ದೇವರು ಬೇಕಾಗಿದ್ದಾರೆ

‘ದೇವರು ಬೇಕಾಗಿದ್ದಾರೆ’ ಕನ್ನಡ ಚಿತ್ರ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ.

ಆಗಸ್ಟ್ 13 ರಂದು ಸಂಜೆ 7ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.

ಈ ಚಿತ್ರವು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದ ಸಂದರ್ಭದಲ್ಲಿ ನಾನು ಬರೆದಿದ್ದ ಲೇಖನವನ್ನು ಈಗ ಮತ್ತೆ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಈ `ದೇವರು ಬೇಕಾಗಿದ್ದಾರೆ’ ಚಿತ್ರದಲ್ಲಿ ಏನಿದೆ?

ಮಕ್ಕಳ ಮುಗ್ಧ ಮನಸ್ಸಿನ ತುಮಲಗಳನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ. ಕತೆಯು ಚಿಕ್ಕದೇ ಅದರ ಅದಕ್ಕೊಂದು ವಿಸ್ತಾರವಾದ ಅರ್ಥ ಕೊಟ್ಟು ಚಿತ್ರವನ್ನು ಹಲವು ಪದರಗಳಲ್ಲಿ ಚಿತ್ರಿಸಿದ್ದಾರೆ. ಈ ಚಿತ್ರದಲ್ಲಿ `ದೇವರು’ ಯಾರು? ಎಂಬುದೇ ಚಿತ್ರದ ಗುಟ್ಟು! ಅದನ್ನು ಚಿತ್ರವನ್ನು ನೋಡಿಯೇ ತಿಳಿಯಬೇಕು, ಸಸ್ಪೆನ್ಸ್!
ಕನ್ನಡದ ಹಿರಿಯ ನಟ ಶಿವರಾಮ್, ಬಾಲಕ ಮಾಸ್ಟರ್ ಅನೂಪ್, ಸತ್ಯನಾಥ್, ಶಾರದಾ, ಶ್ರೀನಾಥ್ ಹಾಗೂ ಮತ್ತಿತರು ನಟಿಸಿದ್ದಾರೆ.

‘ಪ್ರೇಮ ಗೀಮಾ ಜಾನೇ ದೋ’ ಚಿತ್ರದ ನಿರ್ದೇಶಕ ಕೇಂಜ ಚೇತನ್ ಕುಮಾರ್ ಅವರ ಎರಡನೆಯ ಚಿತ್ರ ಇದಾಗಿದ್ದು ಈ ಚಿತ್ರವನ್ನು ಚೇತನ್ ವಿಭಿನ್ನವಾಗಿಯೇ ಕಟ್ಟಿಕೊಟ್ಟಿದ್ದಾರೆ. ಹೊರೈಜಾನ್ ಮೂವೀಸ್ ಅಡಿಯಲ್ಲಿ ತಮ್ಮದೇ ಸಮಾನ ಮನಸ್ಕರ ತಂಡದೊಂದಿಗೆ ಸೇರಿ ಕೂಡು ಬಂಡವಾಳದಲ್ಲಿ ಚಿತ್ರ ನಿರ್ಮಿಸಿದ್ದಾರೆ.

ತುಮಕೂರಿನ ಯುವ ಪ್ರತಿಭೆ ಪ್ರಸಾದ್ ವಸಿಷ್ಟ ಈ ಚಿತ್ರದ ಉತ್ತರಾರ್ಧದಲ್ಲಿ ಬಂದು ಚಿತ್ರದ ಓಟಕ್ಕೆ ಸಾಥ್ ಕೊಟ್ಟಿದ್ದಾರೆ. ಇವರದೇ ನಿಜ ಜೀವನದ ಕತೆಯೇನು ಎಂಬಂತಹ ಪಾತ್ರದಲ್ಲಿ ನಟಿಸಿ ಸೈ ಎನಿಸಿದ್ದಾರೆ.
ನಾಗಾಭರಣ ಅವರು ಒಂದು ಪುಟ್ಟ ಪಾತ್ರ ಮಾಡಿ ಹೊಸ ತಂಡಕ್ಕೆ ಪ್ರೋತ್ಸಾಹ ಕೊಟ್ಟಿದ್ದಾರೆ.

