ಡಾ. ಎಸ್. ಎಲ್. ಭೈರಪ್ಪನವರ ಸಂದರ್ಶನ – ಅನಂತ್ ಕುಣಿಗಲ್

ಡಾ. ಎಸ್. ಎಲ್. ಭೈರಪ್ಪನವರ ಭೇಟಿ ಹಾಗು ಕಿರು ಸಂದರ್ಶನ

“ಡಾ. ಎಸ್. ಎಲ್. ಭೈರಪ್ಪ” ಈ ಹೆಸರೇ ಕನ್ನಡ ಸಾಹಿತ್ಯಲೋಕದಲ್ಲಿ ಹಾಗು ಓದುಗರ ಮನದಲ್ಲಿ ರೋಮಾಂಚನ ಉಂಟುಮಾಡುತ್ತದ್ದೆ. ಕಾಲೇಜಿನಲ್ಲಿ ಓದುತ್ತಿದ್ದಾಗ ನನ್ನ ಸ್ನೇಹಿತನ ಸಲಹೆ ಮೇರೆಗೆ ಭೈರಪ್ಪನವರ “ಯಾನ” ಕಾದಂಬರಿ ಓದಿ ಮೂಲತಃ ವಿಜ್ಞಾನ ವಿದ್ಯಾರ್ಥಿಯಾದ ನಾನು ನಿಜಕ್ಕೂ ಖುಷಿಯಾದೆ. ಅವರ ಅಧ್ಯಯನಶೀಲತೆಗೆ ಬೆರಗಾಗಿ ಅವರ ಹಿಂದಿನ “ಸಾರ್ಥ, ಭಿತ್ತಿ, ಉತ್ತರಕಾಂಡ” ಕಾದಂಬರಿಗಳನ್ನು ಓದಿ ಜೀವನದಲ್ಲಿ ಒಮ್ಮೆಯಾದರೂ ಅವರನ್ನು ಭೇಟಿಯಾಗಬೇಕು ಎಂದು ಆಸೆಯಿಟ್ಟುಕೊಂಡಿದ್ದ ನಾನು ಮೈಸೂರಿಗೆ ಹೋಗಿದ್ದಾಗ ಅವರನ್ನು ಈ ಭಾರಿ ಕಾಣಲೇಬೇಕು ಎಂದು ಮನೆಯ ವಿಳಾಸ ಬೆನ್ನತ್ತಿ ಭಯದಿಂದಲೇ ಅವರ ಮನೆಗೆ ಹೋದೆ. ಅವರ ಪತ್ನಿಗೆ ನನ್ನ ಭೈರಪ್ಪನವರ ಭೇಟಿಯ ಆಸೆಯನ್ನು ತಿಳಿಸಿದಾಗ ಸಂಜೆ ಬನ್ನಿ ಎಂದು ಆಶ್ವಾಸನೆ ಕೊಟ್ಟರು. ಸಂಜೆ ನನ್ನ ಗೆಳತಿಯೊಬ್ಬಳ ಜೊತೆ ಅವರ ಮನೆಗೆ ತೆರಳಿ ವಿಸಿಟರ್ ಜಾಗದಲ್ಲಿ ಕಾತುರದಿಂದ ಕಾಯುತ್ತ ಕುಳಿತಾಗ ಸ್ವಲ್ಪವೂ ಕಾಯಿಸದೆ ಭೈರಪ್ಪನವರು ಬಂದೆ ಬಿಟ್ಟರು.

ನನ್ನ ಹಿನ್ನೆಲೆಯ ಬಗ್ಗೆ ಅವರೇ ಕೇಳಿತಿಳಿದುಕೊಂಡರು. ಸಿನೆಮಾ ಕುರಿತಂತೆ ಮಾತು ಆರಂಭವಾಯಿತು. ನನ್ನಲ್ಲೂ ಧೈರ್ಯ ಮನೆಮಾಡತೊಡಗಿತು. ಭೈರಪ್ಪನವರ ಆತ್ಮೀಯತೆ ನನ್ನಲ್ಲಿದ್ದ ಭಯ, ಊಹಾಪೋಹಗಳನ್ನು ಹೊಡೆದೋಡಿಸಿತ್ತು. ನಾನು “ಯಾನ” ಕೃತಿಯ ಉದಾಹರಣೆಯೊಂದಿಗೆ ಮಾತಿಗೆ ಪ್ರತಿಕ್ರಿಯಿಸುತ್ತಾ ಸಂದರ್ಶನ ರೂಪದಲ್ಲಿ ಪ್ರಶ್ನೆ ಕೇಳಲಾರಂಭಿಸಿದೆ.

