ಜ್ವಾಲಾಮುಖಿ
ಹಿಡಿದಿಟ್ಟ ಬಿಕ್ಕುಗಳಾಗಿ,
ಕಣ್ಣಾಲಿಯಲ್ಲಿಂಗಿದ
ಆಸೆಗಳಾಗಿ, ಬಣ್ಣಗೆಟ್ಟ,
ಕಮರಿದ ಕನಸುಗಳಾಗಿವೆ,
ಕಾಯ್ದುಕೊಳ್ಳದ ಸಂಬಂಧಗಳು!
ಸುಡುವ ಕೆಂಡವಾಗಿ,
ಒಣಹುಲ್ಲ ಮೆದೆಯಾಗಿ,
ಸುಟ್ಟು ಕರಕಲಾಗಲು
ತಾವೇ ಸಿದ್ಧವಾಗಿ ನಿಂತಿದೆ
ಕಾಯ್ದುಕೊಳ್ಳದ ಸಂಬಂಧಗಳು!
ಕಾಲದ ಬಿರಡೆಯಲ್ಲಿನ
ಬಂಧಿಗಳಾಗಿ, ಕರ್ತವ್ಯವೆಂಬ
ಗೂಟದ ಎತ್ತಿನಂತಾಗಿ,
ತಿರುಗುತ್ತ ಕಳಚುತಿದೆ
ಕಾಯ್ದುಕೊಳ್ಳದ ಸಂಬಂಧಗಳು!
ಅಂತರಾಳದ ಕುದಿವ
ಕೊಪ್ಪರಿಗೆಗೆ, ಕಳವಳದ
ಮನದ ಕಾವನಿಳಿಸುತ್ತ
ಒಳಗೊಳಗೇ ತಳಮಳಿಸಿದೆ
ಕಾಯ್ದುಕೊಳ್ಳದ ಸಂಬಂಧಗಳು!
ವೇದನೆ ಸಂವಾದವಾಗಿ,
ಮೌನ ಕರಗಿ ಮಾತಾಗಿ,
ಮನದ ಕಾವ ಆರಿಸುತ,
ನೆಮ್ಮದಿಯ ಅರಸಬೇಕಿದೆ
ಕಾಯ್ದುಕೊಂಡು ಸಂಬಂಧಗಳ!
ಶ್ರೀವಲ್ಲಿ ಮಂಜುನಾಥ