ದೀಪಾವಳಿ – ಧರ್ಮಾತೀತ ಹಾಗೂ ದೇಶಾತೀತ ಹಬ್ಬ

ದೀಪಾವಳಿಧರ್ಮಾತೀತ ಹಾಗೂ ದೇಶಾತೀತ ಹಬ್ಬ

ಭಾರತದ ಪ್ರಮುಖ ಹಬ್ಬಗಳಲ್ಲಿ ದೀಪಾವಳಿಯೂ ಒಂದು. ದೀಪಾವಳಿ ಇದೊಂದು ಹಿಂದೂಗಳ ವಿಶೇಷ ಹಬ್ಬ. ಇದು ಭಾರತದವಷ್ಟೇ ಅಲ್ಲ, ಜಗತ್ತಿನ ಅನೇಕ ದೇಶಗಳಲ್ಲೂ ಆಚರಿಸಲ್ಪಡುವ ಧರ್ಮಾತೀತ ಹಾಗೂ ದೇಶಾತೀತ ಹಬ್ಬವಾಗಿದೆ. ಅಬಾಲವೃದ್ಧರೆಲ್ಲ ತುಂಬ ಸಡಗರ ಸಂಭ್ರಮದಿಂದ ಆಚರಿಸುವ ಹಬ್ಬ ಇದಾಗಿದೆ.

‘ದೀಪ’ ಇದು ಕತ್ತಲು ಕಳೆಯುವ ಒಂದು ಸಾಧನ. ‘ಆವಳಿ’ ಎಂದರೆ ಸಾಲು. ‘ದೀಪಾವಳಿ’ ಎಂದರೆ ಸಾಲಾಗಿ ದೀಪಗಳನ್ನು ಹಚ್ಚುವುದು. ಕತ್ತಲೆ ಅಜ್ಞಾನದ ಸಂಕೇತ. ಬೆಳಕು ಜ್ಞಾನದ ಸಂಕೇತ. ದೀಪ ಹಚ್ಚುವುದು ಎಂದರೆ ಅಜ್ಞಾನವನ್ನು ಕಳೆದು ಜ್ಞಾನವನ್ನು ಪಡೆಯುವುದು ಎಂದರ್ಥ. ‘ತಮಸೋ ಮಾ ಜ್ಯೋತಿರ್ಗಮಯ’ ಎಂದರೆ ‘ಕತ್ತಲೆಯಿಂದ ಬೆಳಕಿನತ್ತ ನನ್ನನ್ನು ಕರೆದುಕೊಂಡು ಹೋಗು’ ಎಂದು ಅರ್ಥ.

ದೀಪಾವಳಿ ಹಬ್ಬ ಎಂದ ತಕ್ಷಣ ಕಣ್ಣಮುಂದೆ ಬರುವುದು ದೀಪ, ಹಣತೆ, ಬೆಳಕು. ನಾವು ಪ್ರತಿನಿತ್ಯ ಮನೆಯಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ದೀಪ ಬೆಳಗುತ್ತೇವೆ, ದೀಪಾವಳಿ ಹಬ್ಬದಲ್ಲಿ ಹಣತೆ, ದೀಪ, ಬೆಳಕಿಗೆ ಬಹಳ ಪ್ರಾಮುಖ್ಯತೆ ಏಕೆ ಎಂದು ನೋಡಿದರೆ, ನಮ್ಮ ಸಂಸ್ಕೃತಿಯಲ್ಲಿ ದೀಪ ಬೆಳಗುವ ಮೂಲಕವೇ ಯಾವುದೇ ಕೆಲಸವನ್ನು ಆರಂಭಿಸುವುದು. ನಂದಾದೀಪವನ್ನು ಹಚ್ಚಿ ಪೂಜೆ ಪ್ರಾರಂಭಿಸುತ್ತೇವೆ. ದೀಪಗಳನ್ನೇ ಇಟ್ಟು ದೀಪದಿಂದಲೇ ಬೆಳಗುತ್ತೇವೆ, ಇಲ್ಲಿ ಲಕ್ಷ್ಮಿ ದೇವಿಯನ್ನು ನಮ್ಮ ಜೀವನ ವೃದ್ಧಿಯ, ಬೆಳಕಿನ ಸಂಕೇತವಾಗಿ ಕಾಣುತ್ತೇವೆ.

