ದಾಸವಾಳದ ದಾಸನಾಗಿ ನೋಡು ಒಮ್ಮೆ

ಹೂಗಳನ್ನು ದೇವರ ಪಟಕ್ಕೆ ಅಥವಾ ಮೂರ್ತಿಗೆ  ಅರ್ಪಿಸುವ, ಮುಡಿಸುವ, ಹಾರ ಹಾಕುವುದು ನಮ್ಮ ಸಂಸ್ಕೃತಿ. ಅದರಲ್ಲೂ ಈ ದಾಸವಾಳ ಹೂ ದೇವರ ಫೋಟೋ ಮೇಲೆ ಕೂತರಂತೂ ನೋಡುವವರಿಗೆ ಭಕ್ತಿ ರಸಧಾರೆ ಹರಿಸುವುದರಲ್ಲಿ ಸಂಶಯವಿಲ್ಲ.

ಪ್ರಪಂಚಾದ್ಯಂತ ಮೂರು ಲಕ್ಷದ ತೊಂಬತೊಂದು ಸಾವಿರಕ್ಕೂ (3,91,000) ಹೆಚ್ಚು ಜಾತಿಯ ಸಸ್ಯಗಳಿವೆ ಮತ್ತು ಅವುಗಳಲ್ಲಿ ಬಹಳಷ್ಟು ಸಸ್ಯಗಳು ಅತ್ಯಂತ ವಿಶಿಷ್ಟ ಲಕ್ಷಣಗಳನ್ನು ಹೊಂದಿವೆ. ಇಂತಹ ಅಗಾಧ ಸಸ್ಯರಾಶಿಯಲ್ಲಿ ಅತೀ ಹೆಚ್ಚು ಪ್ರಾಮುಖ್ಯತೆ ಹೊಂದಿರುವ ಅತಿ ಪರಿಚಿತವೆಂದರೆ “ದಾಸವಾಳ”.

ದಾಸವಾಳಗಳು ಮ್ಯಾಲೋಗಳ (ಕೆನ್ನೀಲಿ ಬಣ್ಣದ ಹೂವು ಬಿಡುವ ಕಾಡು ಜಾತಿಯ ಗಿಡಗಳ) ವರ್ಗಕ್ಕೆ ಸೇರಿದ ಮಾಲ್ವಸಿಯೇ ಜಾತಿಯ ಹೂ ಬಿಡುವ ಸಸ್ಯವಾಗಿದ್ದು ಇದರಲ್ಲಿ ಸುಮಾರು 200 ಕ್ಕೂ ಹೆಚ್ಚು ಪ್ರಭೇದಗಳಿವೆ. ಈ ಸಸ್ಯವು ಜಗತ್ತಿನಾದ್ಯಂತ ಶಾಖದ ತಾಪಮಾನಗಳಲ್ಲಿ ಅತಿ ಸುಲಭವಾಗಿ ಬೆಳೆಯಬಹುದಾಗಿದೆ. ಈ ಸಸ್ಯವು ಸಾಮಾನ್ಯವಾಗಿ ತಮ್ಮ ಸುಂದರ ವರ್ಣರಂಜಿತ ಹೂಗಳಿಂದ ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತದೆ. ಆಂಗ್ಲ ಬಾಷೆಯಲ್ಲಿ ಹೈಬಸ್ಕಸ್ (hibuscus) ಎಂದು ಕರೆಯಲ್ಪಡುವ ಈ ಸಸ್ಯವು ಹಳ್ಳಿಯ ಮನೆ ಮನೆಗಳಲ್ಲಿಯೂ ಕಂಗೊಳಿಸುತ್ತದೆ.

