ತಾಯ್ತನ
ಎತ್ತರೆತ್ತರದ ಮರಗಳನರಸಿ
ಚಿಗುರೆಲೆಗಳ ಹುಡುಕಿ ಉಂಡು
ಖನಿಜಾಂಶಗಳ ಬೆದಕಿ ತಿಂದು
ಮಂದಗಮನೆಯಂತೆ ನಿಂತಿರುವೆ
ನೀಳ್ಗತ್ತನು ನೀಟಿ ದೂರದ ನೋಟ ನೋಡಿ
ಅರಿಯ ಅರಿವನು ಅರಿತು ಬೆದರಿ ನೋಡಿ
ಭೀತಿಯ ನೋಟವನು ಬೀರುತ ಓಡಿ
ವಿಶಾಲ ಬಯಲನು ತಲುಪಿ ನಿಂತಿಹುದು
ಮಾನವನೆತ್ತರಕ್ಕೆ ಬೆಳೆದ ಕಂದನು ಜೊತೆಗಿರಲು
ಹಸಿವಿನಿಂದ ಅವ ನನ್ನ ಸುತ್ತ ಸುತ್ತುತ್ತಿರಲು
ಜಗವ ಮರೆತು ನಾ ಅವಗೆ ಹಾಲೂಡಿಸಲು
ತಾಯ್ತನವು ಸಾರ್ಥಕವೆಂದು ಮನೆವೆನುತಿಹುದು.
ಸಿ.ಎನ್. ಮಹೇಶ್