯ ಮಾಡುತ್ತವೆ. ಆಮ್ಲಜನಕದ ಜೊತೆಗೆ ನೇರಳಾತೀತ ಕಿರಣಗಳು ರಾಸಾಯನಿಕಕ್ರಿಯೆ ನಡೆಸುವುದರಿಂದ ವಾತಾವರಣದಲ್ಲಿ ಓಝೋನ್ ಸಹಜವಾಗಿ ಉತ್ಪಾದನೆಯಾಗುತ್ತದೆ.

ಆಮ್ಲಜನಕಕ್ಕಿಂತ ತೀರಾ ಕಡಿಮೆ ಸ್ಥಿರವಾಗಿರುವ ಆಮ್ಲಜನಕದ ಒಂದು ವಿಭಿನ್ನ ರೂಪವೇ ಓಝೋನ್ ಎನ್ನಬಹುದು. ಭೂಮಿಯ ಕೆಳ ವಾತಾವರಣದಲ್ಲಿ ಇರುವ ಓಝೋನ್ ವಾಯು ಮಾಲಿನ್ಯಕಾರಕವಾಗಿದ್ದು, ಇದು ಇಲ್ಲಿನ ಜೀವಿಗಳ ಉಸಿರಾಟದ ವ್ಯವಸ್ಥೆಯ ಮೇಲೆ ಅಪಾಯಕಾರಿ ಪರಿಣಾಮ ಬೀರಿ ಸೂಕ್ಷ್ಮವಾದ ಸಸ್ಯಗಳನ್ನು ಲ್ಯಾಟೆಕ್ಸ್, ಸೂಕ್ಷ್ಮ ಪ್ಲಾಸ್ಟಿಕ್‌ಗಳನ್ನು ಈ ಅನಿಲವು ಸುಟ್ಟುಬಿಡುವಷ್ಟು ಪ್ರಖರವಾಗಿರುತ್ತದೆ. ಆದರೆ ವಾತಾವರಣದ ಮೇಲ್ಭಾಗದಲ್ಲಿ ಇರುವ ಓಝೋನ್ (ಅನಿಲ) ಪದರವು ಭೂಮಿಗೆ ಉಪಯೋಗಿಯಾಗಿದ್ದು, ಹಾನಿಕಾರಕ ನೇರಳಾತೀತ ಕಿರಣಗಳು ಭೂಮಿಯ ಮೇಲ್ಮೈ ತಲುಪದಂತೆ ತಡೆಯುತ್ತದೆ. ಭೂಮಿಯ ಸಾಮಾನ್ಯ ವಾತಾವರಣದಲ್ಲೂ ಅತ್ಯಂತ ಕಡಿಮೆ ಸಾಂದ್ರತೆಯ ಪ್ರಮಾಣದಲ್ಲಿ ಓಝೋನ್ ಅನಿಲದ ಅಸ್ತಿತ್ವವಿದ್ದು, ಇದು ಕೈಗಾರಿಕೆ ಮತ್ತಿತರ ಉದ್ದೇಶಗಳಿಗೆ ಬಳಸಲ್ಪಡುತ್ತದೆ.

