ತೇರೂವೋ

ಕಾದಂಬರಿ: ತೇರೂವೋ
ಮರಾಠಿ ಮೂಲ: ಗೌರಿ ದೇಶಪಾಂಡೆ
ಕನ್ನಡಕ್ಕೆ : ಚಂದ್ರಕಾಂತ ಪೋಕಳೆ
ಪ್ರಕಾಶನ : ದೇಸೀ ಪುಸ್ತಕ ಪ್ರಕಾಶನ
ಬೆಲೆ : ರೂ 80

ಈ ಕಾದಂಬರಿಯ ಕಥಾನಾಯಕಿ ತನ್ನ ಪ್ರೀತಿಯ ಉತ್ಕಟತೆಯನ್ನು ‘ಸಾಕೆ’ ಯ ಅಮಲಿನಲ್ಲೇ ಆದರೂ ತನ್ನ ಪ್ರೀತಿಯ ಇಂಗ್ಲಿಷ್ ಕವಿತೆಯೊಂದಿಗೆ ಹೇಳಿಕೊಳ್ಳುವ ಸಾಲುಗಳೊಂದಿಗೆ ಆರಂಭಿಸುತ್ತೇನೆ. ಅವಳ ಪ್ರೀತಿಗೊಂದು ಜೈ ಹೇಳುತ್ತಾ…

Drink to me only with thine
Eyes and I will pledge with mine
Or leave a kiss within the cup
And i will not look for wine
_ Ben Johnson

1970 ರಲ್ಲಿ ಬರವಣಿಗೆ ಆರಂಭಿಸಿರುವ ಗೌರಿ ದೇಶಪಾಂಡೆಯವರು ಪ್ರಮುಖ ಮರಾಠಿ ಬರಹಗಾರ್ತಿ .ಹೆಣ್ಣಿನ ಜೀವನದ ಹಲವು ಮಜಲುಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ದಿಟ್ಟವಾಗಿ ವಿವರಿಸುವ ಸಾಂಪ್ರದಾಯಿಕ ರೀತಿಯಲ್ಲದೆ ಸಾಮಾಜಿಕ ಮಾನಸಿಕ ಸಾಂಸ್ಕ್ರತಿಕ ಹಾಗೂ ತಾತ್ವಿಕ ಪಾತಳಿಗಳಲ್ಲಿ ಅನಾವರಣಗೊಳಿಸುವ ಪ್ರಾಮಾಣಿಕ ಹಾಗೂ ಕ್ರಾಂತಿಕಾರಕ ಹೆಜ್ಜೆ ಅವರದು. ಕಿರುಕಾದಂಬರಿಗಳಾದರೂ ಅಲ್ಲಿನ ಹರವು ವಿಸ್ತಾರ ವಿಶಾಲ ಬೆರಗು ಹುಟ್ಟಿಸುವಂತಹುದು. 1942 ರಲ್ಲಿ ಜನ್ಮ, ಪುಣೆ ವಿಶ್ವವಿದ್ಯಾನಿಲಯದ ಪಿ ಎಚ್ ಡಿ. ಪತಿ ಹಾಂಕಾಂಗ್ ವಾಸ ಆಗಾಗ ಪ್ರಪಂಚಪರ್ಯಟನೆ ಮಾಡಿದ ಅನುಭವ . 12 ಮರಾಠಿ ಕಾದಂಬರಿಗಳ ಮತ್ತು 1 ಕಥಾಸಂಕಲನವನ್ನು ಇಂಗ್ಲಿಷಿನಿಂದ ಮರಾಠಿಗೆ ಹಾಗೂ ಮರಾಠಿ ಭಾಷೆಯಿಂದ ಇಂಗ್ಲಿಷಿಗೆ ಅನುವಾದಿಸಿದ್ದಾರೆ ಇವರು ಮಾರ್ಚ್ 1 2003 ರಲ್ಲಿ ನಿಧನ ಹೊಂದಿದರು .

