ತಂದೆ

ಅಪ್ಪಾ ನೀನೇ ಆಗಿದ್ದೆ,
ನಮಗೆಲ್ಲರಿಗೂ ಪ್ರೀತಿಯ ತಂದೆ.
ಅದೆಷ್ಟೋ, ಮರೆಯಲಾರದ,ಪ್ರೀತಿ,
ಹರುಷ ಸಂತಸವ, ನಮ್ಮ ಬಾಳಿನ ತುಂಬಾ,
ನೀ ನಮಗೆ ತಂದೆ.

ಅದೇನೇನು, ಕೇಳಿದರೂ,
ನಾವು ಕೇಳಿದ್ದೆಲ್ಲ ನೀ ನಮಗೆ ತಂದೆ ಕೊಡುವೆನೆಂದೆ.
ಆದರೂ, ನೀ ಮಾತ್ರ ಹರಿದ ಬಟ್ಟೆಯನ್ನೇ ತೊಟ್ಟೆ.
ಅದೇಕೋ ನಿನ್ನಲೆಂದೂ, ನಾವು ಕಂಡೇ ಇಲ್ಲ
ಹೊಸ ಉಡುಪಿನ ಬಟ್ಟೆ.

ನಮ್ಮ ಮುಖದಲಿ ಸದಾ ನೀ ನಗುವ ತರಿಸಿದೆ.
ನೀ ಮಾತ್ರ ಯಾರೂ ಕಾಣದಂತೆ
ನಿನ್ನ ಕಷ್ಟದ, ಕಣ್ಣೀರ ಹರಿಸಿದೆ.
ನಿನ್ನ ಆಲಿಂಗನದ ತೋಳಲಿ,
ನಾ ಮಗುವಾಗಿ ಮಲಗಿದೆ.

ನೀ ಮಾತ್ರ ದುಡಿದು, ಬೆವತು
ದಣಿವಿನಿಂದ ತಲೆ ದಿಂಬಿಲ್ಲದೆ ಮಲಗಿದೆ.
ನಾವು ನಿನ್ನ ತಿಳಿದಿಲ್ಲ ನಮ್ಮ ಸಂಸಾರ
ಸಾಗಿಸಲು ನೀ ಪಟ್ಟ ಪಾಡು
ಅದೆಷ್ಟು ನಿನ್ನ ಮನದೊಳಗಿದೆ.

ನಿನ್ನ ನಗುವನ್ನೆಮಗೆ ತೋರಿಸಿ,
ಒಳಗಿನ ಕಷ್ಟ ಕಾರ್ಪಣ್ಯಕ್ಕೆ ನಿನ್ನಲ್ಲೇ ನೀ ಕೊರಗಿದೆ.
ನೀ ನೊಂದ ಗುರುತು, ಕೊನೆಯಲ್ಲೇ ಕಂಡೆವು,
ತೋರಿಕೆಗೆ ಇದ್ದರೂ ನಿನ್ನಲ್ಲಿ ಆ ನಗುವ ಮುಖ.
ನೀನೆಲ್ಲ ನಮಗೆ ಕೊಟ್ಟರೂ ನೀ
ಜಯಿಸಲಿಲ್ಲವಲ್ಲ ಒಂದಿಷ್ಟೂ ಸುಖ.

ಫೌಝಿಯಾ ಹರ್ಷದ್
ಮೂಡಬಿದ್ರೆ

Related post