ಓಝೋನ್ ಆಮ್ಲಜನಕದ ಒಂದು ರೂಪವಾಗಿದ್ದು, ಇದು ವಾತಾವರಣದ ಒಂದು ಬಾಗವೇ ಆಗಿದೆ. ಭೂಮಂಡಲದ 30 – 35 ಕಿ.ಮೀ ಎತ್ತರದಲ್ಲಿ ಓಝೋನ್ ಪದರವಿದ್ದು, ಇದು ಭೂಮಿಯ ಜೀವರಕ್ಷಕವಾಗಿ ಕೆಲಸ ಮಾಡುವುದರಿಂದ ಇದನ್ನು 1839 ರಲ್ಲಿ ನೈಸರ್ಗಿಕ ಅನಿಲವೆಂದು ಘೋಷಿಸಲಾಗಿದೆ. ಸೂರ್ಯನಿಂದ ಬರುವ ನೇರಳಾತೀತ ವಿಕಿರಣವು ಓಝೋನ್ ಪದರಕ್ಕೆ ಢಿಕ್ಕಿಯಾದಾಗ ಅದು ಪರಮಾಣು ಆಮ್ಲಜನಕ ಮತ್ತು ಸಾಮಾನ್ಯ ಆಮ್ಲಜನಕವಾಗಿ ವಿಭಜನೆಯಾಗುತ್ತದೆ. ಅದೇ ರೀತಿ ವಾತಾವರಣದಲ್ಲಿ ಸಾಮಾನ್ಯ ಆಮ್ಲಜನಕ ಮತ್ತು ಪರಮಾಣು ಆಮ್ಲಜನಕ ಮತ್ತೆ ಸಂಯೋಗಗೊಂಡಾಗ ಮತ್ತೆ ಓಝೋನ್ ಅಣುವಾಗುತ್ತದೆ. ಈ ಪ್ರತಿಕ್ರಿಯೆಗಳು ವಾತಾವರಣದಲ್ಲಿ ಸದಾ ನಡೆಯುತ್ತಿದ್ದು, ಓಝೋನ್ ಮತ್ತು ಆಮ್ಲಜನಕ ಸಹಬಾಳ್ವೆ ನಡೆಸುತ್ತವೆ.

ಓಝೋನ್ ಎನ್ನುವ ವಿಭಿನ್ನವಾದ ರಾಸಾಯನಿಕ ಸಂಯುಕ್ತವನ್ನು “ಕ್ರಿಸ್ಟಿಯನ್ ಫ್ರೆಡ್ರಿಕ್ ಸ್ಕಾನ್ಬೀನ್” ಎಂಬಾತ 1840 ರಲ್ಲಿ ಕಂಡುಹಿಡಿದನು. ವೇಗದ ಬಿರುಗಾಳಿಗಳಲ್ಲಿ ಕಂಡುಬರುವ ವಿಲಕ್ಷಣ ವಾಸನೆಗೆ ಉಲ್ಲೇಖಿಸುವ ‘ಓಝೀನ್’ (ವಾಸನೆ ಬೀರುವುದು) ಎಂಬ ಗ್ರೀಕ್ ಹೆಸರನ್ನು ಆತ ಓಝೋನ್ಗೆ ಇರಿಸಿದ. ಓಝೋನ್ಗೆ 1865 ರಲ್ಲಿ “ಜಾಕ್ವೆಸ್-ಲೂಯಿಸ್ ಸೋರೆಟ್” ಎಂಬಾತ O3 ಎಂಬ ಸೂತ್ರವನ್ನು ಬರೆದನು. ಭೌತಿಕವಾಗಿ ಓಝೋನ್ ನಸುನೀಲಿ ಬಣ್ಣದ ಅನಿಲವಾಗಿದ್ದು, ನೀರಿನಲ್ಲಿ ತುಸು ಕರಗುವ ಗುಣ ಹೊಂದಿರುತ್ತದೆ. ಇದು ಇಂಗಾಲದ ಟೆಟ್ರಾಕ್ಲೋರೈಡ್ ದ್ರಾವಕಗಳಲ್ಲಿ ಹೆಚ್ಚು ಕರಗಿ ನೀಲಿ ಬಣ್ಣದ ದ್ರಾವಣವಾಗಿ ಗೋಚರಿಸುತ್ತದೆ. –112 ಲಿ ಉಷ್ಣತೆಯಲ್ಲಿ ಇದು ಘನೀಕರಣಗೊಂಡು ಕಡುನೀಲಿ ದ್ರವವಾಗುತ್ತದೆ. ಸಾಂದ್ರೀಕೃತ ಅನಿಲ ರೂಪದ ಓಝೋನ್ ಮತ್ತು ದ್ರವ ಓಝೋನ್‌ಗಳು ಸ್ಪೋಟಿಸುವ ಗುಣವನ್ನು ಹೊಂದಿರುವುದರಿಂದ ಇದನ್ನು ಕುದಿಯುವ ಬಿಂದುವಿನವರೆಗೆ (100ಲಿ) ಬಿಸಿಯಾಗಲು ಅವಕಾಶ ನೀಡುವುದು ಅಪಾಯಕರ.

