ದಂಶಕಗಳ ಲೋಕ – Rodents World

ದಂಶಕಗಳ ಲೋಕ

ದಂಶಕಗಳು, ಯುಗ್ಮದಂತಿಗಳು, Rodents, Gnawing animals ಎಂದೆಲ್ಲಾ ಕರೆವ ಈ ಗಣದ ಪ್ರಾಣಿಗಳು ಸಸ್ತನಿಗಳಲ್ಲೇ ದೊಡ್ಡ ಸಂಖ್ಯೆಯ ಗುಂಪನ್ನು ಹೊಂದಿವೆ. ಈ ಗಣದಲ್ಲಿ ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ನಿರ್ಮಿಸಬಲ್ಲ ಬೀವರ್ (Beaver) ಗಳಿಂದ ಹಿಡಿದು ಮನೆಯಲ್ಲಿರುವ ವಸ್ತುಗಳನ್ನು ಕಡಿದು ಅಪಾರ ಹಾನಿ ಮಾಡಬಲ್ಲ ಇಲಿ ಹೆಗ್ಗಣಗಳು ಸೇರಿವೆ.

ಈ ದಂಶಕಗಳ ದೇಹರಚನೆಯೇ ಒಂದು ರೀತಿಯ ವಿಶೇಷ, ಈ ಗುಂಪಿನ ಜೀವಿಗಳಿಗೆ ಮೇಲ್ದವಡೆ ಮತ್ತು ಕೆಳ ದವಡೆಗಳಲ್ಲಿ ಉಳಿಯಂತಿರುವ ಜೋಡಿ ಬಾಚಿ ಹಲ್ಲುಗಳಿದ್ದು ಈ ಹಲ್ಲುಗಳ ಮುಂಭಾಗದಲ್ಲಿ ಮಾತ್ರ ಬಿರುಸಾದ( Enamel) ಲೇಪವಿದೆ, ಇವುಗಳಿಗೆ ಕೋರೆ ಹಾಗು ಮುಂದಿನ ದವಡೆ ಹಲ್ಲುಗಳು ಇಲ್ಲ. ದವಡೆಯ ಎರಡೂ ಬದಿಗಳಲ್ಲಿ ಮೂರು ದವಡೆ ಹಲ್ಲುಗಳು ಇವೆ. ಮೇಲಿನ ತುಟಿ ಸೀಳಿದಂತ ರಚನೆ ಇರುವುದರಿಂದ ಕೆಲ ಜೀವಿಗಳು ಬಾಯಿ ಮುಚ್ಚಿದರೂ ಹಲ್ಲುಗಳು ಕಾಣುತ್ತಿರುತ್ತದೆ.

ಈ ಗುಂಪಿನ ಪ್ರಾಣಿಗಳಲ್ಲಿ ಮುಂದಿನ ಬಾಚಿ ಹಲ್ಲುಗಳು ಸದಾ ಕಾಲ ಬೆಳೆಯುತ್ತಿರುತ್ತವೆ, ಕಠಿಣ ವಸ್ತುಗಳನ್ನು ಕಡಿ ಕಡಿದು ತಮ್ಮ ಹಲ್ಲುಗಳನ್ನು ನಿಯಮಿತವಾಗಿ ಸವೆಸಿಕೊಳ್ಳಬೇಕು ಇಲ್ಲದ್ದಿದ್ದರೆ ಮುಂದಿನ ಹಲ್ಲುಗಳು ಉದ್ದವಾಗಿ ಬೆಳೆದು ಇವುಗಳ ಜೀವಕ್ಕೆ ಕುತ್ತು ತರುತ್ತವೆ. ಇನ್ನು ಮುಂದೆ ಇಲಿ ಹೆಗ್ಗಣಗಳು ನಿಮ್ಮ ಮನೆಯ ವಸ್ತುಗಳನ್ನು ಕಡಿದು ಹಾಳು ಮಾಡಿದರೆ ನೀವು ಕೋಪಿಸಿಕೊಳ್ಳುವಂತಿಲ್ಲ, ಏಕೆಂದರೆ ಇದು ಇಲಿ ಹೆಗ್ಗಣಗಳ ಜೀವದ ಪ್ರಶ್ನೆ! ಬೇರೆ ಜೀವಿಗಳ ಸಮಸ್ಯೆಯನ್ನು ನೀವು ಸ್ವಲ್ಪ ಅರ್ಥ ಮಾಡಿಕೊಳ್ಳಲು ಕಲಿಯಿರಿ! 🤣🤣

