ಟಿಶ್ಯೂ ಪೇಪರ್ ಎಂಬ ಪರಿಸರ ಮಾರಕ

A cheerful roll of toilet paper with a face holding a smaller roll of toilet paper in his hand

ಟಿಶ್ಯೂ ಪೇಪರ್ ಎಂಬ ಪರಿಸರ ಮಾರಕ

ನಿಮಗೆಲ್ಲರಿಗೂ ಟಿಶ್ಯೂ ಪೇಪರ್ ಚಿರಪರಿಚಿತ ಅಲ್ಲವೇ?, ಹೋಟೆಲ್‌ಗಳಲ್ಲಿ ಊಟ ಆದ ಮೇಲೆ ಕೈ ಒರೆಸಲು, ಕಾರಿನಲ್ಲಿ ಮುಖ್ಯ ಒರೆಸಲು, ಏರ್ ಪೋರ್ಟ್ಗಳ ರೆಸ್ಟ್ ರೂಮ್‌ಗಳಲ್ಲಿ ಮುಖತೊಳೆದ ನಂತರ ಮುಖ ಒರೆಸಲು, ಶೌಚಗ್ರಹದಲ್ಲಿ, ಅಡುಗೆ ಮನೆ ಕಟ್ಟೆಯ ಮೇಲೆ ಏನಾದರೂ ಚೆಲ್ಲಿದರೆ ಒರೆಸಲು, ಬೊಂಡಾ – ಪಕೊಡಾ ದಲ್ಲಿರುವ ಎಣ್ಣೆ ಹೀರಲೆಂದು ಹೀಗೆ ಟಿಶ್ಯೂ ಪೇಪರ್‌ಗಳ ಬಳಕೆ ಇತ್ತೀಚಿನ ದಿನಗಳಲ್ಲಿ ಅಧಿಕವಾಗಿದೆ. ಇದರಿಂದ ಪರಿಸರ ಎಷ್ಟು ಹಾಳಾಗುತ್ತಿದೆ ಎಂದು ನಾವು ಯೋಚಿಸುವುದೇ ಇಲ್ಲ. ಟಿಶ್ಯೂ ಪೇಪರ್ ಬಳಸುವುದರಿಂದ ಪರಿಸರ ಹೇಗೆ ಹಾಳಾಗುತ್ತದೆ ಎಂದು ನೀವು ಯೋಚಿಸುತ್ತಿರಬಹುದು? ಅಲ್ಲೇ ಇರುವುದು ವಿಷಯ.

ಹೀಗೆ ಎಲ್ಲೆಂದರಲ್ಲಿ ಬಳಸಿ ಬಿಸಾಡುವ, ಮರು ಸಂಸ್ಕರಿಸಲಾಗ ಟಿಸ್ಯೂ ಪೇಪರ್ ಬಳಸಲು ನಾವು ಅವ್ಯಾಹತವಾಗಿ ಮರಗಳನ್ನು ಕತ್ತರಿಸುತ್ತಿದ್ದೇವೆ ಗೊತ್ತಾ? ಪೇಪರ್‌ಗಳ ಬಳಕೆಯಲ್ಲಿ ಶೇಕಡಾ 35 ಮರಗಳನ್ನು ಪೇಪರ್‌ಗಳ ತಯಾರಿಕೆಗಾಗಿ ಬಳಸಲಾಗುತ್ತದೆ. ಇದರ ಬಹುಬಾಗ ಟಿಶ್ಯೂ ಪೇಪರ್‌ಗಳ ತಯಾರಿಕೆಗೆ ಬಳಸಲಾಗುತ್ತದೆ. ಎಲ್ಲೆಂದರಲ್ಲಿ ನಾವು ಬಳಸಿ ಕಸದ ಬುಟ್ಟಿಗೆ ಹಾಕುತ್ತೇವೆ. ಹೀಗೆ ಬಳಸಿ ಬಿಸಾಕಿದ ಟಿಶ್ಯೂ ಪೇಪರ್‌ಗಳನ್ನು ಮರು ಸಂಸ್ಕರಿಸಲು ಸಾಧ್ಯವಿಲ್ಲ.