ಕೆಂಪು, ಹಳದಿ, ಬಿಳಿ ಹಳದಿ, ನೀಲಿ, ಕೇಸರಿ, ಇನ್ನು ಅನೇಕ ಮಿಶ್ರವರ್ಣಗಳಲ್ಲಿ ಲಭ್ಯವಿರುವ ಈ ಸಸ್ಯವನ್ನು ಮನೆಯ ಅಂಗಳದಲ್ಲಿ, ಕುಂಡಗಳಲ್ಲಿ ಬೆಳೆಸಿದರೆ ಎಲ್ಲರ ಕನ್ಸೆಳೆಯುತ್ತ ಕಣ್ಣಿಗೆ ಮುದ ನೀಡುತ್ತಾ ಬೆಳೆಯುತ್ತದೆ. ದೇವರ ಮುಡಿಗೆ ಹೂಗುಚ್ಛದ ಬದಲು ಒಂದು ದಾಸವಾಳವನ್ನು ಮೂಡಿಸಿ ನೋಡಿ ಅದೆಷ್ಟು ಚಂದ ನೋಡಿದಾಕ್ಷಣ ಭಕ್ತಿ ಭಾವ ಒಸರುತ್ತದೆ. ಮನೆಯ ಅಂಗಳದಲ್ಲಿ ಬಿಡಿಸಿದ ಅಂದದ ರಂಗೋಲಿಯನ್ನು ದಾಸವಾಳದಿಂದ ಅಲಂಕರಿಸಿದರೆ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ದಾಸವಾಳ ಸಸ್ಯವು ತನ್ನ ಕಣ ಕಣ ದಲ್ಲೂ ಔಷಧೀಯ ಗುಣಗಳನ್ನು ಹೊಂದಿದೆ. ದಾಸವಾಳದ ಎಲೆಗಳಲ್ಲಿ ಅಪಾರ ಪ್ರಮಾಣದ ವಿಟಮಿನ್ “ಸಿ” ಕಬ್ಬಿಣದ ಅಂಶ ಹಾಗು ಸೋಡಿಯಂ ನಿಂದ ಒಳಗೊಂಡಿದೆ. ಹಳ್ಳಿಗಳಲ್ಲಿ ಈಗಲೂ ದೋಸೆ ಹಿಟ್ಟಿನ ಜೊತೆ 8-10 ಬಿಳೀ ದಾಸವಾಳಗಳನ್ನು ಸೇರಿಸುತ್ತಾರೆ. ಎಲೆಗಳಿಂದ ಕಷಾಯವನ್ನು ಮಾಡಲಾಗುತ್ತದೆ. ದಾಸವಾಳದ ಎಲೆಗಳು ನಮ್ಮ ರಕ್ತವನ್ನು ವೃದ್ಧಿಸುವುದಲ್ಲದೆ ಹೃದಯ ಸಂಬಂದಿ ರೋಗಗಳಿಗೆ ರಾಮ ಬಾಣವಾಗಿದೆ. ರಕ್ತದೊತ್ತಡವನ್ನು ನಿಯಂತ್ರಿಸುವ ಗುಣಗಳನ್ನು ಹೊಂದಿದ್ದು ರಕ್ತದಲ್ಲಿನ ಕೊಲೆಸ್ಟ್ರಾಲ್ ನನ್ನು ನಿಯಂತ್ರಣಕ್ಕೆ ತರಲು ಬಹಳಷ್ಟು ಸಹಕಾರಿ.

ದಾಸವಾಳ ಹೂ ನೋಡಲು ಅಂದವಷ್ಟೇ ಅಲ್ಲ ಅದರೊಳಗಿನ ಔಷಧೀಯ ಗುಣಗಳು ಅಪಾರ. ಉತ್ಕರ್ಷಣ ನಿರೋಧಕ (antioxidant) ಗಳಿಂದ ಕೂಡಿರುವ ಹೂಗಳು ಹೆಣ್ಣು ಮಕ್ಕಳ ಅಂದದ ರೇಷ್ಮೆಯಂತಹ ಕಾಂತಿಯುಕ್ತ ಕೂದಲು ಬೆಳೆಯಲು ಸಹಕಾರಿ. ದಾಸವಾಳದ ಹೂವಿನ ಪುಡಿಯನ್ನು ಚರ್ಮದ ಸೌಂದರ್ಯವನ್ನು ವೃದ್ಧಿಸಲು ಉಪಯೋಗಿಸಲ್ಪಡುತ್ತದೆ. ಹೂಗಳು ಹೃದಯ ಹಾಗು ಲೀವರ್ ಸಂಬಂಧಿ ಕಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದೆ. ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ದಾಸವಾಳದ ಹೂಗಳಲ್ಲಿ ಕ್ಯಾನ್ಸರ್ ನಂತಹ ಕಾಯಿಲೆಗಳ ವಿರುದ್ಧ ಪರಿಣಾಮಕಾರಿಯೂ ಹೌದು.

ಅತೀ ಸರಳ ಅತೀ ಪರಿಚಿತ ದಾಸವಾಳದಲ್ಲಿನ ಈ ಗುಣಗಳನೆಲ್ಲಾ ತಿಳಿದುಕೊಂಡ ಮೇಲೆ ನೀವು ಕೂಡ ದಾಸವಾಳದ ದಾಸರಾಗಿ ನಿಮ್ಮ ಮನೆಯಂಗಳದಲ್ಲಿ ದಾಸವಾಳ ಸಸ್ಯವನ್ನು ಬೆಳೆಸಲು ಸಜ್ಜಾಗಿ.

ನಿಮ್ಮ ಅನಿಸಿಕೆಗಳನ್ನೂ ಕಾಮೆಂಟ್ ಬಾಕ್ಸಿನಲ್ಲಿ ಅಥವಾ ಮೇಲ್ ಮೂಲಕ sahityamaithri@gmail.com ಗೆ ಹಂಚಿಕೊಳ್ಳಿ.

ಶಿಲ್ಪ

Related post

5 Comments

  • Very informative …!!!!
    Looking forward to read more articles like this.
    Thank you 😊

  • Very informative and content oriented article

  • After reading this I got know more information about this flower…

    Very helpful information thank you..

  • Very good Article it’s really informative

  • Nice article…….very informative….

Leave a Reply

Your email address will not be published. Required fields are marked *