ದೀಪಾವಳಿ ಎನ್ನುವುದು ವಿಶೇಷವಾಗಿ ಋತು ಉತ್ಸವ. ನಮ್ಮ ಸನಾತನ ಧರ್ಮದಲ್ಲಿರುವ ಎಲ್ಲಾ ಹಬ್ಬಗಳನ್ನು ಋತುಗಳನ್ನು, ಪ್ರಕೃತಿಯಲ್ಲಿನ ಬದಲಾವಣೆ, ಮಾಸಗಳು, ತಿಥಿಗಳ ಬದಲಾವಣೆಗಳಿಗೆ ಹೊಂದಿಕೊಂಡು ಅದಕ್ಕೆ ತಕ್ಕಂತೆ ಆಚರಿಸುತ್ತೇವೆ. ಹೀಗಾಗಿ ನಾವು ಆಚರಿಸುವ ಪ್ರತಿಯೊಂದು ಹಬ್ಬವೂ ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುತ್ತದೆ. ಪ್ರಕೃತಿಯಲ್ಲಿ ನಾವು ಲಕ್ಷ್ಮಿ ದೇವಿಯನ್ನು ಕಾಣುತ್ತೇವೆ. ನಾವು ಯಾವುದೇ ಪ್ರದೇಶದಲ್ಲಿ ಜೀವಿಸುತ್ತಿರಲಿ, ಆಯಾ ಪರಿಸರದಲ್ಲಿ ಪ್ರಕೃತಿಯಲ್ಲಿ ಆಗುವ ಬದಲಾವಣೆಯನ್ನು ಭಗವಂತನ ಕೃಪೆ, ಲಕ್ಷ್ಮಿಯ ಲೀಲಾವಿಲಾಸ ಎಂದು ಭಾವಿಸಿ ನಾವು ಋತುಗಳ ಹಬ್ಬವನ್ನು ಆಚರಿಸುತ್ತೇವೆ.

ದೀಪದ ತುದಿ ಸರ್ವತೋಮುಖವಾಗಿದೆ, ದೀಪ ಹಚ್ಚಿದರೆ ಸುತ್ತಲೂ ಬೆಳಗುತ್ತದೆ, ಆದರೆ ದೀಪದ ಗಮನ ಊರ್ಧ್ವಮುಖವಾಗಿರುತ್ತದೆ. ಅಂದರೆ ದೀಪ ಬೆಳಗುವ ಮನುಷ್ಯನ ಮನಸ್ಸು ಕೂಡ ಸದಾ ಊರ್ಧ್ವಗಾಮಿಯಾಗಿರಬೇಕು, ಮನುಷ್ಯ ಸದಾ ಇತಿಮಿತಿಗಳನ್ನು ಮೀರಿ ದೀಪದಂತೆ ಮೇಲಕ್ಕೆ ಬೆಳಗುತ್ತಾ ಹೋಗಬೇಕು. ದೀಪ ಹೇಗೆ ತನ್ನನ್ನು ತಾನು ಉರಿದುಕೊಂಡು ಸುತ್ತಲಿಗೆ ಬೆಳಕು ಕೊಡುತ್ತದೋ ಮನುಷ್ಯ ಕೂಡ ತಾನು ತ್ಯಾಗ ಮಾಡಿ ಸುತ್ತಲಿನವರ ಬಾಳಿಗೆ ಬೆಳಕಾಗಬೇಕು ಎಂಬ ಸಂಕೇತ ಕೂಡ ಇಲ್ಲಿದೆ.

