ಭಾರ ಹೊರುವವರಿದ್ದರೆ ದಯವಿಟ್ಟು ಬೇಗ ತಿಳಿಸಿ
ನಿಮ್ಮಿಂದ ಉಪಕಾರವಾದೀತು
ಚಿಕ್ಕ ಋಣವಾದರೂ ನನ್ನ ಮೇಲಿರಲಿ
ನಿಮ್ಮ ಸಹಾಯಹಸ್ತಗಳನ್ನು ಪೂಜಿಸುತ್ತಾ..
ನಾನೂ ನಿಮ್ಮ ದಾರಿ ಸೇರಿಕೊಳ್ಳುತ್ತೇನೆ
ಹೀಗೊಂದು ಜೀವ ಚಡಪಡಿಸುವಾಗ
ಯಾರೂ ಮುಂಬರಲಿಲ್ಲ! ಕಾರಣ, ಅನ್ಯ ಜಾತಿಯವ
ಸಾವು ಎಲ್ಲರನ್ನೂ ಹೆದರಿಸಿ, ಹೇಡಿಯನ್ನಾಗಿ ಮಾಡುತ್ತದೆ
ಇಷ್ಟು ದಿನ ಬೇಡದ ಬದುಕಿನಲ್ಲಿ
ಆ ಕ್ಷಣದಿಂದ ಜೀವಿಸುವ ಆಶೆ ಮೂಡಿಸುತ್ತದೆ
ಬಯಕೆಗಳೆಲ್ಲ ಈಡೇರುವಂತಿದ್ದರೆ..
ಚಟ್ಟ ಏರಬೇಕಾದವರೆಲ್ಲ ಪಟ್ಟವೇರಿಬಿಡುತ್ತಿದ್ದರು
ಅದಕ್ಕೆಲ್ಲಾ ಪಕೃತಿ ಒಪ್ಪಬೇಕಲ್ಲಾ!
ಎಲ್ಲದಕ್ಕೂ ಯೋಜನೆಗಳು ಸಿದ್ಧವಾಗಿವೆ
ಒಂದಾದ ಮೇಲೊಂದರಂತೆ ಪ್ರಯೋಗಿಸುತ್ತದೆ
ನೋಟಿನ ಚಳಕ ಇಲ್ಲಿ ನಡೆಯುವುದೇ ಇಲ್ಲ!
ಎಲ್ಲರೂ ಸಮಾನರೇ.. ಮಣ್ಣಲ್ಲಿ ಮಣ್ಣಾಗಲೇಬೇಕು
ಸಾಗಿಸಲು ಯಾರೂ ಇಲ್ಲವೆಂದಾಗ ನಾನು ಬರುತ್ತೇನೆ
ದಾರಿಬಿಡಿ!!
ನಾಲ್ಕೇ ಚಕ್ರ, ನಾಲ್ಕು ಜನರ ಸಮಾನ
ಆದಷ್ಟು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ
ರಸ್ತೆಯಲ್ಲಿನ ಜನ ಸಹಕರಿಸದಿದ್ದರೆ..
ಅದು ನಿಮ್ಮ ಸಂಪಾದನೆಯಾಗುತ್ತದೆ
ನಾನು ಎಷ್ಟು ಓಡಿದರೂ..
ನಿಮ್ಮ ಪ್ರಾಣಪಕ್ಷಿಗಿರುವಷ್ಟು ವೇಗ ನನ್ನದಲ್ಲ
ದಾರಿಬಿಡಿ ದಯವಿಟ್ಟು.. ಕೇಳಿ ಗೋಳನು ಕಿವಿ ಕೊಟ್ಟು
ನನಗೆ ನೀವು ಯಾವ ಧರ್ಮದವರೆಂದು ಬೇಕಿಲ್ಲ
ಒಂದೇ ಒಂದು ಉಚಿತ ಕರೆ ಸಾಕು, ಬೇಗ ಬಂದುಬಿಡುತ್ತೇನೆ
ನನ್ನ ಕೆಲಸವೇ ಅದು, ಎಂದಿಗೂ ಬೇಸರವಾಗಿಲ್ಲ
ಬೇಸರವಾದ ದಿನ ನನ್ನನ್ನು ಯಾರು ಒಯ್ಯುತ್ತಾರೋ..
ದಾರಿಬಿಡಿ.. ನಾನು ಬರುತ್ತಿದ್ದೇನೋ.. ಹೋಗುತ್ತಿದ್ದೇನೋ..
ತಿಳಿದವರು ಇತರರಿಗೂ ತಿಳಿಸಿ, ದಾರಿ ಬಿಡಿಸಿ!

ಅನಂತ ಕುಣಿಗಲ್
2 Comments
Very nice poetry sir👌👌👌👌👌
Nanage anisutte nimma ondodu kathe.kavite namma jivannakke saripadisuva pathagalu anta syllabus oduvudu bere adare nimma kathegalu kavanagalu jivanakke adhara anna