ಮೊದಮೊದಲು ಪೇಪರ್ ತಯಾರಿಸಲು ಒಣಗಿದ ಮರಗಳನ್ನು ಬಳಸಲಾಗುತ್ತಿತ್ತು. ಆದರೆ ಟಿಶ್ಯೂ ಪೇಪರ್‌ಗಳ ಬಳಕೆ ಪ್ರಾರಂಭವಾದ ಮೇಲೆ ಬೆಳೆದು ನಿಂತ ಹಸಿಯಾದ ಮರಗಳನ್ನೇ ಕತ್ತರಿಸಲಾಗುತ್ತಿದೆ. ಟಿಶ್ಯೂ ಪೇಪರ್ ಅತಿ ಮೃದುವಾಗಿರಬೇಕೆಂಬ ಕಾರಣದಿಂದ ಹೆಚ್ಚು ಹೆಚ್ಚಾಗಿ ಬೆಳೆದು ನಿಂತ ಹಸಿ ಮರಗಳನ್ನೇ ಕತ್ತರಿಸಲಾಗುತ್ತದೆ. ಪ್ರತಿದಿನ ಈ ಟಿಶ್ಯೂ ಪೇಪರ್‌ಗಳ ಉತ್ಪಾದನೆಗಾಗಿಯೇ ಸುಮಾರು 27,000 ಮರಗಳನ್ನು ಕಡಿಯಲಾಗುತ್ತದೆ. ಅಂದರೆ ಒಂದು ವರ್ಷಕ್ಕೆ ಹತ್ತಿರ ಹತ್ತಿರ ಒಂದು ಕೋಟಿ ಮರಗಳನ್ನು ಕೇವಲ ಟಿಶ್ಯೂ ಪೇಪರ್‌ಗಳ ತಯಾರಿಕೆಗಾಗಿಯೇ ಕಡಿಯುತ್ತಿದ್ದೆವೆ.

ಹೀಗೆ ದಿನಾಗಲೂ ಮರಗಳನ್ನು ಕಡಿಯುತ್ತಾ ಹೋದರೆ ಮುಂದಿನ ನೂರು ವರ್ಷಗಳಲ್ಲಿ ನಮ್ಮ ಉಳಿವಿನ ಬಗ್ಗೆಯೇ ಅನುಮಾನ ಮೂಡುತ್ತದೆ. ಪ್ರತಿ ಒಬ್ಬ ಮನುಷ್ಯನಿಗೆ ಉಸಿರಾಡಲು ಶುದ್ದ ಗಾಳಿಗಾಗಿ ೨೭ ಮರಗಳು ಬೇಕು, ಆದರೆ ಈಗ ಕಾಲ ಬದಲಾಗಿದೆ ಪ್ರತಿ 27 ಜನರಿಗೆ ಒಂದು ಮರ ಇದೆ ಎಂದರೆ ನಾವೆಂತಹ ಅಪಾಯದ ಸ್ಥಿತಿಯಲ್ಲಿ ಇದ್ದೇವೆ ಎಂದು ತಿಳಿಯುತ್ತದೆ. ಹೀಗಿ ಮರಗಳನ್ನು ಕಡಿಯುತ್ತಾ ಹೋದರೆ ಮುಂದಿನ ನೂರು ವರ್ಷಗಳಲ್ಲಿ ಶುದ್ಧ ಗಾಳಿ ಸಿಗುವುದು ಕೂಡ ದುರ್ಲಭವಾಗುತ್ತದೆ. ಹೀಗೆ ಮರಗಳನ್ನು ಕಡಿಯುತ್ತಾ ಹೋದರೆ ಇನ್ನೂ ನೂರು ವರ್ಷಗಳಲ್ಲಿ ಜೀವ ಸಂಕುಲದ ಉಳಿವಿನ ಪ್ರಶ್ನೆ, ನಮ್ಮ ಉಳಿವಿನ ಪ್ರಶ್ನೆ ಇದೆ. ಇದು ಎಚ್ಚರಿಕೆಯ ಘಂಟೆಯಲ್ಲವೇ? ಇನ್ನಾದರೂ ನಾವು ಎಚ್ಚೆತ್ತುಕೊಳ್ಳೊಣಾ.