ದೀಪಾವಳಿ ಹಬ್ಬದ ಇತಿಹಾಸ

ವೇದಗಳ ಕಾಲದಲ್ಲಿ, ಎಲ್ಲವೂ ಕೂಡ ಋತೋತ್ಸವಗಳೇ, ದೀಪಾವಳಿಗೆ ಯಕ್ಷರಾತ್ರಿ ಎಂದು ಕರೆಯುತ್ತೇವೆ, ವೇದದಲ್ಲಿ ಬರುವ ಶ್ರೀಸೂಕ್ತದಲ್ಲಿ ಮಣಿನಾಸಹ ಎಂಬುದಿದೆ, ಅಂದರೆ ಲಕ್ಷ್ಮಿಯನ್ನು ಇಲ್ಲಿ ಯಕ್ಷನ ತಂಗಿಯಾಗಿ ಕಾಣಲಾಗುತ್ತದೆ. ಯಕ್ಷರು ನಮಗೆ ಹಣವನ್ನು ಕೊಡುವಂತವರು. ರಾತ್ರಿ ಕಾಲದಲ್ಲಿ ಯಕ್ಷರನ್ನು ಪೂಜೆ ಮಾಡಲಾಗುತ್ತದೆ. ಕುಬೇರ ಯಕ್ಷರ ಅಧಿಪತಿ. ಕುಬೇರನನ್ನು ಮತ್ತು ಅವನ ತಂಗಿಯಾದ ಲಕ್ಷ್ಮಿ ಇವರಿಬ್ಬರನ್ನು ಪೂಜಿಸಿ ಧನಸಂಪತ್ತಿನೊಂದಿಗೆ ಬಾ ಎಂದು ಭಕ್ತಿಯಿಂದ ಆರಾಧಿಸುತ್ತೇವೆ ಎನ್ನುತ್ತಾರೆ. ಕಾರ್ತಿಕ ಮಾಸದಲ್ಲಿ ಸೂರ್ಯಾಸ್ತ ಬೇಗನೆ ಆಗುತ್ತದೆ. ಹೀಗಾಗಿ ದೀಪಗಳ ಆವಳಿ ಅಂದರೆ ಸಾಲು ಸಾಲು ದೀಪಗಳನ್ನು ಬೆಳಗಿ ಕತ್ತಲೆಯನ್ನು ಹೋಗಲಾಡಿಸಲು ದೀಪ ಬೆಳಗುತ್ತೇವೆ. ದೀಪಾವಳಿ ಕಳೆದ ನಂತರ ಚಳಿಗಾಲ ಆರಂಭವಾಗುತ್ತದೆ.

ದೀಪಾವಳಿ ಪ್ರಾಚೀನ ಕಾಲದಿಂದಲೂ ಪ್ರಸಿದ್ಧ ಹಬ್ಬ. ಭಾರತದ ಮೇಲೆ ಆಕ್ರಮಣಕಾರರು ದಾಳಿ ಮಾಡಿದ ಮೇಲೆ ಭೂಭಾಗ ತುಂಡು ತುಂಡಾಗಿ ಹೋಯಿತು. ಮೊದಲು ಆಫ್ಘಾನಿಸ್ತಾನದಿಂದ ಬರ್ಮಾವರೆಗೆ, ಶ್ರೀಲಂಕಾ, ಕಾಂಬೋಡಿಯಾ, ವಿಯೆಟ್ನಾಂ ಅವೆಲ್ಲವೂ ಕೂಡ ಸಾಂಸ್ಕೃತಿಕ ಭಾರತದ ಭಾಗವಾಗಿತ್ತು. ಅಲ್ಲೆಲ್ಲ ಕೂಡ ದೀಪಾವಳಿಯ ಕಾರ್ತಿಕೋತ್ಸವವನ್ನು ಬೇರೆ ಬೇರೆ ತರದಲ್ಲಿ ಆಚರಣೆ ಮಾಡುತ್ತಾರೆ.