ಈ ಕೃತಿಯನ್ನು ಕನ್ನಡಕ್ಕೆ ತಂದಿರುವ ಶ್ರೀ ಚಂದ್ರಕಾಂತ ಪೋಕಳೆ ಅವರು ಜನಿಸಿದ್ದು 20.08.1949.
ಕರ್ನಾಟಕ ವಿಶ್ವವಿದ್ಯಾನಿಲಯದ ಎಂ.ಎ ಪದವೀಧರರಾಗಿ ಈಗ ಬೆಳಗಾವಿಯ ಗಡಿಭಾಗದಲ್ಲಿ ನೆಲೆಸಿರುವ ಇವರು ಕನ್ನಡ ಮರಾಠಿ ಭಾಷೆಯ ಮೇಲಿನ ಪ್ರಭುತ್ವ ವಿದ್ವತ್ ಹಾಗೂ ಅಧ್ಯಯನಶೀಲತೆಯಿಂದ ಸುಮಾರು ಅರುವತ್ತಕ್ಕೂ ಹೆಚ್ಚು ಕೃತಿಗಳನ್ನು ,ಇನ್ನೂರಕ್ಕೂ ಹೆಚ್ಚು ಕಥೆಗಳನ್ನು ಐವತ್ತಕ್ಕೂ ಹೆಚ್ಚು ಕವಿತೆಗಳನ್ನು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ ಕುವೆಂಪು ಭಾಷಾ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರ ಮುಡಿಗೇರಿವೆ . ಅನುವಾದಕ್ಕೆ ಬೇಕಾದ ಸಾಂಸ್ಕೃತಿಕ ಜನಾಂಗೀಯ ಅಧ್ಯಯನಗಳ ಜೊತೆಗೆ ಅಲ್ಲಿನ ಆಡುನುಡಿ ಗ್ರಾಮ್ಯಭಾಷೆ ನುಡಿಕಟ್ಟುಗಳ ಸುಂದರ ಬಳಕೆಯೊಂದಿಗೆ ಮೂಲದಲ್ಲೇ ಓದಿದ ತೃಪ್ತಿಯನ್ನು ಕೊಡುತ್ತದೆ ಇದರ ಅನುವಾದ.