ಪ್ರ. 01 : ಈಗಿನ ದಿನಗಳನ್ನ ಹೇಗೆ ಕಳೆಯುತ್ತಿದ್ದೀರಿ ಸರ್?
: ಮೊದಲಿದ್ದ ತ್ರಾಣ ಈಗ ಇಲ್ಲ. ಹೊರಗೆ ಹೋಗೋಕೆ, ಯಾರನ್ನೂ ಭೇಟಿ ಮಾಡೋಕೆ ಆಗ್ತಿಲ್ಲ. ಆರೋಗ್ಯದ ಸಮಸ್ಯೆಯಿಂದ ವಿಶ್ರಾಂತಿ ಪಡೆಯುತ್ತಿದ್ದೇನೆ.

ಪ್ರ. 02 : ಉತ್ತರಕಾಂಡ ಆದ ಮೇಲೆ ಮುಂದೆ ಯಾವುದು ಅಂತ ಎಲ್ಲ ಓದುಗರಲ್ಲೂ ಪ್ರಶ್ನೆ ಇದೆ. ಅದಕ್ಕೆ ನಿಮ್ಮ ಪ್ರತಿಕ್ರಿಯೆ?
: ಉತ್ತರಕಾಂಡ ಆದ್ಮೇಲೆ ಏನೂ ಬರೆದಿಲ್ಲ. Physical strength ಇಲ್ಲದೆ ಸುತ್ತಾಟ ಮಾಡಿಲ್ಲ. ಸುತ್ತಾಟ ಇಲ್ಲದ ಕಾರಣ ಕಾದಂಬರಿಯಾಗಿ ಬರೆಸಿಕೊಳ್ಳುವಂತಹ Thought ಯಾವುದೂ ಬಂದಿಲ್ಲ. ನೆನಪಿನ ಶಕ್ತಿ ಕಡಿಮೆಯಾಗಿದೆ. ನಾನೇ ಇಷ್ಟ ಪಟ್ಟು ಓದಿರುವ ಕೆಲವು ಕಾದಂಬರಿ ಹೆಸರುಗಳಾಗಲೀ.. ಅದನ್ನ ಬರೆದವರ ಹೆಸರಾಗಲಿ ಥಟ್ಟನೆ ನನ್ನ ನೆನಪಿಗೆ ಬರೋದೆ ಇಲ್ಲ. ಸೃಜನಶೀಲತೆ ಅನ್ನೋದು ಕೂಡ ಬತ್ತಿಹೋಗಿದೆ. ಸೃಜನಶೀಲತೆ ಇಲ್ಲದೆ ಏನನ್ನೂ ಬರೀಬಾರ್ದು. ಅದು ಖಾಲಿ ಆದಾಗ ಬರವಣಿಗೆ ನಿಲ್ಲಿಸಿಬಿಡಬೇಕು. ಓದುಗರಿದ್ದಾರೆ ಅಂತ ಟೊಳ್ಳು ಬರೆದು ಓದುಗರಿಗೆ ಮೋಸ ಮಾಡಬಾರದು.

ಪ್ರ. 03: ನೀವು ಬರೆದ ಅಷ್ಟೂ ಕಾದಂಬರಿಗಳಲ್ಲಿ ಬಹಳ ಚಾಲೆಂಜಿಂಗ್ ಅನ್ನಿಸಿದ ಬರವಣಿಗೆ ಯಾವುದು ಸರ್?
: ನನಗೆ ಆಯಾ ವಯಸ್ಸಿಗೆ ನಾನು ಆರಿಸಿಕೊಂಡ ಎಲ್ಲ ವಿಷಯಗಳೇ ಚಾಲೆಂಜಿಗ್. ಅದರಲ್ಲೂ “ಗೃಹಭಂಗ” ಬರೆಯೋಕೆ ತುಂಬಾ ಒದ್ದಾಡಿದ್ದೀನಿ. ನನ್ನ ಬದುಕನ್ನ ಕಾದಂಬರಿಯಾಗಿ ಬರಿಬೇಕು ಅಂತ ಎರಡು ಮೂರು ಸಲ ಪ್ರಯತ್ನಿಸಿ ಬರೆಯಲು ಸಾಧ್ಯವಾಗದೆ ಸುಮ್ಮನಾಗಿಬಿಟ್ಟಿದ್ದೆ. ನಂತರ ಒಂದಷ್ಟು ವರ್ಷ ಕಳೆದು ಹೇಗೋ ಗೃಹಭಂಗ ಬರೆಸಿಕೊಂಡುಬಿಟ್ಟಿತು. ಒಳ್ಳೆಯ ಹೆಸರನ್ನೂ ತಂದುಕೊಟ್ಟಿತು.