ಅವ್ಯಾಹತ ಕಾಡು ನಾಶ ಮಾಡುತ್ತಿರುವುದು ಹವಾಮಾನ ವೈಪರಿತ್ಯಕ್ಕೆ ಕಾರಣವಾಗಿ, ವರ್ಷದಿಂದ ವರ್ಷಕ್ಕೆ ಏರುತ್ತಿರುವ ತಾಪಮಾನ, ಅತಿಯಾದ ಮಳೆಯಿಂದ ಆಗುತ್ತಿರುವ ಅನಾಹುತ, ಇದೆಲ್ಲವನ್ನು ನಾವು ನೋಡಿಯೂ ಪರಿಸರದ ಬಗ್ಗೆ ಕಾಳಜಿ ತೋರದಿದರೆ ಮುಂದಿನ ದಿನಗಳಲ್ಲಿ ದೇವರೂ ನಮ್ಮನ್ನು ಕಾಪಾಡಾಲು ಸಾಧ್ಯವಿಲ್ಲ. ನಾವೆಲ್ಲಾ ಒಂದು ಪ್ರಮಾಣ ಮಾಡೋಣ, ಈ ಟಿಶ್ಯೂ ಪೇಪರ್‌ಗಳ ಬಳಕೆಯನ್ನು ನಿಲ್ಲಿಸುವುದು ಹೇಗೆ? ಪರಿಸರ ಸಂರಕ್ಷಣೆಗೆ ನಾವು ಯಾವ ರೀತಿ ಕೈ ಜೋಡಿಸಬಹುದು? ಈ ಕೆಳಗಿನ ಸುಲಭ ಮಾರ್ಗಗಳನ್ನು ಬಳಸೋಣಾ. ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳೋಣ:

ಮಾರ್ಗ 1: ನಾವು ಅದಷ್ಟೂ ಕರವಸ್ತ್ರ ಬಳಸುವ ಅಭ್ಯಾಸ ರೂಢಿಸಿಕೊಳ್ಳೋಣಾ, ಹೊರಗೆ ಹೋದಾಗ ಕೈ ತೊಳೆದ ನಂತರ ಅಥವಾ ಮುಖತೊಳೆದ ನಂತರ ಮುಖ ಒರೆಸಲು ಟಿಶ್ಯೂ ಪೇಪರ್ ಬದಲು ಕರವಸ್ತ್ರವನ್ನು ಬಳಸಬಹುದಲ್ಲವೇ? ನಮ್ಮ ಪ್ಯಾಂಟ್ ಜೋಬಿನಲ್ಲಿ ಹಾಗೂ ವ್ಯಾನಿಟಿ ಬಾಗಿನಲ್ಲಿ ಮೊಬೈಲ್ ಹಿಡಿಸುವಷ್ಟು ಜಾಗವಿದೆ ಎಂದರೆ ಕರವಸ್ತ್ರವಿಡಬಹುದಾದಷ್ಟು ಜಾಗವಿದೆ ಅಲ್ಲವೇ? ಕರವಸ್ತ್ರ ಬಳಸುವುದರಿಂದ ಅನಗತ್ಯ ಟಿಶ್ಯೂ ಪೇಪರ್ ಬಳಸುವುದನ್ನು ನಿಲ್ಲಿಸಬಹುದು.

ಮಾರ್ಗ 2: ಮೂರ್ನಾಲ್ಕು ಚಿಕ್ಕ ಚಿಕ್ಕ ಟೊವೆಲ್‌ಗಳನ್ನು ಖರೀದಿಸಿ ಅದನ್ನು ನಾವು ಎಲ್ಲೆಲ್ಲಿ ಟಿಶ್ಯೂ ಬಳಸುತ್ತೇವೋ ಅಲ್ಲೆಲ್ಲ ಇಡಿ,
ಉದಾಹರಣೆಗೆ ಕಾರ್, ಆಫೀಸಿನ ಟೇಬಲ್, ನಿಮ್ಮ ಬ್ಯಾಗ್, ಕೈ ತೊಳೆಯುವ ಸಿಂಕ್ ಮುಂತಾದ ಕಡೆ ಇಡಿ. ಇದರಿಂದ ಅನಗತ್ಯ ಟಿಶ್ಯೂ ಬಳಸುವುದನ್ನು ನಿಲ್ಲಿಸಬಹುದು.

ಮಾರ್ಗ 3: ಅಗತ್ಯ ಇದ್ದರೆ ಮಾತ್ರ ಬೇರೆ ಆಯ್ಕೆಗಳಿಲ್ಲದಾಗ ಮಾತ್ರ ಟಿಶ್ಯೂ ಬಳಸಿ, ಅದು ನಾಲ್ಕು ಬಳಸುವ ಜಾಗದಲ್ಲಿ ಒಂದು ಬಳಸಿ.