ತೇರೂವೋ” ಜಪಾನಿ ಭಾಷೆಯಲ್ಲಿ ಉದಯಿಸುವ ಸೂರ್ಯ ಎಂಬ ಅರ್ಥದ ಈ ಕಿರು ಕಾದಂಬರಿ ನಲವತ್ತೈದರ ಆಸು ಪಾಸಿನ ಮಹಿಳೆಯೊಬ್ಬಳ ಅಂತರಂಗವನ್ನು ಬಿಚ್ಚಿಡುತ್ತಾ ಹೋಗುತ್ತದೆ. ಅನುವಾದಕರ ಮಾತಿನಲ್ಲಿ ಹೇಳುವುದಾದರೆ” ಗೌರಿ ದೇಶಪಾಂಡೆ ಚಿತ್ರಿಸಿದ ಮಹಿಳೆ ಜೀವನಮೌಲ್ಯ ಅನುಸರಿಸಿ ತನ್ನನ್ನು ತಾನು ರೂಪಿಸಿಕೊಳ್ಳುತ್ತಾಳೆ. ಮದುವೆಯಾಗಲಿ ಬಿಡಲಿ, ಅದು ಅವಳ ಪ್ರತಿಷ್ಠೆಯ ಮೇಲೆ ಯಾವ ಪ್ರಭಾವ ಬೀರುವುದಿಲ್ಲ ಉಳಿದವರು ತನ್ನನ್ನು ವ್ಯಕ್ತಿ ಎಂದು ಪರಿಗಣಿಸಬೇಕು ಎನ್ನುವುದು ಅವಳ ಆಗ್ರಹ” . ( ಇಲ್ಲಿ ನಮ್ಮ ಮನುಸ್ಮೃತಿಯ”ನ ಸ್ತ್ರೀ ಸ್ವಾತಂತ್ರ್ಯಮರ್ಹತಿ” ಇಂತಹವರ ಮಗಳು ಹೆಂಡತಿ ತಾಯಿ ಎಂದೇ ಗುರುತಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ನೆನಪಿಸಿಕೊಳ್ಳಬಹುದು). ಇಂತಹ ಸ್ವತಂತ್ರ ಮನೋಭಾವದ ಕಥಾನಾಯಕಿ ತನ್ನ ಪತಿಯ ಉದ್ಯೋಗದ ಸಲುವಾಗಿ ವರ್ಷಗಟ್ಟಲೆ ವಿದೇಶಗಳ ವಾಸ ಮಾಡುವಾಗಲೆಲ್ಲ ಅವನೊಂದಿಗೆ ಹೋಗುವ, ವಿಭಿನ್ನ ಅನುಭವಗಳಿಗೆ ತೆರೆದುಕೊಳ್ಳುವ ದಿಟ್ಟ ಹೆಣ್ಣು. ವಿದೇಶ ಪ್ರವಾಸಕ್ಕೆ ಹೋಗುವುದಿಲ್ಲ ಎಂದರೆ ವಯಸ್ಸಾಯಿತು ಎಂದರ್ಥ ಅವಳ ದೃಷ್ಟಿಯಲ್ಲಿ 1 ವರ್ಷ 3 ತಿಂಗಳ ಅವಧಿಯ ಅವಳ ಜಪಾನ್ ವಾಸದ ಅನುಭವದ ಕಥನದ ಜೊತೆ ಜೊತೆಗೆ ಸಾಗುವ ಅವಳ ಅಂತರಾಳದ ಧ್ವನಿಗಳು ಹಾಗೂ ಅಲ್ಲಿನ ಅವಳ “ಪ್ರೇಮ ಪ್ರಸಂಗ”ದ ಅಧ್ಯಾಯದ ರೋಚಕತೆಯೇ ಕಾದಂಬರಿಯ ಕಥಾವಸ್ತು . ತನ್ನ ತಂದೆಯ ಸ್ನೇಹಿತರು ಹಾಗೂ ತನಗೂ ತುಂಬಾ ಆತ್ಮೀಯರಾದ “ಜಿ” ಅವರಿಗೆ ನಿಯಮಿತವಾಗಿ ಪತ್ರ ಬರೆಯುತ್ತಾ ಜಪಾನ್ ದೇಶದ ವೈಶಿಷ್ಟ್ಯತೆಯನ್ನು, ತನ್ನ ಅನುಭವ ಅಭಿಪ್ರಾಯಗಳನ್ನು ದಾಖಲಿಸುತ್ತಾ ಹೋಗುವ ಆಕೆ ತನ್ನ ಪ್ರಿಯಕರನಿಗೆ ಬರೆಯುವ ಪತ್ರಗಳು ಹಾಗೂ ತಿಂಗಳುಗಳನ್ನೇ ಶೀರ್ಷಿಕೆಯಾಗಿಸುತ್ತ ಒಂದು ಬಗೆಯ ಡೈರಿ ಎನ್ನುವಂತಹ ಅಂತರಂಗದ ಆಲಾಪಗಳ ಬರಹಗಳು ಸೇರಿ ಕಾದಂಬರಿಯಾಗಿದೆ. ಪ್ರೀತಿಯ ಉತ್ಕಟತೆಯನ್ನು ಬಿಚ್ಚಿ ಹೇಳುತ್ತಾ ಹೋಗುವ ಪರಿ ಅನನ್ಯ. ಬರವಣಿಗೆಯ ಶೈಲಿ ಹಾಗೂ ಅದನ್ನು ಅನುವಾದಿಸಿರುವ ರೀತಿ ಮನಮುಟ್ಟುತ್ತದೆ. ಇಲ್ಲಿ ನಾಯಕಿ ಯಾವುದೇ ಪ್ರಾಂತ್ಯಕ್ಕೆ ಸೀಮಿತವಾಗದ ಬರೀ ಭಾರತೀಯ ನಾರಿಯಾಗಿ ಹೊರಹೊಮ್ಮಿರುವುದು ಹಾಗೂ ಅನುವಾದಿತ ಕೃತಿ ಎಂದೆನಿಸದೆ ಸುಲಲಿತ ಸುಭಗವಾಗಿ ಸಾಗುವುದು ಕಾದಂಬರಿಯ ವೈಶಿಷ್ಟ್ಯ ಹಾಗೂ ಅದು ಗೆದ್ದಿರುವುದು ಇಲ್ಲೇ .