ಗಾಳಿಯಲ್ಲಿ ಸುಮಾರು ೦.೦೧ ನಷ್ಟು ಪ್ರಮಾಣದ ಓಝೋನನ್ನು ಹೆಚ್ಚಿನವರು ಪತ್ತೆಹಚ್ಚಬಹುದಾಗಿದ್ದು, ಅದು ಕ್ಲೋರೀನ್‌ ಅನ್ನು ಹೋಲುವ ವಿಶಿಷ್ಟ ವಾಸನೆ ಹೊಂದಿರುತ್ತದೆ. ೦.೧ ರಿಂದ ೧ ಪ್ರಮಾಣದ ಓಝೋನ್‌ನ್ನು ಮನುಷ್ಯನ ದೇಹವು ಸಹಿಸಬಹುದಾಗಿದ್ದು, ಇದರಿಂದಾಗಿ ಮನುಷ್ಯನಿಗೆ ತಲೆನೋವು, ಉರಿಗಣ್ಣು ಮತ್ತು ಶ್ವಾಸನಾಳಕ್ಕೆ ತುಸು ಕಿರಿಕಿರಿ ಉಂಟುಮಾಡುತ್ತದೆ. ಗಾಳಿಯಲ್ಲಿರುವ ತೀರಾ ಕಡಿಮೆ ಸಾಂದ್ರತೆಯ ಓಝೋನ್ ಶ್ವಾಸಕೋಶಕ್ಕೆ ಅತ್ಯಂತ ಮಾರಕವಾಗಿದೆ. ಓಝೋನ್ ಪದರವನ್ನು ಭೂಮಿಯ ಸಕಲ ಜೀವ ರಾಶಿಗಳ ಸಂರಕ್ಷಕವೆಂದೇ ಕರೆಯಲಾಗುತ್ತದೆ. ಓಝೋನ್ ಪದರವು ಸೂರ್ಯನಿಂದ ಹೊರಸೂಸಲ್ಪಡುವ ನೇರಳಾತೀತ ಕಿರಣಗಳು (ಅಲ್ಟ್ರಾವೈಲೆಟ್ ಕಿರಣ) ಭೂಮಿಗೆ ಸೋಕದಂತೆ ಫಿಲ್ಟರ್’ನಂತೆ ತಡೆದು ಜೀವರಾಶಿಗಳನ್ನು ರಕ್ಷಿಸುತ್ತದೆ. ಇದು 280 tm ನಿಂದ 320 tm ನಡುವಿನ ತರಂಗಾಂತರಂಗದ ಸೂರ್ಯನ ಕಿರಣಗಳನ್ನು ಹೀರಿಕೊಳ್ಳುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಪರಿಸರ ನಾಶದಿಂದ ಓಝೋನ್ ಪದರ ಹಾನಿಗೀಡಾಗಿ ರಂದ್ರಗಳಾಗಿದ್ದು, ದಿನೇ ದಿನೇ ಈ ರಂದ್ರ ದೊಡ್ಡದಾಗುತ್ತಿದೆ. ವಾತಾವರಣದಲ್ಲಿ ಇಂಗಾಲದ ಪ್ರಮಾಣ ಹೆಚ್ಚುತ್ತಾ ಹೋದಂತೆ ಓಝೋನ್ ಪದರವು ಸವೆಯುತ್ತಾ ಹೋಗುತ್ತದೆ. ಓಝೋನ್ ಪದರವನ್ನು ಸಂರಕ್ಷಿಸುವ ಉದ್ದೇಶದಿಂದ ಪ್ರತೀ ವರ್ಷವೂ ಸೆಪ್ಟೆಂಬರ್ 16ನ್ನು ‘ವಿಶ್ವ ಓಝೋನ್ ದಿನ’ ವೆಂದು ಆಚರಿಸಲಾಗುತ್ತದೆ.