ಮಾರ್ಗ 4: ಊಟಕ್ಕೆ ಮೊದಲು ಹಾಗೂ ನಂತರ ಕೈತೊಳೆಯುವ ಅಭ್ಯಾಸ ಇಟ್ಟುಕೊಳ್ಳಿ. ಕೆಲವರು ಟಿಶ್ಯೂ ಬಳಸುತ್ತಾರೆ. ಅನಾದಿಕಾಲದಿಂದಲೂ ಕೈತೊಳೆಯುವ ಪದ್ದತಿಯೇ ಇದೆ ಅಲ್ಲವೇ. ಕಳೆದ ಹದಿನೈದು ವರ್ಷಗಳಿಂದ ಈಚೆಗೆ ಈ ಟಿಶ್ಯೂ ಸಂಸ್ಕೃತಿ ಆವರಿಸಿದೆ. ನಿಮಗೆ ಗೊತ್ತೆ ಒಂದು ರೋಲ್ ಟಾಯ್ಲೆಟ್ ರೋಲ್ ಟಿಶ್ಯೂ ಮಾಡಲು 37 ಸಾವಿರ ಗ್ಯಾಲನ್ ನೀರಿನ ಉಪಯೋಗವಾಗುತ್ತದೆ ಗೊತ್ತೆ? ಇಲ್ಲಿ ನೀರು ವ್ಯರ್ಥ, ಮರವೂ ವ್ಯರ್ಥ!

ಮಾರ್ಗ 5: ನಿಮ್ಮ ಮನೆಯಲ್ಲಿ ಸದಸ್ಯರಿಗೆ ಈ ಟಿಶ್ಯೂ ಪೇಪರ್ ಬಳಸುವ ಅಭ್ಯಾಸವಿದ್ದರೆ ಅವರಿಗೆ ಇದರಿಂದ ಪರಿಸರದ ಮೇಲಾಗುವ ಪರಿಣಾಮದ ಬಗ್ಗೆ ತಿಳಿಸಿ, ಅನಗತ್ಯವಾಗಿ ಈ ಟಿಶ್ಯೂ ಪೇಪರ್ ಬಳಸದಂತೆ ತಿಳಿಸಿ. ಚಿಕ್ಕ ಮಕ್ಕಳಿಗೆ ಪರಿಸರದ ಬಗ್ಗೆ, ಜೀವಿಗಳ ಬಗ್ಗೆ ಕೂತುಹಲ ಜಾಸ್ತಿ, ಈ ಕೂತುಹಲವನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡೋಣಾ. ಮಕ್ಕಳಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಪ್ರತಿ ಮನೆಯಿಂದಲೂ ಆಗಬೇಕು.

ಅಧಿಕ ಮೃದು ಇರುವ ಟಿಶ್ಯೂ ಪೇಪರ್ ಬೇಕೆಂಬ ಕಾರಣಕ್ಕೆ ಅಧಿಕ ಹಸಿರು ಮರಗಳನ್ನು ಕಡಿಯುತ್ತಿದ್ದಾರೆ. ಟಿಶ್ಯೂ ಬಳಸುವುದು ಕಡಿಮೆಯಾದರೆ ಕ್ರಮೇಣವಾಗಿ ಮರಗಳ ಮಾರಣಹೋಮವೂ ನಿಲ್ಲುತ್ತದೆ. ನಾವು ಎಚ್ಚೆತ್ತುಕೊಳ್ಳಲು ಇನ್ನೂ ಕಾಲ ಮಿಂಚಿಲ್ಲ. ಪರಿಸರ ಉಳಿದರೆ ನಮ್ಮ ಜೀವಸಂಕುಲದ ಉಳಿವು ಅಲ್ಲವೇ ? ಪರಿಸರ ಉಳಿಸಿ, ಬೆಳಸಿ ಜೀವಸಂಕುಲದ ಉತ್ತಮ ಜೀವನಕ್ಕೆ ಕಂಕಣಬದ್ದರಾಗೋಣ.

ಡಾ. ಪ್ರಕಾಶ್ ನಾಡಿಗ್

Related post

Leave a Reply

Your email address will not be published. Required fields are marked *