ಆಧುನಿಕ ಮನೋಭಾವದ ಹೆಣ್ಣಿನ ಕಾಡದ ಅನೈತಿಕತೆಯ ಪ್ರಜ್ಞೆಯನ್ನು , ನಿರಾಸೆ ಹತಾಶೆ ಹಣೆಬರಹಕ್ಕೆ ಶರಣು ಎನ್ನದ ಮುಕ್ತ ಮನೋಭಾವವನ್ನು ಎತ್ತಿಹಿಡಿಯುವ ಕಾದಂಬರಿ. ಹೀಗೂ ಉಂಟೇ ಎಂಬ ಭಾವ ಮೂಡಿಸುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಎಷ್ಟೇ ಮುಂದುವರಿದಿದ್ದೇವೆ ಅಂದುಕೊಂಡರೂ ನಿರ್ಭಿಡೆಯಾಗಿ “ಆತ ಇಷ್ಟವಾದ” ಎಂದು ಹೇಳಲು ಸಂಕೋಚ ಪಡುವ ಸ್ವಾತಂತ್ರ್ಯವಿರದ ಸಮಾಜದಲ್ಲಿ ಈ ಕಥಾ ನಾಯಕಿ ವಿಭಿನ್ನವಾಗಿ ನಿಲ್ಲುತ್ತಾಳೆ ವಿಶಿಷ್ಟ ವಾಗುತ್ತಾಳೆ. ಪ್ರೀತಿಯನ್ನು ಹೇಳಿಕೊಳ್ಳುವುದೇ ಕಷ್ಟ ಇರುವಾಗ ಲೈಂಗಿಕತೆಯ ಬಗ್ಗೆ ಮಾತನಾಡಲು ಅವಕಾಶವೇ ಇಲ್ಲ. ಅದೇ ಒಂದು ಸಂದರ್ಭದಲ್ಲಿ ಹೀಗೆ ವಿವರಿಸುತ್ತಾರೆ ಜಪಾನಿನಲ್ಲಿ ಬಾರ್ ಗೆ ಹೆಂಗಸರು ಹೋಗುವ ಪದ್ದತಿ ಇಲ್ಲ ಅದಕ್ಕಾಗಿಯೇ ಅಲ್ಲಿ ಮಾಮಸಾನ್ ಮತ್ತು ಕಂಪಾನಿಯನ್ ಗಳು ಇರುತ್ತಾರೆ . ಬಾರಿಗೆ ಹೋಗುವ ನಾಯಕಿಗೆ ಜಪಾನೀಯ ಗೆಳೆಯನೊಬ್ಬ ಹೇಳುತ್ತಾನೆ “ನಿಮ್ಮೊಂದಿಗೆ ಮಾತನಾಡಲು ಉತ್ಸಾಹ ಬರುತ್ತದೆ. ಆದರೆ ಮದುವೆಯಾಗುವುದು ನಿಮ್ಮಂಥವರನಲ್ಲ”. ಇಂತಹ ಇಬ್ಬಗೆಯ ನೀತಿ! ಅಂತಹ ಪರಿಸರದಲ್ಲಿ ಐವತ್ತರ ಹರೆಯದ ಪತಿಯ ಸಹೋದ್ಯೋಗಿ ಜಪಾನಿ ಗೆಳೆಯ ತೇರೂವೋ ನೊಂದಿಗೆ ಪ್ರಥಮನೋಟದ ಆಕರ್ಷಣೆ ಜೊತೆಗೆ ಪ್ರೀತಿ . ಅದೂ ಎಂತಹ ಪ್ರೀತಿ! ಅವನ ದೇಹದ ಕಣ ಕಣವನ್ನು ತುತ್ತು ಮಾಡಿಕೊಂಡು ತಿಂದು ಬಿಡಬೇಕೆನ್ನಿಸುವಷ್ಟು. ಇಲ್ಲಿ ಲೈಂಗಿಕ ಸ್ವಾತಂತ್ರ್ಯದ ಬಗ್ಗೆ ಮುಕ್ತವಾಗಿ ನಾಯಕಿಯ ಬಾಯಿಂದಲೇ ಹೇಳಿಸುತ್ತಾರೆ. ನೈತಿಕತೆಯ ವಾದ, ಸಾಮಾಜಿಕ ಕಟ್ಟುಪಾಡುಗಳು, ಮನದ ಪಾಪಭೀತಿ, ಸಂಪ್ರದಾಯಭೀರುತನ ಎಲ್ಲವನ್ನೂ ಒತ್ತಟ್ಟಿಗಿಟ್ಟು ಕಥೆಯಾಗಿ ನೋಡಿದಾಗ ಅಚ್ಚರಿ ಮೂಡುತ್ತದೆ. ಆಕೆಯ ಪತಿಯೇ ಒಂದೆಡೆ ತಮಾಷೆಯಿಂದ “ಸಿಕ್ಕಸಿಕ್ಕವರನ್ನು ಪ್ರೀತಿಸುವ ಚಟ ಇವಳಿಗೆ. ಇವಳ ಪ್ರಿಯಕರರ ಹೆಸರಿನ ಪಟ್ಟಿಯಿಂದ ಯಾವ ಯಾವ ದೇಶ ನೋಡಿದ್ದಾಳೆ ಎಂದು ತಿಳಿಯುತ್ತದೆ “ಎನ್ನುತ್ತಾನೆ . ಇದು ತಮಾಷೆಗಾಗಿಯೇ ಎಂದುಕೊಂಡರೂಅವಳು ಜಪಾನಿನ ತೇರೂವೋ ಪ್ರೀತಿಯಲ್ಲಿ ತೊಡಗಿಸಿಕೊಂಡ ರೀತಿ ಅತ್ಯಪೂರ್ವ.