ಪೌರಾಣಿಕ ಹಿನ್ನೆಲೆ

ರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ. ಅಮಾವಾಸ್ಯೆಯ ಹಿಂದಿನ ದಿನ (ನರಕಚತುರ್ದಶಿ) ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ದೀಪಾವಳಿಯನ್ನು ಕೇಡಿನ ಮೇಲೆ ಶುಭದ ವಿಜಯದ ದಿನ ಎಂದು ಆಚರಿಸಲಾಗುತ್ತದೆ. ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿ ದೀಪಾವಳಿಯೊಂದಿಗೆ ಇನ್ನಿತರ ಪುರಾಣಗಳೂ ಸಂಬಂಧಿತವಾಗಿದೆ. ಉದಾಹರಣೆಗೆ, ಬಲಿ-ವಾಮನ ರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತದೆ. 

ಆಚರಣೆ

ದೀಪಾವಳಿ ಹಬ್ಬ ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ ಉತ್ತರಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು. ಭಾರತದಲ್ಲಿ ಸಾಂಪ್ರದಾಯಿಕವಾಗಿ ಪಂಚಾಂಗ ಚಂದ್ರಮಾನವನ್ನು ಅವಲಂಬಿಸಿವೆ. ಅಂದರೆ ಆಶ್ವಯುಜ ಮಾಸ ಕೃಷ್ಣಪಕ್ಷದ ಚತುರ್ದಶಿ, ಅಮಾವಾಸ್ಯೆ ಹಾಗೂ ಕಾರ್ತಿಕ ಮಾಸ ಶುಕ್ಲಪಕ್ಷದ ಪಾಡ್ಯ – ಈ ದಿನಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತಿದೆ.

ದೀಪಾವಳಿಯನ್ನು ನಾವು ಇಂದು ಮೂರು ದಿನಗಳಿಗೆ ಸೀಮಿತಗೊಳಿಸಿದರೂ ಮೂಲತಃ ಐದು ದಿನಗಳ ಹಬ್ಬ. ಐದು ದಿನಗಳಲ್ಲಿ ಮೊದಲ ದಿನ ನೀರು ತುಂಬುವುದು, ಎರಡನೇ ದಿನ ನರಕ ಚತುರ್ದಶಿ, ಮೂರನೇ ದಿನ ದೀಪಾವಳಿ ಅಮವಾಸ್ಯೆ , ನಾಲ್ಕನೇ ದಿನ ಬಲಿಪಾಡ್ಯಮಿ ಹಾಗೂ ಐದನೇ ದಿನ ಯಮದ್ವಿತೀಯ ಆಚರಣೆಯಿರುತ್ತದೆ. ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮೂರು ದಿನಗಳ ಆಚರಣೆ ನಡೆಯುತ್ತದೆ. ದಕ್ಷಿಣ ಭಾರತದಲ್ಲಿ ನರಕ ಚತುರ್ದಶಿ ಪ್ರಮುಖವಾದರೆ, ಉತ್ತರ ಭಾರತದಲ್ಲಿ ಅಮಾವಾಸ್ಯೆಯಂದು ಆಚರಿಸಲಾಗುವ ಲಕ್ಷ್ಮಿ ಪೂಜೆ ಮುಖ್ಯವಾದದ್ದು.

ನಮ್ಮಲ್ಲಿ ದೀಪಾವಳಿ ಅಮಾವಾಸ್ಯೆ ದಿನ ಕೇದಾರೇಶ್ವರ ವ್ರತ ಮಾಡುತ್ತೇವೆ. ಕೆಲವರು ಕೇದಾರ ಗೌರಿ ವ್ರತ ಮಾಡುತ್ತಾರೆ. ಶಿವನ ವ್ರತವೇ ಕೇದಾರ ವ್ರತವಾಗಿರುತ್ತದೆ. ಹಿಂದೂ ಧರ್ಮದ ಜನರು ಪ್ರತಿ ವರ್ಷವೂ ಪ್ರಪಂಚದೆಲ್ಲೆಡೆ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಹೊಸ ಬಟ್ಟೆಗಳು, ಸಿಹಿ ತಿಂಡಿಗಳು ಎಲ್ಲಕ್ಕೂ ಹೆಚ್ಚಾಗಿ ಪಟಾಕಿಗಳಿಗೆ ದೀಪಾವಳಿ ಪ್ರಸಿದ್ಧ. ಉತ್ತರ ಭಾರತದಲ್ಲಿ ದೀಪಾವಳಿಯ ಸಮಯವೇ ಹೊಸ ಆರ್ಥಿಕ ವರ್ಷದ ಪ್ರಾರಂಭ ಸಹ; ಹೊಸ ಲೆಕ್ಕದ ಪುಸ್ತಕಗಳನ್ನು ಈ ಸಮಯದಲ್ಲೇ ತೆರೆಯಲಾಗುತ್ತದೆ. ದೀಪಾವಳಿಯ ಅಂಗವಾಗಿ ನಡೆಯುವ ಇತರ ಸಮಾರಂಭಗಳಲ್ಲಿ ಆಯುಧಪೂಜೆ ಮತ್ತು ಗೋಪೂಜೆಗಳನ್ನು ಹೆಸರಿಸಬಹುದು.