ಪ್ರಪಂಚದ ಬಹುತೇಕ ಎಲ್ಲ ಪರಿಸರಕ್ಕೆ ಹೊಂದಿಕೊಂಡಿರುವ ಇವು ಉಗುರುಗಳಿರುವ ಕಾಲ್ಬೆರಳುಗಳು ಇದ್ದರೂ ಕೆಲ ಪ್ರಾಣಿಗಳು ಬಿಲ ಕೊರೆಯಲು ಹಲ್ಲುಗಳನ್ನು ಬಳಸುತ್ತವೆ. ಕೆಲ ಗ್ರಾಂಗಳನ್ನು ತೂಗುವ ಪ್ರಾಣಿಗಳಿಂದ ಹಿಡಿದು 30-40 ಕೆ ಜಿ ತೂಗುವ ದೊಡ್ಡ ಪ್ರಾಣಿಗಳೂ ಇವೆ, ಇವು ಅತೀ ಸಂತಾನಿಗಳಲ್ಲದೆ ಹೊಟ್ಟೆ ಬಾಕ ಪ್ರಾಣಿಗಳೂ ಹೌದು. ವೇಗವಾಗಿ ಸಂತಾನೋತ್ಪತ್ತಿ ಮಾಡುವ ಇವುಗಳಲ್ಲಿ 2-18 ಮೊಲೆಗಳು ಇರುವ ಪ್ರಾಣಿಗಳನ್ನು ನೋಡಬಹುದು. ಕೆಲವು ಬಾಲಗಳನ್ನು ಹೊಂದಿದ್ದರೆ ಕೆಲವಕ್ಕೆ ಬಾಲವಿಲ್ಲ, ಇನ್ನು ಕೆಲವು ಜೀವಿಗಳ ಬಾಲಗಳು ಈಜಲು ಅನುಕೂಲವಾಗುವಂತೆ ಚಪ್ಪಟೆಯಾಗಿವೆ. ಕೆಲವು ಜೀವಿಗಳಂತೂ ಬಹಳ ಹೊತ್ತು ನೀರಿನಲ್ಲೇ ಕಾಲ ಕಳೆಯುತ್ತವೆ. ಇವು ವಾಡಿಕೆಯಾಗಿ ಸಸ್ಯಹಾರಿಗಳು, ಕೆಲವು ಮಿಶ್ರ ಹಾರಿಗಳು ಇವೆ.

ಈ ದಂಶಕ ಪ್ರಾಣಿಗಳ ಕೆಲವು ವಿಶೇಷಗಳನ್ನು ನೋಡುವುದಾದರೆ:

ಉತ್ತರ ಅಮೆರಿಕಾದ Beaver

ಉತ್ತರ ಅಮೆರಿಕಾದಲ್ಲಿ ಕಂಡು ಬರುವ Beaver ಜೀವಿಸಿರುವ ದಂಶಕ ಪ್ರಾಣಿಗಳಲ್ಲೇ ಎರಡನೇ ದೊಡ್ಡ ಗಾತ್ರ ಹೊಂದಿದೆ.ಇದು ದೊಡ್ಡ ದೊಡ್ಡ ಮರಗಳನ್ನು ಕತ್ತರಿಸಿ ಕೆಡವಿ ಮರದ ಕೊಂಬೆಗಳನ್ನು ಬಳಸಿ ದೊಡ್ಡ ಜಲಾಶಯಗಳನ್ನು (Dam) ನಿರ್ಮಿಸುತ್ತದೆ, ಕೆಲ ಜಲಾಶಯಗಳು 5 ಮೀಟರ್ ಎತ್ತರ ಇದ್ದರೆ, ಕೆನಡಾದ ಆಲ್ಬರ್ಟ ಸಮೀಪ Beaver ನಿರ್ಮಿಸಿದ ಜಲಾಶಯವಂತೂ ಬರೋಬ್ಬರಿ 850 ಮೀಟರ್ ಉದ್ದವಿದೆ!!

ಬೀವರ್ ಜಲಾಶಯ ನಿರ್ಮಿಸುವುದರ ಹಿಂದಿನ ಉದ್ದೇಶ ಆಕ್ರಮಣ ಮಾಡುವ ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಮತ್ತು ತಮ್ಮ ಆಹಾರವನ್ನು ತಂಪಾಗಿ ಸಂಗ್ರಹಿಸಲು ಬಳಸುತ್ತವೆ.

ಹಾರುವ ಅಳಿಲು

ದಂಶಕಗಳಲ್ಲಿ ಕೆಲವು ಪ್ರಾಣಿಗಳು ಹಾರಬಲ್ಲವು (Gliding) ನಮ್ಮಲ್ಲಿರುವ ‘ಹಾರುವ ಅಳಿಲು’ ದಂಶಕಗಳ ಗುಂಪಿಗೆ ಸೇರಿದ್ದು, ಮರದಿಂದ ಮರಕ್ಕೆ ತೇಲಿಕೊಂಡು ಇಳಿಯುತ್ತದೆ.

ನಮ್ಮಲ್ಲಿರುವ ಮುಳ್ಳುಹಂದಿ ನಮ್ಮ ದೇಶದ ದೊಡ್ಡ Rodent ಎನಿಸಿದೆ, ನಿಶಾಚರಿಯಾದ ಇದು ಆಹಾರಕ್ಕಾಗಿ ರಾತ್ರಿ ವೇಳೆ ಕಿಲೋಮೀಟರ್ ಗಟ್ಟಲೆ ಅಲೆಯುತ್ತದೆ.