ಅದಕ್ಕಿಂತ ಹೆಚ್ಚಿನದೆಂದರೆ ತೇರೂವೋ ಅದಕ್ಕೆ ಸ್ಪಂದಿಸಿದ ರೀತಿ. ಸಾಮಾನ್ಯ ಜಪಾನಿ ಮನೋಭಾವದ ನಿಯಮಿತ ಕಟ್ಟುಪಾಡುಗಳಿಗೆ ಒಳಗಾಗುವ ಪದ್ಧತಿಯ ಮಧ್ಯೆಯೂ ಈ ಪ್ರೇಮದ ಬಲೆಗೆ ಸಿಲುಕುವ, ವಿಶೇಷ ಕೌಟುಂಬಿಕ ನಿಯಮಗಳಿಗೆ ವಿರುದ್ಧವಾಗಿ ಅವಳನ್ನು ಪ್ರೀತಿಸುವ ಪ್ರೀತಿಸಿದ್ದನ್ನು ಒಪ್ಪಿಕೊಳ್ಳಲಾಗದೇ ಬಿಡಲಾಗದೆ ಮಟಮಟ ಮಧ್ಯಾಹ್ನದಲ್ಲೂ ಕುಡಿದು ಚಿತ್ತಾಗುವ ಮನೋಭಾವದ ಪರಿ ಅದ್ಭುತ. ಇವರ ಪ್ರೀತಿ ಹೇಗೆಂದರೆ ಅಲ್ಲಿ ದೇಹಸಂಪರ್ಕವೊಂದು ಅತಿಶಯದ ವಿಷಯವೇ ಅಲ್ಲ. ಹೀಗೆಂದು ಅದು ಘಟಿಸದೆ ಪ್ರೇಮ ಫಲಿಸುವುದೂ ಇಲ್ಲ.
ಒಬ್ಬರಿಂದ ಪಡೆಯುವುದಾಗಲಿ ಅಥವಾ ನೀಡುವುದಾಗಲಿ ಮಹತ್ವವಾಗಿ ಉಳಿಯುವುದೇ ಇಲ್ಲ .

ಮೊದಲಿಗೆ ಪ್ರೀತಿಗೆ ಬಿದ್ದುದಕ್ಕಾಗಿ ಪರಿತಪಿಸುವ ತೇರೂವೋ ನಂತರ ಪ್ರಣಯದ ಪರಾಕಾಷ್ಠತೆಯ ಸಂಭ್ರಮವನ್ನು ಅಗಲಿಕೆಯ ಕಹಿಸತ್ಯವನ್ನು ಲೆಟ್ ಇಟ್ ಬಿ ಎಂದೇ ಸ್ವೀಕರಿಸಿ ಆಯಾ ಕ್ಷಣವನ್ನು ಆಗಾಗಲೇ ಅನುಭವಿಸುವ ಪರಿ ಸೋಜಿಗವನ್ನುಂಟು ಮಾಡುತ್ತದೆ. ನಾಯಕಿಯೂ ಸಹ ಹಸೆಮಣೆ ಮನೋಭಾವವನ್ನು ರೂಢಿಸಿಕೊಳ್ಳುತ್ತಾಳೆ .ಹಾಗೆಯೇ ಈ ಸಾಲುಗಳು ಸಹ ಮನದಲಿ ನಿಂತವು