ಸಿಖ್ಖ್ ಧರ್ಮದಲ್ಲಿ ದೀಪಾವಳಿ

ಸಿಖ್ಖ್ ಧರ್ಮದಲ್ಲಿಯೂ ದೀಪಾವಳಿ ಮುಖ್ಯ ಹಬ್ಬ. 1620 ರಲ್ಲಿ ಸಿಖ್ಖರ ಆರನೆಯ ಗುರು ಹರಗೋಬಿಂದ್ ಸಿಂಗ್ ಗ್ವಾಲಿಯರ್‌ನ ಕೋಟೆಯಲ್ಲಿ ಬಂಧಿತರಾಗಿದ್ದ 52 ರಾಜರನ್ನು ಬಿಡಿಸಿ ತಂದ ದಿನವೆಂದು ಈ ಕಾಲವನ್ನು ಆಚರಿಸಲಾಗುತ್ತದೆ.

ಜೈನ ಧರ್ಮದಲ್ಲಿ ದೀಪಾವಳಿ

ಜೈನರಿಗೆ ಇದು ಮೋಕ್ಷ ಲಕ್ಷ್ಮಿ ಪೂಜೆ. ಇಡೀ ವರ್ಷ ಅವರು ಧನಲಕ್ಷ್ಮಿ ಪೂಜೆ ಮಾಡುತ್ತಾರೆ. ದೀಪಾವಳಿ ಹಿಂದಿನ ದಿನ ಮೋಕ್ಷ್ಮಲಕ್ಷ್ಮಿ ಪೂಜೆ ಮಾಡುತ್ತಾರೆ. ವೈರಾಗ್ಯದ ದೃಷ್ಟಿಯಿಂದ ದಾನ, ಉಪವಾಸ ಮಾಡುತ್ತಾರೆ.