ವಾತಾವರಣದಲ್ಲಿ ಇರುವ ಓಝೋನ್ ಪದರವು ತೀರಾ ಹಾನಿಗೀಡಾಗಿದ್ದು, ಇದನ್ನು ಸಂರಕ್ಷಿಸಲು ಪ್ರಾಪಂಚಿಕವಾಗಿ ಹಲವು ಪ್ರಯತ್ನಗಳು ನಡೆದಿದ್ದು, ಅವುಗಳು ಯಶಸ್ವಿಯಾಗಿಲ್ಲ. ಓಝೊನ್ ಪದರವನ್ನು ಹಾಳು ಮಾಡುವ ವಸ್ತುಗಳ ಬಳಕೆಯನ್ನು ನಿಯಂತ್ರಿಸಲು 1987 ರಲ್ಲಿ ವಿಯೆನ್ನಾದಲ್ಲಿ ವಿಶ್ವಸಂಸ್ಥೆಯ 45 ಸದಸ್ಯ ರಾಷ್ಟ್ರಗಳು ಮಾಡದಂತೆ ತಡೆಯಲು ‘ಮಾಂಟ್ರಿಯಲ್ ಪ್ರೊಟೋಕಾಲ್’ ಗೆ ಸಹಿ ಮಾಡಿದವು. ಓಝೋನ್ ಪದರಕ್ಕೆ ಹಾನಿ ಮಾಡುವ ವಸ್ತುಗಳ ಮತ್ತು ಅನಿಗಳ ಉತ್ಪಾದನೆ ಹಾಗೂ ಬಳಕೆಯನ್ನು ತಡೆಯುವುದು ಈ ಪ್ರೊಟೋಕಾಲ್‌ ನ ಉದ್ದೇಶವಾಗಿದೆ. ಶೀತಲೀಕರಣ ಯಂತ್ರಗಳಲ್ಲಿ ಬಳಸುವ ಕ್ಲೋರೋಫ್ಲೋರೋ ಇಂಗಾಲದಂತ ರಾಸಾಯನಿಕಗಳ ಅತಿಯಾದ ಬಳಕೆಯಿಂದ ಓಝೋನ್ ತೆಳುವಾಗುತ್ತಿದ್ದು, ಇನ್ನಷ್ಟು ತೆಳುವಾಗದಂತೆ ತಡೆಯಬೇಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯ.

