ದುಸ್ತರ ರಾತ್ರಿ
ಕಾವಳದ ರಾತ್ರಿಯಲಿ ಬೀದಿದೀಪಗಳ ಸಾಲಿನಲಿ
ಅಲ್ಲೊಂದು ಇಲ್ಲೊಂದು ವಾಹನಗಳು ಸಾಗುತಲಿ
ಪರವೂರಿಗೆ ಹೋಗುವ ವಾಹನಗಳ ಭರಾಟೆ
ನಿಲ್ದಾಣವೊಂದು ಸಿಗಲು ನಡುರಾತ್ರಿಯಲಿ
ಓಡಾಡುವ ಹೆಂಗಳೆಯರ ಕಂಡು ಸ್ವಗತದಲಿ
ಅದೇನು ರಾಜಕಾರ್ಯವೋ ಎನುವ ಮನ
ಅದೆಲ್ಲಿಂದ ಬರುವರೋ ಅದೆಲ್ಲಿಗೆ ಹೋಗುವರೋ
ಎತ್ತ ನೋಡಿದರೂ ನಡುವಯಸ್ಸಿನ ಹೆಂಗಳೆಯರು
ಮಕ್ಕಳ ನೋಡಲು ಹೋಗುವ ಅಮ್ಮಂದಿರೇ
ಖಾಲಿ ಇದ್ದ ನಿಲ್ದಾಣದಲಿ ಅದೇನೋ ಗೊಂದಲ
ಎಲ್ಲಿದ್ದರೋ ಇವರು ಬಸ್ಸನ್ನು ಏರುವ ಹಂಬಲ
ತಡವಾಗಿ ಬಂದ ಬಸ್ಸನ್ನು ಶಪಿಸುವ ಚಪಲ
ಹಾಗೆ ನೋಡಿದರೆ ನನದೂ ರಾಜ ಕಾರಣವೇನಲ್ಲ
ಜಗವೆಲ್ಲ ನನ್ನ ಸುತ್ತಲೇ ಸುತ್ತುತ್ತಿಲ್ಲ
ಅವರವರ ಕಾರಣ ಅವರಿಗೇ ಹಿರಿದಲ್ಲ…
ಪೂರ್ವ ಸಿದ್ಧತೆಯ ಪ್ರಯಾಣವು ಸೊಗಸು
ಕಡೆಗಳಿಗೆಯ ಅನಿವಾರ್ಯತೆಯ ಹೊರತು
ಚಂದದಿ ತಂತಮ್ಮ ಗೂಡು ಸೇರಿದರೆ ಒಳಿತು
ಸಿ. ಎನ್. ಮಹೇಶ್