ಮುಳ್ಳುಹಂದಿ

ನಮ್ಮಲ್ಲಿರುವ ಮೊಲ(Hare) ದಂಶಕ ಗುಂಪಿಗೆ ಸೇರಿದ್ದು ಇದು ಬೆಳೆಗಳನ್ನು ತಿನ್ನುವುದರ ಜೊತೆಗೆ ಕತ್ತರಿಸಿಯೂ ಹಾಳು ಮಾಡುತ್ತದೆ (ಹಲ್ಲುಗಳನ್ನು ಸವೆಸಲು)

ಮೊಲ

ನಮ್ಮಲ್ಲಿರುವ ಇಲಿ ಹೆಗ್ಗಣ ಕೂಡ ದಂಶಕ ಗುಂಪಿಗೆ ಸೇರಿದ್ದು , ಅಪಾರ ಬೆಳೆ ಹಾನಿ ಜೊತೆಗೆ ಮನೆಯ ಬೆಲೆ ಬಾಳುವ ವಸ್ತುಗಳನ್ನು ಕಡಿದು ಹಾಳು ಮಾಡುತ್ತವೆ. ಕೆಲ HDPE ಪೈಪುಗಳು, ಕೃಷಿಗೆ ಬಳಸುವ ಡ್ರಿಪ್ ಪೈಪ್ಗಳನ್ನು ಕಡಿದಾಗ ಹಲ್ಲಿಗೆ ಅಂಟುವುದರಿಂದ ಅವುಗಳ ತಂಟೆಗೆ ಹೋಗುವುಲ್ಲ.

ಕೇವಲ 3 ಗ್ರಾಂ ತೂಗುವ pygmy jerboa ಪ್ರಪಂಚದ ಅತಿ ಚಿಕ್ಕ ದಂಶಕ ಎನಿಸಿದೆ.

30 ಕೆ ಜಿ ಗೂ ಅಧಿಕ ತೂಗುವ ದಕ್ಷಿಣ ಅಮೆರಿಕಾದ ಕ್ಯಾಪಿಬಾರ (Capybara) ಪ್ರಪಂಚದ ಅತೀ ದೊಡ್ಡ ದಂಶಕ ಪ್ರಾಣಿ ಎನಿಸಿದೆ, ಇದು ಅನಕೊಂಡ ಹಬ್ಬಾವಿನ ಪ್ರಿಯವಾದ ಆಹಾರವು ಹೌದು.

ದಂಶಕಗಳಲ್ಲಿ ಕೆಲವು ರೋಗವನ್ನು ಹರಡುತ್ತವೆ, ನಮ್ಮಲ್ಲಿರುವ ಇಲಿಗಳು ಪ್ಲೇಗ್‌, ಇಲಿ ಜ್ವರಕ್ಕೆ ಕಾರಣವಾಗಿವೆ. ಇಲಿ ಹೆಗ್ಗಣಗಳು ಬದಲಾಗುತ್ತಿರುವ ಪರಿಸರಕ್ಕೆ ತಕ್ಕಂತೆ ಹೊಂದಿಕೊಂಡು ಬದುಕುವ ಶಕ್ತಿ ಹೊಂದಿವೆ.

ದಂಶಕಗಳಾದ ಇಲಿ ಹೆಗ್ಗಣ ಜಮೀನಿನಲ್ಲಿ ಕೊರೆದ ಬಿಲಗಳು ನೈಸರ್ಗಿಕ ಇಂಗು ಗುಂಡಿಗಳಂತೆ ಕೆಲಸ ಮಾಡುತ್ತವೆ, ಇವು ಹಾವು,ಗೂಬೆಗಳಿಗೆ ಆಹಾರ ಕೂಡ ಹೌದು ಈ ಮೂಲಕ ಆಹಾರ ಸರಪಳಿಯ ಕೊಂಡಿಯಾಗಿಯೂ ಕೆಲಸ ಮಾಡುತ್ತವೆ. ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಸಂಶೋದನೆಗಳನ್ನು ಮಾಡಿದಾಗ ಅವರ ಪಲಿತಾಂಶ ತಿಳಿಯಲು ಇಲಿಗಳ ಮೇಲೆ ಪ್ರಯೋಗಿಸುತ್ತಾರೆ.

ವಿಪರೀತ ಕಳ್ಳಬೇಟೆ, ಅರಣ್ಯ ನಾಶ, ಆವಾಸ ನಾಶ ಮುಂತಾದ ಕಾರಣಗಳಿಂದ 60ಕ್ಕೂ ಅಧಿಕ ದಂಶಕ ಪ್ರಭೇದದ ಜೀವಿಗಳು ಇಂದು ಅಳಿವಿನ ಅಂಚಿನಲ್ಲಿವೆ (Critically endangered) ಕೆಲವು ವಿನಾಶ ಹೊಂದಿವೆ.

ನಾಗರಾಜ್ ಬೆಳ್ಳೂರು
ನಿಸರ್ಗ ಕನ್ಸರ್ವೇಶನ್ ಟ್ರಸ್ಟ್

–ವನ್ಯ ಜೀವಿ ಸಂಕುಲವನ್ನು ಉಳಿಸುವುದು ಮಾನವನ ಆದ್ಯ ಕರ್ತವ್ಯ–

Related post

Leave a Reply

Your email address will not be published. Required fields are marked *