ತಿಲಕರ ಏಕತಾ ಗಣೇಶ
ನೀಲವ್ಯೋಮ ವಿಶಾಲ ಪಥದಲಿ
ಶ್ರಾವಣ ನೀರದ ನೀಲ ರಥದಲಿ
ಗೌರಿಗಣೇಶರು ಬರುವರದೊ!
ಭಾದ್ರಪದಾದಿಯ ಶಾದ್ವಲ ವೇದಿಯ
ಶ್ಯಾಮಲ ಪೃಥಿವಿಯ ಕೋಮಲ ವಕ್ಷಕೆ
ಶ್ರೀ ಕೈಲಾಸವ ತರುವರದೊ!
ಕುವೆಂಪು
ವರುಷ ವರುಷದಂತೆ ಮತ್ತೊಮ್ಮೆ ಗಣೇಶ ಹಬ್ಬ ಬಂದಿದೆ. ಮನೆ ಮನೆ, ಬೀದಿ ಬೀದಿಗಳು ಹಬ್ಬದ ಆಚರಣೆಗೆ ತಯಾರಾಗಿ ನಿಂತಿದೆ. ಎಂದಿನಂತೆ ಸರಕಾರದವರು, ಪ್ರಕೃತಿ ಪರಿಸರ ಸಂಘಗಳು, ಎಕೋ ಫ್ರೆಂಡ್ಲಿ ಗಣೇಶನನ್ನೇ ಎಲ್ಲರು ಕೂರಿಸಬೇಕೆಂದು ಪ್ರತಿ ವರುಷದಂತೆ ಸಾರಿ ಆಗಿದೆ. ಬೀದಿಯ ಹುಡುಗರು ಹೋದ ವರುಷದ ದೂಳು ಕೆಡವಿದ ಬ್ಯಾನರ್ ಇಸ್ತ್ರಿ ಮಾಡಿ ಹಾಕಬೇಕಾ ಅಥವಾ ಹೊಸದಕ್ಕೆ ಆರ್ಡರ್ ಕೊಡಬೇಕಾ, ಕೊಟ್ಟರೆ ತಮ್ಮ ಹೆಸರುಗಳನ್ನೂ ಇನ್ನು ಚೆನ್ನಾಗಿ ಹಾಕಬಹುದಾ ಎಂದು ಚರ್ಚಿಸಿ ಆಗಲೇ ವಾರವಾಗಿದೆ. ಇನ್ನು ಕೆಲಕಡೆ ಈ ಸರ್ತಿ ಯಾರನ್ನು ಸ್ಟೇಜ್ ಮೇಲೆ ಹತ್ತಿಸಿ ಕೂರಿಸುವುದು ಯಾರಿಗೆ ಅತಿ ಹೆಚ್ಚು ಮೊತ್ತದ ರಶೀದಿ ಹರಿದು ಕೊಡುವುದು ಎಂದೆಲ್ಲ ಪ್ಲಾನು ಮಾಡಿ ಒಂದು ಫೈನಲ್ ಡಿಸಿಷನ್ ಗೆ ಬಂದಾಗಿದೆ.
ಇನ್ನೂ ಮನೆ ಮನೆಗಳಲ್ಲಿ ಈ ಸಾರಿ ಎಷ್ಟು ಎತ್ತರದ ಗಣಪನನ್ನು ಕೂರಿಸುವುದು, ಕರಿ ಕಡುಬಿನ ಜೊತೆ ಬೇರೆ ಏನು ಸಿಹಿ ಮಾಡಬೇಕು, ಗಣೇಶನ್ನು ಈ ಸಾರಿಯೂ ಬಕೇಟಿನಲ್ಲೇ ವಿಸರ್ಜಿಸುವುದ ಅಥವಾ ನಮ್ಮ ಸರ್ಕಾರ ಇರುವ ಕೆರೆಗಳ ಊಳೆತ್ತಿಸಿ ವ್ಯವಸ್ಥೆ ಮಾಡಿದ್ದಾರಾ. ಹೀಗೆ ಒಂದೇ ಎರಡೇ?