“ಉಳಿದ ಹೆಂಗಸರು ಆಭರಣ ಚಿನ್ನ ಬೆಳ್ಳಿ ದುಡ್ಡು ರೇಷ್ಮೆ ಸೀರೆಗಳನ್ನು ಸಂಗ್ರಹಿಸುವಂತೆ ನಾನು ನೆನಪುಗಳನ್ನು ಸಂಗ್ರಹಿಸುತ್ತೇನೆ. ಜಗಮಗಿಸುವ ಇಲ್ಲವೇ ಮಂದ ಮಧುರ ಹೊಂಬಣ್ಣದ ನೀಲಿ ಹಸಿರಿನದು ಸುವಾಸಿತ ನಾದಮಯ ಬೆಚ್ಚಗಿನ ತಣ್ಣಗಿನ ಸುಡುವ ಬೆಂಕಿಯದು ಅಥವಾ ಗ್ರಹ ನಕ್ಷತ್ರಗಳಿಂದ ಅಲಂಕರಿಸಿದ ರಾತ್ರಿಯದು”

ಭಾರತಕ್ಕೆ ಮರಳಿದ ಮೇಲೆ “ಜಿ” ಇವಳಲ್ಲಾದ ಬದಲಾವಣೆಯ ಸೂಕ್ಷ್ಮ ಗುರುತಿಸಿದರೂ ಆಕೆ ಈ ಸುಂದರ ನೆನಪನ್ನು ಹೃದಯ ಖಜಾನೆಯಿಂದ ತೆಗೆದಿಡಲು ಒಪ್ಪುವುದೇ ಇಲ್ಲ. ಜಗದಿಂದ ಮುಚ್ಚಿಡಲೇ ಬಯಸುತ್ತಾಳೆ. ಅನುಭವದ ಸವಿಯ ಝಲಕು ಎಲ್ಲಿ ಮರೆಯಾಗುವುದೋ ಎಂದು ಮತ್ತೊಮ್ಮೆ ಜಪಾನಿಗೆ ಹೋಗುವ ಸಂದರ್ಭ ಬಂದರೂ ಹೋಗಲು ಮನಸ್ಸು ಮಾಡುವುದಿಲ್ಲ.

ಕಥೆಯಲ್ಲಿನ ಜಪಾನ್ ಬಗೆಗಿನ ವಿವರಣೆಗಳು ಹೊಸಜಗತ್ತಿನ ಪರಿಚಯದೊಂದಿಗೆ ಅಲ್ಲಿನ ಸಂಸ್ಕೃತಿಯ ಹೋಲಿಕೆ ವಿಶ್ಲೇಷಣೆ ಮಾಡುವುದು ಮೌಲಿಕವಾಗುತ್ತದೆ .ಮಾಮೂಲಿ ಚರ್ವಿತಚರ್ವಣ ಪ್ರೇಮಕಥೆಗಳಿಗಿಂತ ಭಿನ್ನವಾಗಿ ನಿಲ್ಲುವ, ಹೀಗೂ ಕಾದಂಬರಿ ಬರೆಯಬಹುದಾ ಎಂದೆನಿಸಿದ ಕಥೆ . ಇತ್ತೀಚಿನ ದಿನಗಳಲ್ಲಿ ಅಪರೂಪಕ್ಕೆ ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋದರೂ ಅರ್ಥವಾಗದೇ ಮತ್ತೆ ಪರೀಕ್ಷೆಗೆ ಓದಿದಂತೆ ಪುನರಾವರ್ತನೆ ಮಾಡಿಸಿದ ಕಾದಂಬರಿ. ಸಂಬಂಧಗಳ ಸೂಕ್ಷ್ಮತೆಯ ರೂಹುಗಳನ್ನು ಪದರ ಪದರವಾಗಿ ಅನಾವರಣ ಮಾಡಿಸಿದ ಕಾದಂಬರಿಗಾರ್ತಿಗೂ ಅದನ್ನು ಅಚ್ಚುಕಟ್ಟಾಗಿ ಉಣಬಡಿಸಿದ ಅನುವಾದಕರಿಗೂ ಅನಂತ ನಮನಗಳು.

ಸುಜಾತಾ ರವೀಶ್

Related post

Leave a Reply

Your email address will not be published. Required fields are marked *