ಯೋಗರಾಜ್ ಭಟ್ ಅವರು ಚಿತ್ರದ ಕ್ಲೈಮ್ಯಾಕ್ಸ್‍ಗೆ ಧ್ವನಿ ಕೊಟ್ಟಿದ್ದಾರೆ. ಯೋಗರಾಜ್ ಅವರ ಈ ಮಾತುಗಳೇ ಈ ಚಿತ್ರದ ಪ್ರಮುಖ ತಿರುವೂ ಆಗಿದೆ. ದೇವರು ಯಾರು? ಎಂಬ ಗುಟ್ಟು ರಟ್ಟಾಗುವುದೇ ಈ ಕ್ಲೈಮ್ಯಾಕ್ಸ್ ನಲ್ಲಿ!

ಮಾಸ್ಟರ್ ಅನೂಪ್‍ಗೆ ಇದು ಮೊದಲ ಅವಕಾಶ. ಚಿತ್ರ ತಂಡದ ಶೋಧ ಈ ಅನೂಪ್. ಆದರೆ ಆನಂತರ ದಿನಗಳಲ್ಲಿ ಹಲವೆಡೆ ನಟಿಸಿ ಖ್ಯಾತನಾಗಿದ್ದಾನೆ. ಈ ಅನೂಪ್ ಇಲ್ಲಿ ತನ್ನ ವಯಸ್ಸಿಗೆ ತಕ್ಕ ಮುಗ್ಧತನದಿಂದ ಇಡೀ ಚಿತ್ರವನ್ನು ಹಿಡಿದಿಡುತ್ತಾನೆ. ಇದು ನಟನೆ ಎಂದು ತೋರ್ಗೊಡದೇ ಸಹಜವಾಗಿಯೇ ಜೀವಿಸಿ ನಟಿಸಿದ್ದಾನೆ.

ಈ ಚಿತ್ರದ ಕತೆಯಲ್ಲಿ ನಮ್ಮ ಅಣ್ಣಾವ್ರು ಹಾಗೂ ಅಪ್ಪು ಇಬ್ಬರೂ ಇದ್ದಾರೆ. ಇವರಿಬ್ಬರ ಚಿತ್ರಗಳ ಸನ್ನಿವೇಶಗಳನ್ನು ತಮ್ಮ ಚಿತ್ರಕತೆಯಲ್ಲಿ ಪೋಣಿಸಿಕೊಂಡು ಹೊಸ ರೀತಿಯ ಕತೆಯನ್ನು ಹೆಣೆದಿದ್ದಾರೆ. ಅದೇ ಈ ಚಿತ್ರದ ವಿಶೇಷವೂ ಆಗಿದೆ.

ಬೆಂಗಳೂರಿನ ಅಂದವನ್ನು ಡ್ರೋಣ್ ಮೂಲಕ ತೋರಿಸಿರುವದೇ ಅಲ್ಲದೇ ಕೆಲವು ಶಾಟ್‍ಗಳನ್ನು ವಿಭಿನ್ನವಾಗಿಟ್ಟು ಕನ್ನಡದ ಪ್ರತಿಭೆಗಳ ತಾಂತ್ರಿಕತೆ ಚಾಣಾಕ್ಷತನವನ್ನು ಪರಿಚಯಿಸಿದ್ದಾರೆ. ರುದ್ರಮುನಿ ಅವರ ಸಿನಿಮಾಟೋಗ್ರಫಿಯು ಈ ಚಿತ್ರದ ಪ್ಲಸ್ ಪಾಯಿಂಟ್ ಆಗಿದೆ. ಡ್ರೋಣ್ ಅನ್ನು ದೃಶ್ಯದ ಅವಶ್ಯಕತೆಗೆ ತಕ್ಕಂತೆ ಬಳಸಿದ್ದಾರೆ.

ಸಂಗೀತದ ಹೊಣೆಯನ್ನು ಜುವಿನ್ ಸಿಂಗ್ ಅವರು ನಿರ್ವಹಿಸಿ ಸುಂದರ ದೃಶ್ಯಗಳಿಗೆ ತಕ್ಕಂತೆ ಹಿತ-ಮಿತವಾದ ಸಂಗೀತವನ್ನು ಒದಗಿಸಿ ಮತ್ತಷ್ಟು ಚಿತ್ರವನ್ನು ಹದಗೊಳಿಸಿದ್ದಾರೆ.