ವಾಹನಗಳು ಮತ್ತು ಕೈಗಾರಿಕೆಗಳು ಹೊರಸೂಸುವ ಅತಿಯಾದ ಹೊಗೆ, ಅತಿಯಾದ ಕೈಗಾರಿಕೀಕರಣ, ಕಾರ್ಖಾನೆಗಳಿಂದ ಹೊರಬರುವ ವಿಷಕಾರಿ ಅನಿಗಳು, ಕ್ಲೋರೋಫ್ಲೋರೋ ಇಂಗಾಲ, ಹೈಡ್ರೋಫ್ಲೋರೋ ಇಂಗಾಲ, ಮೀಥೇನ್, ಬ್ರೋಮೀನ್ ಮುಂತಾದ ಅನಿಲಗಳು, ಅತಿಯಾದ ಅರಣ್ಯನಾಶ, ಹವಾಮಾನ ವೈಪರೀತ್ಯ ಇವೇ ಮೊದಲಾದ ಕಾರಣಗಳಿಂದ ಓಝೋನ್ ಪದರ ತೆಳುವಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಇಂಗಾಲವನ್ನು ವಾತಾವರಣಕ್ಕೆ ಸೇರಿಸುತ್ತಿರುವುದೂ ಓಝೋನ್ ನಾಶಕ್ಕೆ ನೇರ ಕಾರಣ. ಪ್ರಾಪಂಚಿಕವಾಗಿ ಚೀನಾ 9.5, ಅಮೆರಿಕಾ 4.9, ಭಾರತ 2.5, ರಷ್ಯಾ 1.5, ಜಪಾನ್ 1.1, ಜರ್ಮನಿ 0.7 ಮತ್ತು ಸೌದಿ ಅರೇಬಿಯಾ 0.5 ಗಿಗಾ ಟನ್ ಇಂಗಾಲವನ್ನು ಪ್ರತಿ ವರ್ಷವೂ ವಾತಾವರಣಕ್ಕೆ ಹೊರಸೂಸುತ್ತಿದೆ. ಓಝೋನ್ ಪದರವನ್ನು ರಕ್ಷಿಸಿಕೊಳ್ಳಲು ಪ್ರತಿಯೊಬ್ಬರೂ ನೈಸರ್ಗಿಕ ಸಂಪನ್ಮೂಲಗಳ ಮಿತವಾದ ಬಳಕೆ, ಇಂಗಾಲದ ಹೆಜ್ಜೆಗುರುತಿನ ಪ್ರಮಾಣವನ್ನು ಕಡಿಮೆ ಮಾಡುವುದು, ಪುನರ್ಬಳಕೆ ಮಾಡಬಹುದಾದ ವಸ್ತುಗಳ ಬಳಕೆಗೆ ಹೆಚ್ಚು ಒತ್ತು ನೀಡುವಿಕೆ, ಪರಿಸರ ಸ್ನೇಹಿ ವಸ್ತುಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡುವುದು ಇವೇ ಮೊದಲಾದ ಕ್ರಮಗಳನ್ನು ಕೈಗೊಳ್ಳಬೇಕು.

ತಜ್ಞರ ಪ್ರಕಾರ ದೇಶದ ಒಟ್ಟು ಭೂಮಿಯ ಪೈಕಿ 33% ಕಾಡು ಇರಬೇಕು ಎಂಬ ನಿಯಮವಿದ್ದು, ಇಂದು ನಮ್ಮ ದೇಶದಲ್ಲಿ 10% ಕಾಡಷ್ಟೇ ಉಳಿದಿರುವುದು ದುರಂತವೇ ಸರಿ. ಓಝೋನ್ ನಮ್ಮೆಲ್ಲರ ‘ಜೀವ ರಕ್ಷಕ ಪದರ’ ಎನ್ನುವುದನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಓಝೋನ್ ಜೀವರಾಶಿಗಳ ರಕ್ಷಣೆಗಾಗಿ ಪ್ರಕೃತಿಯೇ ನೀಡಿದ ಕೊಡುಗೆ ಎಂದರೂ ತಪ್ಪಾಗದು. ಹಲವಾರು ಕಾರಣಗಳಿಂದಾಗಿ ಓಝೋನ್ ಪದರದಲ್ಲಿ ಬಲು ದೊಡ್ಡ ರಂಧ್ರವಾಗಿ ಸೂರ್ಯನ ಅತಿನೇರಳೆ ಕಿರಣಗಳು ಭೂಮಿಗೆ ಬರಲಾರಂಭಿಸಿವೆ. ಈ ರಂಧ್ರ ಹೀಗೆಯೇ ದೊಡ್ಡದಾಗುತ್ತಾ ಹೋದರೆ ಭೂಮಿಯ ಜೀವ ಸಂಕುಲಕ್ಕೇ ಅಪಾಯ ಕಾದಿದ್ದು, ಮುಂದೊಂದು ದಿನ ಭೂಮಿಯೇ ನಾಶವಾದೀತು. ಆದ್ದರಿಂದ ಓಝೋನ್ ಪದರವನ್ನು ಸಂರಕ್ಷಿಸುವ ವಿಧಾನಗಳನ್ನು ಅನುಸರಿಸುವ ಪ್ರತಿಜ್ಞೆಯನ್ನು ನಾವೆಲ್ಲರೂ ಮಾಡಲೇಬೇಕು.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ,ಕ ಜಿಲ್ಲೆ-574198
ದೂ: 9742884160

Related post

Leave a Reply

Your email address will not be published. Required fields are marked *