ಬಹುಷಃ ಇಡೀ ಭಾರತದಲ್ಲೇ ಏಕತೆ ಮತ್ತು ರಾಷ್ಟ್ರೀಯತೆಯ ಸಂಕೇತವಾಗಿ ಹಾಗು ಸಾಂಸ್ಕೃತಿಕವಾಗಿ ತಿಂಗಳು ಪೂರ್ತಿ ದೇಶದೆಲ್ಲಡೆ ಸಾರ್ವಜನಿಕವಾಗಿ ಆಚರಿಸುವ ದೇವರ ಹಬ್ಬ ಇದು ಒಂದೆಯೇನೋ?. ಗಣೇಶ ಹಬ್ಬ ಶಿವಾಜಿ ಮಹಾರಾಜರ ಕಾಲದಿಂದಲೂ ನಾಡಿನಲ್ಲಿ ವಿಜೃಂಭಣೆಯಿಂದ ಆಚರಿಸುತ್ತಿದ್ದ ಹಬ್ಬವಾದರೂ ಅದಕ್ಕೆ ಸ್ವಾತಂತ್ರದ ಕಿಚ್ಚು ಹತ್ತಿಸಿದ್ದು “ಲೋಕಮಾನ್ಯ ಬಾಲಗಂಗಾಧರ್ ತಿಲಕ್“
1856 ರಂದು ಮಹಾರಾಷ್ಟ್ರದ ರತ್ನಗಿರಿಯಲ್ಲಿ ಜನಿಸಿದ “ಬಾಲಗಂಗಾಧರ ತಿಲಕ್” ರವರು “ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಮತ್ತು ನಾನು ಅದನ್ನು ಪಡೆಯುತ್ತೇನೆ!” ಎಂಬ ಘೋಷವಾಕ್ಯದೊಂದಿಗೆ ದೇಶ ಸ್ವಾತಂತ್ರದ ಹೋರಾಟದಲ್ಲಿ ಸಕ್ರಿಯವಾಗಿ ಪಾಲುಗೊಂಡಿದ್ದವರು. ಖಾಸಗಿ ಶಾಲೆಯಲ್ಲಿ ಗಣಿತ ಶಿಕ್ಷಕರಾಗಿದ್ದ ತಿಲಕ್ ರವರು “ಧರ್ಮ ಮತ್ತು ಪ್ರಾಯೋಗಿಕ ಜೀವನ ಬೇರೆ ಬೇರೆ ಅಲ್ಲ. ನಿಮ್ಮ ಸ್ವಂತಕ್ಕಾಗಿ ಮಾತ್ರ ದುಡಿಯುವ ಬದಲು ದೇಶವನ್ನು ನಿಮ್ಮ ಕುಟುಂಬವನ್ನಾಗಿ ಮಾಡುವುದೇ ನಿಜವಾದ ಮನೋಭಾವ. ಅದಕ್ಕೂ ಮೀರಿದ ಹೆಜ್ಜೆ ಮಾನವೀಯತೆಯ ಸೇವೆ ಮತ್ತು ಮುಂದಿನ ಹಂತ ದೇವರ ಸೇವೆ” ಎಂದು ಜನತೆಯ ಕುರಿತು ಉಪದೇಶಿಸುತಿದ್ದರು.
19 ನೇ ಶತಮಾನದ ಸ್ವಾತಂತ್ರ ಹೋರಾಟಕ್ಕೆ ಜಾತಿ ಸಂಘರ್ಷ ಬಹು ದೊಡ್ಡ ಅದೇ ತಡೆಯಾಗಿತ್ತು. ಮೇಲು – ಕೀಳು ಬೇದ – ಬಾವ ಗಳಿಂದ ಹೋರಾಟಕ್ಕೆ ಜನರನ್ನು ಒಟ್ಟು ಗೂಡಿಸುವುದು ಬಹಳ ದೊಡ್ಡ ಸಮಸ್ಯೆಯಾಗಿತ್ತು. ಇದನ್ನು ಗಂಭೀರವಾಗಿ ತೆಗೆದುಕೊಂಡ ತಿಲಕ್ ರವರು ಎಲ್ಲಾ ಜಾತಿಗಳಲ್ಲೂ ಮೇಲು ಕೀಳು ಎನ್ನದೆ ಪೂಜೆ ಮಾಡುವ ದೇವರು “ಗಣಪತಿ” ಎಂದು ಮನಗೊಂಡರು.