ಪ್ರ. 04 : ಬರಹಗಾರರನ್ನ ಪಾತ್ರಗಳು ಕಾಡಿಸಿ ಕಾಡಿಸಿ ಬರೆಸಿಕೊಳ್ಳುತ್ತವೆ. ಆದರೆ ನೀವು ಬರೆದ ಮೇಲೂ ಕಾಡಿದ ಯಾವುದಾದರೂ ಪಾತ್ರ ನೆನಪಿಗೆ ಬರುತ್ತಾ ಸರ್?
ಉ : ಎಲ್ಲಾ ಕಾದಂಬರಿಯ ಪಾತ್ರಗಳೂ ಕಾಡುತ್ತೆ. ಮುಖ್ಯವಾಗಿ “ಪರ್ವ” ಬರೆದ ಮೇಲೆ ದ್ರೌಪದಿ ನನ್ನನ್ನ ಹೆಚ್ಚು ಕಾಡಿದ್ದು. ಹೆಂಡತಿಯನ್ನ ಪರಪುರುಷನೊಬ್ಬ ಹೊತ್ತೋಯ್ದಾಗ, ಗಂಡ ಎನಿಸಿಕೊಂಡವನು ಪ್ರಶ್ನೆ ಮಾಡದೆ, ಧರ್ಮದ ಪರ ನಿಂತು ತನ್ನ ಗಂಡಸುತನವನ್ನ ಅಡಗಿಸಿಕೊಂಡ ಧರ್ಮರಾಜನ ಬಗ್ಗೆ ನನಗೆ ಎಲ್ಲಿಲ್ಲದ ಸಿಟ್ಟು ಇದೆ. ಹೆಂಡತಿಯಾದವಳನ್ನ ರಕ್ಷಿಸೋದು ಬಿಟ್ಟು ಧರ್ಮದ ಬಗ್ಗೆ ಮಾತನಾಡುವ ಉಡಾಫೆ ಗಂಡನ ಬಗ್ಗೆ ಆ ಕ್ಷಣಕ್ಕೆ ದ್ರೌಪದಿಗೆ ಏನನ್ನಿಸಿರಬೇಕು? ಅದು ನನ್ನನ್ನ ಬಹಳ ಕಾಡಿತು. ಅದೇ “ಪರ್ವ” ಬರೆಸಿತು.

ಪ್ರ. 05 : ನಿಮ್ಮ ಕಾದಂಬರಿ ಬರವಣಿಗೆಯಲ್ಲಿ philosophy ನಿಮ್ಮನ್ನ ಬಹಳ influence ಮಾಡಿದೆ. ಹಾಗೆ ಅದನ್ನು ಬಿಟ್ಟು ಬೇರೆ ಯಾವ ವಿಷಯ ನಿಮಗೆ ಬರವಣಿಗೆ ಪ್ರಕ್ರಿಯೆಯಲ್ಲಿ ಸಹಕಾರಿಯಾಗಿದೆ?
ಉ : ನಾನು ಆಗಲೆ ಹೇಳಿದಹಾಗೆ ಸುತ್ತಾಟ ಇಲ್ಲದೆ, ಅಧ್ಯಯನ ಇಲ್ಲದೆ ಏನನ್ನೂ ಬರೆದಿಲ್ಲ. ನಾನು ಕರ್ನಾಟಕಕ್ಕೆ ಮಾತ್ರ ಸಂಬಂಧಪಟ್ಟ ವಿಷಯಗಳನ್ನ ಆರಿಸಿಕೊಳ್ಳುತ್ತಿರಲಿಲ್ಲ. ಕರ್ನಾಟಕದ ಸಮಸ್ಯೆ ಒರಿಸ್ಸಾ, ಮಹಾರಾಷ್ಟ್ರ, ಅರುಣಾಚಲ ಹೀಗೆ ಎಲ್ಲ ರಾಜ್ಯಗಳಲ್ಲೂ ಇದೆ. ಹಾಗಾಗಿ ಭಾರತಕ್ಕೆ ಸಂಬಂಧಪಟ್ಟ ವಿಷಯಗಳನ್ನೇ ನಾನು ಆರಿಸಿಕೊಳ್ಳುತ್ತಿದ್ದೆ. ಆದ್ದರಿಂದ ಭಾರತದ ಬಹಳಷ್ಟು ಕಡೆ ಪ್ರವಾಸ ಮಾಡ್ತಿದ್ದೆ. ಯಾವ ಸ್ಥಳಕ್ಕೂ ಯೋಜನೆ ಹಾಕಿಕೊಂಡು ಭೇಟಿ ಕೊಡ್ತಿರ್ಲಿಲ್ಲ. ನಾವು ಹೋಗ್ತೀವಿ ಅಂತ ಗೊತ್ತಾದ್ರೆ ನಮಗೋಸ್ಕರ ಆ ಊರುಕೇರಿ  ಮನೆಯ ಸ್ವರೂಪಗಳನ್ನೇ ಬದಲಾಯಿಸಿಬಿಡುತ್ತಿದ್ದರು. ನಮ್ಮನ್ನ ಅತಿಥಿಗಳಂತೆ ಸ್ವೀಕರಿಸುತ್ತಿದ್ದರು. ಆಗ ನಮಗೆ ಅಲ್ಲಿನ Reality ಅರ್ಥವಾಗೋದಿಲ್ಲ. ವ್ಯವಸ್ಥಿತ ಪರಿಸರ ಕಾಣಿಸುತ್ತದೆ. ಹಾಗಾಗಿ ಅಚಾನಕ್ ಭೇಟಿ ಕೊಡುತ್ತಿದ್ದೆ. ಆಗ ನನಗೆ ಅಲ್ಲಿನ ಸಂಸ್ಕೃತಿಯನ್ನ, ಊಟೋಪಚಾರವನ್ನ, ಜನಜೀವನವನ್ನ ನೇರವಾಗಿ ಅನುಭವಿಸೋಕೆ ಸಿಗ್ತಿತ್ತು. ಇದು ನನ್ನ ಸಾಹಿತ್ಯ ಕೃಷಿಗೆ ಬಹಳ ಉಪಕಾರಿಯಾಯ್ತು.

