ಶಿಕ್ಷಣ ರಂಗದಲ್ಲಿ ಯುವ ಪೀಳಿಗೆಗೆ ಪಾಠವನ್ನು ಮಾಡುತ್ತಾ ತಮ್ಮ ಬರಹಗಳಿಂದ ಸಾಹಿತ್ಯ ಸೇವೆ ಮಾಡುತ್ತಿರುವವರಲ್ಲಿ ಶಿಕ್ಷಕರು ಹಾಗು ಹಿರಿಯ ಲೇಖಕರು ಆದ ಪರಮೇಶ್ವರಪ್ಪ ಕುದರಿ ಯವರು ಕೂಡ ಒಬ್ಬರು.
ಧಾರವಾಡ ತಾಲೂಕಿನ ಹೆಬ್ಬಳ್ಳಿಯವರಾದ ಶ್ರೀ ಪರಮೇಶ್ವರಪ್ಪ ಕುದರಿ ಯವರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿಯ ಸರಕಾರಿ ಪ್ರೌಢ ಶಾಲೆಯಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಾ ಜೊತೆಗೆ ಹಲವಾರು ವರ್ಷಗಳಿಂದ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಅವರ ಸಾಹಿತ್ಯ ಸೇವೆಗಾಗಿ “ಇಂಡಿಯನ್ ಎಂಪಾಯರ್” ಯುನಿವರ್ಸಿಟಿ, ತಮಿಳುನಾಡು ವತಿಯಿಂದ ಅಕ್ಟೋಬರ್ ೨ ರಂದು ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಯಿತು.
ಸೃಜನ ಶೀಲ ಲೇಖಕರಾದ ಡಾ. ಪರಮೇಶ್ವರಪ್ಪ ಕುದರಿ ಯವರು, ಮಕ್ಕಳಿಗಾಗಿ “ಕೋತಿ ಮತ್ತು ಫೋನು, ಬಗೆ ಬಗೆ ಆಟ, ಕೈಲಾಸದಲ್ಲಿ ಕ್ರಿಕೆಟ್” ಎಂಬ ಪದ್ಯ ಸಂಕಲನ, “ಪುಟ್ಟು ಬೇಡಿದ ವರ, ಕೊನೆಗೂ ಅರ್ಥವಾಗದವಳು” ಎಂಬ ಕಥಾ ಸಂಕಲನ, ಮಾತು ಮುತ್ತು, ಪನ್ನೀರು ಎಂಬ ಚುಟುಕು ಸಂಕಲನ, “ಮನದಂಗಳ” ಗಣ್ಯ ವ್ಯಕ್ತಿಯ ಸಂದರ್ಶನಗಳ ಸಂಕಲನ, ಇವಿಷ್ಟು ಈವರೆಗೂ ಪ್ರಕಟವಾಗಿರುವಂತವು. ಇವರ ಅನೇಕ ಶಾಯರಿಗಳು “ಹಾಯ್ ಬೆಂಗಳೂರು, ತುಷಾರ, ವಿಜಯವಾಣಿ, ವಿಜಯಕರ್ನಾಟಕ ಇನ್ನು ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಜೊತೆಗೆ ಇವರ ಅನೇಕ ಹಾಸ್ಯ ಸರಣಿಗಳು “ಉದಯ ಟಿವಿ, ಸುವರ್ಣ, ಝೀ ಕನ್ನಡ, ಟಿ ವಿ 9 ಮಾಧ್ಯಮದಲ್ಲಿ ಪ್ರಸಾರವಾಗಿವೆ. ಇವರ ಸಂದರ್ಶನವೊಂದು ಚಂದನ ವಾಹಿನಿಯ ಬೆಳಗು ಕಾರ್ಯಕ್ರಮದಲ್ಲಿ ಪ್ರಸಾರವಾಗಿದೆ. ಎಫ್ ಎಂ ಆಡಿಯೋ ಆಪ್ ನಲ್ಲಿ ಪ್ರಸಾರವಾಗುವ “ಎಂಥಾ ಮೋಜಿನ ಕುದರಿ” ಎಂಬ ಕಾರ್ಯಕ್ರಮದಲ್ಲಿ ತಮ್ಮ ಅನುಭವಗಳನ್ನು ವಿಚಾರ ಸಮೇತ ಮಂಡಿಸುತ್ತಾರೆ.
ಇವರ ಶಿಕ್ಷಕ ಸೇವೆಗೆ “ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ”, “ರಾಜ್ಯ ಮಟ್ಟದ “ಗುರು ಪುರಸ್ಕಾರ” , ರೋಟರಿ ಕ್ಲಬ್ ಚಿತ್ರದುರ್ಗದಿಂದ “ನೇಶನ್ ಬಿಲ್ಡರ್ ಅವಾರ್ಡ್”, ಹಾಗು ಸಾಹಿತ್ಯ ಸೇವೆಗೆ “ಕನ್ನಡ ಸಾಹಿತ್ಯ ಸಾಗರದ ವಿದ್ಯಾ ರತ್ನ”, “ರುಕ್ಮಿಣಿಬಾಯಿ ಸ್ಮಾರಕ” ರಾಜ್ಯ ಪ್ರಶಸ್ತಿಗಳು ಸಂದಿವೆ. ಇದೀಗ ತಮಿಳುನಾಡು ವಿ ವಿ ವತಿಯಿಂದ ಡಾಕ್ಟ್ರೇಟ್ ಕೂಡ ಲಭಿಸಿದೆ.
ಸೃಜನ ಶೀಲ ಬರಹಗಾರರು, ಹಾಸ್ಯ ಪ್ರಿಯರು, ಸಮಾಜ ಚಿಂತಕರು ಆದ ಶ್ರೀ ಪರಮೇಶ್ವರಪ್ಪ ಕುದರಿ ಯವರಿಗೆ ಡಾಕ್ಟರೇಟ್ ಲಭಿಸಿದ ಸಂದರ್ಭದಲ್ಲಿ ಸಾಹಿತ್ಯ ಮೈತ್ರಿ ತಂಡವು ಅಭಿನಂದನೆಗಳನ್ನು ಸಲ್ಲಿಸುತ್ತದೆ.
ಕು ಶಿ ಚಂದ್ರಶೇಖರ್