ಜೈನ ಧರ್ಮದಲ್ಲಿ ದೀಪಾವಳಿಯನ್ನು ಕಾರ್ತಿಕ ಮಾಸದ 3 ದಿನ ಆಚರಿಸುತ್ತಾರೆ. ದೀಪಾವಳಿಯು ಜೈನ ಧರ್ಮದಲ್ಲಿ ಕಡೆಯ ತೀರ್ಥಂಕರ ಮಹಾವೀರರು ಕಾರ್ತಿಕ ಚತಿರ್ದಶಿಯಂದು (ಕ್ರಿ.ಪೂ 527 ಅಕ್ಟೋಬರ್ 15) ಪಾವಾಪುರಿಯಲ್ಲಿ ಮೋಕ್ಷ ಹೊಂದಿದ ದಿನವಾಗಿ ಆಚರಿಸುತ್ತಾರೆ. ಕ್ರಿ.ಪೂ 3 ನೇ ಶತಮಾನದಲ್ಲಿ ಆಚಾರ್ಯ ಭದ್ರಬಾಹುವಿನಿಂದ ರಚಿತವಾದ ಕಲ್ಪಶ್ರುತ ಗ್ರಂಥದಲ್ಲಿರುವಂತೆ ಮಹಾವೀರರ ನಿರ್ವಾಣ ಕಾಲದಲ್ಲಿದ್ದ ದೇವತೆಗಳಿಂದ ಅಂಧಕಾರವು ಮರೆಯಾಗಿದ್ದಿತು. ಆದರೆ ಮುಂದಿನ ರಾತ್ರಿ ಗಾಡಾಂಧಕಾರವು ಆವರಿಸಿತು. ತಮ್ಮ ಗುರುವಿನ ಜ್ಜಾನಜ್ಯೋತಿಯ ಸಂಕೇತವಾಗಿ 16 ಗಣ-ಚಕ್ರವರ್ತಿ, 9 ಮಲ್ಲ ಮತ್ತು 9 ಗಣರಾಜ್ಯದಲ್ಲಿ ದ್ವಾರವನ್ನು ಬೆಳಗಿದರು. ಜೈನರಿಗೆ ಇದು ವರ್ಷದ ಪ್ರಾರಂಭ. ಮನೆಯ ದ್ವಾರವನ್ನು ದೀಪದಿಂದ ಬೆಳಗುವುದರ ಜೊತೆಗೆ ಈ ಸಮಯದಲ್ಲಿ ಮಹಾವೀರರ ಉಪದೇಶಗಳನ್ನೊಳಗೊಂಡ ಉತ್ತಾರಾಧ್ಯಾಯನ ಸ್ತೋತ್ರದ ಪಠಣೆ ಮಾಡುತ್ತಾರೆ. ಕೆಲವರು ಮಹಾವೀರರ ನಿರ್ವಾಣ ಸ್ಠಳವಾದ ಬಿಹಾರ ರಾಜ್ಯದ ಪಾವಾಪುರಿಗೆ ಯಾತ್ರೆ ಕೈಗೊಳ್ಳುತ್ತಾರೆ. ವ್ಯಾಪಾರಿಗಳು ಹೊಸ ಲೆಕ್ಕದ ಪುಸ್ತಕಗಳನ್ನು ಪ್ರಾರಂಭಿಸುತ್ತಾರೆ.

ಬೌದ್ಧ ಧರ್ಮದಲ್ಲಿ ದೀಪಾವಳಿ

ಬೌದ್ಧರಲ್ಲಿರುವ ಹಲವಾರು ಪಂಗಡಗಳು ದೀಪಾವಳಿಯ ಮೂರು ದಿನ ಪೂಜೆ ಮಾಡುತ್ತಾರೆ. ಸಿಖ್ಖರು ಕೂಡ ಆಚರಿಸುತ್ತಾರೆ. ಒಟ್ಟಿನಲ್ಲಿ ಇದು ಈ ದೇಶದಲ್ಲಿ ಹುಟ್ಟಿರುವ ಮೂಲತಃ ಭಾರತೀಯರು, ಬುಡಕಟ್ಟು ಜನಾಂಗದಿಂದ ಹಿಡಿದು ಜೈನರು, ಬೌದ್ಧರು ಸಿಖ್ಖರು, ಹಿಂದೂಗಳು, ಕಾಡಿನಿಂದ ಹಿಡಿದು ನಾಡಿನ ಜನರವರೆಗೂ ಆಚರಿಸುವ ಪುರಾತನ ಹಬ್ಬ. 

ದೀಪದಿಂದ ದೀಪವ ಹಚ್ಚಿ, ಪ್ರೀತಿಯ ಗಂಗೆಯನ್ನು ಹರಿಸುತ್ತ ಪಟಾಕಿಮುಕ್ತ ದೀಪಾವಳಿ ಆಚರಿಸುವ ಬನ್ನಿ.

ಡಾ|| ಗುರುಸಿದ್ದಯ್ಯ
ಅಕ್ಕಲಕೋಟ
ಮಹಾರಾಷ್ಟ್ರ

Related post

2 Comments

  • Super sir 👌👌

  • ಧನ್ಯವಾದಗಳು

Leave a Reply

Your email address will not be published. Required fields are marked *