ಪ್ರ. 06 : ಈಗಿನ ಸಧ್ಯದ ಸಮಾಜದ ಪರಿಸ್ಥಿತಿ ಕುರಿತಂತೆ ಏನು ಹೇಳೋಕೆ ಇಷ್ಟ ಪಡ್ತೀರಿ ಸರ್?
: ಎಲ್ಲವನ್ನ ಈಗಾಗ್ಲೆ ಹೇಳಿದ್ದೀನಿ. ಕೆಲವರು ಶಾಲೆಗಳಲ್ಲಿ ಜಾತಿಯ ವಿಷಯವಾಗಿ ಮಕ್ಕಳ ಮನಸ್ಸನ್ನ ವರ್ಗಿಕರಿಸಿ ಪಾಠ ಮಾಡ್ತಿದ್ದಾರೆ. ಅದು ಸರಿಯಲ್ಲ. ನಾನು ದಾಟು ಬರೆದಿದ್ದು ಪರಿಸ್ಥಿತಿಯನ್ನ ಅರ್ಥಮಾಡಿಸೋಕೆ. ಆದರೆ ಇವತ್ತು ಕೆಲವರು ಪರಿಸ್ಥಿತಿಗಳ ಪ್ರಯೋಜನ ಪಡ್ಕೋತಿದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಮಕ್ಕಳಿಗೆ ಸಾಮಾಜಿಕ ಜವಾಬ್ದಾರಿ ಬರೋಕೆ ಶುರುವಾಗೋದೆ ಶಾಲಾ – ಕಾಲೇಜುಗಳಲ್ಲಿ. ಹಾಗಾಗಿ ಅಲ್ಲಿನ ಶಿಕ್ಷಣ ವ್ಯವಸ್ಥೆ ಬದಲಾಗಬೇಕು. ಎಲ್ಲರಿಗೂ ಸಮಾನ ಶಿಕ್ಷಣ ದೊರೆಯಬೇಕು. ಮೌಲ್ಯಯುತ ವಿಷಯಗಳು ಪಠ್ಯವಾಗಬೇಕು.

ಮಾತನಾಡಿಸಿದರೆ ಇನ್ನೂ ಒಂದು ಗಂಟೆ ಮಾತನಾಡಲು ರೆಡಿ ಇದ್ದರು ಆದರೆ ಮಾತನಾಡುತ್ತಾಹೋದಂತೆ ಅವರ ಮುಖದಲ್ಲಿ ಆಯಾಸ ಗಮನಿಸಿ ನಾನೇ ಮಾತು ನಿಲ್ಲಿಸಿದೆ. ಭೈರಪ್ಪನವರು ನೋಡಲು ಎರಡು ನಿಮಿಷವಾದರೂ ಸಿಕ್ಕರೆ ಸಾಕು ಎಂದು ಹೋಗಿದ್ದ ನನಗೆ ಅವರೊಂದಿಗೆ ಕಳೆದ ಆ ಎರಡು ಗಂಟೆಗಳ ಸಂಜೆ ಬಹಳ ಅರ್ಥಪೂರ್ಣವೆನಿಸಿತು. ಈ ವಿಷಯದಲ್ಲಿ ನಾನು ಬಹಳ ಅದೃಷ್ಟವಂತ. ಇದಕ್ಕೆ ಕಾರಣರಾದ ಎಲ್ಲರಿಗೂ ವಂದನೆಗಳು.

ಅನಂತ್ ಕುಣಿಗಲ್

Related post

1 Comment

  • ಚಿಕ್ಕದಾದರೂ ಪರಿಣಾಮಕಾರಿ ಸಂದರ್ಶನ. ಅಭಿನಂದನೆಗಳು

Leave a Reply

Your email address will not be published. Required fields are marked *