ಕನ್ನಡದ ಮಟ್ಟಿಗೆ ಇದೊಂದು ಹೊಸ ಪ್ರಯೋಗ ಎನ್ನಡ್ಡಿ ಇಲ್ಲ. ಕತೆಯನ್ನು ಹೇಳುವಲ್ಲಿ ಸ್ವಲ್ಪ ಹೊಸ ಹೊಸ ಆಯಾಮಗಳನ್ನು ಬಳಸಿ ಟೈಟ್ ಮಾಡಬಹುದಾಗಿತ್ತು. ಶಾಲೆಯಲ್ಲಿ ಕೂತ ಹುಡುಗನ ಕ್ಲೋಸ್ ಅಪ್ ಶಾಟ್ನಲ್ಲಿ ತಾತನ ಸ್ಕೂಟರ್ ಹೊರಟು ದೂರ ಹೋಗುವ ಸದ್ದನ್ನು ಅಳವಡಿಸಿರುವುದು, ಟ್ರ್ಯಾಕ್ಟರ್‍ನಲ್ಲಿ ತಾತನ ಹೆಣ ಸಾಗಿಸುವಾಗಿನ ಡ್ರೋಣ ದೃಶ್ಯ ಹಾಗೂ ಅಲ್ಲಿನ ಪರಿಸರವನ್ನು ಬಿಂಬಿಸಿರುವ ಪರಿಯು ನಿರ್ದೇಶಕರ ಜಾಣ್ಮೆಗೆ ಸಾಕ್ಷಿಯಾಗಿದೆ. ಎಲ್ಲರಿಗೂ ಇಷ್ಟವಾಗುವ ಚಿತ್ರ.

ಈ `ದೇವರು ಬೇಕಾಗಿದ್ದಾರೆ’ ಚಿತ್ರದಲ್ಲಿ ತುಮಕೂರಿನ ಪ್ರಸಾದ್ ವಸಿಷ್ಟಮುಖ್ಯ ಪಾತ್ರದಲ್ಲಿ ಇದ್ದಾರೆ.

ತುಮಕೂರಿನ ಪ್ರತಿಭೆ ಪ್ರಸಾದ್ ವಸಿಷ್ಟ ಈ ವಾರ ತೆರೆಗೆ ಬಂದಿರುವ ದೇವರು ಬೇಕಾಗಿದ್ದಾರೆ' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗ ಹಾಗೂ ದೂರದರ್ಶನ ಧಾರಾವಾಹಿಗಳಲ್ಲಿ ನಟಿಸಿರುವ ಪ್ರಸಾದ್ ಹಲವು ಸಾಕ್ಷ್ಯಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆದರೆ ಈದೇವರು ಬೇಕಾಗಿದ್ದಾರೆ’ ಚಿತ್ರದಲ್ಲಿ ಉತ್ತಮ ಅವಕಾಶ ಸಿಕ್ಕಿದೆ ಎನ್ನುವುದು ಪ್ರಸಾದ್ ಅವರ ಅನಿಸಿಕೆ.

ಈ ಹಿಂದೆಲ್ಲಾ ಸ್ಟಾರ್ ನಟರ ಚಿತ್ರಗಳಲ್ಲೂ ನಟಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ ಬುಗುರಿ, ದಾದಾ ಇಸ್ ಬ್ಯಾಕ್, ಮುಗುಳು ನಗೆ, ಪ್ರೇಮದಲಿ, ಅಯ್ಯೋ ರಾಮ, ಡಿ ಕೆ ಬೋಸ್ ಹಾಗೂ ದ್ವೈತಗಳಲ್ಲಿದ್ದಾರೆ. ಆದರೆ ಈ ದೇವರು ಬೇಕಾಗಿದ್ದಾರೆ' ಚಿತ್ರದಲ್ಲಿ ಹೆಚ್ಚಿನ ಅವಕಾಶ ಸಿಕ್ಕಿದೆ ಎನ್ನುವುದೇ ಅವರಿಗೆ ಖುಷಿ ತಂದಿರುವ ಸಂಗತಿ. ಪುಟ್ಟಗೌರಿ ಮದುವೆ’ ಹಾಗೂ ಗೃಹ ಲಕ್ಷ್ಮೀ' ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿ ಬೆಳೆದದ್ದೇ ಈ ಮಟ್ಟಕ್ಕೆರಲು ಸಾಧ್ಯವಾಗಿದೆ. ಕನ್ನಡದಲ್ಲೇ ಅಲ್ಲದೇಕಲೈಂಗರ್’ ತಮಿಳು ಚಾನೆಲ್‍ನಲ್ಲಿ ಪ್ರಸಾರವಾದ ಕಿರು ಚಿತ್ರಗಳಲ್ಲಿ ಹೀರೋ ಆಗಿಯೂ ಮಿಂಚಿದ್ದಾರೆ ಈ ನಮ್ಮ ಪ್ರಸಾದ್! ಕನ್ನಡದ ಕಂಪನ್ನು ಅಲ್ಲೂ ಪಸರಿಸಿದ್ದಾರೆ.