1893 ರಲ್ಲಿ ತಿಲಕ್ ರವರು “ಕೇಶವಿ ನಾಯಕ್ ಚಾಲ್ ಸಾರ್ವಜನಿಕ್ ಗಣೇಶೋತ್ಸವ್ ಮಂಡಲ್” ಎಂಬ ಸಮಿತಿಯನ್ನು “ಗಿರ್ಗಾಂವ್” ನಲ್ಲಿ ಸ್ಥಾಪಿಸಿ ಮೊದಲ ಬಾರಿಗೆ ಬೃಹತ್ ಮಣ್ಣಿನ ಗಣೇಶನನ್ನು ಸಾರ್ವಜನಿಕವಾಗಿ ಕೂರಿಸಿ 10 ದಿನಗಳ ಕಾಲ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಕಾರಣರಾದರು. ನಿದಾನವಾಗಿ ಮಹಾರಾಷ್ಟ್ರದೆಲ್ಲೆಡೆ ಅನೇಕ ಜನರು ಒಟ್ಟುಗೂಡಿ ಸಾರ್ವಜನಿಕವಾಗಿ ಗಣೇಶನನ್ನು ಕೂರಿಸಿ ಹಬ್ಬವನ್ನು ಆಚರಿಸಲು ಶುರುಮಾಡಿದರು. ಭಾರತೀಯರು ಒಟ್ಟುಗೂಡುವುದನ್ನು 1892 ರಲ್ಲಿ ಬ್ರಿಟಿಷರು ನಿಷೇದಿಸಿದ್ದರು ಆದ್ದರಿಂದ ತಿಲಕ್ ರವರು ಶುರು ಮಾಡಿದ ಈ ಆಚರಣೆಯಿಂದಾಗಿ ಎಲ್ಲಾ ಜನರು ಜಾತಿ ಭೇದವಿಲ್ಲದೆ ಮೇಲು ಕೀಳಿಲ್ಲದೆ (ಸಾರ್ವಜನಿಕವಾದದ್ದರಿಂದ) ಎಲ್ಲರು ಭಾಗವಹಿಸಲು ಶುರುಮಾಡಿದರು. ಇದನ್ನೇ ಸಾಧನವಾಗಿಟ್ಟುಕೊಂಡ ತಿಲಕ್ ರವರು ಒಟ್ಟುಗೂಡುತಿದ್ದ ಜನರಲ್ಲಿ ಸ್ವಾತಂತ್ರದ ಪ್ರಾಮುಖ್ಯತೆ ಅದಕ್ಕಾಗಿ ಒಗ್ಗಟ್ಟಿನ ಹೋರಾಟದ ಅತ್ಯಗತ್ಯವೆಲ್ಲವನ್ನು ಜನರ ಮನದಲ್ಲಿ ಬೇರೂರುವಂತೆ ನೋಡಿಕೊಳ್ಳಲು ಯಶಸ್ವಿಯಾದರು.
1905 ರಷ್ಟರಲ್ಲಿ ಗಣೇಶ ಹಬ್ಬ ದೇಶಾದ್ಯಂತ ಎಲ್ಲಾ ಕಡೆ ಆಚರಿಸಲ್ಪಟ್ಟು ದೇಶದ ಹಬ್ಬವಾಗಿ ರೂಪುಗೊಂಡಿತು. ಈಗಲೂ ಎಲ್ಲಾ ರಾಜ್ಯಗಳಲ್ಲಿ ಆಚರಿಸುವ ಗಣೇಶ ಹಬ್ಬದ್ದೇ ಒಂದು ತೂಕವಾದರೆ ಮಹಾರಾಷ್ಟ್ರ ಒಂದರಲ್ಲಿ ಆಚರಿಸುವುದೇ ಒಂದು ತೂಕ. ಹೀಗೆ ಮನೆಯಲ್ಲಿನ ಗಣೇಶನನ್ನು ದೇಶದ ಐಕ್ಯತೆಗೆ ಹಾಗು ಸ್ವಾತಂತ್ರ ಹೋರಾಟಕ್ಕೆ ಸಾರ್ವಜನಿಕ ಆಚರಣೆಗೆ ಕರೆತಂದ ನಮ್ಮ “ಲೋಕಮಾನ್ಯ ಬಾಲಗಂಗಾಧರ್ ತಿಲಕ್” ರವರನ್ನು ನೆನೆಯುತ್ತ ನಮ್ಮೆಲ್ಲರ ಮನೆಗಳಲ್ಲಿ ಗೌರಿ ಗಣೇಶನನ್ನು ಭಕ್ತಿಯಿಂದ ಕೂರಿಸಿ ಆಚರಿಸಿ ದೇಶದ ಒಳಿತಿಗಾಗಿ ಪ್ರಾರ್ಥಿಸೋಣ.
ಕು ಶಿ ಚಂದ್ರಶೇಖರ್
ಚಿತ್ರಗಳು: ಅಂತರ್ಜಾಲ