ಮೂಲತಃ ತುಮಕೂರಿನ ಪ್ರತಿಭೆಯಾಗಿರುವ ಪ್ರಸಾದ್ ನಳಂದ ಸ್ಕೂಲ್‍ನಲ್ಲಿ ಓದಿದ್ದಾರೆ. ಅಲ್ಲಿ ಒಂಭತ್ತನೇ ತರಗತಿಯಲ್ಲಿದ್ದಾಗಲೇ ಸುಂದರ್‍ಲಾಲ್ ಬಹುಗುಣ ಅವರ `ಅಪ್ಪಿಕೋ’ ಚಳುವಳಿಯನ್ನು ಪ್ರತಿಬಿಂಬಿಸಲು ಸ್ಕಿಟ್ ಅನ್ನು ಆ ವಯಸ್ಸಲ್ಲೇ ನಿರ್ದೇಶಿಸಿದ್ದಾರೆ. ಅಲ್ಲದೆ ಆ ಸ್ಕಿಟ್‍ನಲ್ಲಿ ಯಾವುದೇ ಮರಗಿಡಗಳನ್ನು ಕತ್ತರಿಸಿ ಸ್ಟೇಜ್ ಮೇಲೆ ತರದೇ ಎಪ್ಪತ್ತಕ್ಕೂ ಹೆಚ್ಚು ಸಹಪಾಟಿಗಳನ್ನು ಬಳಸಿಕೊಂಡು ಪರಿಸರದ ಬಗ್ಗೆ ಕಾಳಜಿ ಮೂಡಿಸಿದ್ದಾರೆ. ಬೆಳೆಯುವ ಪೈರು ಮೊಳಕೆಯಲ್ಲೇ ಎಂಬಂತೆ ಇದ್ದ ಈ ಪ್ರಸಾದ್ ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆ.

ಕಾಲೇಜ್ ದಿನಗಳಲ್ಲಿ ಸಂಜಯ್ ಗುಬ್ಬಿ ಅವರೊಂದಿಗೆ ಕೈ ಜೋಡಿಸಿ ಪಕ್ಷಿ-ಪ್ರೇಮವನ್ನೂ ಪ್ರಚುರ ಪಡಿಸಿದ್ದಾರೆ. ಹಲವಾರು ಸಂಘ ಸಂಸ್ಥೆಗಳೊಂದಿಗೆ ಕೈಜೋಡಿಸಿ ಹಲವು ಸಂಕುಲದ ಸಂರಕ್ಷಣೆಯ ಕಾರ್ಯವನ್ನು ಮಾಡಿದ್ದಾರೆ. ಎಂಬಿಎ ಓದಿರುವ ಪ್ರಸಾದ್ ಹಲವು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದ್ದಲ್ಲದೇ ದೂರದರ್ಶನಗಳಲ್ಲಿಯೂ ಹಲವು ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಆದರೆ ನಟನೆಯಲ್ಲಿಯೇ ಹೆಚ್ಚಿನ ಆಸಕ್ತಿ ಇದ್ದ ಕಾರಣ ಅದನ್ನೇ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ವಿಭಿನ್ನ ಪಾತ್ರಗಳಲ್ಲಿ ನಟಿಸಬೇಕೆನ್ನುವ ಹಂಬಲವಿದೆ. ಅದರೊಟ್ಟಿಗೆ ನಟನೆಯ ಹಲವು ಹೊಸ ಹೊಸ ಪಟ್ಟುಗಳನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ.

ಚಿತ್ರರಂಗದಲ್ಲಿ ನೆಲೆಯೂರಲು ಅವಿರತವಾಗಿ ಶ್ರಮಿಸುತ್ತಿರುವ ಈ ಪ್ರಸಾದ್ ಅವರಿಗೆ ಖ್ಯಾತನಾಮರ ನಿರ್ದೇಶನದಲ್ಲಿ ಹೊಸ ಹೊಸ ಅವಕಾಶಗಳು ದೊರಕಲಿ ಎಂದು ಹಾರೈಸೋಣ.

ತುಂಕುರು ಸಂಕೇತ್

Related post

Leave a Reply

Your email address will not be published. Required fields are marked *